ಮೋದಿ ಬರುತ್ತಿದ್ದಾರೆ, ಹೂಡಿಕೆ ಮಾಡಿ...
ಮುಂಬೈ/ವಾಷಿಂಗ್ಟನ್: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿಗೆ ಜಾಗತಿಕ ಹೂಡಿಕೆ ಬ್ಯಾಂಕ್ ಗೋಲ್ಡ್ಮನ್ ಸ್ಯಾಶ್ ಮೆಚ್ಚುಗೆ ವ್ಯಕ್ತಪಡಿಸಿದೆ. 'ಭಾರತದಲ್ಲಿ ಈಗ ಬದಲಾವಣೆಯ ಗಾಳಿ ಬೀಸುತ್ತಿದೆ. ಮುಂದಿನ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ಬರುವ ಸಂಭವವಿದೆ. ಭಾರತದಲ್ಲಿ ಹೆದರಿಕೆ ಇಲ್ಲದೇ ಹೂಡಿಕೆ ಮಾಡಬಹುದು' ಎಂದು ಅದು ವರದಿ ನೀಡಿದೆ. ನರೇಂದ್ರ ಮೋದಿ ಪ್ರಭಾವವನ್ನು ಬಣ್ಣಿಸಿರುವ ಗೋಲ್ಡ್ಮನ್ ಸ್ಯಾಶ್ ಬ್ಯಾಂಕ್, ಭಾರತದಿಂದ ಹೊರಹೋಗಿರುವ ಹೂಡಿಕೆದಾರರು, ವಾಪಸ್ ಬರಲು ಸಕಾಲ ಬಂದಿದೆ ಎಂದಿದೆ.
ನರೇಂದ್ರ ಮೋದಿ ಪ್ರಭಾವವನ್ನು ಬಣ್ಣಿಸಿರುವ ಗೋಲ್ಡ್ಮನ್ ಸ್ಯಾಶ್ ಬ್ಯಾಂಕ್, ಭಾರತದಿಂದ ಹೊರಹೋಗಿರುವ ಹೂಡಿಕೆದಾರರು, ವಾಪಸ್ ಬರಲು ಸಕಾಲ ಬಂದಿದೆ ಎಂದಿದೆ.
ಮೋದಿಯ ಸಾಧನೆಗಳ ಪಟ್ಟಿ ಮಾಡಿರುವ ಬ್ಯಾಂಕ್, ಅವರು ಹೂಡಿಕೆದಾರರ ಪರವಾಗಿದ್ದಾರೆ. ಅವರನ್ನು ನಾವು ನಂಬಬಹುದಾಗಿದೆ ಎಂದೂ ಹೇಳಿದೆ. ಹೀಗಾಗಿ ಭಾರತದಲ್ಲಿ ಆಸ್ತಿ ಕೊಳ್ಳಲು ಮತ್ತು ಹೂಡಿಕೆ ಮಾಡಲು ಇದು ಸುಸಮಯ ಎಂದೂ ತನ್ನ ವರದಿಯಲ್ಲಿ ತಿಳಿಸಿದೆ.
ಮೋದಿ ಆಳ್ವಿಕೆಯಲ್ಲಿ ಗುಜರಾತ್ ಅಭಿವೃದ್ಧಿಯಾಗಿದೆ. 2002ರಲ್ಲಿ ರಾಜ್ಯದಲ್ಲಿ ಹಿಂಸಾಚಾರ ನಡೆದರೂ ಸಹ, ಅದರ ಧೂಳಿನಿಂದ ಎದ್ದು ಹೊರಬಂದಿದೆ. ಇದಕ್ಕೆ ಸಾಕ್ಷಿ ಅದರ ಬೆಳವಣಿಗೆ ಪ್ರಮಾಣ. ಭಾರತದ ಅಭಿವೃದ್ಧಿ ದರಕ್ಕಿಂತ ಗುಜರಾತ್ನ ಅಭಿವೃದ್ಧಿ ದರ ಹೆಚ್ಚಾಗಿರುವುದೇ ಇದಕ್ಕೆ ಸಾಕ್ಷಿ ಎಂದು ಶ್ಲಾಘಿಸಿದೆ.
ಇದಷ್ಟೇ ಅಲ್ಲ, ಗುಜರಾತ್ನಲ್ಲಿ ಭ್ರಷ್ಟಾಚಾರವಿಲ್ಲ, ಹೂಡಿಕೆದಾರರಿಗೆ ಕೆಂಪುಹಾಸಿನ ಸ್ವಾಗತವಿದೆ. ಹೀಗಾಗಿ ಹೂಡಿಕೆಗೆ ಅಂಜಿಕೆ ಏಕೆ ಎಂದೂ ಅದು ಅಭಯ ನೀಡಿದೆ.
ಇದೇ ವೇಳೆ ರೇಟಿಂಗ್ ಏಜೆನ್ಸಿ ಸ್ಟಾಂಡರ್ಡ್ ಮತ್ತು ಪೂರ್ ಸಂಸ್ಥೆ ಹೂಡಿಕೆದಾರರಿಗೆ ಇನ್ನೊಂದು ಎಚ್ಚರಿಕೆಯನ್ನೂ ನೀಡಿದೆ. 2014ರ ಚುನಾವಣೆಯಲ್ಲಿ ಯುಪಿಎ - 3 ಅಥವಾ ತೃತೀಯ ರಂಗ ಅಧಿಕಾರಕ್ಕೆ ಬರಬಹುದಾಗಿದೆ. ಹೀಗಾಗಿ ಭಾರತದಲ್ಲಿ ಹೂಡಿಕೆ ಮಾಡುವ ಮುನ್ನ ಆಲೋಚಿಸಿ ಎಂದು ಹೇಳಿದೆ. ಏಕೆಂದರೆ, ಇವರ ಆಳ್ವಿಕೆಯಲ್ಲಿ ಆರ್ಥಿಕ ಸುಧಾರಣೆ ಕಾಣಲು ಸಾಧ್ಯವಿಲ್ಲ ಎಂದೂ ಹೇಳಿದೆ.
ರಾಜಕೀಯ ಪ್ರಭಾವವಿಲ್ಲ: ನಾವು ಯಾರ ಪ್ರಭಾವದಿಂದಲೂ ವರದಿ ತಯಾರಿಸಿಲ್ಲ ಎಂದು ಗೋಲ್ಡ್ಮನ್ ಸ್ಯಾಶ್ ಸ್ಪಷ್ಟಪಡಿಸಿದೆ. ಸದ್ಯದ ಪರಿಸ್ಥಿತಿ ನೋಡಿಕೊಂಡು ನಾವು ಏಷಿಯಾ - ಪೆಸಿಫಿಕ್ ಪೋರ್ಟ್ಪೊಲಿಯೋ ಸ್ಟ್ರಾಟಜಿ ವರದಿ ನೀಡಿದ್ದೇವೆ. ಇದು ವಿಶ್ಲೇಷಣೆಯ ಒಂದು ಭಾಗವಷ್ಟೇ ಎಂದು ಹೇಳಿದೆ. ಹೀಗಾಗಿ ನಮ್ಮ ವರದಿಯನ್ನು ಸಮರ್ಥಿಸಿಕೊಳ್ಳುತ್ತಿದ್ದೇವೆ ಎಂದು ಹೇಳಿದೆ.
ಪ್ರಧಾನಿಯಾದರೆ, ವೀಸಾ ಏಕೆ ಬೇಕು?: ಒಂದೊಮ್ಮೆ ನರೇಂದ್ರ ಮೋದಿ ಪ್ರಧಾನಿಯಾದರೆ, ವೀಸಾ ಪ್ರಶ್ನೆಯೇ ಉದ್ಭವಿಸುವುದಿಲ್ಲ... ಹೀಗೆಂದು ಅಮೆರಿಕ ಹೇಳಿದೆ. 2014ರಲ್ಲಿ ಬಿಜೆಪಿ ನೇತೃತ್ವದ ಎನ್ಡಿಎ ಅಧಿಕಾರಕ್ಕೆ ಬಂದರೆ, ನಾವು ನರೇಂದ್ರ ಮೋದಿಯೊಂದಿಗೆ ಕೆಲಸ ಮಾಡಲು ಸಿದ್ಧರಿದ್ದೇವೆ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ. ಹೀಗಾಗಿ ಅವರಿಗೆ ವೀಸಾ ಕೊಡುವುದೋ ಅಥವಾ ತಿರಸ್ಕರಿಸುವುದೋ ಎಂಬ ಮಾತೇ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.