ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಮೌಢ್ಯ ಬಿಟ್ಟ ಸಿದ್ದು

ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುವ ವಿಚಾರದಲ್ಲಿ ಸರ್ಕಾರ ತೀರ್ಮಾನ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ...

Mainashree
Updated On : 9 Nov 2013, 1:50 am

ಬೆಂಗಳೂರು: ಮೂಢನಂಬಿಕೆ ಪ್ರತಿಬಂಧಕ ಕಾಯ್ದೆ ಜಾರಿಗೊಳಿಸುವ ವಿಚಾರದಲ್ಲಿ ಸರ್ಕಾರ ತೀರ್ಮಾನ ಕೈಗೊಂಡಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.
ಈ ಮಧ್ಯೆ ವಿಧೇಯಕ ಕುರಿತು ವಿರೋಧ ಮುಂದುವರಿದಿದ್ದು, ಕಾಂಗ್ರೆಸ್‌ನ ಹಿರಿಯ ನಾಯಕರಾದ ಜನಾರ್ದನ ಪೂಜಾರಿ ಅವರೇ ಆಕ್ಷೇಪ ವ್ಯಕ್ತಪಡಿಸಿದ್ದಾರೆ.  ಮೂಢನಂಬಿಕೆ ನಿಯಂತ್ರಣಕ್ಕೆ ಈಗಿನ ಕಾನೂನುಗಳೇ ಸಾಕು ಎಂದಿದ್ದಾರೆ. ಮಾಜಿ ಪ್ರಧಾನಿ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರೂ ಪರೋಕ್ಷವಾಗಿ ಅಸಮಾಧಾನ ವ್ಯಕ್ತಪಡಿಸಿದ್ದು, ನಾಸ್ತಿಕರೊಂದಿಗೆ ಚರ್ಚೆ ಮಾಡಿ ಪ್ರಯೋಜನ ಇಲ್ಲ ಎಂದಿದ್ದಾರೆ.
ಅಧಿವೇಶನದಲ್ಲಿ ಮಂಡನೆ: ಮೂಢನಂಬಿಕೆ ಬಗ್ಗೆ ಕಂದಾಚಾರಗಳ ಮೂಲಕ ಸಾಮಾನ್ಯ ಜನರಿಂದ ಹಣ ವಸೂಲಿ ಮಾಡುತ್ತಿರುವುದಕ್ಕೆ ಕಡಿವಾಣ ಹಾಕುವ ಮಸೂದೆಯನ್ನು ಬೆಳಗಾವಿ ಅಧಿವೇಶನದಲ್ಲಿ ಮಂಡಿಸಿ, ಅಂಗೀಕರಿಸಲಾಗುವುದು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣ್ ಪ್ರಕಾಶ್ ಪಾಟೀಲ್ ಚನ್ನರಾಯಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರಿಗೆ ತಿಳಿಸಿದರು.

ರಾಹು ಅಡ್ಡಗಾಲು
ಚಿಕ್ಕಬಳ್ಳಾಪುರ: ಉದ್ದೇಶಿತ ಮೂಢನಂಬಿಕೆ ಪ್ರತಿಬಂಧಕ ವಿಧೇಯಕದ ಬಗ್ಗೆ ಪರ- ವಿರೋಧ ಚರ್ಚೆ ರಾಜ್ಯಾದ್ಯಂತ ನಡೆಯುತ್ತಿದೆ. ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ-ಕೋಲಾರ ನೂತನ ರೈಲು ಸಂಚಾರ ಉದ್ಘಾಟಿಸಲು 'ರಾಹು ಕಾಲ' ಅಡ್ಡಿಯಾಯಿತು. ಉದ್ಘಾಟನಾ ಕಾರ್ಯಕ್ರಮ ಶುಕ್ರವಾರ ಬೆಳಗ್ಗೆ 10.30ಕ್ಕೆ ನಿಗದಿಯಾಗಿತ್ತು. ಮಧ್ಯಾಹ್ನ 12 ಗಂಟೆ ಆದರೂ ರೈಲು ಚಾಲನೆಗೆ ಹಸಿರು ನಿಶಾನೆ ತೋರಿಸಿರಲಿಲ್ಲ. ರಾಹು ಕಾಲ ಇದ್ದಿದ್ದರಿಂದ ಉದ್ಘಾಟನೆ 12 ಗಂಟೆ ಬಳಿಕ ನೆರವೇರಿಸಲಾಯಿತು. ಇದಾದ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾಷಣ ಆರಂಭಿಸಿದರು. ಮಧ್ಯಾಹ್ನ 12.30 ಆಗುತ್ತಿದ್ದಂತೆ ಏಕಾಏಕಿ ಭಾಷಣ ನಿಲ್ಲಿಸಿದರು. ಕಾರ್ಯಕ್ರಮ ಆಯೋಜನೆಯಾಗಿದ್ದ ಸ್ಥಳದ ಬಳಿ ಮಸೀದಿ ಇತ್ತು. ಅದೇ ಸಮಯಕ್ಕೆ ಆಜಾನ್ ಶುರುವಾಗಿತ್ತು. ಅದು ಮುಕ್ತಾಯವಾದ ಬಳಿಕ ಸಿಎಂ ಭಾಷಣ ಮುಂದುವರಿಸಿದರು.

ನಾಸ್ತಿಕರ ಜತೆ ಚರ್ಚೆ ವ್ಯರ್ಥ
ಮಹಾಭಾರತದಲ್ಲಿ ಭೀಷ್ಮ ಹೇಳಿದಂತೆ ಯಾವತ್ತಿಗೂ ನಾಸ್ತಿಕರೊಂದಿಗೆ ಚರ್ಚೆಮಾಡಬಾರದು. ಅದರಿಂದ ಪ್ರಯೋಜನ ಇಲ್ಲ, ಆಸ್ತಿಕರೊಂದಿಗೆ ಚರ್ಚೆ ಮಾಡಿ, ದೈವಿಕಶಕ್ತಿಯ ಬಗ್ಗೆ ಚಿಂತಿಸಿ, ಆರಾಧಿಸಿದಾಗ ಮನುಷ್ಯನ ಜನ್ಮ ಸಾರ್ಥಕವಾಗುತ್ತದೆ. ಇದು ಬಹಳ ಸೂಕ್ಷ್ಮವಿಷಯವಾಗಿದೆ. ದೇವರನ್ನು ನಂಬದ ನಾಸ್ತಿಕರ ಬಗ್ಗೆ ವಿನಾಕಾರಣ ಚರ್ಚೆ, ವಾದ, ವಿವಾದ ಅನಗತ್ಯ ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದ್ದಾರೆ.

ವಿವಾದ ಸೃಷ್ಟಿ ಬೇಡ
ಜನರಲ್ಲಿ ಮೌಢ್ಯ ಮತ್ತು ಮೂಢನಂಬಿಕೆ ದೂರಮಾಡುವ ವಿಚಾರದಲ್ಲಿ ವಿಚಾರವಾದಿಗಳು ಮತ್ತು ತಜ್ಞರು ಸರ್ಕಾರಕ್ಕೆ ವರದಿ ಕೊಟ್ಟಿದ್ದಾರೆ ಅಷ್ಟೆ. ಜಾರಿ ಮಾಡುವ ಬಗ್ಗೆ ಇನ್ನೂ ಚರ್ಚೆಯನ್ನೇ ಮಾಡಿಲ್ಲ. ಕೊಟ್ಟಿರುವ ವರದಿ ಇನ್ನೂ ಪರಿಶೀಲಿಸಿಲ್ಲ ಹೀಗಾಗಿ ಈ ವಿಚಾರದಲ್ಲಿ ಯಾವುದೇ ವಿವಾದ ಸೃಷ್ಟಿಸುವುದು ಬೇಡ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.  ಈ ವಿಚಾರದಲ್ಲಿ ಪ್ರತಿಪಕ್ಷಗಳು ಸುಮ್ಮನೆ ಮಾತನಾಡುತ್ತಿವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement