ವರದಕ್ಷಿಣೆ ಕಿರುಕುಳ; ಲೆಫ್ಟಿನೆಂಟ್ ಕರ್ನಲ್‌ಗೆ 5 ವರ್ಷ ಜೈಲು
ಮೈಸೂರು: ಹೆಚ್ಚಿನ ವರದಕ್ಷಿಣೆಗಾಗಿ ಪತ್ನಿಗೆ ಕಿರುಕುಳ ನೀಡಿದ ಪತಿ ಲೆಫ್ಟಿನೆಂಟ್ ಕರ್ನಲ್‌ಗೆ 5 ವರ್ಷ ಹಾಗೂ ಅತ್ತೆ ಮಾವನಿಗೆ ತಲಾ 3 ವರ್ಷ ಜೈಲು ವಿಧಿಸಿ ಮೈಸೂರಿನ ನ್ಯಾಯಾಲಯವು ಶುಕ್ರವಾರ ತೀರ್ಪು ನೀಡಿದೆ. ಬೆಂಗಳೂರು ವಿಜಯನಗರ ಎಕ್ಸಟೆನ್ಷನ್ ನಿವಾಸಿ ಹಾಗೂ ಲೆಪ್ಟಿನೆಂಟ್ ಕರ್ನಲ್ ಶಶಿಧರ್, ಇವರ ತಂದೆ ಲಿಂಗಪ್ಪ ಮತ್ತು ತಾಯಿ ಪಾರ್ವತಮ್ಮ ಶಿಕ್ಷೆಗೆ ಗುರಿಯಾದವರು.
ಪ್ರಕರಣ ವಿವರ: ಮೈಸೂರಿನ ಟಿ.ಕೆ. ಬಡಾವಣೆ ನಿವಾಸಿ ರೇಣುಕಾ ಅವರಿಗೆ ಶಶಿಧರ್ ಅವರೊಂದಿಗೆ 2001ರಲ್ಲಿ ವಿವಾಹವಾಗಿತ್ತು. ಮದುವೆಗೆ ಮುನ್ನ ಕಾರು ಕೇಳಿದ್ದು, ಮಾತುಕತೆಯ ಮೂಲಕ 50 ಸಾವಿರ ವರದಕ್ಷಿಣೆ ಪಡೆದಿದ್ದರು. ಹೆಚ್ಚಿನ ವರದಕ್ಷಿಣೆಗಾಗಿ ಪತಿ, ಅತ್ತೆ ಮತ್ತು ಮಾವ ಸೇರಿಕೊಂಡು ರೇಣುಕಾ ಅವರನ್ನು ರೂಮಿನಲ್ಲಿ ಕೂಡಿ ಹಾಕಿ ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡುತ್ತಿದ್ದರು. ಪೈಜಾಬಾದ್‌ನಲ್ಲಿ ವಾಸವಾಗಿದ್ದಾಗ ಪತಿ ಶಶಿಧರ್ ಮಾನಸಿಕ ಹಿಂಸೆ ನೀಡಿ, ನಿವೇಶನಕ್ಕಾಗಿ ಒತ್ತಾಯಿಸಿದ್ದ. ವಿಚ್ಛೇದನ ಕೊಡುವುದು, ಕೊಲೆ ಮಾಡುವುದಾಗಿ ಬೆದರಿಕೆ ಹಾಕುತ್ತಿದ್ದ. ಗರ್ಭಿಣಿಯಾದ ವೇಳೆ ಸರಿಯಾಗಿ ನೋಡಿಕೊಂಡಿಲ್ಲ. ಮಗುವಿಗೆ ಹಾಲು ಕುಡಿಸಲು ಬಿಡದೆ ತೊಂದರೆ ಕೊಡುತ್ತಿದ್ದ. ಫೈಜಾಬಾದಿಗೆ ಬಂದ ಅತ್ತೆ ಪಾರ್ವತಮ್ಮ ಸಹ ಕಿರುಕುಳ ನೀಡಿ, 5 ಲಕ್ಷ ವರದಕ್ಷಿಣೆ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಸಂಬಂಧ ರೇಣುಕಾ ಮೈಸೂರಿನ ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ಪೊಲೀಸರು ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿ ಸಲ್ಲಿಸಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ಮೈಸೂರಿನ 4ನೇ ಹೆಚ್ಚುವರಿ(ಹಿರಿಯ ಶ್ರೇಣಿ) ಮತ್ತು ಸಿಜೆಎಂ ನ್ಯಾಯಾಲಯದ ನ್ಯಾಯಾಧೀಶ ದಿನೇಶ್ ಹೆಗಡೆ ಅವರು ಮೂವರು ಆರೋಪಿಗಳು ಅಪರಾಧಿಗಳೆಂದು ತೀರ್ಪು ನೀಡಿದ್ದಾರೆ.