'ಶತಮಾನ' ಶಾಲೆಗಳ ಜಿಲ್ಲೆಯಲ್ಲಿ ಉಳಿಯುವುದೇ ಕನ್ನಡ ಮಾನ!
ಕಾರವಾರ/ಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಶತಮಾನ ಪೂರೈಸಿದ ಶಾಲೆಗಳ ಸಂಖ್ಯೆ 205 ಇವೆ ಎಂಬ ಸಂತೋಷದ ಸಂಗತಿಯೊಂದಿಗೆ ಕಳೆದ ಮೂರು ವರ್ಷಗಳಲ್ಲಿ ಜಿಲ್ಲೆಯಲ್ಲಿ 33 ಶಾಲೆಗಳು ಬಾಗಿಲು ಮುಚ್ಚಿವೆ ಎಂಬ ವಾಸ್ತವವನ್ನೂ ಒಪ್ಪಿಕೊಳ್ಳುವುದು ಅನಿವಾರ್ಯತೆ ಇದೆ.
ಇಂಗ್ಲಿಷ್ ಪ್ರಭಾವದೊಂದಿಗೆ ಹಳಿಯಾಳ ಹಾಗೂ ಜೋಯಿಡಾದಲ್ಲಿ ಮರಾಠಿ ಶಾಲೆಗಳು ಇಂದಿಗೂ ತನ್ನ ಪ್ರಭಾವ ಉಳಿಸಿಕೊಂಡಿವೆ. ಶಿರಸಿ ಶೈಕ್ಷಣಿಕ ಜಿಲ್ಲೆಯ 27 ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಮಕ್ಕಳ ಹಾಜರಾತಿ 3 ವರ್ಷಗಳಿಂದ ಶೂನ್ಯ. ಅಷ್ಟೇ ಅಲ್ಲದೆ, 4 ಹಿರಿಯ ಪ್ರಾಥಮಿಕ ಶಾಲೆಗಳಲ್ಲೂ ಮಕ್ಕಳಿಲ್ಲದಂತಾಗಿದೆ. ಶಿರಸಿ ತಾಲೂಕಿನ ಅಜ್ಜೀಬಳ ಹಿ.ಪ್ರಾ. ಶಾಲೆಯಲ್ಲಿ ಹಿರಿಯ ಸಹಕಾರಿಗಳಾಗಿದ್ದ, ಶಾಸಕರು, ಅಪೆಕ್ಸ್ ಬ್ಯಾಂಕ್ ಅಧ್ಯಕ್ಷರು, ಪತ್ರಕರ್ತರೂ ಆಗಿದ್ದ ಜಿ.ಎಸ್. ಹೆಗಡೆ ಅಜ್ಜೀಬಳ ಕಲಿತಿದ್ದಾರೆ. ಅಗಸಾಲ-ಬೊಮ್ಮನಳ್ಳಿ ಹಿ.ಪ್ರಾ. ಶಾಲೆಯಲ್ಲಿ ಹಿರಿಯ ಸಹಕಾರಿ ಧುರೀಣರಾಗಿದ್ದ ಹಾಗೂ ಶಾಸಕರಾಗಿದ್ದ ಶ್ರೀಪಾದ ಹೆಗಡೆ ಕಡವೆ, ಪಶ್ಚಿಮಘಟ್ಟ ಕಾರ್ಯಪಡೆಯ ನಿಕಟಪೂರ್ವ ಅಧ್ಯಕ್ಷ ಅನಂತ ಹೆಗಡೆ ಅಶೀಸರ ಅಭ್ಯಾಸ ಮಾಡಿದ್ದಾರೆ.
ಗೋವಾದ ಆಂಗ್ಲ ಶಾಲೆಗಳಿಗೆ ರಾಜ್ಯದ ಮಕ್ಕಳು
ಕಾರವಾರ ಶೈಕ್ಷಣಿಕ ಜಿಲ್ಲೆ ಕಾರವಾರ, ಅಂಕೋಲಾ, ಕುಮಟಾ, ಹೊನ್ನಾವರ ಹಾಗೂ ಭಟ್ಕಳ ತಾಲೂಕುಗಳನ್ನು ಒಳಗೊಂಡಿದೆ. ಕಾರವಾರ ತಾಲೂಕಿನ ಗಡಿ ಪ್ರದೇಶವಾದ ಮಾಜಾಳಿ, ಮುಡಗೇರಿ, ಸಾನಮುಡಗೇರಿ, ಗಾಬಿತವಾಡ ಮತ್ತಿತರ ಊರುಗಳಲ್ಲಿನ ವಿದ್ಯಾರ್ಥಿಗಳು ನೂರಾರು ಸಂಖ್ಯೆಯಲ್ಲಿ ಪ್ರತಿದಿನ ಗೋವಾದ ಆಂಗ್ಲ ಮಾಧ್ಯಮ ಶಾಲೆಗೆ ತೆರಳುತ್ತಾರೆ. ಮಾಶೆಂ, ಪೈಂಗಿಣಿ ಹಾಗೂ ಕಾಣಕೋಣದಲ್ಲಿನ ಆಂಗ್ಲ ಮಾಧ್ಯಮ ಶಾಲೆಗಳ ವಾಹನಗಳು ಈ ಗಡಿ ಪ್ರದೇಶದ ವಿದ್ಯಾರ್ಥಿಗಳನ್ನು ಪ್ರತಿದಿನ ಕರೆದೊಯ್ಯುತ್ತಿವೆ. ಈ ಶಾಲೆಗಳೊಂದಿಗೆ ಪೈಪೋಟಿ ನಡೆಸಲಾರದೆ ಇಲ್ಲಿನ ಕನ್ನಡ ಶಾಲೆಗಳು ಸೊರಗುತ್ತಿವೆ. ಕಾರವಾರ ಶೈಕ್ಷಣಿಕ ಜಿಲ್ಲೆಯಲ್ಲಿ ಒಟ್ಟು 249 ಶಾಲೆಗಳು ಮಣ್ಣಿನ ಗೋಡೆಯನ್ನು ಹೊಂದಿದ್ದು, ದುಸ್ಥಿತಿಯಲ್ಲಿವೆ. ಈ ಕಟ್ಟಡಗಳ ಪುನರ್ ನಿರ್ಮಾಣಕ್ಕೆ ಬೃಹತ್ ಯೋಜನೆಯನ್ನು ರೂಪಿಸಬೇಕಾಗಿದೆ.
ಶೈಕ್ಷಣಿಕ ವಿಂಗಡಣೆ
ಆಡಳಿತ ಅನುಕೂಲಕ್ಕಾಗಿ ಉತ್ತರ ಕನ್ನಡದಲ್ಲಿ ಕಾರವಾರ ಶೈಕ್ಷಣಿಕ ಜಿಲ್ಲೆ ಹಾಗೂ ಶಿರಸಿ ಶೈಕ್ಷಣಿಕ ಜಿಲ್ಲೆ ಎಂದು ವಿಂಗಡಿಸಲಾಗಿದೆ. ಆದರೂ, ಪ್ರತಿ ತಾಲೂಕಿನಲ್ಲಿಯೂ ಶಾಲೆಗಳು ವಿವಿಧ ಸಮಸ್ಯೆಗಳನ್ನು ಎದುರಿಸುತ್ತಿವೆ. ಮೂಲ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ಜೋಯಿಡಾದಲ್ಲಿ ಶಿಕ್ಷಕರ ಕೊರತೆ ಹೆಚ್ಚು. ಶಿರಸಿ ಶೈಕ್ಷಣಿಕ ಜಿಲ್ಲೆಯಲ್ಲಿ 596 ಶಿಕ್ಷಕರ ಕೊರತೆಯಿದೆ. ಅವುಗಳಲ್ಲಿ 490 ಅತಿಥಿ ಶಿಕ್ಷಕರನ್ನು ನೇಮಿಸಿಕೊಳ್ಳಲಾಗಿದ್ದು, ಉಳಿದ 106 ಶಿಕ್ಷಕರ ನೇಮಕಾತಿಗೆ ಆದಷ್ಟು ಶೀಘ್ರ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರು ಹೇಳುತ್ತಾರೆ.
ಸುಸ್ಥಿತಿಯಲ್ಲಿಲ್ಲದ ಶತಮಾನದ ಶಾಲೆಗಳು
ಹಳಿಯಾಳದ ಬಿ.ಕೆ. ಹಳ್ಳಿ ಶಾಲೆ 193 ವಸಂತಗಳನ್ನು ಕಾಣುವುದರೊಂದಿಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ ಒಟ್ಟು 205 ಪ್ರಾಥಮಿಕ ಶಾಲೆಗಳು ಶತಮಾನದ ಸಂಭ್ರಮವನ್ನು ಆಚರಿಸಿಕೊಂಡಿವೆ. ಈ ಎಲ್ಲ ಶಾಲೆಗಳಲ್ಲಿ ಅಗತ್ಯ ಮೂಲ ಸೌಲಭ್ಯಗಳನ್ನು ಕಲ್ಪಿಸಬೇಕಾಗಿದೆ. ಕೊಠಡಿಗಳನ್ನು ಸುಸಜ್ಜಿತವಾಗಿ ನಿರ್ಮಿಸಬೇಕಾಗಿದೆ. ಕಾರವಾರದ ಸಾವಂತವಾಡ ಶಾಲೆಯಲ್ಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಶಿಕ್ಷಕರೇ ಬ್ಯಾಂಕಿನಲ್ಲಿ ಠೇವಣಿ ಇಡುತ್ತಿರುವುದು, ಸರಸ್ವತಿ ವಿದ್ಯಾಲಯದಲ್ಲಿ ಶಿಕ್ಷಕರು ತಮ್ಮ ಕಿಸೆಯಿಂದ ಹಣ ಖರ್ಚು ಮಾಡಿ ವಿದ್ಯಾರ್ಥಿಗಳಿಗೆ ಹಾಸ್ಟೆಲ್ ವ್ಯವಸ್ಥೆ ಕಲ್ಪಿಸಿರುವುದು ಮೆಚ್ಚತಕ್ಕ ಸಂಗತಿ. ಉತ್ತರ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯ ಜನಪ್ರತಿನಿಧಿಗಳು ಹಾಗೂ ಪೋಷಕರು ಶಾಲೆ ಅಭಿವೃದ್ಧಿಗೆ ಸ್ಪಂದಿಸುತ್ತಿದ್ದರೂ, ಕನ್ನಡ ಶಾಲೆಗಳು ಇನ್ನೂ ಚೇತರಿಸಿಕೊಳ್ಳುವ ಅಗತ್ಯವಿದೆ. ಆಂಗ್ಲ ಮಾಧ್ಯಮ ಶಾಲೆಗಳ ಭರಾಟೆ ಹಳ್ಳಿಗಳಲ್ಲೂ ಕಾಣಿಸುತ್ತಿರುವುದು ಭವಿಷ್ಯದಲ್ಲಿ ಕನ್ನಡ ಶಾಲೆಗಳ ಸ್ಥಿತಿಗಳ ಬಗ್ಗೆ ಕಳವಳಕ್ಕೆ ಕಾರಣವಾಗಿದೆ. ಕಾರವಾರದ ಗಡಿ ಪ್ರದೇಶದ ವಿದ್ಯಾರ್ಥಿಗಳು ಶಿಕ್ಷಣಕ್ಕಾಗಿ ಗೋವಾ ಗಡಿ ದಾಟುತ್ತಿದ್ದಾರೆ. ಗುಣಮಟ್ಟ ಕಡಿಮೆ ಎಂಬ ನೆಪವೊಡ್ಡಿ ಪಾಲಕರು ಮಕ್ಕಳನ್ನು ಖಾಸಗಿ ಆಂಗ್ಲ ಶಾಲೆಗಳಿಗೆ ಕಳುಹಿಸುತ್ತಿದ್ದಾರೆ. ಹೀಗಾಗಿ ಈಗ ಹಲವು ಶಾಲೆಗಳು ಮಕ್ಕಳ ಕೊರತೆಯನ್ನು ಎದುರಿಸುತ್ತಿವೆ.
ವಸಂತಕುಮಾರ್/ವಿಶ್ವಾಮಿತ್ರ ಹೆಗಡೆ