ಸಿದ್ದರಾಮಯ್ಯನವರೇ, ಕತ್ತಲ ರಾತ್ರಿಯಲ್ಲಿ ತಲೆ ಸವರುವ ಬುದ್ಧಿಜೀವಿಗಳೆಂಬ ವಿದೂಷಕರ ಬಗ್ಗೆ ಎಚ್ಚರವಾಗಿರಿ...
ಕತ್ತಲಾದ ನಂತರ ನಿಮ್ಮ ಮನೆ ಸೇರಿಕೊಂಡು ನಿಮ್ಮ ನೆತ್ತಿ ಸವರುವ ಬುದ್ಧಿಜೀವಿಗಳೆಂಬ ವಿದೂಷಕರ ಬಗ್ಗೆ ಎಚ್ಚರಿಕೆಯಿಂದ ಇರಿ...
ಕನ್ನಡಪ್ರಭವಾರ್ತೆ, ಬೆಂಗಳೂರು, ನ 8-
ಕತ್ತಲಾದ ನಂತರ ನಿಮ್ಮ ಮನೆ ಸೇರಿಕೊಂಡು ನಿಮ್ಮ ನೆತ್ತಿ ಸವರುವ ಬುದ್ಧಿಜೀವಿಗಳೆಂಬ ವಿದೂಷಕರ ಬಗ್ಗೆ ಎಚ್ಚರಿಕೆಯಿಂದ ಇರಿ...
ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ ಅವರು ನೀಡಿರುವ ಸಲಹೆ.
ಕತ್ತಲಾದ ನಂತರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮನೆಯಲ್ಲಿ ಸೇರಿ ಅವರ ಮನದ ಬೇಸರ ಕಳೆಯುವ ಕೆಲ ವಿದೂಷಕರೇ ಹಿಂದೆ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲ್ ಅವರನ್ನು ಹೊಗಳಿ ಹೊನ್ನ ಶೂಲಕ್ಕೇರಿಸಿ ಹಾಳು ಮಾಡಿದ್ದರು. ಇವರು ತಮ್ಮನ್ನು ಸಾಹಿತಿಗಳು, ವಿಚಾರವಾದಿಗಳು ಎಂದು ಕರೆದುಕೊಳ್ಳುತ್ತಾರೆ. ಇವರು ಇತ್ತೀಚೆಗೆ ಏನನ್ನೂ ಬರೆದಿಲ್ಲ. ಹಿಂದೆ ಬರೆದಿದ್ದನ್ನು ಓದಿದರೂ ಸಮಾಜ ಛಿದ್ರವಾಗುವುದರಲ್ಲಿ ಅನುಮಾನವಿಲ್ಲ...!
ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಗೆ ಬರುವುದಕ್ಕೆ ಮುನ್ನ ಹಿಂದೆ ಅರಸರ ಆಳ್ವಿಕೆ ಇತ್ತು. ಅಂದಿನ ಅರಸರಿಗೆ ಪ್ರಜಾ ಹಿತಕ್ಕಿಂತ ಮೋಜು ಮುಖ್ಯವಾಗಿತ್ತು. ಆಗ ಕೆಲ ವಿದೂಷಕರು ಸಂಜೆ ನಂತರ ಅವರ ಅರಮನೆಗೆ ಬಂದು ವಿವಿಧ ವಿನೋದಾವಳಿಗಳ ಮೂಲಕ ರಂಜಿಸುತ್ತಿದ್ದರು. ನಮ್ಮ ಕೆಲ ಬುದ್ಧಿಜೀವಿಗಳು, ಸಾಹಿತಿಗಳು ಈಗ ಸಿದ್ದರಾಮಯ್ಯನವರ ಮನೆಯಲ್ಲಿ ಮಾಡುತ್ತಿರುವುದು ಇದನ್ನೇ. ಇವರನ್ನು ನಂಬಿಕೊಂಡು ಯಾರಾದರೂ ಆಡಳಿತ ನಡೆಸುತ್ತಾರೆಯೇ ? ನಡೆಸಿದರೆ ಅದನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನುತ್ತಾರೆಯೇ?
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸುತ್ತ ಸೇರಿಕೊಂಡಿರುವ ಕೆಲ ಸ್ವಯಂಘೋಷಿತ ಬುದ್ಧಿಜೀವಿಗಳ ತಂಡದ ಬಗ್ಗೆ ಎಚ್.ಡಿ.ಕುಮಾರಸ್ವಾಮಿ ಅವರು ಮಾಡಿರುವ ವ್ಯಾಖ್ಯಾನ ಇದು.
ಮೌಢ್ಯ ಪ್ರತಿಬಂಧಕ ಕಾಯ್ದೆ ಹೆಸರಿನಲ್ಲಿ ಸಿದ್ದರಾಮಯ್ಯ ಅವರ ತಲೆ ಸವರಿ ಸಮಾಜದ ಸ್ವಾಸ್ಥ್ಯ ಕದಡಲು ಈ ವರ್ಗ ಪ್ರಯತ್ನಿಸುತ್ತಿದೆ ಎಂಬ ಆರೋಪ ಹಿನ್ನೆಲೆಯಲ್ಲಿ 'ಕನ್ನಡಪ್ರಭ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂದರ್ಶನದ ಪೂರ್ಣಪಾಠ ಹೀಗಿದೆ:
ಸರ್ಕಾರ ಜಾರಿಗೆ ತರಲು ಉದ್ದೇಶಿಸಿರುವ ಈ ವಿಧೇಯಕ ಸಮಾಜದ ಸ್ವಾಸ್ಥ್ಯ ಕೆಡಿಸುವುದರಲ್ಲಿ ಅನುಮಾನವಿಲ್ಲ. ಏಕೆಂದರೆ ಇದರ ಹಿಂದೆ ಕೆಲ ಸಾಹಿತಿಗಳು ಹಾಗೂ ಬುದ್ಧಿಜೀವಿಗಳು ಎನಿಸಿಕೊಂಡವರು ಇದ್ದಾರೆ. ನಾನು ಸಹ ಸಾಹಿತ್ಯಾಭಿಮಾನಿ. ಎಲ್ಲ ಸಾಹಿತಿಗಳನ್ನು ನಾನು ಈ ವರ್ಗಕ್ಕೆ ಸೇರಿಸುವುದಿಲ್ಲ. ಆದರೆ ಸಿದ್ದರಾಮಯ್ಯ ಅವರ ಸುತ್ತ ಸೇರಿಕೊಂಡಿರುವ ಈ ಸಾಹಿತಿಗಳು ಯಾರು ಗೊತ್ತೆ ? ಇವರು ಹಿಂದೆ ರಾಮಕೃಷ್ಣ ಹೆಗಡೆ, ಜೆ.ಎಚ್.ಪಟೇಲರ ಹಿಂದೆ ಸುತ್ತುತ್ತಿದ್ದರು. ಅವರನ್ನು ಹೊಗಳಿ ಹೊನ್ನ ಶೂಲಕ್ಕೆ ಏರಿಸಿ ಹಾಳು ಮಾಡಿದರು. ಯಾವುದೇ ಸರ್ಕಾರ ಅಧಿಕಾರಕ್ಕೆ ಬರಲಿ ಆಗ ಇವರು ತಮ್ಮದೇ ಆದ ರೀತಿಯಲ್ಲಿ ಬೇಳೆ ಬೇಯಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬಕೆಟ್ ಹಿಡಿಯುತ್ತಾರೆ.
ವರ್ಗ ಸಂಘರ್ಷ: ಸಿದ್ದರಾಮಯ್ಯನವರು ತಮ್ಮ ರಕ್ಷಣೆಗೆ ತಯಾರು ಮಾಡಿಕೊಂಡಿರುವ ಈ ಸಾಹಿತಿಗಳ ತಂಡ ಸಮಾಜದಲ್ಲಿ ವರ್ಗ ಸಂಘರ್ಷವನ್ನು ಸೃಷ್ಟಿಸುವ ಕಾರ್ಯಕ್ರಮಕ್ಕೆ ಹೊಂಚು ಹಾಕಿದೆ. ಮುಖ್ಯಮಂತ್ರಿಗಳ ಪ್ರತಿ ತೀರ್ಮಾನದ ಹಿಂದೆ ಇವರು ಕೆಲಸ ಮಾಡುತ್ತಿದ್ದಾರೆ. ಮಾತ್ರವಲ್ಲ ಸಿದ್ದರಾಮಯ್ಯನವರು ಕುಳಿತಿದ್ದು, ನಿಂತಿದ್ದು, ಆಕಳಿಸಿದ್ದು, ಸೇರಿದಂತೆ ಎಲ್ಲವನ್ನೂ ಸಮರ್ಥನೆ ಮಾಡುವ ಈ ಸಾಹಿತಿಗಳು ಹಿಂದೆ ಎಲ್ಲಿದ್ದರು? ಏನು ಮಾಡುತ್ತಿದ್ದರು ಎಂಬುದು ಎಲ್ಲರಿಗೂ ಗೊತ್ತು.
ಈ 'ವರ್ಗ'ದ ಸಾಹಿತಿಗಳು ಬೆಳಗ್ಗೆ ಎದ್ದ ತಕ್ಷಣ ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾಕ್ಕೆ ಹೋಗುತ್ತಾರೆ. ಸಿದ್ದರಾಮಯ್ಯನವರ ಪ್ರತಿ ನಡಾವಳಿಯನ್ನು ದೊಡ್ಡ ಸಾಧನೆ ಎಂದು ಹೇಳುತ್ತಾರೆ. ಸಾಯಂಕಾಲವಾದ ನಂತರ ಸಿದ್ದರಾಮಯ್ಯನವರ ಮನೆಗೆ ಹೋಗುತ್ತಾರೆ. ಅಲ್ಲಿ ವಿವಿಧ ವಿನೋದಾವಳಿಗಳ ಮೂಲಕ ಅವರ ಬೇಸರ ಕಳೆಯುತ್ತಾರೆ. ಈ ಮೌಢ್ಯ ಪ್ರತಿಬಂಧಕ ಕರಡು ಇವರದ್ದೇ ಅನಿಷ್ಟದ ಕೂಸು. ಮಾತ್ರವಲ್ಲ ಇದು ಸಿದ್ದರಾಮಯ್ಯನವರ ಸಾಧನೆಯ ಗರಿ ಎಂದು ಹೇಳುತ್ತಿದ್ದಾರೆ.
ಮನಸು ಛಿದ್ರ: ನನಗೂ ಸ್ವಲ್ಪ ಓದು, ಸಾಹಿತ್ಯದ ಅಭಿರುಚಿ ಇದೆ. ಆದರೆ ಈ ಬುದ್ಧಿಜೀವಿಗಳು ಮತ್ತು ಸಾಹಿತಿಗಳು ಇತ್ತೀಚೆಗೆ ಬರೆದ ಪುಸ್ತಕಗಳ ಬಗ್ಗೆ ಕೇಳಿಲ್ಲ. ಒಂದೊಮ್ಮೆ ಬರೆದರೂ ನಾನು ಅಂಥವರ ಬರವಣಿಗೆಯನ್ನು ಓದುವುದಿಲ್ಲ. ಅವರ ಬರಹಗಳನ್ನು ಓದಿ ನನ್ನ ಮನಸನ್ನು ಛಿದ್ರ ಮಾಡಿಕೊಳ್ಳುವುದಕ್ಕೆ ನಾನು ಸಿದ್ಧನಿಲ್ಲ. ಯಾವುದೇ ಸಾಹಿತಿಯಾಗಿರಲಿ ಆತ ಹೃದಯ ವೈಶಾಲ್ಯತೆಯನ್ನು ಹೊಂದಿರಬೇಕು.
ಮಾನವೀಯ ಮೌಲ್ಯವನ್ನು ಓದುಗರಲ್ಲಿ ಬಿತ್ತಬೇಕು. ರಾಮಾಯಣ ಮತ್ತು ಮಹಾಭಾರತ ಕೃತಿಯಲ್ಲಿ ಇಂಥ ಮೌಲ್ಯಗಳಿವೆ. ಆಧುನಿಕ ಸಾಹಿತ್ಯವೂ ಇದಕ್ಕೆ ಹೊರತಲ್ಲ. ಆದರೆ ಈ ಸಾಹಿತಿಗಳು ಮಾಡುತ್ತಿರುವುದೇನು ? ಇವರು ಸಮಾಜದಲ್ಲಿ ವಿಕೃತ ಮೌಲ್ಯವನ್ನು ಹರಡುತ್ತಿದ್ದಾರೆ. ಶಿವ-ಪಾರ್ವತಿ, ಗಣಪತಿ ಬಗ್ಗೆ ನಮ್ಮ ಪರಂಪರೆಯಲ್ಲಿ ಮತ್ತು ಜನರಲ್ಲಿ ಪೂಜ್ಯ ಮತ್ತು ಭಕ್ತಿ ಭಾವನೆಯಿದೆ. ಆದರೆ ಇತ್ತೀಚೆಗೆ ಈ ನಂಬಿಕೆಯನ್ನೇ ಅಲ್ಲಾಡಿಸುವಂತ ಡುಂಡಿ ಕೃತಿ ಪ್ರಕಟವಾಗಿತ್ತು. ಈ ಸಾಹಿತಿಗಳು ಇದನ್ನು ಬೆಂಬಲಿಸಿದರು. ಮಾತ್ರವಲ್ಲ ಅದನ್ನೇ ಓದಿ ಎಂದು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಬೊಬ್ಬೆ ಹಾಕಿದರು. ಸಿದ್ದರಾಮಯ್ಯನವರು ಅಧಿಕಾರಕ್ಕೆ ಬಂದ ನಂತರ ಇಂಥ ಹಲವು ಘಟನೆಗಳು ನಡೆದಿವೆ. ಇದಕ್ಕೆಲ್ಲ ಇಂಥವರ ಪ್ರೇರಣೆಯೇ ಕಾರಣ.
ಅಹಿಂದ ವರ್ಗದ ಹಿತಾಸಕ್ತಿ ಕಾಪಾಡುವ ಭರವಸೆ ನೀಡಿ ಅಧಿಕಾರಕ್ಕೆ ಬಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಮಾಜದಲ್ಲಿ ಜಾತಿ ವಿಷಬೀಜ ಬಿತ್ತುತ್ತಿದ್ದಾರೆ. ಜಾತಿ ಹಾಗೂ ಧರ್ಮದ ಆಧಾರದ ಮೇಲೆ ಸಮಾಜವನ್ನು ಒಡೆಯುತ್ತಿದ್ದಾರೆ.
ನಾನು ಗೌರವಿಸಿದ್ದೆ : ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲೂ ಸಾಹಿತಿಗಳಿಗೆ ಗೌರವ ನೀಡಿದ್ದೆ. ಆದರೆ ಇವರ ಹಾಗೆ ರಾತ್ರಿ 2 ಗಂಟೆ ನಂತರ ಕುಳಿತು ಚರ್ಚೆ ನಡೆಸುತ್ತಿರಲಿಲ್ಲ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಎಲ್ಲರನ್ನೂ ಕರೆದು ಗೌರವಯುತವಾಗಿ ಸಭೆ ನಡೆಸಿದ್ದೆ. ಮಾತ್ರವಲ್ಲ ಅವರ ಸಲಹೆ ಮೇರೆಗೆ ಭಾಷೆ-ಸಂಸ್ಕೃತಿಯನ್ನು ರಕ್ಷಿಸುವ ಕೆಲಸಕ್ಕೆ ಮುಂದಾಗಿದ್ದೆ. ಜನಪದ ಜಾತ್ರೆಯಂಥ ಕಾರ್ಯಕ್ರಮವನ್ನು ನಾನು ಜಾರಿಗೆ ತರುವುದಕ್ಕೆ ಕಾರಣರಾದವರು ನಮ್ಮ ವಿಚಾರವಂಥ ಸಾಹಿತಿಗಳು. ಆದರೆ ಇವರು ಮಾಡುತ್ತಿರುವುದೇನು ? ಮೊದಲೇ ಸಮಾಜ ಒಡೆದಿದೆ. ಅಂಥದರಲ್ಲಿ ಇಂಥ ವಿಧೇಯಕದ ಅಗತ್ಯವಿದೆಯೇ ? ಜನರು ಯಾವುದನ್ನು ನಂಬಬೇಕು, ಯಾವುದನ್ನು ಬಿಡಬೇಕು ಎಂಬುದನ್ನು ಸರ್ಕಾರ ನಿರ್ಧರಿಸಬೇಕಿಲ್ಲ. ಉತ್ತಮ ಶಿಕ್ಷಣವನ್ನು ನೀಡಿದರೆ ಅವರೇ ಸರಿ-ತಪ್ಪು ನಿರ್ಧರಿಸುತ್ತಾರೆ.
ಇದೇನು ಸಂವಿಧಾನ ವಿಧಿತವೇ ? : ಹಿಂದೆ ನಾನು ಮುಖ್ಯಮಂತ್ರಿಯಾಗಿದ್ದಾಗ ಪದ್ಮನಾಭನಗರದಲ್ಲಿರುವ ವ್ಯಕ್ತಿ ಸರ್ಕಾರವನ್ನು ನಿಯಂತ್ರಿಸುತ್ತಾರೆ. ಇದು ಸಂವಿಧಾನ ವಿರೋಧಿ ಕ್ರಮ ಎಂದು ಸಿದ್ದರಾಮಯ್ಯನವರು ಆರೋಪಿಸಿದ್ದರು. ನಂತರ ಬಿಜೆಪಿ ಸರ್ಕಾರದ ನಿರ್ಧಾರ ಕೇಶವಕೃಪಾದಲ್ಲಿ ಆಗುತ್ತಿದೆ ಎಂದಿದ್ದರು. ಈಗ ಇವರ ಪ್ರತಿ ನಿರ್ಧಾರದ ಹಿಂದೆ ಬುದ್ಧಿಜೀವಿಗಳು ಎನಿಸಿಕೊಂಡವರಿದ್ದಾರೆ. ಇವರಿಗೇನು ಸಂವಿಧಾನದ ಮಾನ್ಯತೆ ಇದೆ ? ಅಥವಾ ನಿಮ್ಮ ಸರ್ಕಾರ ಸಂವಿಧಾನಕ್ಕೆ ಅತೀತವೇ ? ಎಂದು ಪ್ರಶ್ನಿಸಿದ್ದಾರೆ.
ಅಲ್ಪಸಂಖ್ಯಾತ ಬಂಧುಗಳೇ ಶಾದಿಭಾಗ್ಯ ನಿಷೇಧಿಸಿ
ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಾರಿಗೆ ತಂದಿರುವ ಶಾದಿಭಾಗ್ಯ ಯೋಜನೆ ಅಲ್ಪಸಂಖ್ಯಾತ ಬಂಧುಗಳನ್ನು ಅಣಕಿಸುವಂತಿದೆ. ಈ ಸರ್ಕಾರಕ್ಕೆ ಅಲ್ಪಸಂಖ್ಯಾತರ ಅಭಿವೃದ್ಧಿ ಬೇಕಿಲ್ಲ. ಅವರ ಬಡತನವನ್ನೇ ಬಂಡವಾಳವಾಗಿಸಿಕೊಳ್ಳಲು ಮುಂದಾಗಿದೆ. ಸರ್ಕಾರಕ್ಕೆ ನಿಜವಾಗಲೂ ಬದ್ಧತೆ ಇದ್ದರೆ ಈ ವರ್ಗಕ್ಕೆ ಶಿಕ್ಷಣ ಮತ್ತು ಉದ್ಯೋಗ ನೀಡಲಿ. ಅದನ್ನು ಬಿಟ್ಟು ಆಮಿಷ ಕೊಡಬೇಡಿ. ಈ ಹಿನ್ನೆಲೆಯಲ್ಲಿ ನಾನು ಅಲ್ಪಸಂಖ್ಯಾತ ಬಂಧುಗಳಲ್ಲಿ ಮನವಿ ಮಾಡುವುದಿಷ್ಟೇ ಸರ್ಕಾರ ಜಾರಿಗೆ ತಂದಿರುವ ಶಾದಿಭಾಗ್ಯ ನಿಮ್ಮ ಬಡತನವನ್ನು ಅಣುಕಿಸುವ ಯೋಜನೆ. ಹೀಗಾಗಿ ಇದನ್ನು ನೀವೇ ನಿಷೇಧಿಸಿ.
- ಸಂದರ್ಶನ: ರಾಘವೇಂದ್ರ ಭಟ್