ಅಕ್ರಮ ಅದಿರು ರಫ್ತು ಮೂಡ್
ಕನ್ನಡಪ್ರಭ ವಾರ್ತೆ ಬಳ್ಳಾರಿ ನ.9
ಕಾಂಡೋಮ್ಮಿಗೂ ಮತ್ತು ಅದಿರಕ್ಕೂ ಏನಾದಾರೂ ಸಂಬಂಧವಿದೆಯೇ?!
ಹೀಗೆ ಕೇಳಿದರೆ ನಗು ಬರಬಹುದು. ಆದರೆ, ಇದು ನಿಜ. ಕಾಂಡೋಮ್ ಉತ್ಪಾದಿಸುವ ಕಂಪನಿ ಅದಿರು ರಫ್ತು ಮಾಡಿದೆ, ಅದು ಅಕ್ರಮವಾಗಿ!
ಅಂದ ಹಾಗೆ, ಗಣಿ ವ್ಯಾಮೋಹಕ್ಕೊಳಗಾಗಿ ಬೇಲೆಕೇರಿ ಬಂದರಿನಿಂದ ಅದಿರು ರಫ್ತು ಮಾಡಿದ ಕಂಪನಿ ಹೆಸರು, ಕೇರಳ ಮೂಲದ ಎಚ್ಎಲ್ಎಲ್ ಲೈಫ್ ಕೋರ್ ಕಂಪನಿ(ಈ ಕಂಪನಿಯ ಹಿಂದಿನ ಹೆಸರು ಹಿಂದುಸ್ತಾನ್ ಲೇಟೆಕ್ಸ್). ಈ ಕಂಪನಿಯು ಕಾಂಡೋಮ್, ಗರ್ಭನಿರೋಧಕ ಉತ್ಪನ್ನಗಳನ್ನು ಉತ್ಪಾದಿಸುತ್ತದೆ. ಸಿಬಿಐನ ಆರ್ಥಿಕ ಅಪರಾಧ ದಳ ದಾಖಲಿಸಿರುವ ಎಫ್ಐಆರ್ ಪಟ್ಟಿಯಲ್ಲಿ ಈ ಕಂಪನಿಯು ಇದೆ.
ಕೃಷಿ ಕಂಪನಿಯಿಂದಲೂ ರಫ್ತು: ನ್ಯಾಷನಲ್ ಅಗ್ರಿಕಲ್ಚರಲ್ ಕೋ ಆಪರೇಟಿವ್ ಮಾರ್ಕೆಟಿಂಗ್ ಫೆಡರೇಷನ್ ಆಫ್ ಇಂಡಿಯಾ ಎಂಬ ಕಂಪನಿ ಕೂಡ ಅದಿರು ವ್ಯಾಪಾರ ಮಾಡುತ್ತಿತ್ತು ಎಂದು ಲೋಕಾಯುಕ್ತ ವರದಿಯಲ್ಲಿ ತಿಳಿಸಲಾಗಿತ್ತು. ಗಣಿಗಾರಿಕೆ ಬೂಮ್ ಇರುವ ಕಾಲಕ್ಕೆ ಅದಿರಿನ ವ್ಯಾಪಾರದಲ್ಲಿ ಕೇವಲ ಪ್ರಭಾವಿಗಳು, ರಾಜಕಾರಣಿಗಳು ತೊಡಗಿಸಿಕೊಳ್ಳದೆ ಇತರ ಉದ್ಯಮಿಗಳು, ಸರ್ಕಾರಿ ಸ್ವಾಮ್ಯದ ಕಂಪನಿಗಳು ತೊಡಗಿದ್ದವು ಎಂಬುದು ಕುತೂಹಲಕಾರಿ ಸಂಗತಿ. ಇಂತಹ ಕಂಪನಿಗಳು ಅದಿರಿನ ವ್ಯಾಪಾರದಲ್ಲಿ ತೊಡಗಿಸಿದ್ದಾರೆ ಎಂಬ ವಿಷಯಗಳು ಇದೀಗ ಬಹಿರಂಗವಾಗುತ್ತಿರುವುದು ಪ್ರತಿಯೊಬ್ಬರ ಆಶ್ಚರ್ಯಕ್ಕೆ ಕಾರಣವಾಗುತ್ತಿದೆ.
ಕಾಂಡೋಮ್ ಕಂಪನಿ ಬಗ್ಗೆ ಒಂದಿಷ್ಟು: ಎಚ್ಎಲ್ಎಲ್ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ನಿಯಂತ್ರಣಕ್ಕೆ ಒಳಪಡುವ ಸರ್ಕಾರಿ ಸ್ವಾಮ್ಯದ ಕಂಪನಿ. ಸರ್ಕಾರಿ ಸ್ವಾಮ್ಯದ ಬಿ ಶೆಡ್ಯೂಲ್ನಲ್ಲಿ ಮಿನರತ್ನ ಎಂದು ಕರೆಸಿಕೊಂಡಿದೆ. ಎಚ್ಎಲ್ಎಲ್ ಲೈಫ್ ಕೇರ್ ಲಿ. ಕಂಪನಿ 'ಮೂಡ್' ಎಂಬ ಹೆಸರಿನ ಕಾಂಡೋಮ್ ಉತ್ಪಾದನೆ ಮಾಡುತ್ತಿದ್ದು, ಕಾಂಡೋಮ್ ಉತ್ಪಾದನೆ ಜೊತೆಗೆ ಗರ್ಭ ನಿರೋಧಕಗಳು, ಬ್ಲಡ್ ಬ್ಯಾಗ್ಗಳನ್ನು ಆಯುರ್ವೇದಿಕಕ್ಕೆ ಸಂಬಂಧಿಸಿದ ವಸ್ತುಗಳನ್ನು ಉತ್ಪಾದನೆ ಮಾಡುತ್ತದೆ. ಪ್ರಪಂಚದ ಕಾಂಡೋಮ್ ಉತ್ಪಾದನೆಯ ಶೇ.10ರಷ್ಟು ಕಾಂಡೋಮ್ ಉತ್ಪಾದನೆಯನ್ನು ಈ ಕಂಪನಿ ಮಾಡುತ್ತಿದೆ. ವಾರ್ಷಿಕವಾಗಿ 1.316 ಬಿಲಿಯನ್ ಕಾಂಡೋಮ್ ಉತ್ಪಾದನೆ ಮಾಡುತ್ತದೆ ಎಂದು ಹೇಳಲಾಗುತ್ತಿದೆ. 1966ರಲ್ಲಿ ಕೇರಳದ ತಿರುವನಂತಪುರಂನಲ್ಲಿ ಚಿಕ್ಕದಾಗಿ ಆರಂಭವಾದ ಕಂಪನಿ, ಇದೀಗ 7 ಕಡೆಗಳಲ್ಲಿ ತನ್ನ ಉತ್ಪಾದನೆ ಘಟಕಗಳನ್ನು ಹೊಂದಿದೆ. ಪ್ರಾದೇಶಿಕ ಕಚೇರಿ ಬೆಂಗಳೂರು ಬಾಣಸವಾಡಿಯ ಎಕ್ಸ್ ಸರ್ವಿಸ್ ಮೆನ್ ಕಾಲೋನಿಯಲ್ಲಿದೆ.
ಅದಿರು ಗಣಿ ಮ್ಯಾಲೆ ವ್ಯಾಮೋಹ
ಎನ್ಎಂಡಿಸಿಗಿಂತ ಕಡಿಮೆ ದರದಲ್ಲಿ ದೇಶದ ಇತರ ಕಡೆಗಳಲ್ಲಿ ಅದಿರನ್ನು ಖರೀದಿ ಮಾಡಿ ಬೇರೆಯವರಿಗೆ ಮಾರಾಟ ಹಾಗೂ ರಫ್ತು ಮಾಡುವ ಕೆಲಸವನ್ನು ಎಚ್ಎಲ್ಎಲ್ ಲೈಫ್ ಕೋರ್ ಲಿಮಿಟೆಡ್ ಮಾಡಿತ್ತು. ಕೆಓಐಸಿಎಲ್ ಕಂಪನಿಗೂ ಅದಿರು ಮಾರಾಟ ಮಾಡಿದ್ದುಂಟು. ಇನ್ನು ಮರ್ಮಗೋವಾ ಬಂದರಿನ ಟ್ರಸ್ಟ್ನಲ್ಲಿ ನೋಂದಣಿಯಾಗಿರುವ ಪ್ರಮುಖ ಅದಿರು ರಫ್ತು ಕಂಪನಿಗಳಲ್ಲಿ ಎಚ್ಎಲ್ಎಲ್ ಲೈಫ್ ಕೋರ್ ಲಿಮಿಟೆಡ್ ಕಂಪನಿಯೂ ಒಂದಾಗಿದೆ. ಹೀಗೆ ಅದಿರನ್ನು ಖರೀದಿಸಿ, ಮಾರಾಟ ಮಾಡುವ, ರಫ್ತು ಮಾಡುವ ಕೆಲಸವನ್ನು ಕಾಂಡೋಮ್ ಉತ್ಪಾದನೆ ಮಾಡುವ ಎಚ್ಎಲ್ಎಲ್ ಕಂಪನಿ ಮಾಡುತ್ತಿತ್ತು.
ಶಶಿಧರ ಮೇಟಿ