ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಶಾದಿಭಾಗ್ಯ ಅಲ್ಲ, ಲೋಟ ತೋರಿಸಿ ಹಂಡೆ ಹೊಡಿತಾರೆ ಎಲ್ಲ!

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ಮತಬ್ಯಾಂಕ್ ರಾಜಕಾರಣದ ಬೆನ್ನತ್ತಿ ಒಂದೊಂದಾಗಿ ಜಾರಿಗೆ ತರುತ್ತಿರುವ ಆಗ್ಗದ ಜನಪ್ರಿಯ ಯೋಜನೆಗಳು...

Mainashree
Updated On : 9 Nov 2013, 10:26 am

ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರಕಾರ ಮತಬ್ಯಾಂಕ್ ರಾಜಕಾರಣದ ಬೆನ್ನತ್ತಿ ಒಂದೊಂದಾಗಿ ಜಾರಿಗೆ ತರುತ್ತಿರುವ ಆಗ್ಗದ ಜನಪ್ರಿಯ ಯೋಜನೆಗಳು ದುಡಿಯುವ ಕೈಗಳನ್ನು ತುಂಡರಿಸಿ ಜನರನ್ನು ಸೋಮಾರಿತನಕ್ಕೆ ದೂಡುತ್ತಿವೆ. ಹಾಗೆಯೇ ಸಮುದಾಯಗಳ ನಡುವಣ ಭಾವನೆಗಳನ್ನು ಕೆರಳಿಸಿ, ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುತ್ತಿವೆ.
ರುಪಾಯಿಗೆ ಕೆ.ಜಿ. ಅಕ್ಕಿ ಪೂರೈಕೆಯ 'ಅನ್ನಭಾಗ್ಯ'ದಿಂದ ಹಿಡಿದು ಮುಸ್ಲಿಂ ಸಮುದಾಯದ ವಧುವಿಗೆ ಮಂಚ, ಹಾಸಿಗೆ ಕೊಡುವ 'ಶಾದಿಭಾಗ್ಯ'ದವರೆಗಿನ ಎಲ್ಲ ಯೋಜನೆಗಳ ಹಿಂದೆ 'ಮತಬ್ಯಾಂಕ್‌' ರಾಜಕೀಯ ಅಡಗಿದೆ. ಸಾಧಕ-ಬಾಧಕಗಳ ಪರಾಮರ್ಶೆ ಕೊರತೆ ಜನರ ಸ್ವಾಭಿಮಾನ ಮತ್ತು ಆತ್ಮಸಾಕ್ಷಿಗೆ ಸವಾಲು ಒಡ್ಡಿದೆ. ಜತೆಗೆ ಮೂಲ ಉದ್ದೇಶವನ್ನೇ ಹಳ್ಳ ಹಿಡಿಸಿದೆ.
ಸಿದ್ದರಾಮಯ್ಯನವರು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳುವಾಗ ಸಂಪುಟದ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲವಾ? ಅವರೊಡನೆ ಚರ್ಚೆ ಮಾಡುತ್ತಿಲ್ಲವಾ? ಬದಲಿಗೆ ತಮ್ಮ ಸುತ್ತ ಬುದ್ದಿಜೀವಿಗಳೆಂಬ ಹಣೆಪಟ್ಟಿಯೊಡನೆ ಸುತ್ತುತ್ತಿರುವ ಕೆಲ 'ಗ್ರಹ'ಗಳ ಕೈಗೆ ವಿವೇಕ ಕೊಟ್ಟುಬಿಟ್ಟಿದ್ದಾರಾ? ಎಂಬ ಪ್ರಶ್ನೆಗಳಿಗೆ ಸಚಿವ ಸಹೋದ್ಯೋಗಿಗಳಲ್ಲಿ ಮೂಡಿರುವ ಅಸಮಾಧಾನವೇ ಉತ್ತರವಾಗಿದೆ.
'ಮೊದಲು ಅನುಷ್ಠಾನ, ನಂತರ ಚಿಂತನೆ' ಎಂಬ ಆತುರದ ತತ್ವಾದರದಲ್ಲಿ ಜಾರಿಗೆ ಬರುತ್ತಿರುವ ಇಂಥ ಕಾರ್ಯಕ್ರಮಗಳು ಪೂರ್ಣಪ್ರಮಾಣದಲ್ಲಿ ಸಾಫಲ್ಯವನ್ನೂ ಕಾಣುತ್ತಿಲ್ಲ. ಅಲ್ಲದೇ ಅವ್ಯವಹಾರಗಳಿಗೂ ಆಸ್ಪದ ನೀಡಿದೆ. ಮುಖ್ಯಮಂತ್ರಿಗಳು ನಂಬಿರುವ ಬುದ್ಧಿಜೀವಿಗಳ 'ಸುಪಾರಿ ಚಿಂತನೆ' ಹಾಗೂ ಚುನಾವಣೆ ಗಿಮಿಕ್‌ಗೆ ಸಾರ್ವಜನಿಕರ ಹಣ ನೀರಿನಂತೆ ಪೋಲಾಗುತ್ತಿದೆ.
ಬರುತ್ತಿರುವ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿಕೊಂಡು ರಾಜ್ಯ ಸರಕಾರ ಮುಸ್ಲಿ ಸಮುದಾಯದ ಮನವೊಲಿಸುವ ಉದ್ದೇಶದಿಂದ ವಾರ್ಷಿಕ ಐದು ಕೋಟಿ ರುಪಾಯಿ ಅಂದಾಜು ವೆಚ್ಚದ 'ಶಾದಿಭಾಗ್ಯ' ಯೋಜನೆ ಜಾರಿಗೆ ತಂದಿದೆ. ಯೋಜನೆ ಪ್ರಕಾರ ವರ್ಷಕ್ಕೆ ಸಾವಿರ ಮುಸ್ಲಿ ಯುವತಿಯರಿಗೆ ಮದುವೆ ಸಂದರ್ಭದಲ್ಲಿ ತಲಾ 50 ಸಾವಿರ ರುಪಾಯಿ ವೆಚ್ಚದ ಮಂಚ, ಹಾಸಿಗೆ, ಪಾತ್ರೆ-ಪಗಡಗಳನ್ನು ಪೂರೈಸಲಾಗುತ್ತದೆ. ಇದನ್ನು ಒಂದು ಸಮುದಾಯದ 'ಭಾವನಾತ್ಮಕ ಬ್ಲಾಕ್‌ಮೇಲ್‌' ಎಂದು ಆರಾಮವಾಗಿ ಕರೆಯಬಹುದು. ಮದುವೆ ಮಾಡಿ ಕೊಡುವವರಿಗಾಗಲಿ, ಮದುವೆ ಮಾಡಿಕೊಳ್ಳುವವರಿಗಾಗಲಿ ಮಂಚ, ಹಾಸಿಗೆ ಖರೀದಿಸುವಷ್ಟು ಶಕ್ತಿ ಇರುವುದಿಲ್ಲ ಎಂಬ ತೀರ್ಮಾನಕ್ಕೆ ರಾಜ್ಯ ಸರಕಾರ ಬಂದಿದ್ದಾದರೂ ಹೇಗೆ? ಮಂಚ-ಹಾಸಿಗೆ ಇಲ್ಲದೆ ಮದುವೆಯೇ ನಡೆಯುವುದಿಲ್ಲವೇ? ಮಂಚ-ಹಾಸಿಗೆ ಕೊಡುವ ಶಕ್ತಿ ಇಲ್ಲ ಎಂಬ ಕಾರಣಕ್ಕೆ ಅದೆಷ್ಟು ಮದುವೆಗಳು ನಿಂತು ಹೋಗಿವೆ? ಇನ್ನೆಷ್ಟು ಮದುವೆಗಳು ನಿಂತು ಹೋಗುತ್ತಿದ್ದವು? ಇಂಥದ್ದೊಂದು ಯೋಜನೆ ಜಾರಿಯಲ್ಲಿ ಇರದ ಇಷ್ಟು ವರ್ಷಗಳ ಕಾಲ ಮದುವೆಯೇ ನಡೆದಿಲ್ಲವೇ? ಮಂಚ-ಹಾಸಿಗೆ ಇಲ್ಲದೇ ದಾಂಪತ್ಯ ಜೀವನ ಸಾಗುವುದೇ ಇಲ್ಲವೇ? ಇಷ್ಟಕ್ಕೂ ಇವರನ್ನು ಯಾರು ಬಂದು ಮಂಚ-ಹಾಸಿಗೆ ಕೊಡಿ ಎಂದು ಕೇಳಿಕೊಂಡಿದ್ದರು? - ಈ ಪ್ರಶ್ನೆಗಳಿಗೂ ಸರಕಾರ ಉತ್ತರಿಸಬೇಕಿದೆ.
ಅದೂ ಅಲ್ಲದೇ, ರಾಜ್ಯದಲ್ಲಿ ಪ್ರತಿ ವರ್ಷ ಸುಮಾರು 70 ಸಾವಿರ ಮುಸ್ಲಿಂ ಯುವತಿಯರ ಮದುವೆ ಆಗುತ್ತದೆ. ಅವರ ಪೈಕಿ ಕೇವಲ ಸಾವಿರ ಮಂದಿಗೆ ಮಾತ್ರ 'ಶಾದಿಭಾಗ್ಯ' ಯೋಜನೆ ಸೌಲಭ್ಯ. ಉಳಿದವರು ಅದ್ಯಾವ ಪಾಪ ಮಾಡಿದ್ದಾರೋ? ಸಾವಿರ ಮಂದಿ ಮಾತ್ರ ಮಂಚ-ಹಾಸಿಗೆ ಖರೀದಿಸಲು ಆಗದಷ್ಟು ಬಡವರೇ? ಉಳಿದವರೆಲ್ಲರೂ ಯೋಜನೆಯಿಂದ ಹೊರಗುಳಿಯುವಷ್ಟು ಶ್ರೀಮಂತರೇ? ಎಂಬ ಪ್ರಶ್ನೆಗಳಿಗೂ ಸಿಗುವ ಉತ್ತರ 'ಲೋಟ ತೋರಿಸಿ, ಹಂಡೆ ಲಪಟಾಯಿಸುವುದು' ಎನ್ನುವ ಜಾಣ್ಣುಡಿ. ಲೋಕಸಭೆ ಚುನಾವಣೆ ಸಮೀಪಿಸುತ್ತಿರುವ ಸಂದರ್ಭದಲ್ಲಿ ಸಾವಿರ ಮಂದಿಗೆ ಸೌಲಭ್ಯ ಕೊಟ್ಟು ಇಡೀ ಮುಸ್ಲಿಂ ಸಮುದಾಯದ 'ಮತ ಭಾವನೆ'ಯನ್ನು ಹೈಜಾಕ್ ಮಾಡುವ ಹುನ್ನಾರ ಈ ಯೋಜನೆ ಹಿಂದಿದೆ ಅಲ್ಲವೇ? ಇದು ಮುಸ್ಲಿಮರಿಗೂ ಮಾಡುತ್ತಿರುವ ಅನ್ಯಾಯವೇ ಅಲ್ಲವೇ?!
ಆಯಿತು, ಸಿದ್ದರಾಮಯ್ಯನವರೇ ನೀವು ಯೋಜನೆಯನ್ನೇನೋ ಜಾರಿಗೆ ತರಲು ಹೊರಟಿದ್ದೀರಿ. ಹಾಗಾದರೆ ಎಲ್ಲ ಬಡ ಮುಸ್ಲಿ ಯುವತಿಯವರಿಗೂ ಇದನ್ನು ಕೊಡಬಹುದಿತ್ತಲ್ಲವೇ? ಉಳಿದ ಅಲ್ಪಸಂಖ್ಯಾತರಿಗೂ ವಿಸ್ತರಿಸಬಹುದಿತ್ತಲ್ಲವೇ? ಬೇರೆ ಧರ್ಮ, ಬೇರೆ ಸಮುದಾಯ, ಬೇರೆ ಜಾತಿಗಳಲ್ಲಿ ಬಡ ಕುಟುಂಬದ ಹೆಣ್ಣು ಮಕ್ಕಳು ಇಲ್ಲವೇ? ಅದೆಲ್ಲ ಪಕ್ಕಕ್ಕಿಡಿ. ನೀವೇ ಪ್ರತಿನಿಧಿಸುತ್ತಿರುವ ಕುರುಬ ಸಮುದಾಯದಲ್ಲಿ ಅದೆಷ್ಟು ಬಡ ಹೆಣ್ಣು ಮಕ್ಕಳಿಲ್ಲ? ಅವರೇಕೆ ನಿಮ್ಮ ಕಣ್ಣಿಗೆ ಬಿದ್ದಿಲ್ಲ? ಅವರು ನಿಮಗೆ ಮಾಡಿರುವ ಅನ್ಯಾಯವಾದರೂ ಏನು? ನೀವು ಮಾಡುತ್ತಿರುವ ಈ ತಾರತಮ್ಯದಿಂದ ಸಮಾಜ ಒಡೆಯುವುದಿಲ್ಲವೇ? ಧರ್ಮ-ಧರ್ಮಗಳ ನಡುವೆ, ಜಾತಿ-ಜಾತಿಗಳ ನಡುವೆ ದ್ವೇಷಾಸೂಯೆ ಉಂಟಾಗುವುದಿಲ್ಲವೇ? ನಿಮಗೆ ಈ ಸಲಹೆ ಕೊಟ್ಟ ಪ್ರಖಾಂಡ ಪಂಡಿತರಿಗೂ ಇದು ಹೊಳೆಯಲಿಲ್ಲವೇ? ಅವರು ಪ್ರತಿನಿಧಿಸುತ್ತಿರುವ ಆಯಾ ಸಮುದಾಯಗಳಲ್ಲಿ ಯಾರೂ ಬಡವರೇ ಇಲ್ಲವೇ? ಬರೀ ಶ್ರೀಮಂತರಿಂದಲೇ ತುಂಬಿ ತುಳುಕುತ್ತಿದೆಯೇ?
ನಿಮ್ಮ ಸರಕಾರದ ಶಾದಿಭಾಗ್ಯ ಯೋಜನೆಯಿಂದ ನಿಜಕ್ಕೂ ಪ್ರಯೋಜನ ಆಗಿರುವುದು ಪ್ರತಿಪಕ್ಷಗಳಿಗೆ.  ವಿಷಯವೇ ಇಲ್ಲದೇ ನಿರುದ್ಯೋಗಿಯಾಗಿದ್ದ ಪ್ರತಿಪಕ್ಷಗಳಿಗೆ ಉದ್ಯೋಗ ಕೊಟ್ಟಿದ್ದೀರಿ. ಹೋರಾಟಕ್ಕೆ ಅಸ್ತ್ರ ಪೂರೈಸಿದ್ದೀರಿ. ಅವರ ಕೈಗೆ ಕೋಲು ಕೊಟ್ಟು ಹೊಡೆಸಿಕೊಳ್ಳುತ್ತಿದ್ದೀರಿ. ಲೋಕಸಭೆ ಚುನಾವಣೆ ನಿಮ್ಮೊಬ್ಬರಿಗೆ ಮಾತ್ರ ಬರುತ್ತಿಲ್ಲವಲ್ಲ. ಪ್ರತಿಪಕ್ಷಗಳಿಗೂ ಅದು ಉಂಟಲ್ಲ. ಹೀಗಾಗಿ ನೀವು ಕೊಟ್ಟ ಅಸ್ತ್ರವನ್ನು ಮತ್ತದೇ ಮತ ರಾಜಕಾರಣಕ್ಕಾಗಿ ಅವು ಕೂಡ ಚೆನ್ನಾಗಿಯೇ ಬಳಸಿಕೊಳ್ಳುತ್ತಿವೆ.
ನೋಡಿ, ಇಂಥ ಯೋಜನೆಗಳಿಂದ ಯಾವುದೇ ಪ್ರಯೋಜನ ಇಲ್ಲ. ಯಾವ ಪುರುಷಾರ್ಥವೂ ಸಾಧನೆ ಆಗುವುದಿಲ್ಲ. ಹಿಂದೆ ರಾಮಕೃಷ್ಣ ಹೆಗಡೆ ಅವರ ಸರಕಾರ ಬಡವರಿಗೆ ತಾಳಿಭಾಗ್ಯ ಯೋಜನೆ ಜಾರಿಗೆ ತಂದಿತ್ತು.            

ಆಗಲೂ ಇಂಥದ್ದೇ ವಿವಾದ ಸೃಷ್ಟಿಯಾಗಿತ್ತು. ನೀವು ಕೂಡ ಅದಕ್ಕೆ ಸಾಕ್ಷಿಯಾಗಿದ್ದಿರಿ. ವಧುವಿಗೆ ತಾಳಿ, ಸೀರೆ, ವರನಿಗೆ ಪಂಚೆ, ಅಂಗಿ ವಿತರಣೆ ಯೋಜನೆ ಹಿಂದಿನ ಉದ್ದೇಶ. ಹಾಗಾದರೆ ತಾಳಿ, ಸೀರೆ ಖರೀದಿ ಶಕ್ತಿ ಇಲ್ಲದವರು ಮದುವೆ ಆಗುತ್ತಾರೆಯೇ, ಮದುವೆ ಆಗುವವರಿಗೆ ಇಷ್ಟು ಶಕ್ತಿ ಇರುವುದಿಲ್ಲವೇ ಎಂಬ ವಾದ ಆಗಲೂ ಕೇಳಿ ಬಂದಿತ್ತು. ಅಲ್ಲದೇ ಮೊದಲೇ ಮದುವೆ ಆಗಿದ್ದ ದಂಪತಿ ತಾಳಿ, ಪಂಚೆ ಆಸೆಗಾಗಿ ಇನ್ನೊಮ್ಮೆ ಸುಳ್ಳು ಮದುವೆ ಮಾಡಿಕೊಂಡ ಪ್ರಕರಣಗಳು ಬೆಳಕಿಗೆ ಬಂದವು. ಆ ಸರಕಾರದ ಜತೆಗೆ ಯೋಜನೆಯೂ ಸ್ಥಗಿತಗೊಂಡಿತು. ಹಾಗೆಂದು ಬಡವರ ಮದುವೆಗಳೇನೂ ನಿಂತು ಹೋಗಲಿಲ್ಲ, ಇವತ್ತಿಗೂ ನಡೆಯುತ್ತಲೇ ಇವೆ. ಅದೇ ರೀತಿ ಈಗ ಸರಕಾರ ಜಾರಿಗೆ ತಂದಿರುವ ಶಾದಿಭಾಗ್ಯ ಯೋಜನೆ ಮತ್ತೊಂದು ಸರಕಾರ ಬಂದಾಗ ಇರುತ್ತದೆ ಎಂಬ ಯಾವುದೇ ಗ್ಯಾರಂಟಿ ಇಲ್ಲ. ಶಾದಿಭಾಗ್ಯ ಯೋಜನೆ ನಿಂತು ಹೋಯಿತು ಎಂದು ಮುಸ್ಲಿಂ ಸಮುದಾಯದ ಬಡವರ ಮದುವೆಗಳೇನೂ ನಿಂತು ಹೋಗುವುದಿಲ್ಲ. ಒಂದು ಪಕ್ಷದ ಸರಕಾರ ತಾತ್ಕಾಲಿಕ, ಆದರೆ ಒಂದು ಧರ್ಮ, ಸಮುದಾಯದ ಪರಂಪರೆ, ಆಚಾರ-ವಿಚಾರಗಳು ಶಾಶ್ವತ. ಸರಕಾರ ಸೌಲಭ್ಯ ಕೊಟ್ಟಾಗಲಾಗಲಿ, ನಿಲ್ಲಿಸಿದಾಗಲಾಗಲಿ ಅವು ಬದಲಾಗುವುದಿಲ್ಲ. ಬದಲಾಗುವುದು ಸರಕಾರಗಳು ಮಾತ್ರ. ಇದು ನಿಮಗೆ ಗೊತ್ತಿಲ್ಲದ ವಿಚಾರವೇನಲ್ಲ.
ಇಲ್ಲಿ ಇನ್ನೂ ಒಂದು ವಿಚಾರ. ಸರಕಾರ ಈಗಾಗಲೇ ಜಾರಿಗೆ ತಂದಿರುವ ರುಪಾಯಿಗೆ ಕೆಜಿ ಅಕ್ಕಿ ಯೋಜನೆ ಗತಿ ಏನಾಗಿದೆ ನೋಡಿ. ಸೋಮಾರಿತನ ವೃದ್ಧಿ ಹಾಗೂ ಅಕ್ರಮಗಳಿಗೆ ಕಾರಣವಾಗಿದೆ. ಬಡವರಿಗೆಂದು ಕೊಟ್ಟ ಅಕ್ಕಿ ಬ್ಲಾಕ್ ಮಾರ್ಕೆಟ್‌ನಲ್ಲಿ ದುಪ್ಪಟ್ಟು ಬೆಲೆಗೆ ಬಿಕರಿಯಾಗುತ್ತಿದೆ. ಒಂದು ರುಪಾಯಿ ಅಕ್ಕಿಯನ್ನು 20 ರಿಂದ 25 ರುಪಾಯಿವರೆಗೂ ಮಾರಾಟ ಮಾಡಲಾಗುತ್ತಿದೆ. ಒಂದೆಡೆ ದುಡಿಯುವ ಕೈಗಳು ನಿಷ್ಕ್ರಿಯವಾಗಿವೆ. ಇನ್ನೊಂದೆಡೆ ಕಾಳಸಂತೆಯಲ್ಲಿ ಅಕ್ಕಿ ಮಾರಾಟ ಆಗುತ್ತಿದೆ. ಇದು ಯೋಜನೆಯ ಮೂಲ ಉದ್ದೇಶವನ್ನೇ ಬುಡಮೇಲು ಮಾಡಿಲ್ಲವೇ?
ಹಾಗೆಂದು ಸರಕಾರ ಬಡವರಿಗೆ ಯಾವುದೇ ಸವಲತ್ತುಗಳನ್ನು ಕಲ್ಪಿಸಬಾರದು, ಅವರ ಹಿತಾಸಕ್ತಿ ಕಾಯಬಾರದು ಎಂದೇನೂ ಅಲ್ಲ. ಆದರೆ ಅವರಿಗೆ ಕೆಲಸ ಕೊಡಿ. ದುಡಿಯುವಂತೆ ಮಾಡಿ. ದುಡಿದು ಬದುಕುವಂತೆ ಮಾಡಿ. ಆ ಬದುಕಿನಲ್ಲಿ ಸ್ವಾಭಿಮಾನ, ಆತ್ಮಗೌರವ ಮಿನುಗಲಿ. ಅದನ್ನು ಬಿಟ್ಟು ಅಗ್ಗದ ಜನಪ್ರಿಯ ಯೋಜನೆಗಳಿಂದ ಅವರನ್ನು ದಾರಿ ತಪ್ಪಿಸಬೇಡಿ. ಅವರನ್ನು ಸೋಮಾರಿಗಳನ್ನಾಗಿ ಮಾಡಬೇಡಿ. ಇಂಥ ಕಾರ್ಯಕ್ರಮಗಳಿಂದ ಜನರನ್ನು ಮೋಡಿ ಮಾಡಲು ಯತ್ನಿಸಬಹುದಷ್ಟೇ. ಆದರೆ ಅವರನ್ನು ಮೂರ್ಖರನ್ನಾಗಿ ಮಾಡಲು ಸಾಧ್ಯವಿಲ್ಲ.

ಮಾದರಿ 'ತೊಟ್ಟಿಲು ಭಾಗ್ಯ'
ನಿಷ್ಕರುಣಿ ಪೋಷಕರು ಹೆಣ್ಣು ಶಿಶುಗಳನ್ನು ತೊಟ್ಟಿ, ಬೀದಿಯಲ್ಲಿ ಬಿಸಾಡುವುದನ್ನು ತಡೆಯಲು ನೆರೆಯ ತಮಿಳುನಾಡಿನಲ್ಲಿ ಮುಖ್ಯಮಂತ್ರಿ ಜಯಲಲಿತಾ ಅವರು 'ತೊಟ್ಟಿಲು ಭಾಗ್ಯ' ಯೋಜನೆ ಜಾರಿಗೆ ತಂದಿದ್ದಾರೆ. ಅಲ್ಲದೇ ಹೆಣ್ಣು ಶಿಶುಗಳನ್ನು ಬೀದಿಗೆ ಎಸೆಯಬಾರದು ಎಂಬ ಕಾರಣಕ್ಕೆ ನಿರ್ದಿಷ್ಟ ಸ್ಥಳಗಳಲ್ಲಿ ತೊಟ್ಟಿಲುಗಳನ್ನು ಇರಿಸಿದೆ. ಇಲ್ಲಿ ಇರಿಸುವ ಹೆಣ್ಣು ಶಿಶುಗಳ ಪಾಲನೆಯನ್ನು ಸರಕಾರವೇ ಕೈಗೊತ್ತಿಕೊಂಡಿದೆ. ಎಲ್ಲಿಯ ಶಾದಿಭಾಗ್ಯ, ಎಲ್ಲಿಯ ತೊಟ್ಟಿಲು ಭಾಗ್ಯ?!
ಬುದ್ಧಿಜೀವಿಗಳ ದುರ್ಬುದ್ಧಿ
ಸಿದ್ದರಾಮಯ್ಯನವರು ಶಾದಿಭಾಗ್ಯ ಯೋಜನೆ, ಮೂಢನಂಬಿಕೆ ಪ್ರತಿಬಂಧಕ ವಿಧೇಯಕ ರೂಪಿಸುವಲ್ಲಿ ಕೆಲ ಅತಿ ಬುದ್ದಿಜೀವಿಗಳ ಸಲಹೆ ಪ್ರಮುಖ ಪಾತ್ರ ವಹಿಸಿದೆ. ಅಂಥ ಬುದ್ದಿಜೀವಿಗಳ ಪೈಕಿ ಹೆಸರಾಂತ ಬರಹಗಾರರೊಬ್ಬರು ಇತ್ತೀಚೆಗೆ ಮುಖ್ಯಮಂತ್ರಿಯವರನ್ನು ಭೇಟಿ ಮಾಡಿದ್ದರು. ನಿರ್ದಿಷ್ಟ ವಿಶ್ವವಿದ್ಯಾಲಯವೊಂದಕ್ಕೆ ತಮ್ಮ ಜಾತಿಗೆ ಸೇರಿದವರೊಬ್ಬರನ್ನು ಕುಲಪತಿಯನ್ನಾಗಿ ನೇಮಕ ಮಾಡಿ ಎಂದು ಕೇಳಿಕೊಂಡಿದ್ದಾರೆ. ಆಗ ಅವರಿಗೆ ಮುಸ್ಲಿಂ ಸಮುದಾಯದ ಯಾರೊಬ್ಬರೂ ನೆನಪಿಗೆ ಬಂದಿಲ್ಲ!
ಬುದ್ದಿಜೀವಿಗಳ ಬುದ್ದಿ ಕೆಲಸ ಮಾಡುವುದೇ ಹೀಗೆ..!!

- ಪಿ. ತ್ಯಾಗರಾಜ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement