ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಇಸಿಐಎಲ್ ಕರಾಮತ್ತು: ಟೋಪಿ ಸರ್ಕಾರಕ್ಕೆ ಬಿತ್ತು!

Rashmi Kasaragodu
Updated On : 11 Nov 2013, 11:23 am

ಕ.ಪ್ರ.ವಾರ್ತೆ, ಶಿವಮೊಗ್ಗ, ನ. 10-
8 ವರ್ಷಗಳಲ್ಲಿ ರಾಜ್ಯ ಸರ್ಕಾರಕ್ಕೆ 200 ಕೋಟಿಗೂ ಹೆಚ್ಚು ಪಂಗನಾಮ!
ಕೇಂದ್ರ ಸರ್ಕಾರದ ಅಂಗ ಸಂಸ್ಥೆ ಎಂದು ಹೇಳಿಕೊಳ್ಳುವ 'ಎಲೆಕ್ಟ್ರಾನಿಕ್ ಕಾರ್ಪೊರೇಷನ್ ಆಫ್ ಇಂಡಿಯಾ ಲಿ.'(ಇಸಿಐಎಲ್)ನ ಕಥೆ ಇದು. ಈ ಕಂಪನಿ ಜವಾಬ್ದಾರಿ ಎಂದರೆ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಫಲಾನುಭವಿಗಳಿಗೆ ಕಂಪ್ಯೂಟರ್ ಶಿಕ್ಷಣ ನೀಡುವುದು. ಆದರೆ, ಅವರಿಗೆ ಗುಣಮಟ್ಟದ ಶಿಕ್ಷಣ ನೀಡದೆ ವಂಚಿಸತ್ತಿದೆ. ಈ ಸಂಸ್ಥೆಯ ಅಕ್ರಮ ಹಿರಿಯ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಗೊತ್ತಿದ್ದರು ಸುಮ್ಮನಿರುವುದು ನೋಡಿದರೆ ಹಲವು ಸಂಶಯಗಳಿಗೆ ಎಡೆಮಾಡಿಕೊಡುತ್ತಿದೆ.
ಹೈದರಾಬಾದ್ನಲ್ಲಿ ಕೇಂದ್ರ ಕಚೇರಿ ಹೊಂದಿರುವ ಇಸಿಐಎಲ್ ಬೆಂಗಳೂರು ಸೇರಿದಂತೆ ರಾಜ್ಯದ ಜಿಲ್ಲಾ ಕೇಂದ್ರಗಳಲ್ಲಿ ಶಾಖೆಗಳನ್ನು ಹೊಂದಿದೆ ಎಂದು ಹೇಳಿಕೊಂಡಿದೆ. ಆದರೆ, ವಾಸ್ತವದಲ್ಲಿ ಜಿಲ್ಲಾ ಕೇಂದ್ರದಲ್ಲಿರುವ ಖಾಸಗಿ ಕಂಪ್ಯೂಟ್ ಶಿಕ್ಷಣ ಸಂಸ್ಥೆಗಳ ಜತೆ ಒಪ್ಪಂದ ಮಾಡಿಕೊಂಡು, ಸಂಸ್ಥೆಗಳೇ ತನ್ನ ಶಾಖೆಗಳೆಂದು ಬಿಂಬಿಸಿಕೊಂಡಿದೆ.
ಇಸಿಐಎಲ್ನ ಕರಾಮತ್ತು: 2006ರಲ್ಲಿ ಕಂಪ್ಯೂಟರ್ ತರಬೇತಿ ನೀಡುವ ಯೋಜನೆಯನ್ನು ಸರ್ಕಾರ ಆರಂಭಿಸಿತು ಆಗ ಇಸಿಐಎಲ್ ಪ್ರಸ್ತಾವನೆ ಸಲ್ಲಿಸಿ, ತಮ್ಮದು ಕೇಂದ್ರ ಸರ್ಕಾರದ ಅಂಗಸಂಸ್ಥೆ ಎಂತಲೂ, ರಾಜ್ಯದ ಪ್ರತಿ ಜಿಲ್ಲೆ ಸೇರಿದಂತೆ ಒಟ್ಟು 40 ಕಡೆ ನಮ್ಮ ಸಂಸ್ಥೆಯ ಶಾಖೆಗಳಿವೆ ಎಂತಲೂ ಹೇಳಿ, ಪಾರದರ್ಶಕ ಕಾಯ್ದೆಯಿಂದ ವಿನಾಯಿತಿ ನೀಡಿ ರಾಜ್ಯದಲ್ಲಿ ಕಂಪ್ಯೂಟರ್ ತರಬೇತಿ ನೀಡಲು ತಮಗೇ ಅವಕಾಶ ನೀಡಬೇಕು ಎಂದು ಕೋರಿತ್ತು. ಕಂಪನಿಯ ಹೇಳಿಕೆಯನ್ನು ಪರಿಶೀಲಿಸದ ಅಂದಿನ ಅಧಿಕಾರಿಗಳು ತರಬೇತಿಗೆ ಅವಕಾಶ ಮಾಡಿಕೊಟ್ಟರು. ಸಂಸ್ಥೆ ಹೇಳಿದಂತೆ ಎಲ್ಲಾ ಜಿಲ್ಲೆಗಳಲ್ಲಿ ಶಾಖೆಗಳಿವೆಯೇ ಎಂದು ಪರಿಶೀಲಿಸುವುದಕ್ಕೂ ಹೋಗಲಿಲ್ಲ. ಆದರೆ, ತರಬೇತಿಗೆ ಅವಕಾಶ ನೀಡುವಾಗ ಪಾರದರ್ಶಕ ಕಾಯ್ದೆ ವಿನಾಯಿತಿ ಸಿಂಧುತ್ವವು ಇಸಿಐಎಲ್ ಸಂಸ್ಥೆಯು ಹೊರ ಮೂಲ(ಔಟ್ ಸೋರ್ಸ್) ನೀಡದಿರುವ ಷರತ್ತಿಗೆ ಒಳಪಟ್ಟು ನೀಡಲಾಗಿದೆ ಎಂದು ಹೇಳಿತು. ಆದರೆ, ಇಸಿಐಎಲ್ ಒಪ್ಪಂದವನ್ನು ಉಲ್ಲಂಘಿಸಿ, ಜಿಲ್ಲಾಕೇಂದ್ರಗಳಲ್ಲಿರುವ ಖಾಸಗಿ ಕಂಪ್ಯೂಟರ್ ತರಬೇತಿ ಕೇಂದ್ರಗಳಿಗೆ ಹೊರ ಗುತ್ತಿಗೆ ನೀಡಿತು. ಇಂಥ ಕೇಂದ್ರಗಳ ಮುಂದೆ ಇಸಿಐಎಲ್ ಎಂಬ ಬೋರ್ಡ್ ನೇತು ಹಾಕಿ, ಇದೇ ತಮ್ಮ ಶಾಖೆ ಎಂದು ಬಿಂಬಿಸಿತು. ಸರ್ಕಾರ ಫಲಾನುಭವಿಗಳನ್ನು ತರಬೇತಿಗೆಂದು ಇಲ್ಲಿಗೇ ಕಳುಹಿಸಿದವು.

ಬೆಳಕಿಗೆ ಬಂತು: ಇಸಿಐಎಲ್ ಖಾಸಗಿ ಕಂಪ್ಯೂಟರ್ ತರಬೇತಿ ಕೇಂದ್ರಗಳೊಂದಿಗೆ ಆಂತರಿಕ ಮಾಡಿಕೊಂಡಿದ್ದ ಒಪ್ಪಂದದ ಪ್ರತಿ ಹೊರಬೀಳುತ್ತಿದ್ದಂತೆ, ವಂಚನೆ ಬೆಳಕಿಗೆ ಬರಲಾರಂಭಿಸಿತು. ರಾಜ್ಯ ಸರ್ಕಾರ ಒಬ್ಬ ಫಲಾನುಭವಿಗೆ ಕಂಪ್ಯೂಟರ್ ತರಬೇತಿಗೆಂದು ನೀಡುವ ಹಣದ ಬಹುಪಾಲು ತಾನಿಟ್ಟುಕೊಂಡು, ಅಲ್ಪ ಮೊತ್ತದ ಹಣವನ್ನು ತಾನು ಒಪ್ಪಂದ ಮಾಡಿಕೊಂಡ ಖಾಸಗಿ ಸಂಸ್ಥೆಗಳಿಗೆ ನೀಡಲಾರಂಭಿಸಿತು. ಇದು ಸ್ಪಷ್ಟವಾಗಿ ಪಾರದರ್ಶಕ ಕಾಯ್ದೆ 1999ರ ಕಲಂ 4(ಜಿ) ಉಲ್ಲಂಘನೆ. ಈ ವಂಚನೆಯನ್ನು ಬೆಳಕಿಗೆ ತಂದಿದ್ದು ಶಿವಮೊಗ್ಗದವರೇ ಆದ ಮಾಹಿತಿ ಹಕ್ಕು ಹೋರಾಟಗಾರ ನಟರಾಜ್ ಎನ್. ಹಾಗೂ ನ್ಯಾಯವಾದಿ ಜಯಶ್ರೀ ಎನ್.ಎಸ್. ಅವರು. ಸತತ ಪರಿಶ್ರಮದಿಂದ ಮಾಹಿತಿ ಒಟ್ಟು ಮಾಡಿದ ಅವರು ಬಿಸಿಎಂ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಅಲ್ಪಸಂಖ್ಯಾತ ಇಲಾಖೆಗಳ ಮೂಲಕ ನಡೆಯುತ್ತಿರುವ ವಂಚನೆಯನ್ನು ಬಯಲು ಮಾಡಿದರು. ಲೋಕಾಯುಕ್ತರಿಗೆ, ಮುಖ್ಯ ಕಾರ್ಯದರ್ಶಿ, ಸೇವಾ ತೆರಿಗೆ ಇಲಾಖೆಗೆ ಸತತ ದೂರು ಸಲ್ಲಿಸಲಾಗಿದೆ. ಈ ದೂರಿನ ಅನ್ವಯ ಹಿಂದುಳಿದ ವರ್ಗ ಮತ್ತು ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಯಾಗಿದ್ದ ಇ. ವೆಂಕಟಯ್ಯ ಅವರು ಆಯುಕ್ತರ ಮೂಲಕ ತನಿಖೆ ನಡೆಸಿ, ಲೋಪವಾಗಿರುವುದನ್ನು 2011ರಲ್ಲೇ ಹೇಳಿದ್ದರು. ಆದರೆ, ಹಲವು ಇಲಾಖೆಗಳು ಕಂಪ್ಯೂಟರ್ ತರಬೇತಿಯನ್ನು ಮಾತ್ರ ಇನ್ನೂ ಮುಂದುವರೆಸಿದೆ.

ಇಸಿಐಎಲ್ ಶಾಖೆಗಳೇ ಇಲ್ಲ!
ಜಿಲ್ಲಾ ಕೇಂದ್ರಗಳಲ್ಲಿ ಎಲ್ಲಿಯೂ ಇಸಿಐಎಲ್ ಶಾಖೆಗಳಿಲ್ಲ. ಇಲ್ಲಿರುವುದು ಖಾಸಗಿ ಸಂಸ್ಥೆಗಳೇ. ಆದರೆ ಇವು ಐಎಸ್ಐ ಗುಣಮಟ್ಟದ ಕೇಂದ್ರಗಳೆಂದು ಇಸಿಐಎಲ್ ಹೇಳಿಕೊಂಡಿದೆ. ಒಬ್ಬ ಫಲಾನುಭವಿಗೆ ಕೋರ್ಸ್ಗೆ ತಕ್ಕಂತೆ 5 ಸಾವಿರದಿಂದ 10 ಸಾವಿರವರೆಗೆ ಸರ್ಕಾರದಿಂದ ಶುಲ್ಕ ಪಡೆದುಕೊಂಡಿದೆ. ಆದರೆ ಇದೇ ಕೋರ್ಸ್ಗಳಿಗೆ ಇತರೆ ಖಾಸಗಿ ಸಂಸ್ಥೆಗಳು ಇದಕ್ಕಿಂತ ಕಡಿಮೆ ಶುಲ್ಕ ವಿಧಿಸುತ್ತದೆ.

ಕಳಪೆ ತರಬೇತಿ: ಕೇವಲ ಆಡಳಿತಾತ್ಮಕ ಲೋಪವಾಗಿದ್ದರೆ ಪರವಾಗಿಲ್ಲ. ಆದರೆ ಕಂಪ್ಯೂಟರ್ ತರಬೇತಿಗೆಂದು ಬರುವ ಫಲಾನುಭವಿಗಳಿಗೂ ಗುಣಮಟ್ಟದ ಶಿಕ್ಷಣ ಸಿಗುತ್ತಿಲ್ಲ. ಈ ಬಗ್ಗೆ ಸಿಬಿಐ ತನಿಖೆಯೇ ಸೂಕ್ತ. ರಾಜ್ಯ ಸರ್ಕಾರ ಪರಿಶೀಲನೆಗೆ ಮುಂದಾಗಬೇಕು ಎಂದು ನಟರಾಜ್ ಹಾಗೂ ನ್ಯಾಯವಾದಿ ಜಯಶ್ರೀ ಅವರು ಹೇಳುತ್ತಾರೆ.

- ಹೊನ್ನಾಳಿ ಚಂದ್ರಶೇಖರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement