ಟಿಪ್ಪು ವಿವಿಗೆ ಸರ್ಕಾರಿ ಜಾಗವಿಲ್ಲ
ಮಂಡ್ಯ: ಶ್ರೀರಂಗಪಟ್ಟಣದಲ್ಲಿ ಕೇಂದ್ರ ಸರ್ಕಾರ ಸ್ಥಾಪಿಸಲು ಉದ್ದೇಶಿಸಿರುವ ಟಿಪ್ಪು ವಿಶ್ವವಿದ್ಯಾಲಯವನ್ನು ಎತ್ತಂಗಡಿ ಮಾಡಲು ಸಜ್ಜಾಗಿದೆ ಎಂಬ ಅನುಮಾನ ವ್ಯಕ್ತವಾಗಿದೆ.
ಟಿಪ್ಪು ವಿವಿ ಸ್ಥಾಪನೆಗೆ ಅಗತ್ಯವಾಗಿರುವ 50 ಎಕರೆ ಸರ್ಕಾರಿ ಭೂಮಿಯನ್ನು ಶ್ರೀರಂಗಪಟ್ಟಣದಲ್ಲಿ ನೀಡುವಂತೆ ರಾಜ್ಯ ಅಲ್ಪ ಸಂಖ್ಯಾತರ ಇಲಾಖೆ ಕಾರ್ಯದರ್ಶಿಗಳು ಮಂಡ್ಯ ಡಿಸಿ ಕೃಷ್ಣಯ್ಯನವರಿಗೆ ಪತ್ರ ಬರೆದಿದ್ದರು. ಆದರೆ ಈ ಪತ್ರಕ್ಕೆ ಮರು ಉತ್ತರವನ್ನು ಸಿದ್ಧಪಡಿಸಿರುವ ಜಿಲ್ಲಾಡಳಿತ, ಶ್ರೀರಂಗಪಟ್ಟಣದಲ್ಲಿ ನಡೆಸಲಾದ ಸಮೀಕ್ಷೆಯಂತೆ ಅಷ್ಟೊಂದು ಪ್ರಮಾಣದ ಸರ್ಕಾರಿ ಭೂಮಿ ಇಲ್ಲ ಎಂಬ ಅಂಶವನ್ನು ಗಮನಕ್ಕೆ ತರಲು ಮುಂದಾಗಿದೆ. ಅಲ್ಪ ಸಂಖ್ಯಾತರ ಇಲಾಖೆಯ ಕಾರ್ಯದರ್ಶಿಗಳು ಶ್ರೀರಂಗಪಟ್ಟಣದಲ್ಲಿ 50 ಸರ್ಕಾರಿ ಭೂಮಿ ಬೇಕು ಎಂದು ಪತ್ರ ಬರೆದಿದ್ದಾರೆ. ನಾವು ಸಮೀಕ್ಷೆ ಮಾಡಿದ್ದೇವೆ. ಅಷ್ಟೊಂದು ಪ್ರಮಾಣದ ಭೂಮಿ ಪಟ್ಟಣದಲ್ಲಿ ಲಭ್ಯವಿಲ್ಲ. ಒಂದು ವೇಳೆ ಇಲಾಖೆ ಬಯಸಿದರೆ ಶ್ರೀರಂಗಪಟ್ಟಣದಲ್ಲೇ ಖಾಸಗಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಕೃಷ್ಣಯ್ಯ ಕನ್ನಡಪ್ರಭಕ್ಕೆ ವಿವರ ನೀಡಿದರು.
ಈ ಅನುಮಾನಕ್ಕೆ ಪುಷ್ಠಿ ನೀಡುವಂತೆ ಕಳೆದ ತಿಂಗಳು ಕೇಂದ್ರ ಅಲ್ಪ ಸಂಖ್ಯಾತರ ಖಾತೆಯ ಸಚಿವ ರೆಹಮಾನ್ ಖಾನ್ ಕೆ.ಆರ್. ಪೇಟೆಯಲ್ಲಿ ಈ ಕುರಿತು ಸ್ಪಷ್ಟನೆ ನೀಡಿ, ಶ್ರೀರಂಗಪಟ್ಟಣದಲ್ಲಿ ಟಿಪ್ಪು ವಿವಿ ಸ್ಥಾಪನೆ ಮಾಡೇ ತೀರುತ್ತೇವೆ. ನಾವು ಭೂಮಿ ಕೇಳಿದ್ದೇವೆ. ಸರ್ಕಾರಿ ಭೂಮಿ ಕೊಡುತ್ತಾರೋ, ಖಾಸಗಿ ಭೂಮಿ ಕೊಡುತ್ತಾರೋ ಆ ಉಸಾಬರಿ ನಮಗೆ ಬೇಡ. ನಮ್ಮ ನಿರ್ಧಾರದಿಂದ ನಾವು ಅಚಲ ಎಂದು ಹೇಳಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
- ಕೆ.ಎನ್. ರವಿ