ವಿಷದ ಬೀಜ ಬಿತ್ತಿ ಅಮೃತದ ಬೆಳೆ ಸಾಧ್ಯವೇ?
ಜಾತ್ಯತೀತ ವ್ಯವಸ್ಥೆ ಜಾರಿ ಮಾಡಬೇಕಾದ ಸರ್ಕಾರವೇ ಜಾತಿ ಆಧಾರದಲ್ಲಿ ಮಕ್ಕಳನ್ನು ವಿಭಜಿಸಬಹುದೇ? ಸಮಾಜದಲ್ಲಿ ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ನ.10-
ಜಾತ್ಯತೀತ ವ್ಯವಸ್ಥೆ ಜಾರಿ ಮಾಡಬೇಕಾದ ಸರ್ಕಾರವೇ ಜಾತಿ ಆಧಾರದಲ್ಲಿ ಮಕ್ಕಳನ್ನು ವಿಭಜಿಸಬಹುದೇ?
ಸಮಾಜದಲ್ಲಿ ಅಸಮಾನತೆ ತೊಡೆದುಹಾಕುತ್ತೇನೆ ಎಂದು ಘೋಷಿಸುವವರೇ ತಾರತಮ್ಯ ತೋರಬಹುದೇ? ಜಾತಿಭೇದ ಮಾಡಬಾರದು ಎಂದು ಹೇಳುವವರೇ ಅಧಿಕಾರದಲ್ಲಿ ಕುಳಿತು ಜಾತಿಭೇದ ಮಾಡಬಹುದೇ? ಮೇಲ್ವರ್ಗದವರು ಕೆಳವರ್ಗದವರನ್ನು ಪ್ರತ್ಯೇಕಿಸಿ ನೋಡುತ್ತಾರೆ ಎಂದು ಹೇಳುವವರೇ ಮೇಲ್ವರ್ಗದ ಮಕ್ಕಳನ್ನು ಮಾತ್ರ ಪ್ರತ್ಯೇಕಿಸಿ ನೋಡಬಹುದೇ?
ದೇವಸ್ಥಾನಗಳಲ್ಲಿ ಎಲ್ಲ ಜಾತಿಯವರಿಗೂ ಒಟ್ಟಿಗೆ ಊಟ ಹಾಕುವ ಮೂಲಕ ಸಮಾನತೆ ತರಬೇಕು ಎನ್ನುವವರು ಶಾಲೆಯಲ್ಲಿ ಒಂದು ವರ್ಗದ ಮಕ್ಕಳನ್ನು ಮಾತ್ರ ಪ್ರತ್ಯೇಕವಾಗಿ ಪ್ರವಾಸಕ್ಕೆ ಕಳುಹಿಸುವುದು ಅಸಮಾನತೆಯಲ್ಲವೇ? ಪ್ರತ್ಯೇಕ ಊಟದ ವ್ಯವಸ್ಥೆಗೂ ಪ್ರತ್ಯೇಕ ಪ್ರವಾಸಕ್ಕೂ ಏನು ವ್ಯತ್ಯಾಸ?
ಭವಿಷ್ಯದಲ್ಲಿ ಸಮಾನತೆಯ ಸಮಾಜವನ್ನು ರೂಪಿಸುವ ಕನಸು ಕಾಣುವವರು ಮತ್ತು ಆ ಬಗ್ಗೆ ಭಾಷಣ ಮಾಡಿ ಚಪ್ಪಾಳೆ ಗಿಟ್ಟಿಸುವವರು ಮಕ್ಕಳ ನಡುವೆಯೇ ಅಸಮಾನತೆಯ ವಿಷಬೀಜ ಬಿತ್ತಬಹುದೇ? ರಾಜ್ಯದ ಪ್ರಜೆಗಳನ್ನು ಜಾತಿ, ಧರ್ಮ ಭೇದ ಎಣಿಸದೇ ಸಮಾನವಾಗಿ ನೋಡುವ ಪ್ರಮಾಣ ಸ್ವೀಕರಿಸಿದವರು ಕೆಲವು ಮಕ್ಕಳನ್ನು ಮಾತ್ರ ಒಂದು ಸೌಲಭ್ಯದಿಂದ ವಂಚಿತರನ್ನಾಗಿ ಮಾಡಬಹುದೇ?
ಇದೆಲ್ಲದಕ್ಕೂ ನಿಮ್ಮ ಉತ್ತರ ಇಲ್ಲ ಎಂಬುದೇ ಆಗಿದ್ದರೆ, ಇದಕ್ಕೆಲ್ಲ ತದ್ವಿರುದ್ಧವಾಗಿ ನಮ್ಮ ರಾಜ್ಯ ಸರ್ಕಾರ ಹೊಸ ಯೋಜನೆಯೊಂದನ್ನು ಜಾರಿ ಮಾಡಿದೆ. ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗಾಗಿ ಮಾತ್ರ ಪ್ರವಾಸದ ಯೋಜನೆಯೊಂದನ್ನು ಜಾರಿ ಮಾಡುವ ಮೂಲಕ ಪ್ರೌಢಶಾಲೆ ಮಕ್ಕಳ ನಡುವೆಯೇ ಜಾತಿ ವಿಷದ ಬೀಜ ಬಿತ್ತಲು ಮುಂದಾಗಿದೆ. ಯೋಜನೆಯೊಂದರ ಪರಿಣಾಮಗಳ ಬಗ್ಗೆ ಹಿಂದು ಮುಂದು ಯೋಚಿಸದೇ ಜಾರಿ ಮಾಡಿದರೆ ಏನಾಗುತ್ತದೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಸಿಗಲಾರದು.
ಸರ್ಕಾರ ನ.6ರಂದು ಹೊರಡಿಸಿರುವ ಆದೇಶದ ಪ್ರಕಾರ ಪ್ರತಿ ಜಿಲ್ಲೆಯ 300 ಅಹಿಂದ (ಅಲ್ಪಸಂಖ್ಯಾತ, ಹಿಂದುಳಿದ, ದಲಿತ) ವಿದ್ಯಾರ್ಥಿಗಳಿಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ಕರ್ನಾಟಕದ ದರ್ಶನ ಪ್ರವಾಸ ಆಯೋಜಿಸಬಹುದು.
3.15 ಕೋಟಿ ವೆಚ್ಚ: ಇದಕ್ಕಾಗಿ ಪ್ರತಿ ವಿದ್ಯಾರ್ಥಿಗೆ ಸರ್ಕಾರವೇ 3,500 ಹಣ ನೀಡಲಿದೆ. ಅಂದರೆ ರಾಜ್ಯಾದ್ಯಂತ 8 -10ನೇ ತರಗತಿ ಕಲಿಯುತ್ತಿರುವ ಒಟ್ಟು 9000 ಅಹಿಂದ ವಿದ್ಯಾರ್ಥಿಗಳಿಗೆ ಪ್ರವಾಸ ಭಾಗ್ಯ ದೊರೆಯಲಿದೆ. ಇದಕ್ಕಾಗಿ ಸರ್ಕಾರ 3.15 ಕೋಟಿ ವೆಚ್ಚ ಮಾಡಲಿದೆ.
9000 ವಿದ್ಯಾರ್ಥಿಗಳಿಗೆ ಇದರಿಂದ ಸಹಾಯವಾಗುತ್ತದೆ. ಅವರು ರಾಜ್ಯದ ವಿವಿಧ ಪ್ರದೇಶಗಳನ್ನು ನೋಡಲು ಸಾಧ್ಯವಾಗುತ್ತದೆ. ಅದು ಅವರ ಶಿಕ್ಷಣಕ್ಕೂ ಸಹಾಯವಾಗುತ್ತದೆ.ಆದರೆ ಇದಕ್ಕಿಂತ ದೊಡ್ಡ ಸಂಖ್ಯೆಯ ವಿದ್ಯಾರ್ಥಿಗಳು ಈ ಪ್ರವಾಸದಿಂದ ವಂಚಿತರಾಗಲಿದ್ದಾರೆ. ಅವರೆಲ್ಲ ವಂಚಿತರಾಗುತ್ತಿದ್ದಾರೆ ಎಂಬುದಕ್ಕಿಂತ ಉಳಿದ ವಿದ್ಯಾರ್ಥಿಗಳ ಮೇಲೆ ಇದು ಯಾವರೀತಿ ಪರಿಣಾಮ ಬೀರಬಹುದು ಎಂಬುದು ಹೆಚ್ಚು ಮುಖ್ಯವಾಗುತ್ತದೆ.
ಇದನ್ನು ಯೋಜನೆ ಜಾರಿ ಮಾಡುವ ಮೊದಲೇ ಸರ್ಕಾರ ಯೋಚಿಸಬೇಕಿತ್ತು. ಆದರೆ ಎಲ್ಲವನ್ನು ಒಂದೇ ದೃಷ್ಟಿಕೋನದಿಂದ ನೋಡುವ ಮನಸ್ಥಿತಿ ಹೊಂದಿರುವವರಿಂದ ಇಂತಹ ವಿಶಾಲ ಚಿಂತನೆಯನ್ನು ನಿರೀಕ್ಷಿಸುವುದೇ ತಪ್ಪೇನೊ. ಯೋಜನೆ ಎಷ್ಟು ಅಪಕ್ವವಾಗಿದೆಯೆಂದರೆ ಅಹಿಂದ ವಿದ್ಯಾರ್ಥಿಗಳು ಪ್ರವಾಸಕ್ಕೆ ತೆರಳಿದಾಗ, ಉಳಿದ ವಿದ್ಯಾರ್ಥಿಗಳಿಗೆ ತರಗತಿ ನಡೆಯಬೇಕೇ ಬೇಡವೇ? ತರಗತಿ ನಡೆದರೆ ಅಹಿಂದ ಮಕ್ಕಳು ಆ ತರಗತಿಗಳಿಂದ ವಂಚಿತರಾಗುವುದಿಲ್ಲವೇ? ತರಗತಿ ನಡೆಯಲಿಲ್ಲವೆಂದಾದರೆ ಉಳಿದ ಮಕ್ಕಳಿಗೆ ರಜೆ ಕೊಡಬೇಕೆ? ಎಂಬೆಲ್ಲ ಸಂಗತಿಗಳ ಬಗ್ಗೆ ಸರ್ಕಾರ ಚಕಾರವೆತ್ತಿಲ್ಲ.
ಅದೆಲ್ಲಕ್ಕಿಂತ ಮುಖ್ಯವಾಗಿ ಅಹಿಂದ ವಿದ್ಯಾರ್ಥಿಗಳು ಮಾತ್ರ ಪ್ರವಾಸಕ್ಕೆ ತೆರಳಿದಾಗ ಉಳಿದ ವಿದ್ಯಾರ್ಥಿಗಳ ಮನಸ್ಸಿನ ಮೇಲೆ ಇದು ಎಂತಹ ಪರಿಣಾಮ ಬೀರಬಹುದು ಎಂಬುದನ್ನು ಸರ್ಕಾರ ಪರಿಗಣಿಸಿದಂತಿಲ್ಲ. ಶಾಲೆಯಲ್ಲಿ ಪ್ರವಾಸ ಆಯೋಜಿಸಿದಾಗ ಯಾವುದೋ ಕಾರಣಕ್ಕೆ ಹೋಗಲಾಗದಿದ್ದರೆ ಮಕ್ಕಳು ಎಷ್ಟು ಬೇಸರ ಮಾಡಿಕೊಳ್ಳುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಿರುವಾಗ ಸರ್ಕಾರವೇ ಕೆಲವರನ್ನು ಮಾತ್ರ ಪ್ರವಾಸಕ್ಕೆ ಕಳುಹಿಸಿದರೆ ಉಳಿದ ಮಕ್ಕಳ ಮನಸ್ಸಿನ ಮೇಲೆ ಕೆಟ್ಟ ಪರಿಣಾಮ ಬೀರುವುದರಲ್ಲಿ ಅನುಮಾನವಿಲ್ಲ.
ಇಷ್ಟಕ್ಕೂ ಆ ಮಕ್ಕಳು ಮಾಡಿದ ತಪ್ಪೇನು? ಮೇಲ್ಜಾತಿಯಲ್ಲಿ ಜನಿಸಿದ್ದೇ ಅವರ ತಪ್ಪಾ? ಅವರ ನಿಯಂತ್ರಣ ಮೀರಿದ ಸಂಗತಿಯೊಂದಕ್ಕೆ ಅವರನ್ನು ಈ ರೀತಿ ಶಿಕ್ಷಿಸಿವುದು ಮುಂದಾಗಿದೆ. ಈ ನಿರ್ಧಾರ ಎಷ್ಟರಮಟ್ಟಿಗೆ ಸಂವಿಧಾನಬದ್ಧ ಎಂಬುದನ್ನು ಸರ್ಕಾರ ಜನತೆಗೆ ವಿವರಿಸಬೇಕಾದ ಅನಿವಾರ್ಯವಿದೆ.ಇದು ಸಂವಿಧಾನದ ಜಾತ್ಯತೀತ ವ್ಯವಸ್ಥೆಯನ್ನು ಅಣಕಿಸಿದಂತಾಗುವುದಿಲ್ಲವೇ?
ಉತ್ತರವೇನು ಕೊಡಲಾದೀತು: ಪ್ರವಾಸದಿಂದ ವಂಚಿತರಾದ ಮಕ್ಕಳು, 'ನಾವೇನು ತಪ್ಪು ಮಾಡಿದ್ದೇವೆ? ನಮ್ಮನ್ನು ಸರ್ಕಾರ ಯಾಕೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿಲ್ಲ' ಎಂದು ಕೇಳಿದರೆ ಪಾಲಕರು ಉತ್ತರ ಕೊಡಲು ತಡಪಡಾಯಿಸಬೇಕಾಗುತ್ತದೆ. 'ಮೇಲ್ಜಾತಿಯಲ್ಲಿ ಹುಟ್ಟಿದ್ದೇ ನಿಮ್ಮ ತಪ್ಪು' ಎಂದು ಹೇಳಲಾದೀತೇ?
ಅಥವಾ ನಮ್ಮ ಸರ್ಕಾರ ಭೇದಭಾವ ಮಾಡುತ್ತಿದೆ ಎಂದು ಅವರ ಮುಂದೆ ಆರೋಪಿಸಲಾದೀತೇ?
ಹಾಗೆ ಹೇಳಿದರೂ ಅದು ಮಕ್ಕಳಿಗೆ ಅರ್ಥವಾಗಲು ಸಾಧ್ಯವಿಲ್ಲ. ಅರ್ಥವಾದರೂ ಈ ದೇಶದಲ್ಲಿ ಮೇಲ್ಜಾತಿಯಲ್ಲಿ ಹುಟ್ಟುವುದೇ ತಪ್ಪು ಎಂದು ಭಾವಿಸುವ ಅಪಾಯವಿದೆ. ಪುಟ್ಟ ಮುಗ್ದ ಮನಸ್ಸಿನೊಳಗೆ ಜಾತಿ, ಮೇಲು- ಕೀಳು, ಸರ್ಕಾರ ತಮಗೆ ಮಾಡಿದ ಅನ್ಯಾಯದ ಕುರಿತು ಪ್ರಶ್ನೆಗಳು ಏಳದಿರುವುದಿಲ್ಲ. ಇದರ ಪರಿಣಾಮವಾಗಿ ಸರ್ಕಾರದಿಂದ ವಿಶೇಷ ಸೌಲಭ್ಯ ಪಡೆದ ಮಕ್ಕಳ ಮೇಲೆ ದ್ವೇಷದ ಭಾವನೆ ಮೂಡಬಹುದು.
ಮಕ್ಕಳ ನಡುವೆಯೇ ಪ್ರವಾಸಕ್ಕೆ ಹೋದವರು ಮತ್ತು ಹೋಗದವರು ಎಂಬ ವರ್ಗ ಸೃಷ್ಟಿಯಾಗುತ್ತದೆ. ಇದರಿಂದ ವಿದ್ಯಾರ್ಥಿಗಳ ನಡುವಿನ ಸಾಮರಸ್ಯ ಕೆಟ್ಟು ಶಾಲೆಯ ವಾತಾವರಣ ಹೊಲಸಾದರೂ ಆಶ್ಚರ್ಯವಿಲ್ಲ.
ಇಷ್ಟು ಚಿಕ್ಕವರಿರುವಾಗಲೇ ಅವರ ಮನಸ್ಸಿನಲ್ಲಿ ಸರ್ಕಾರ ನಮ್ಮನ್ನು ಪ್ರತ್ಯೇಕಿಸಿ ನೋಡುತ್ತದೆ ಎಂಬ ಭಾವನೆ ಮೂಡಿದರೆ ಮುಂದೆ ಅವರು ಸರ್ಕಾರ ಹಾಗೂ ಆಡಳಿತ ನಡೆಸುವವರನ್ನು ಸ್ವಚ್ಛ ಮನಸ್ಸಿನಿಂದ ನೋಡುವುದು ಅಸಾಧ್ಯವಾಗಬಹುದು.
ಯಾವುದು ತಪ್ಪು: ಮೇಲ್ಜಾತಿಯವರು ಇತರರನ್ನು ಪ್ರತ್ಯೇಕವಾಗಿ ನೋಡುವುದು ತಪ್ಪು ಎಂದಾದರೆ, ಬೇರೆ ಜಾತಿಯವರು ಮೇಲ್ಜಾತಿಯವರನ್ನು ಪ್ರತ್ಯೇಕಿಸಿ ನೋಡುವುದು ಕೂಡ ತಪ್ಪೇ. ಮೇಲ್ಜಾತಿಯವರ ಜತೆಗೆ ಕೆಳಜಾತಿಯವರಿಗೂ ಊಟಕ್ಕೆ ಅವಕಾಶ ನೀಡಬೇಕು ಎಂದು ಹೇಳುವವರು ಕೆಳಜಾತಿಯವರ ಜತೆ ಮೇಲ್ಜಾತಿಯ ಮಕ್ಕಳನ್ನೂ ಒಟ್ಟಿಗೆ ಪ್ರವಾಸಕ್ಕೆ ಕಳುಹಿಸುವ ವೈಶಾಲ್ಯವನ್ನು ಬೆಳೆಸಿಕೊಳ್ಳಬೇಕು.ಯಾಕೆ ಸ್ವಾಮಿ ಮೇಲ್ಜಾತಿಯಲ್ಲಿ ಮಕ್ಕಳಿಗೆ 3,500 ಕೊಟ್ಟು ಪ್ರವಾಸಕ್ಕೆ ಕಳುಹಿಸಲಾಗದ ಕುಟುಂಬಗಳೇ ಇಲ್ಲವೇ? ಮೇಲ್ಜಾತಿಗಳಲ್ಲಿ ಕೂಡ ಒಪ್ಪೊತ್ತು ಊಟ ಸರಿಯಾಗಿ ದೊರೆಯದ, ಮಕ್ಕಳನ್ನು ಪ್ರವಾಸಕ್ಕೆ ಕಳುಹಿಸಲಾಗದ ಕುಟುಂಬಗಳಿವೆ. ಆದರೆ ಅದನ್ನು ನೋಡುವ ಕಣ್ಣು ಸರ್ಕಾರಕ್ಕಿಲ್ಲ. ಜಾತ್ಯತೀತವಾಗಿರಬೇಕಾಗಿದ್ದ ಸರ್ಕಾರಗಳು ಪ್ರತಿಯೊಂದನ್ನೂ ಜಾತಿ, ಧರ್ಮದ ಪರದೆಯ ಮೂಲಕವೇ ನೋಡುತ್ತಿವೆ. ಅಂತಹ ಸರ್ಕಾರಗಳಿಂದ ಇದಕ್ಕಿಂತ ಹೊರತಾದ ಯೋಜನೆಯನ್ನು ನಿರೀಕ್ಷಿಸಲು ಅಸಾಧ್ಯ.
ಇದರ ಪರಿಣಾವಾಗಿಯೇ ಮಕ್ಕಳ ನಡುವೆ ಜಾತಿಯ ವಿಷಬೀಜ ಬಿತ್ತುವಂತಹ ಯೋಜನೆಯೊಂದನ್ನು ಜಾರಿಯಾಗಿದೆ. ಮಕ್ಕಳಿಗೆ ಜಾತಿ, ಧರ್ಮದ ಬಗ್ಗೆ ಇರುವ ಅರಿವು ತುಂಬ ಕಡಿಮೆ. ಮಕ್ಕಳಲ್ಲಿ ಯಾವುದೇ ಅಸಮಾನತೆ ಇರಬಾರದು ಎಂಬ ಕಾರಣಕ್ಕೇ ಸಮವಸ್ತ್ರ ಜಾರಿ ಮಾಡಿರುತ್ತಾರೆ. ಮಕ್ಕಳ ಮನಸ್ಸು ಸ್ವಚ್ಛವಾಗಿರುವುದರಿಂದ ಅವರು ಪರಸ್ಪರ ಸ್ಪರ್ಶಿಸುತ್ತಾರೆ. ಒಟ್ಟಿಗೆ ಆಟವಾಡುತ್ತಾರೆ. ಯಾರೋ ತಂದ ನೆಲ್ಲಿಕಾಯಿ ಬಾಯಿಗಿಟ್ಟುಕೊಳ್ಳುತ್ತಾರೆ. ಒಟ್ಟಿಗೆ ಊಟಮಾಡುತ್ತಾರೆ. ಊಟ ಹಂಚಿಕೊಳ್ಳುತ್ತಾರೆ. ಮಕ್ಕಳು ಮನಸ್ಸು ಜಾತಿ, ಧರ್ಮ, ಮೇಲು, ಕೀಳು, ಅಸ್ಪ್ರಶ್ಯತೆ ಇವುಗಳಿಂದೆಲ್ಲ ಕಲುಷಿತಗೊಳ್ಳಬಾರದು. ಇದರ ಬಗ್ಗೆ ಪ್ರತಿಯೊಬ್ಬರೂ ಎಚ್ಚರಿಕೆ ವಹಿಸಬೇಕು.
ಆದರೆ ಸರ್ಕಾರವೇ ಮಕ್ಕಳ ಮನಸ್ಸಿನಲ್ಲಿ ಮೇಲು- ಕೀಳು, ಮೇಲ್ಜಾತಿ, ಶೋಷಣೆ ಮುಂತಾದವನ್ನು ತುಂಬಲು ಹೊರಟಂತಾಗಿದೆ.
ಚಿಣ್ಣರ ಪ್ರವಾಸ ರದ್ದು, ಅಹಿಂದ ಪ್ರವಾಸ ಅಸ್ತು
ಸರ್ಕಾರ ಎಷ್ಟರ ಮಟ್ಟಿಗೆ ಅಸಮಾನತೆ ಜಾರಿ ಮಾಡುತ್ತಿದೆಯೆಂದರೆ ಪ್ರಾಥಮಿಕ ಶಾಲೆಗಳಲ್ಲಿ ಯಾವುದೇ ಜಾತಿ- ಧರ್ಮ ವ್ಯತ್ಯಾಸವಿಲ್ಲದೇ ಎಲ್ಲರನ್ನೂ ಕರೆದುಕೊಂಡು ಹೋಗಲಾಗುತ್ತಿದ್ದ ಚಿಣ್ಣರ ಜಿಲ್ಲಾ ಪ್ರವಾಸವನ್ನು ಈ ವರ್ಷದಿಂದ ಸ್ಥಗಿತಗೊಳಿಸಿದೆ. ವರ್ಷದಲ್ಲಿ ಒಂದು ದಿನ ಮಕ್ಕಳಿಗೆ ಕೃಷಿ ಕುರಿತು ಮಾಹಿತಿ ನೀಡಲು, ಜಿಲ್ಲೆಯ ಪ್ರಗತಿಪರ ರೈತ ಅಥವಾ ಕೃಷಿ ಪ್ರದೇಶಕ್ಕೆ ಭೇಟಿ ನೀಡುವ ಪ್ರವಾಸವನ್ನೂ ಸ್ಥಗಿತಗೊಳಿಸಲಾಗಿದೆ. ಅದಕ್ಕೆ ಹಣ ಬಿಡುಗಡೆ ಮಾಡುವ ಬಗ್ಗೆ ಶಿಕ್ಷಣ ಇಲಾಖೆ ಕಳುಹಿಸಿದ ಪ್ರಸ್ತಾವನೆಗೆ ಪ್ರತಿಕ್ರಿಯಿಸಲು ಸರ್ಕಾರಕ್ಕೆ ಸಮಯ ಸಿಕ್ಕಿಲ್ಲ. ಆದರೆ ಮಕ್ಕಳಲ್ಲಿ ಭೇದ ಭಾವನೆ ಮೂಡಿಸುವಂತಹ, ತಾರತಮ್ಯ ತೋರುವಂತಹ ಅಹಿಂದ ಮಕ್ಕಳನ್ನು ಮಾತ್ರ ಪ್ರವಾಸಕ್ಕೆ ಕಳುಹಿಸುವ ಯೋಜನೆ ಜಾರಿ ಮಾಡಿದೆ. ಪ್ರಾಥಮಿಕ ಶಾಲೆ ಮಕ್ಕಳಿಗೆ ಇದ್ದ ಅವೆರಡೂ ಪ್ರವಾಸಗಳು ಎಲ್ಲ ಮಕ್ಕಳಿಗೂ ಮುಕ್ತವಾಗಿತ್ತು. ಹಾಗೆಯೇ ಅದು ಮಕ್ಕಳಿಗೆ ಜಿಲ್ಲೆಯ ಬಗ್ಗೆ, ಕೃಷಿ ಬಗ್ಗೆ ಅರಿಯಲು ಸಹಾಯಮಾಡುತ್ತಿತ್ತು. ಅದಕ್ಕಿಂತ ಹೆಚ್ಚಾಗಿ ಅದರಲ್ಲಿ ಯಾವುದೇ ಅಸಮಾನತೆಯ ಛಾಯೆ ಇರಲಿಲ್ಲ. ಅಂತಹ ಉತ್ತಮ ಯೋಜನೆಯನ್ನು ಕೈಬಿಟ್ಟು, ಜಾತಿಯ ವಿಷಬೀಜ ಬಿತ್ತುವಂತಹ ಯೋಜನೆ ಜಾರಿ ಮಾಡಿದೆ. ಬೆಳೆವ ಸಿರಿ ಮೊಳಕೆಯಲ್ಲಿ ಎಂಬುದು ಹಳೆಯ ಮಾತಾಗಿರಬಹುದು. ಆದರೆ ಅದು ಸತ್ಯ. ಆದರೆ ಭವಿಷ್ಯದಲ್ಲಿ ಸಮಾನತೆಯ ಸಮಾಜನೋಡುವ ಕನಸು ಹೊತ್ತಿರುವ ಸಿದ್ದರಾಮಯ್ಯನಂತಹ ಮುಖ್ಯಮಂತ್ರಿ ಮೊಳಕೆ ರೂಪದ ಮಕ್ಕಳಲ್ಲಿಯೇ ಜಾತಿ ವೈಷಮ್ಯ, ಅಸಮಾನತೆ ಮೂಡಿಸುವ ಯೋಜನೆ ಜಾರಿ ಮಾಡಿದ್ದಾರೆ. ವಿಷಬೀಜ ಬಿತ್ತಿ ಅಮೃತದ ಬೆಳೆ ತೆಗೆಯಲು ಹೊರಟರೆ ಅದಕ್ಕಿಂತ ದೊಡ್ಡ ಮೂರ್ಖತನ ಇನ್ನೊಂದಿಲ್ಲ.
- ವಿನಾಯಕ ಭಟ್ಟ ಮೂರೂರು