ಹತ್ತು ಸಾವಿರ ಬಲಿ
ಹಯಾನ್ ಚಂಡಮಾರುತದ ರುದ್ರತಾಂಡವದ ಬಳಿಕ ಫಿಲಿಪ್ಪೀನ್ಸ್‌ನಲ್ಲಿ ಸ್ಮಶಾನ ಮೌನ ಆವರಿಸಿದೆ. ಭೀಕರ ಚಂಡಮಾರುತದಿಂದ 10 ಸಾವಿರಕ್ಕೂ...
ಟಾಕ್ಲೋಬನ್ (ಫಿಲಿಪ್ಪೀನ್ಸ್): ಹಯಾನ್ ಚಂಡಮಾರುತದ ರುದ್ರತಾಂಡವದ ಬಳಿಕ ಫಿಲಿಪ್ಪೀನ್ಸ್‌ನಲ್ಲಿ ಸ್ಮಶಾನ ಮೌನ ಆವರಿಸಿದೆ. ಭೀಕರ ಚಂಡಮಾರುತದಿಂದ 10 ಸಾವಿರಕ್ಕೂ ಹೆಚ್ಚು ಮಂದಿ ಮೃತಪಟ್ಟಿರುವ ಸಾಧ್ಯತೆಯಿದೆ ಎಂದು ಫಿಲಿಪ್ಪೀನ್ಸ್ ಸರ್ಕಾರ ಹೇಳಿದೆ. ಸೈಕ್ಲೋನ್‌ನ ಪ್ರಭಾವಕ್ಕೆ ಹಲವು ಪಟ್ಟಣಗಳೇ ನಿರ್ನಾಮವಾಗಿವೆ. ಸಾವಿರಾರು ಮನೆಗಳು ನೆಲಸಮವಾಗಿವೆ. ಬೀದಿಬದಿಗಳಲ್ಲಿ, ಅವಶೇಷಗಳಡಿಯಲ್ಲಿ, ಪ್ರವಾಹದ ನೀರಿನಲ್ಲಿ ಹೀಗೆ ಎಲ್ಲೆಲ್ಲೂ ಶವಗಳ ರಾಶಿಯೇ ಕಾಣುತ್ತಿದ್ದು, ಎಲ್ಲರಲ್ಲೂ ನಡುಕ ಸೃಷ್ಟಿಸಿದೆ. ಇದು ಫಿಲಿಪ್ಪೀನ್ಸ್‌ನಲ್ಲಿ ಸಂಭವಿಸಿದ ಅತ್ಯಂತ ಭೀಕರ ನೈಸರ್ಗಿಕ ವಿಕೋಪ ಎಂದು ಹೇಳಲಾಗುತ್ತಿದೆ.
ಆಹಾರಕ್ಕಾಗಿ ಲೂಟಿ
ಒಂದೇ ದಿನದಲ್ಲಿ ಫಿಲಿಪ್ಪೀನ್ಸ್‌ನ ಪರಿಸ್ಥಿತಿಯೇ ಬದಲಾಗಿದೆ. ಚಂಡಮಾರುತ ತನ್ನ ಕರಾಳ ಮುಖವನ್ನು ತೋರಿಸಿದ್ದೇ ತಡ ಆಹಾರವಿಲ್ಲದೇ ಸಂತ್ರಸ್ತರು ಪರದಾಡತೊಡಗಿದ್ದಾರೆ. ತುತ್ತು ಅನ್ನ ಸಿಗುವುದೇ ಎಂದು ಅಲೆದಾಡುವವರ ಸಂಖ್ಯೆ ಹೆಚ್ಚಿದೆ. ಅನೇಕರ ಹಸಿವು ಹಿಂಸಾರೂಪ ತಾಳಿದ್ದು, ಮಾಲ್, ಅಂಗಡಿಗಳನ್ನು ಲೂಟಿ ಮಾಡತೊಡಗಿದ್ದಾರೆ. ಅಕ್ಕಿ, ಆಹಾರ, ಹಾಲಿಗಾಗಿ ಸಿಕ್ಕಿಸಿಕ್ಕಿದೆಡೆಗಳಲ್ಲಿ ದೋಚತೊಡಗಿದ್ದಾರೆ. ಇನ್ನು ಒಂದು ವಾರ ಕಳೆದರೆ ಆಹಾರಕ್ಕಾಗಿ ಕೊಲೆ ಮಾಡುವ ಸ್ಥಿತಿಯೂ ಬರಬಹುದು ಎನ್ನುವ ಆತಂಕವನ್ನೂ ಹಲವು ನಾಗರಿಕರು ವ್ಯಕ್ತಪಡಿಸುತ್ತಿದ್ದಾರೆ.
ಜಗತ್ತಿನ ಕೊನೆಯೇ?
ಫಿಲಿಪ್ಪೀನ್ಸ್‌ಗೆ ಶುಕ್ರವಾರ ಅಪ್ಪಳಿಸಿದ ಚಂಡಮಾರುತ ಅಪಾರ ಹಾನಿ ಸೃಷ್ಟಿಸುತ್ತಾ ಸಾಗಿದೆ. ಹಯಾನ್ ಹಾದುಹೋದ ಪ್ರದೇಶಗಳ ಶೇ.80ರಷ್ಟು ಮನೆ, ಕಟ್ಟಡಗಳು ನೆಲಸಮವಾಗಿವೆ. ಕರಾವಳಿ ಪ್ರದೇಶಗಳ ಹಳ್ಳಿಗಳ ಮೇಲೆ ಸುನಾಮಿಯಂತಹ ಅಲೆಗಳು ಅಪ್ಪಳಿಸಿವೆ. ಈ ಅಲೆಗಳು 19 ಅಡಿಯಷ್ಟು ಎತ್ತರದಲ್ಲಿ ಅಪ್ಪಳಿಸಿರುವುದನ್ನು ನೋಡಿದ ಫಿಲಿಪ್ಪೀನ್ಸ್‌ನ ಜನತೆ ಜಗತ್ತಿನ ಕೊನೆಯೆಂದರೆ ಇದೇನಾ ಎಂದು ಪ್ರಶ್ನಿಸುತ್ತಿದ್ದಾರೆ. ಶನಿವಾರ ಮೃತರ ಸಂಖ್ಯೆ 1,200 ಎಂದು ಭಾವಿಸಲಾಗಿತ್ತು. ಆದರೆ, ರಕ್ಷಣಾ ಕಾರ್ಯ ಮುಂದುವರಿದ ಬಳಿಕ ಪರಿಸ್ಥಿತಿಯ ಗಂಭೀರತೆಯ ಅರಿವಾಗಿದ್ದು, 10 ಸಾವಿರಕ್ಕೂ ಅಧಿಕ ಮಂದಿಯನ್ನು ಬಲಿತೆಗೆದುಕೊಂಡಿರಬಹುದೆಂದು ಅಂದಾಜಿಸಲಾಗಿದೆ.
ನಗರಗಳೇ ನಿರ್ನಾಮ
ಗಂಟೆಗೆ 380 ಕಿ.ಮೀ. ವೇಗದಲ್ಲಿ ಬೀಸಿದ ಚಂಡಮಾರುತವು ಹಲವು ಪಟ್ಟಣಗಳನ್ನೇ ನಿರ್ನಾಮ ಮಾಡಿದೆ. ಟ್ಯಾಕ್ಲೋಬನ್ ಪಟ್ಟಣವೂ ಸಂಪೂರ್ಣವಾಗಿ ನಾಶವಾಗಿದೆ. 3.5 ಲಕ್ಷಕ್ಕೂ ಹೆಚ್ಚು ಜನರು ನಿರ್ವಸಿತರಾಗಿದ್ದಾರೆ. 36 ಪ್ರಾಂತ್ಯಗಳಲ್ಲಿ 43 ಲಕ್ಷ ಜನರ ಮೇಲೆ ಚಂಡಮಾರುತದ ಪರಿಣಾಮ ಬೀರಿದೆ. ಇದೇ ವೇಳೆ, ಫಿಲಿಪ್ಪೀನ್ಸ್‌ಗೆ ಮಿಲಿಟರಿ ನೆರವು ನೀಡಲು ಅಮೆರಿಕ ಸರ್ಕಾರ ಮುಂದೆ ಬಂದಿದೆ.
ಮೃತರ ಸಂಖ್ಯೆ -10 ಸಾವಿರಕ್ಕೂ ಹೆಚ್ಚು
ನೆಲಸಮವಾದ ಮನೆಗಳು-80 ಶೇ.
ನಿರ್ವಸಿತರ ಸಂಖ್ಯೆ-3.5 ಲಕ್ಷಕ್ಕೂ ಹೆಚ್ಚು
ಹಯಾನ್ ಪ್ರಭಾವ ಎದುರಿಸಿದ ಜನ-43 ಲಕ್ಷ
ಸಮುದ್ರದ ಅಲೆಗಳ ಎತ್ತರ-19 ಅಡಿ
ವಿಯೆಟ್ನಾಂನಲ್ಲಿ ಸ್ಥಳಾಂತರಗೊಂಡ ಜನ -6 ಲಕ್ಷ
ಪ್ರಾಂತ್ಯಗಳು -36