ಬಸ್ ಹಿಂಭಾಗದಲ್ಲೇ ಅಡಗಿದ್ದ ಜವರಾಯ!
ಮುಂಬೈ ಮೂಲದ ಈ ಕುಟುಂಬ ಯಾವ ಕಾರಣಕ್ಕಾಗಿ ಬೆಂಗಳೂರಿಗೆ ಬಂದಿತ್ತೋ ಗೊತ್ತಿಲ್ಲ. ಆದರೆ ಬಸ್ನ ಹಿಂಭಾಗದಲ್ಲಿಯೇ ಕುಳಿತದ್ದೇ...
ಕ.ಪ್ರ.ವಾರ್ತೆ, ಹಾವೇರಿ, ನ. 14-
ಮುಂಬೈ ಮೂಲದ ಈ ಕುಟುಂಬ ಯಾವ ಕಾರಣಕ್ಕಾಗಿ ಬೆಂಗಳೂರಿಗೆ ಬಂದಿತ್ತೋ ಗೊತ್ತಿಲ್ಲ. ಆದರೆ ಬಸ್ನ ಹಿಂಭಾಗದಲ್ಲಿಯೇ ಕುಳಿತದ್ದೇ ಅವರಿಗೆ ಶಾಪವಾಗಿ ಪರಿಣಮಿಸಿದೆ. ಎರಡು ವರ್ಷದ ಮಗು ಸೇರಿದಂತೆ ಆ ಕುಟುಂಬದ ಐವರೂ ಗುರುತು ಸಿಗದಂತೆ ಸುಟ್ಟು ಕರಕಲಾಗಿದ್ದಾರೆ. ಲಗೇಜ್ ಬಾಕ್ಸ್ನಲ್ಲಿ ಹಾಯಾಗಿ ಮಲಗಿದ್ದ ಚಾಲಕನನ್ನು ಜವರಾಯ ಬಿಡಲಿಲ್ಲ.
ಹಾವೇರಿ ಸಮೀಪದ ಬಂಕಾಪುರ ಠಾಣೆ ವ್ಯಾಪ್ತಿಯ ರಾ.ಹೆ. 4ರ ವರದಾ ನದಿ ಸೇತುವೆ ತಡೆಗೋಡೆಗೆ ಡಿಕ್ಕಿ ಹೊಡೆದು ಸಂಭವಿಸಿದ ಬಸ್ ಅವಘಡದಲ್ಲಿ ಈ ಕುಟುಂಬ ದಾರುಣ ಅಂತ್ಯ ಕಂಡಿದೆ.
ದುರಂತ ಸಂಭವಿಸಿದ ತಕ್ಷಣ ಬಹುತೇಕ ಪ್ರಯಾಣಿಕರು ಗಾಜು ಒಡೆದು ಹೊರ ಬಂದಿದ್ದಾರೆ. ಆದರೆ ಇವರಿಂದ ಏಕೆ ಅದು ಸಾಧ್ಯವಾಗಲಿಲ್ಲ ಎಂಬ ಪ್ರಶ್ನೆಗೆ ಉತ್ತರ ಹುಡುಕುತ್ತ ಹೋದರೆ ಬಸ್ಸಿನ ವ್ಯವಸ್ಥೆಯೇ ಹಾಗಿದೆ. ಹೊಸ ಮಾದರಿಯ ವೋಲ್ವೋ ಬಸ್ಗೆ ಹಿಂಭಾಗದಲ್ಲಿ ಎಂಜಿನ್ ಇಡಲಾಗಿದೆ. ಸೇತುವೆ ತಡೆಗೋಡೆಗೆ ಬಸ್ ಡಿಕ್ಕಿ ಹೊಡೆದಾಕ್ಷಣವೇ ಡೀಸೆಲ್ ಟ್ಯಾಂಕ್ ಒಡೆದಿದೆ. ಮುಂದೆ 200 ಮೀ.ವರೆಗೆ ಬಸ್ ತಿಕ್ಕಿಕೊಂಡೇ ಚಲಿಸಿದೆ. ಆಗ ಬೆಂಕಿ ತಗುಲಿ ಹಿಂಭಾಗದ ಎಂಜಿನ್ಗೆ ಪ್ರವೇಶಿಸಿದೆ. ಅಲ್ಲಿ ಸ್ಫೋಟದ ಸದ್ದಾಗಿದೆ ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಾರೆ.
ಒಮ್ಮೇಲೆ ಬಸ್ ಹಿಂಭಾಗದಲ್ಲಿ ಬೆಂಕಿ ಜೋರಾಗಿ ಕಾಣಿಸಿದೆ. ಆಗ ಎರಡು ವರ್ಷದ ಮಗು, 8 ವರ್ಷದ ಇಬ್ಬರು ಮಕ್ಕಳೊಂದಿಗೆ ಆ ದಂಪತಿಯಿಂದ ಹೊರಬರಲು ಸಾಧ್ಯವೇ ಆಗಿಲ್ಲ. ಸ್ಫೋಟ ಸಂಭವಿಸಿದ್ದಲ್ಲಿ ಆಗಲೇ ಅವರು ಮೃತಪಟ್ಟಿರುವ ಸಾಧ್ಯತೆಯೂ ಇದೆ. ಹಿಂಭಾಗದ ಡಿಕ್ಕಿಯಲ್ಲಿ ಮಲಗಿದ್ದ ಮತ್ತೊಬ್ಬ ಚಾಲಕನೂ ಜೀವ ತೆತ್ತಿದ್ದಾನೆ.
ತುಮಕೂರಿನಲ್ಲಿ ಹತ್ತಿದ್ದರೇ?: ಒಂದೇ ಕುಟಂಬದ ಈ ಐವರು ತುಮಕೂರಿನಲ್ಲಿ ಬಸ್ ಏರಿರಬಹುದು ಎನ್ನಲಾಗುತ್ತಿದೆ. ತುಮಕೂರಿನ ಯಾವುದೋ ಹೊಟೇಲ್ವೊಂದರಲ್ಲಿ ಊಟಕ್ಕೆಂದು ರಾತ್ರಿ ಬಸ್ ಅನ್ನು ನಿಲ್ಲಿಸಲಾಗಿತ್ತು. ಆಗ ಸಾರಿಗೆ ಬಸ್ನಿಂದ ಇಳಿದ ಇವರು ಈ ಬಸ್ ಏರಿದ್ದಾರೆ. ಇದೇ ಬಸ್ನಲ್ಲಿ ತಮ್ಮ ಸಾವು ಬರೆದಿರಬಹುದು ಎಂಬ ಅನುಮಾನವೂ ಇಲ್ಲದ ಈ ಕಟುಂಬ ಸುಖ ನಿದ್ರೆಯಲ್ಲಿದ್ದಾಗಲೇ ದಾರುಣ ಅಂತ್ಯ ಕಂಡಿದೆ.
ದುರಂತದಲ್ಲಿ ಗಾಯಗೊಂಡ ಸೈಯದ್ ಕೌಸರ್, ಬಸ್ನಲ್ಲಿ ಬೆಂಗಳೂರಿನಿಂದ ಬಂದವರೆಲ್ಲರೂ ಆಸ್ಪತ್ರೆಯಲ್ಲಿ ದ್ದಾರೆ. ಆದರೆ ತುಮಕೂರಿನಲ್ಲಿ ಹತ್ತಿದ್ದ ಆ ಒಂದು ಕುಟುಂಬ ಮಾತ್ರ ಕಾಣುತ್ತಿಲ್ಲ. ಅವರು ಏನಾದರು ಎಂದು ಗೊತ್ತಾಗಲೇ ಇಲ್ಲ ಎನ್ನುತ್ತಾರೆ. ಹೀಗಾಗಿ ತುಮಕೂರಿನಲ್ಲಿ ಹತ್ತಿದ ಆ ಕುಟುಂಬವೇ ಬಸ್ನ ಹಿಂಭಾಗದ ಸೀಟಿನಲ್ಲಿ ಕುಳಿತಿತ್ತು ಎಂದು ಅಂದಾಜಿಸಲಾಗಿದೆ.
ಚಾಲಕನ ನಿರ್ಲಕ್ಷ್ಯ: ಬೆಂಗಳೂರಿನಿಂದ ತುಮಕೂರಿನವರೆಗೂ ಬಸ್ ಓಡಿಸಿದ್ದ ಚಾಲಕ ಆಮೇಲೆ ಹಿಂಭಾಗದ ಡಿಕ್ಕಿಗೆ ಹೋಗಿ ಮಲಗಿದ್ದ. ಆತ ಅಲ್ಲೇ ಸುಟ್ಟು ಕರಕಲಾಗಿದ್ದಾನೆ.
ಈ ಘಟನೆಗೆ ಅಪಘಾತದ ವೇಳೆ ಬಸ್ ಓಡಿಸುತ್ತಿದ್ದ ಚಾಲಕನ ನಿರ್ಲಕ್ಷ್ಯವೂ ಮೇಲ್ನೋಟಕ್ಕೆ ಕಂಡುಬರುತ್ತಿದೆ. ಘಟನಾ ಸ್ಥಳದಲ್ಲಿ ರಾಷ್ಟ್ರೀಯ ಹೆದ್ದಾರಿ ನೇರವಾಗಿದೆ. ಬಹುಶಃ ಆತನಿಗೆ ನಿದ್ರೆ ಮಂಪರು ಬಂದು, ಸೇತುವೆಯ ತಡೆಗೋಡೆಗೆ ಡಿಕ್ಕಿ ಹೊಡೆದಿರಬಹುದು. ಆದರೆ ಆ ವೇಳೆಗಾಗಲೇ ಬಸ್ಗೆ ಬೆಂಕಿ ತಗಲಿತ್ತು. ಮುಂದಿನ ಅನಾಹುತ ಅರಿತು ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಅಂದಾಜಿಸಲಾಗಿದೆ. ಒಟ್ಟಿನಲ್ಲಿ ವೋಲ್ವೋ ಬಸ್ ಎಂದರೆ ಹೆದರಿಕೆ ಬರುವಂಥ ಘಟನೆ ಇದಾಗಿದೆ. ಆಂಧ್ರದಲ್ಲಿ ಇತ್ತೀಚೆಗೆ ಸಂಭವಿಸಿದ ಘಟನೆ ಮಾಸುವ ಮುನ್ನವೇ ನಡೆದ ದುರಂತದಿಂದ ಸಾರ್ವಜನಿಕರು ವೋಲ್ವೋ ಬಸ್ ಪ್ರಯಾಣದ ಬಗ್ಗೆ ಆತಂಕಗೊಳ್ಳುವಂತೆ ಮಾಡಿದೆ.
- ನಾರಾಯಣ ಹೆಗಡೆ