ಮೈಸೂರು ಜಿಲ್ಲೆಯಲ್ಲಿ ಸೂರು ಕಳೆದುಕೊಂಡ 92 ಶಾಲೆಗಳು
ಕ.ಪ್ರ.ವಾರ್ತೆ, ಮೈಸೂರು, ನ. 14-
ಕಲೆ, ಸಂಸ್ಕೃತಿ, ಶಿಕ್ಷಣಕ್ಕೆ ಹೆಸರಾದ ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿರುವ ಮೈಸೂರು ಜಿಲ್ಲೆಯಲ್ಲಿ 2005-06ರಿಂದ ಇಲ್ಲಿಯವರೆಗೆ 92 ಶಾಲೆಗಳು ಬಂದ್ ಆಗಿವೆ. ಇವುಗಳಲ್ಲಿ 57 ಸರ್ಕಾರಿ ಶಾಲೆಗಳು, 35 ಖಾಸಗಿ ಶಾಲೆಗಳು. ಸರ್ಕಾರಿ ಶಾಲೆಗಳ ಪೈಕಿ 45 ಕನ್ನಡ, 7 ಉರ್ದು, 1 ತಮಿಳು, 2 ಪೂರಕ ಶಾಲೆಗಳು ಹಾಗೂ 2 ಬಿಸಿಎಂ ಶಾಲೆಗಳು. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರು ಮತ್ತು ಕೊಠಡಿಗಳ ಕೊರತೆ ಇದೆ. ಬಹುತೇಕ ಶಾಲೆಗಳು ಬಂದ್ ಆಗಲು ಇಂಗ್ಲಿಷ್ ಕಲಿಸದಿರುವುದು ಪ್ರಮುಖ ಕಾರಣ. ಶೇ.45 ರಷ್ಟು ಸರ್ಕಾರಿ ಶಾಲೆಗಳಲ್ಲಿ ಆಟದ ಮೈದಾನಗಳೇ ಇಲ್ಲ. ಕಂಪ್ಯೂಟರ್ ಕಲಿಸುವುದು ಶೇ.35 ರಷ್ಟು ಕಡೆ ಮಾತ್ರ. ಟಿವಿ ಇರುವುದು ಶೇ.10 ರಷ್ಟು ಕಡೆ ಮಾತ್ರ. ಖಾಸಗಿ ಶಾಲೆಗಳಲ್ಲಿ ಎಲ್ಕೆಜಿಯಿಂದಲೇ ಇಂಗ್ಲಿಷ್ ಕಲಿಸುವುದರಿಂದ ಪೋಷಕರು ಸರ್ಕಾರಿ ಶಾಲೆಗಳಿಂದ ದೂರ ಸರಿಯುತ್ತಿದ್ದಾರೆ.
ಜಿಲ್ಲೆಯಲ್ಲಿ ಹೊರಗುಳಿದ ಮಕ್ಕಳ ಸಂಖ್ಯೆ 739
- ಜಿಲ್ಲೆಯಲ್ಲಿ 739 ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆ. ಈ ಮಕ್ಕಳನ್ನು ಮರಳಿ ಶಾಲೆಗೆ ತರಲು ಎಸ್ಡಿಎಂಸಿ, ಸಮುದಾಯ, ಜನಪ್ರತಿನಿಧಿಗಳು, ಸ್ಥಳೀಯ ಸಂಘ ಸಂಸ್ಥೆಗಳ ಸಹಾಯದಿಂದ ಪ್ರಯತ್ನಿಸುತ್ತಿದ್ದಾರೆ. ಫಲಿತಾಂಶ ಶೇ.54.07 ರಷ್ಟಿದೆ. 7 ರಿಂದ 14 ವರ್ಷದ 192 ಮಕ್ಕಳು ಶಾಲೆಗೆ ಸೇರಿಲ್ಲ. ಮೈಸೂರು ಜಿಲ್ಲೆಯಲ್ಲಿ ಒಟ್ಟು 3,274 ಶಾಲೆಗಳಿವೆ. ಇವುಗಳಲ್ಲಿ 2,149 ಸರ್ಕಾರಿ, 71 ಸಮಾಜ ಕಲ್ಯಾಣ, 244 ಅನುದಾನಿತ, 800 ಅನುದಾನರಹಿತ, 10 ಕೇಂದ್ರ ಸರ್ಕಾರಿ ಶಾಲೆಗಳು.
- ಜಿಲ್ಲೆಯಲ್ಲಿ 2,615 ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಗಳಿವೆ. ಈ ಪೈಕಿ 1,926 ಸರ್ಕಾರಿ, 45 ಸಮಾಜ ಕಲ್ಯಾಣ, 122 ಅನುದಾನಿತ, 517 ಅನುದಾನರಹಿತ, 5 ಕೇಂದ್ರ ಸರ್ಕಾರಿ ಶಾಲೆಗಳು. ಜೊತೆಗೆ 659 ಪ್ರೌಢಶಾಲೆಗಳಿವೆ. ಈ ಪೈಕಿ 223 ಸರ್ಕಾರಿ, 26 ಸಮಾಜ ಕಲ್ಯಾಣ, 122 ಅನುದಾನಿತ, 283 ಅನುದಾನ ರಹಿತ, 5 ಕೇಂದ್ರ ಸರ್ಕಾರಿ ಶಾಲೆಗಳು.
- ಶಾಲೆಗಾಗಿ ನಾವು- ನೀವು ಕಾರ್ಯಕ್ರಮದಡಿ ಸಂಕ್ಷಿಪ್ತ ಶಾಲಾ ಶೈಕ್ಷಣಿಕ ಮೌಲ್ಯಮಾಪನ ಕಾರ್ಯ ಕೈಗೊಳ್ಳಲಾಗಿತ್ತು. ಸಂಗ್ರಹಿಸಿದ ಮಾಹಿತಿಯನ್ನು ಜಿಲ್ಲಾ ಹಂತದಲ್ಲಿ ಗಣಕೀಕರಿಸಿ, ಎ, ಬಿ, ಸಿ, ಡಿ ಗ್ರೇಡ್ಗಳನ್ನು ನೀಡಲಾಗಿದೆ. ಅದರಂತೆ ಬಿ, ಸಿ, ಡಿ ಗ್ರೇಡ್ ಶಾಲೆಗಳನ್ನು ಎ ಗ್ರೇಡ್ಗೆ ಪರಿವರ್ತಿಸಲು ಕ್ರಿಯಾ ಯೋಜನೆ ರೂಪಿಸಲಾಗಿದೆ.
ಸೌಲಭ್ಯಗಳು
- ಶೇ.95 ರಷ್ಟು ಶಾಲೆಗಳಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇದೆ. ಕೆಲವೆಡೆ ಫಿಲ್ಟರ್, ಬಿಸಿನೀರಿನ ವ್ಯವಸ್ಥೆ ಇದೆ. ಇದಕ್ಕಾಗಿ ಲಭ್ಯವಿರುವ ಸಂಚಿತನಿಧಿ ಬಳಸಲಾಗಿದೆ. ಶೌಚಾಲಯ ಬಳಕೆಗೆ ಪ್ರತ್ಯೇಕ ನೀರಿನ ವ್ಯವಸ್ಥೆ ಶೇ.89.87 ರಷ್ಟಿದೆ. ಶೇ.94.16 ರಷ್ಟು ಕಡೆ ಬಾಲಕಿಯರಿಗೆ, ಶೇ.91.67 ರಷ್ಟು ಕಡೆ ಬಾಲಕರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದೆ.
- ಎಚ್.ಡಿ.ಕೋಟೆ, ಹುಣಸೂರು ತಾಲೂಕಿನ ಹಾಡಿ ಶಾಲೆಗಳು ಅರಣ್ಯಕ್ಕೆ ಹೊಂದಿಕೊಂಡಿರುವುದರಿಂದ ಇಲಾಖೆ ಅನುಮತಿ ಸಿಕ್ಕಿಲ್ಲ. ಕೆಲವೆಡೆ ಶಾಲೆಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿರುವುದರಿಂದ ಶೌಚಾಲಯ ನಿರ್ಮಾಣ ಆಗಿಲ್ಲ.
- ಶೇ.86.15 ರಷ್ಟು ಕಡೆ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳ ಲಭ್ಯತೆ ಇದೆ. ಉಳಿದೆಡೆ ನಿವೇಶನ, ಅನುದಾನದ ಕೊರತೆ ಇದೆ. ಶೇ.83.03 ರಷ್ಟು ಶಾಲೆಗಳಲ್ಲಿ ಮಾತ್ರ ವಿದ್ಯುತ್ ಸಂಪರ್ಕ ಇದೆ. ಶೇ.81.66 ರಷ್ಟು ಕಡೆ ಶಾಲೆಗಳಿಗೆ ಕಾಂಪೌಂಡ್, ತಂತಿ ಬೇಲಿ, ಶೇ.81.66 ರಷ್ಟು ಕಡೆ ಇಳಿಜಾರು (ರ್ಯಾಂಪ್) ಇದೆ. ಶೇ.87.74 ರಷ್ಟು ಕಡೆ ಅಡುಗೆ ಮನೆ ಇದೆ. ಶಾಲಾ ಕೈತೋಟ ಇರುವುದು ಶೇ.36.72 ರಷ್ಟು, ಆಟದ ಮೈದಾನ ಇರುವುದು ಶೇ.55.32 ರಷ್ಟು ಕಡೆ ಮಾತ್ರ.
- ಕಂಪ್ಯೂಟರ್ ಇರುವುದು ಶೇ.35.50 ರಷ್ಟು ಕಡೆ. ಮಕ್ಕಳ ಬಳಕೆ ಶೇ.30.02 ರಷ್ಟು. ಶೇ.91.41 ರಷ್ಟು ಶಾಲೆಗಳಲ್ಲಿ ರೇಡಿಯೋಗಳಿವೆ. ಟಿವಿ ಇರುವುದು ಶೇ.10.04 ರಷ್ಟು ಕಡೆ ಮಾತ್ರ. ಪೀಠೋಪಕರಣ ಲಭ್ಯತೆ ಶೇ.74.64.
- ಶೇ.88.28 ರಷ್ಟು ಶಾಲೆಗಳಲ್ಲಿ ವಾರಕ್ಕೊಮ್ಮೆ ಸಹಪಠ್ಯ ಚಟುವಟಿಕೆಗಳನ್ನು ನಡೆಸಲಾಗುತ್ತಿದೆ. ಶೇ.82.68 ರಷ್ಟು ಶಾಲೆಗಳಲ್ಲಿ ವಿವಿಧ ಸಂಘಗಳಿದ್ದು, ಶೇ.78.25 ರಷ್ಟು ಕಡೆ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.
- ಮೈಸೂರು ಜಿಲ್ಲೆಯಲ್ಲಿ 100 ವರ್ಷ ದಾಟಿರುವ 40 ಶಾಲೆಗಳಿವೆ. ಇಲ್ಲಿ ಕಲಿತವರು ದೊಡ್ಡ ದೊಡ್ಡ ಹುದ್ದೆಗಳಲ್ಲಿದ್ದಾರೆ. ಮೈಸೂರಿನ ಲಕ್ಷ್ಮೀಪುರಂ ಶಾಲೆಯಲ್ಲಿ ಓದಿದ ಎಚ್. ವಿಶ್ವನಾಥ್ ಸಂಸದರಾಗಿದ್ದಾರೆ.
-
ಅಂಶಿ ಪ್ರಸನ್ನಕುಮಾರ್