ಹೆಸರು ಬದಲಿಸಿ ನಕಲಿ ಪಾಸ್‌ಪೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ಜುಬೇರ್!
ಮಂಗಳೂರು: ಪಾಕಿಸ್ತಾನ ಐಎಸ್‌ಐ ಮೂಲಕ ಭಾರತದ ಇಂಡಿಯನ್ ಮುಜಾಹಿದ್ದೀನ್ ಉಗ್ರರ ಕೈಗೆ ಹಣ ಸೇರುವಂತೆ ಮಾಡುವ ಜಾಲದ ಕಿಂಗ್‌ಪಿನ್ ಆಯಿಷಾ ಬಾನು ಅಲ್ಲ, ಆಕೆ ಪತಿ ಪಂಜಿಮೊಗೇರಿನ ಜುಬೇರ್ ಹುಸೇನ್ ಯಾನೆ ಮೊಹಮ್ಮದ್ ಜುಬೇರ್!
ಈತ ಬೇರೊಂದು ಹೆಸರಲ್ಲಿ ಪಾಸ್‌ಪೋರ್ಟ್ ಮಾಡಿ ಪಾಕಿಸ್ತಾನಕ್ಕೆ ತೆರಳು ಸಿದ್ಧತೆ ಕೂಡಾ ನಡೆಸಿದ್ದ. ಪತ್ನಿ ಆಯಿಷಾ ಬಾನು ಈತನಿಗೆ ಸಹಾಯಕಳಾಗಿ ಕೆಲಸ ಮಾಡುತ್ತಿದ್ದಳು. ಉಗ್ರರ ಕೈ ಸೇರಿದ ಎಟಿಎಂ ಕಾರ್ಡ್‌ಗಳ ಖಾತೆಗಳು ಅಯಿಷಾ ಬಾನು ಹೆಸರಲ್ಲಿದ್ದ ಕಾರಣ ಆಕೆಯೇ ಜಾಲದ ರೂವಾರಿ ಎಂದು ಪೊಲೀಸರು ಶಂಕಿಸಿದ್ದರು. ಆದರೆ ಜುಬೇರ್ ಪಾಕಿಸ್ತಾನಿಗಳ ಜತೆ ಸತತ ಕರೆ ಮಾಡಿರುವ ಹಿನ್ನೆಲೆಯಲ್ಲಿ ಆತನಿಂದ ರಹಸ್ಯ ಹೊರತೆಗೆಯಲು ಬಿಹಾರ ಲಖೀಸರೈ ಪೊಲೀಸರು ಪ್ರಯತ್ನಿಸುತ್ತಿದ್ದಾರೆ.
ಜುಬೇರ್ ತನ್ನ ಬಳಿ ಪಾಸ್‌ಪೋರ್ಟ್ ಇರುವಾಗಲೇ ಹೆಸರು ಬದಲಾಯಿಸಿ ಇನ್ನೊಂದು ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದ. ಇದೇ ಪಾಸ್‌ಪೋರ್ಟ್ ಬಳಸಿ ಪಾಕಿಸ್ತಾನಕ್ಕೆ ತೆರಳಲು ಆತ ಸಿದ್ಧತೆ ನಡೆಸಿದ ಬಗ್ಗೆ ವಿಚಾರಣೆ ವೇಳೆ ಬಾಯಿ ಬಿಟ್ಟಿದ್ದಾನೆ. ಬಹುತೇಕ ವಿದೇಶಿ ಕರೆಗಳು ಇಂಟರ್‌ನೆಟ್ ಮೂಲಕ ಬಂದಿವೆ. ಜುಬೇರ್ ಮೊಬೈಲ್‌ನಲ್ಲಿ 0092 ಆರಂಭವಾಗುವ ಅನೇಕ ಕರೆಗಳ ದಾಖಲೆ ಪೊಲೀಸರಿಗೆ ಸಿಕ್ಕಿದೆ. ಇದರಲ್ಲಿ ಪ್ರಮುಖವಾದದು ಇಬ್ರಾಹಿಂ. ಈತನೇ ಐಎಸ್‌ಐ ಏಜೆಂಟ್ ಆಗಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ನಂಬರ್ ಹಿಡಿದುಕೊಂಡಿರುವ ಪೊಲೀಸರು ಸಾಕ್ಷ್ಯ ಕಲೆ ಹಾಕಲು ಆರಂಭಿಸಿದ್ದಾರೆ.
1991ರಲ್ಲಿ ಪಾಸ್‌ಪೋರ್ಟ್: ಈತ ಮಹಮ್ಮದ್ ಜುಬೇರ್ ಹೆಸರಲ್ಲಿ 1991ರಲ್ಲಿ ಪಾಸ್‌ಪೋರ್ಟ್ ಮಾಡಿಸಿದ್ದ. ಈ ಪಾಸ್‌ಪೋರ್ಟ್‌ನಲ್ಲಿಯೇ ಸೌದಿ ಅರೇಬಿಯಾಕ್ಕೆ ಹೋಗಿ ಬಂದಿದ್ದ. ಅದರಲ್ಲಿ ತನ್ನ ವಿಳಾಸ '2-126, ವಿದ್ಯಾನಗರ, ಪಂಜಿಮೊಗರು, ಮಂಗಳೂರು' ಎಂದು ನೀಡಿದ್ದ.
ಈ ಪಾಸ್‌ಪೋರ್ಟ್ ಅವಧಿ ಇನ್ನೂ ಇದೆ. ಆದರೂ ಹೆಸರು ಬದಲಾಯಿಸಿ ಪಾಸ್‌ಪೋರ್ಟ್‌ಗೆ ಅರ್ಜಿ ಹಾಕಿದ್ದಾನೆ. ಜುಬೇರ್ ಹುಸೇನ್ ಎಂದು ಹೆಸರು ಬದಲಾಯಿಸಿ ಪತ್ರಿಕೆಗಳಲ್ಲಿ 2 ವಾರದ ಹಿಂದೆ ಜಾಹೀರಾತು ನೀಡಿದ್ದಾನೆ. ಒಂದೂವರೆ ವರ್ಷದ ಹಿಂದೆ ಖರೀದಿಸಿದ ಮನೆಯ ವಿಳಾಸದಲ್ಲಿ ಜುಬೇರ್ ಹುಸೇನ್ ಪಾಸ್‌ಪೋರ್ಟ್ ಅರ್ಜಿ ಸಲ್ಲಿಸಿದ್ದಾನೆ. ಪಾಸ್‌ಪೋರ್ಟ್ ವೆರಿಫಿಕೇಷನ್‌ಗೆಂದು ಕಾವೂರು ಪೊಲೀಸ್ ಠಾಣೆಗೆ ಬಂದಿದೆ. ವೆರಿಫಿಕೇಷನ್ ಮಾಡುವ ಮೊದಲೇ ಉಗ್ರರ ಜಾಲದಲ್ಲಿ ಈತನ ಹೆಸರು ಕೇಳಿಬಂದ ಹಿನ್ನೆಲೆಯಲ್ಲಿ ಅರ್ಜಿ ಜುಬೇರ್‌ನದೇ ಎಂಬುದು ಕಾವೂರು ಪೊಲೀಸರ ಗಮನಕ್ಕೆ ಬಂದಿದೆ. ಬಹಿರಂಗವಾಗದೇ ಇದ್ದಲ್ಲಿ ವೆರಿಫಿಕೇಷನ್ ಸುಲಭದಲ್ಲಿ ನಡೆದು ಹೋಗಿ, ಆತನಿಗೆ ಪಾಸ್‌ಪೋರ್ಟ್ ಲಭಿಸುವ ಸಾಧ್ಯತೆ ಇತ್ತು.
ಬೀಡಿ ಕೆಲಸ ಮಾಡುವ ಜುಬೇರ್ 43 ವರ್ಷ ದಾಟಿದ ಬಳಿಕ ಹೆಸರು ಬದಲಾವಣೆ ಮಾಡಿ ವಿದೇಶಕ್ಕೆ ಹೋಗುವ ಅಗತ್ಯ ಏನು ಎಂಬುದು ಪೊಲೀಸರ ಪ್ರಶ್ನೆ. ಅಲ್ಲದೆ, ಹಳೇ ಪಾಸ್‌ಪೋರ್ಟ್ ಅವಧಿ ಮೀರಿಲ್ಲ. ಹೀಗಾಗಿ ಹೆಸರು ಬದಲಾಯಿಸಿ ಪಾಸ್‌ಪೋರ್ಟ್‌ಗೆ ಏಕೆ ಅರ್ಜಿ ಹಾಕಿದೆ ಎಂಬ ಪೊಲೀಸರ ಪ್ರಶ್ನೆಗೆ ಜುಬೇರ್, ನನ್ನ ಪಾಸ್‌ಪೋರ್ಟ್ ಕಳೆದು ಹೋಗಿದೆ ಎಂದು ಉತ್ತರಿಸಿದ್ದಾನೆ.
ದೂರು ಏಕೆ ನೀಡಿಲ್ಲ?: ಕಳೆದು ಹೋದರೆ ಪೊಲೀಸ್ ಠಾಣೆಗೆ ದೂರು ನೀಡಿದರೆ ಅದೇ ಪಾಸ್‌ಪೋರ್ಟ್‌ನ ಡೂಪ್ಲಿಕೇಟ್ ನೀಡುತ್ತಾರೆ. ಒಂದು ವೇಳೆ ಹೆಸರು ಬದಲಾವಣೆ ಆಗಲೇ ಬೇಕು ಎಂದಿದ್ದರೆ ಹಳೇ ಪಾಸ್‌ಪೋರ್ಟ್‌ನಲ್ಲಿಯೇ ಹೆಸರು ಬದಲಾಯಿಸುವ ಅವಕಾಶ ಕಾನೂನಿನಲ್ಲಿ ಇದೆ. ಅದಕ್ಕೇಕೆ ಪ್ರಯತ್ನಿಸಿಲ್ಲ ಎಂಬ ಪೊಲೀಸರ ಪ್ರಶ್ನೆಗೆ ಆತ ತಲೆ ಕೆಳಗೆ ಹಾಕಿ ಮೌನಿಯಾಗುತ್ತಾನೆ. ಐಎಸ್‌ಐ ಏಜೆಂಟ್‌ಗಳನ್ನು ಭೇಟಿ ಮಾಡಲು ಬೇರೆ ಹೆಸರಲ್ಲಿ ಪಾಸ್‌ಪೋರ್ಟ್ ಮಾಡಿಸಿರಬಹುದು ಎಂಬುದು ಪೊಲೀಸರ ಲೆಕ್ಕಾಚಾರ.
ಜುಬೇರ್‌ನ ಹಳೆ ಪಾಸ್‌ಪೋರ್ಟ್ ಜೆರಾಕ್ಸ್, ಹೆಸರು ಬದಲಾವಣೆ ಮಾಡಿ ನೀಡಿದ ವರ್ಗೀಕೃತ ಜಾಹೀರಾತು ಉಳ್ಳ ಪತ್ರಿಕೆ, ಹೆಸರು ಬದಲಾವಣೆಯ ಅಫಿಡವಿಟ್ ಪ್ರತಿ, 7 ಬ್ಯಾಂಕ್ ಖಾತೆಗಳ ಪಾಸ್‌ಬುಕ್, ಮೊಬೈಲ್ ವಶಪಡಿಸಿಕೊಂಡಿರುವುದಾಗಿ ಲಖೀಸರೈ ಠಾಣೆ ಸಬ್‌ಇನ್ಸ್‌ಪೆಕ್ಟರ್ 'ಕನ್ನಡಪ್ರಭ'ಕ್ಕೆ ತಿಳಿಸಿದ್ದಾರೆ.
ಉಗ್ರರು ಹಣ ಪಡೆದಾಗ ಎಸ್‌ಎಂಎಸ್ ಬರುತ್ತಿತ್ತು!
ಸೌದಿಯಲ್ಲಿ ಐಎಸ್‌ಐ ಏಜೆಂಟ್ ಎನ್ನಲಾದ ಇಬ್ರಾಹಿಂ ಪರಿಚಯ ಜುಬೇರ್‌ಗೆ ಆಗಿದೆ. ಆತನೇ ಜುಬೇರ್ ಪತ್ನಿ ಆಯಿಷಾ ಮಾಡಿದ್ದ ಖಾತೆಗಳಿಗೆ ಪಾಕಿಸ್ತಾನದಲ್ಲಿಯೇ ದುಡ್ಡು ಹಾಕುತ್ತಿದ್ದ. ಆಯಿಷಾ ತನ್ನ ತಮ್ಮ, ಅಕ್ಕ, ಅಣ್ಣ, ಸಂಬಂಧಿಕರು, ಪರಿಚಿತರ ಹೆಸರಲ್ಲಿ ಖಾತೆ ತೆರೆದಿದ್ದಾಳೆ. ಈ ಖಾತೆಗಳ ಎಟಿಎಂ ಕಾರ್ಡ್‌ಗಳು ಶಂಕಿತ ಉಗ್ರರ ಕೈ ಸೇರಿವೆ. ಶಂಕಿತ ಉಗ್ರರು ಎಟಿಎಂನಿಂದ ಹಣ ಡ್ರಾ ಮಾಡುವಾಗ ಎಸ್‌ಎಂಎಸ್‌ಗಳು ಪುತ್ತೋಳಿ ಯಾನೆ ಆಯಿಷಾ ಮೊಬೈಲ್‌ಗೆ ಬಂದಿವೆ. ಈ ಸಾಕ್ಷ್ಯಗಳು ಇಬ್ಬರ ಮೇಲಿನ ಆರೋಪವನ್ನು ಮತ್ತಷ್ಟು ಗಟ್ಟಿ ಮಾಡಿದೆ.
- ಜಿತೇಂದ್ರ ಕುಂದೇಶ್ವರ