ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಯಾದಗಿರಿ ಕನ್ನಡ ಶಾಲೆಗಳ ದುಸ್ಥಿತಿ ನೋಡ್ರಿ!

Vishwanath S
Updated On : 19 Nov 2013, 11:56 am

ಯಾದಗಿರಿ: ಗಡಿನಾಡು ಯಾದಗಿರಿ ಜಿಲ್ಲೆಯ ಯಾವ ಕನ್ನಡ ಶಾಲೆಗಳಿಗೂ ಮಕ್ಕಳ ಕೊರತೆಯಿಲ್ಲ. ಆದರೆ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಕೊಠಡಿಗಳಿಲ್ಲದೇ ವಿದ್ಯಾರ್ಥಿಗಳು ದೇವಸ್ಥಾನದ ಆವರಣ, ಬಿದಿರಿನ ತಟ್ಟಿಯ ಶೆಡ್ ಕೆಳಗೆ ಪಾಠ ಕೇಳಬೇಕಾಗಿದೆ. ಜತೆಗೆ ಶಿಕ್ಷಕರ ಕೊರತೆಯಿಂದಲೂ ಕನ್ನಡ ಶಾಲೆಗಳ ಗುಣಮಟ್ಟ ಕುಸಿಯುವಂತೆ ಮಾಡಿದೆ.
ಮಕ್ಕಳ ಸಂಖ್ಯೆ ಕಡಿಮೆಯಾದರೆ ಸರ್ಕಾರ ಆ ಶಾಲೆಯನ್ನೇ ಮುಚ್ಚುತ್ತದೆ. ಆದರೆ, ಜಿಲ್ಲೆಯ ಕನ್ನಡ ಶಾಲೆಗಳಲ್ಲಿ ಮಕ್ಕಳ ಸಂಖ್ಯೆ ಹೆಚ್ಚಿದ್ದರೂ ಅವರಿಗೆ ತಕ್ಕಂತೆ ಕೊಠಡಿಗಳಿಲ್ಲ. ಈ ಬಗ್ಗೆ ಸರ್ಕಾರವೂ ಯಾವುದೇ ಕ್ರಮ ಕೈಗೊಂಡಿಲ್ಲ. ಜಿಲ್ಲೆಯಲ್ಲಿ 1080 ಕನ್ನಡ ಪ್ರಾಥಮಿಕ ಶಾಲೆಗಳಿದ್ದು, 2.30 ಲಕ್ಷ ಮಕ್ಕಳು ವ್ಯಾಸಂಗ ಮಾಡುತ್ತಿದ್ದಾರೆ. ಇವುಗಳಲ್ಲಿ ಅಗತ್ಯ ಕೊಠಡಿ, ಶೌಚಾಲಯ, ಕುಡಿವ ನೀರು ಸೇರಿದಂತೆ ಅಗತ್ಯ ಸೌಲಭ್ಯ ಇಲ್ಲದ ಶಾಲೆಗಳ ಸಂಖ್ಯೆಯೇ ಹೆಚ್ಚು!
ಸುರಪುರ ತಾಲೂಕಿನ ನಗನೂರು ಬಳಿಯ ಶಾಲೆ ನಾಲ್ಕು ವರ್ಷಗಳಿಂದ ತಟ್ಟಿ ಬಿಡಾರದಲ್ಲಿಯೇ ನಡೆಯುತ್ತಿದೆ. ಯಾದಗಿರಿ ನಗರದ ಮಾಶೆಮ್ಮ ಗುಡಿಯ ಆವರಣದಲ್ಲಿ 5 ವರ್ಷಗಳಿಂದ ಕನ್ನಡ ಶಾಲೆ ನಡೆಯುತ್ತಿದ್ದರೂ ಬದಲಿ ವ್ಯವಸ್ಥೆ ಕಲ್ಪಿಸಲು ಸಾಧ್ಯವಾಗಿಲ್ಲ. ಅರಕೇರಾ ಕೆ. ಗ್ರಾಮದಲ್ಲಿ ಮರದ ಕೆಳಗೆ ಶಾಲೆ ನಡೆಯುತ್ತಿದೆ. ಇಂಥ ಶಾಲೆಗಳ ಪಟ್ಟಿ ಜಿಲ್ಲೆಯಲ್ಲಿ ಸಾಕಷ್ಟಿವೆ. ಸುಮಾರು 300 ಶಾಲೆಗಳಲ್ಲಿ ಕುಡಿವ ನೀರಿಲ್ಲ. 260 ಕೊಠಡಿಗಳ ಕೊರತೆಯಿದ್ದು, ಕೆಲವೆಡೆ ಕಟ್ಟಡ ಕಾಮಗಾರಿ ಅರ್ಧಕ್ಕೇ ನಿಂತಿವೆ. ಶೌಚಾಲಯಗಳಿದ್ದರೂ ನೀರಿಲ್ಲದ್ದರಿಂದ ಅವು ಉಪಯೋಗಕ್ಕೆ ಬಾರದಂತಾಗಿವೆ. ಶಿಥಿಲಗೊಂಡಿರುವ ಕೆಲವು ಶಾಲಾ ಕಟ್ಟಡಗಳನ್ನು ನೆಲಸಮ ಮಾಡಲಾಗಿದ್ದು, ಹೊಸ ಕಟ್ಟಡ ನಿರ್ಮಾಣವಾಗಿಲ್ಲ. ಕನ್ನಡ ಪ್ರಾಥಮಿಕ ಶಾಲೆಗಳಲ್ಲೇ 1051 ಶಿಕ್ಷಕರ ಕೊರತೆಯಿದೆ.

ಸಮುದಾಯದ ಸಹಭಾಗಿತ್ವವಿಲ್ಲ
ಗಡಿ ಭಾಗ ಸೇರಿದಂತೆ ಜಿಲ್ಲೆಯ ಕನ್ನಡ ಶಾಲೆಗಳ ಸ್ಥಿತಿಗತಿ ಸುಧಾರಿಸಲು ಜನಪ್ರತಿನಿಧಿಗಳೂ ಮನಸ್ಸು ಮಾಡುತ್ತಿಲ್ಲ. ಪಾಲಕರ ಪಾಲ್ಗೊಳ್ಳುವಿಕೆಯೂ ಹೇಳಿಕೊಳ್ಳುವಂತಿಲ್ಲ. ಮಕ್ಕಳನ್ನು ಶಾಲೆಯಿಂದ ಬಿಡಿಸಿ ದುಡಿಯಲು ಕಳಿಸುವ ಪೋಷಕರ ಸಂಖ್ಯೆಯೇ ಇಲ್ಲಿ ಹೆಚ್ಚು. ಶಾಲೆಯಿಂದ ಹೊರಗುಳಿದ 2340 ಮಕ್ಕಳಿದ್ದು, ಅವರನ್ನು ಮರಳಿ ಶಾಲೆಗೆ ಸೇರಿಸುವ ಪ್ರಯತ್ನಕ್ಕೂ ಪ್ರತಿಫಲ ದೊರೆಯುತ್ತಿಲ್ಲ. 'ನಮ್ಮೂರ ಶಾಲೆ' ಎಂಬ ಭಾವನೆಯನ್ನೇ ಹೊಂದಿರದ ಕೆಲವು ಗ್ರಾಮಗಳಲ್ಲಿ ಶಾಲಾ ಆವರಣವೇ ಸಾರ್ವಜನಿಕ ಶೌಚಾಲಯವಾಗಿ ಮಾರ್ಪಟ್ಟಿವೆ.

ಶಾಲೆಗೆ ಶಿಕ್ಷಕರೇ ಗೈರು!
ಜಿಲ್ಲೆಯ ಚಂಡ್ರಕಿ, ನಂದೇಪಲ್ಲಿ, ಕಡೇಚೂರು, ಅಜಲಾಪುರ, ದುಪ್ಪಲ್ಲಿ, ಕೇಶ್ವಾರ, ಲಿಂಗೇರಿ ತಾಂಡಾ, ಹಳ್ಳಿತಾಂಡಾ, ಜೈಗ್ರಾಂ ಹಾಗೂ ಗುರುಮಠಕಲ್ ಭಾಗದ ಅನೇಕ ಹಳ್ಳಿಗಳ ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೇನೂ ಕೊರತೆಯಿಲ್ಲ. ಆದರೆ ಈ ಭಾಗದ ಶಿಕ್ಷಕರಿಗೇ ಶಾಲೆಯೆಂದರೆ ಅಲರ್ಜಿ. 4 ಶಿಕ್ಷಕರಿದ್ದರೆ ಅವರಲ್ಲಿ ಇಬ್ಬರು ಮಾತ್ರ ಶಾಲೆಯಲ್ಲಿರುತ್ತಾರೆ. ಅಲ್ಲದೇ ಶನಿವಾರ ಬಾಗಿಲು ತೆರೆಯುವುದೇ ಇಲ್ಲ! ಇಲಾಖೆ ಗಮನಕ್ಕೂ ತಾರದೆ ಶಿಕ್ಷಕರು ಅನಧಿಕೃತ ರಜೆಯಲ್ಲಿರುತ್ತಾರೆ. ಇದು ಅಧಿಕಾರಿಗಳಿಗೂ ಗೊತ್ತಿದ್ದರೂ 'ಜಾಣ ಕುರುಡು' ಪ್ರದರ್ಶಿಸುತ್ತಿದ್ದಾರೆ.

ಆಂಗ್ಲ ಶಾಲೆಗಳ ಕಮಾಯಿ
ಖಾಸಗಿ ಆಂಗ್ಲ ಶಾಲೆಗಳು ಗ್ರಾಮೀಣ ಪ್ರದೇಶದಲ್ಲೂ ತಲೆ ಎತ್ತಿವೆ. ಅಂಥ ಶಾಲೆಗಳು ಆರಂಭದಲ್ಲಿ ಕಡಿಮೆ ಶುಲ್ಕ ಪಡೆದು ನಂತರದ ವರ್ಷಗಳಲ್ಲಿ ಪೋಷಕರನ್ನು ಸುಲಿಗೆ ಮಾಡುತ್ತಿವೆ. ಕಲಿಕೆ, ಮಕ್ಕಳ ಶಿಸ್ತಿಗೆ ಒತ್ತು ನೀಡುತ್ತಿರುವುದರಿಂದ ಖಾಸಗಿ ಆಂಗ್ಲ ಶಾಲೆಗಳತ್ತ ಪೋಷಕರು ಹೆಜ್ಜೆ ಹಾಕುತ್ತಿದ್ದಾರೆ. ಇನ್ನು ಕೆಲವೆಡೆ ವಸತಿ ಸಹಿತ ಟ್ಯೂಷನ್ ಶಾಲೆಗಳು ತಲೆ ಎತ್ತಿದ್ದು, ಕನ್ನಡ ಶಾಲೆಗಳಲ್ಲಿ ದಾಖಲಾತಿ ಹೊಂದಿರುವ ಮಕ್ಕಳೇ ಅಲ್ಲಿ ದಾಖಲಾಗುತ್ತಿದ್ದಾರೆ. ಇದು ಮುಂದಿನ ದಿನಗಳಲ್ಲಿ ಕನ್ನಡ ಶಾಲೆಗಳ ಮರಣ ಶಾಸನಕ್ಕೆ ಕಾರಣವಾಗಬಹುದು. ಆದರೆ ಸರ್ಕಾರ ಮಾತ್ರ ಕನ್ನಡ ಶಾಲೆಗಳ ಸುಧಾರಣೆ ನಿಟ್ಟಿನಲ್ಲಿ ಗಮನ ನೀಡುತ್ತಿಲ್ಲ. ಇಷ್ಟಾದರೂ ಮಕ್ಕಳನ್ನು ಹಿಡಿದಿಟ್ಟುಕೊಳ್ಳುವ ನಿಟ್ಟಿನಲ್ಲಿ ಇಲಾಖೆ ಅಗತ್ಯ ಕ್ರಮ ಕೈಗೊಳ್ಳದಿರುವುದು ಜಿಲ್ಲೆಯಲ್ಲಿ ಕನ್ನಡ ಶಾಲೆಗಳ ಅವನತಿಗೆ ಕಾರಣವಾಗಬಹುದು.

- ನಾರಾಯಣ ಹೆಗಡೆ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement