ವಿಧವೆ ಹತ್ಯಾಚಾರ, ವಿದ್ಯಾರ್ಥಿನಿ ಮೇಲೆ ಗ್ಯಾಂಗ್ ರೇಪ್
ಒಂದು ಹತ್ಯಾಚಾರ, ಮತ್ತೊಂದು ಅತ್ಯಾಚಾರ ರಾಜ್ಯದಲ್ಲಿ ಭಾನುವಾರ ಸಂಜೆ ಮತ್ತು ರಾತ್ರಿ ನಡೆದ ಅಮಾನವೀಯ...
ದೊಡ್ಡಬಳ್ಳಾಪುರ/ಚಾಮರಾಜನಗರ: ಒಂದು ಹತ್ಯಾಚಾರ, ಮತ್ತೊಂದು ಅತ್ಯಾಚಾರ ರಾಜ್ಯದಲ್ಲಿ ಭಾನುವಾರ ಸಂಜೆ ಮತ್ತು ರಾತ್ರಿ ನಡೆದ ಅಮಾನವೀಯ ಘಟನೆಗಳಿವು.
ದೊಡ್ಡಬಳ್ಳಾಪುರ ತಾಲೂಕಿನ ಕನ್ನಮಂಗಲ ಗ್ರಾಮದಲ್ಲಿ 10ನೇ ತರಗತಿಯ ವಿದ್ಯಾರ್ಥಿನಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಆಕೆ ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ. ಇದೇ ವೇಳೆ, ಚಾಮರಾಜನಗರ ತಾಲೂಕಿನ ಕಮರವಾಡಿಯಲ್ಲಿ ವಿಧಯೊಬ್ಬಳನ್ನು ಮೂವರು ದುರುಳರು ಆಕೆಯ ತಮ್ಮ ಮತ್ತು ಮಗನ ಕಣ್ಣೆದುರೇ ಅತ್ಯಾಚಾರ ಮಾಡಿ, ಕತ್ತು ಹಿಸುಕಿ ಕೊಲೆ ಮಾಡಿ ಕಬಿನಿ ನಾಲೆಗೆ ಎಸೆದಿದ್ದಾರೆ. ಆದರೆ, ದೂರಿನಲ್ಲಿ ಮಾತ್ರ ಹಲ್ಲೆಗೈದು, ಕೊಲೆ ಮಾಡಲಾಗಿದೆ ಎಂದು ತಿಳಿಸಲಾಗಿದೆ.
ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ ದೊಡ್ಡಬೆಳವಂಗಲ ಠಾಣೆಯಲ್ಲಿ ದಾಖಲಾಗಿದ್ದು, ಪೊಲೀಸರು ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟ 6 ಜನರನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾರೆ.
ಅದೇ ರೀತಿ, ವಿಧವೆಯನ್ನು ಅತ್ಯಾಚಾರ ಮಾಡಿ, ಕೊಲೆ ಮಾಡಿದ ಪ್ರಕರಣವನ್ನು ಚಾಮರಾಜನಗರ ತಾಲೂಕಿನ ಕುದೇರು ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಮೂವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ. ಆದರೆ, ಪೊಲೀಸ್ ಪ್ರಕರಣ ಮಾತ್ರ ಬೇರೆ ರೀತಿಯಲ್ಲಿ ದಾಖಲಾಗಿದೆ. ವಿಧವೆಯ ತಮ್ಮ ನೀಡಿದ ದೂರಿನಲ್ಲಿ, ಕುರಿ ಮೇಯಿಸಿ ಬೆಳೆ ಹಾನಿ ಮಾಡಿದ್ದರಿಂದ ಜಮೀನು ಮಾಲೀಕರು ತಮ್ಮ ಅಕ್ಕನ ಮೇಲೆ ಹಲ್ಲೆಗೈದು, ಕೊಲೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದು ಹಲವು ಸಂಶಯಕ್ಕೆ ಎಡೆ ಮಾಡಿಕೊಟ್ಟಿದೆ. ವೈದ್ಯಕೀಯ ಪರೀಕ್ಷೆ ಬಳಿಕವಷ್ಟೇ ಆಕೆಯ ಮೇಲೆ ಅತ್ಯಾಚಾರ ನಡೆದಿತ್ತೇ ಎಂಬುದು ತಿಳಿದು ಬರಲಿದೆ.
ರಸಮಂಜರಿಗೆ ಹೋಗಿದ್ದಳು:
ಕನ್ನಮಂಗಲ ಗ್ರಾಮದ ವಿದ್ಯಾರ್ಥಿನಿ ಭಾನುವಾರ ರಾತ್ರಿ ಗ್ರಾಮದಲ್ಲಿ ಆಯೋಜಿಸಲಾಗಿದ್ದ ರಸಮಂಜರಿ ಕಾರ್ಯಕ್ರಮಕ್ಕೆ ಹೋಗಿದ್ದಳು. ಕಾರ್ಯಕ್ರಮ ನಡೆಯುತ್ತಿದ್ದ ಸ್ಥಳದಿಂದ ಕೂಗಳತೆ ದೂರದಲ್ಲಿದ್ದ ತನ್ನ ಅಜ್ಜಿ ಮನೆಗೆ ರಾತ್ರಿ 10 ಗಂಟೆಗೆ ಹೋಗುತ್ತಿದ್ದಳು. ಆಗ ಆರೇಳು ಜನರಿದ್ದ ಕಾಮುಕರ ತಂಡ ಆಕೆಯ ಮೇಲೆ ದಾಳಿ ಮಾಡಿ, ಬಾಯಿಗೆ ಬಟ್ಟೆ ತುರುಕಿ ಪಕ್ಕದ ಪೊದೆಯೊಂದಕ್ಕೆ ಎತ್ತೊಯ್ದಿದಿದೆ. ಅಷ್ಟೇ ಅಲ್ಲದೆ, ಕಾಮುಕರು ಆಕೆಗೆ ತಂಪು ಪಾನಿಯದಲ್ಲಿ ಮದ್ಯ ಬೆರೆಸಿ ಕುಡಿಸಿದ್ದಾರೆ. ಪರಿಣಾಮ ಆಕೆಗೆ ಮದ್ಯದ ಮತ್ತೇರಿದೆ. ಇದೇ ಸಂದರ್ಭ ನೋಡಿ ಯುವಕರು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಘಟನೆ ನಡೆದ ಬಳಿಕ 10.30 ಸುಮಾರಿಗೆ ಬಾಲಕಿ ಕೂಗಾಡಲು ಆರಂಭಿಸಿದ್ದಾಳೆ. ಆಗ ಆಕೆಯ ದೊಡ್ಡಪ್ಪ ಆಕೆಯನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ರಾತ್ರಿ 11.30ರ ಸುಮಾರಿಗೆ ಬಾಲಕಿ ವಾಂತಿ ಮಾಡಿಕೊಂಡಿದ್ದಾಳೆ ಮತ್ತು ತೀವ್ರತರ ಹೊಟ್ಟೆ ನೋವು ಕಾಣಿಸಿಕೊಂಡ ಕೂಡಲೇ ಆ್ಯಂಬುಲೆನ್ಸ್ ಮೂಲಕ ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆ ಸಂದರ್ಭದಲ್ಲಿ ತನ್ನ ಮೇಲಾದ ಸಾಮೂಹಿಕ ಅತ್ಯಾಚಾರದ ಬಗ್ಗೆ ಮಾಹಿತಿ ನೀಡಿದ್ದಾಳೆ. ಬಳಿಕವಷ್ಟೇ ದೊಡ್ಡಬೆಳಮಂಗಲ ಠಾಣೆಗೆ ಬಾಲಕಿಯ ಪೋಷಕರು ದೂರು ನೀಡಿದ್ದಾರೆ. ನಂತರ ಆಕೆಯನ್ನು ವೈದ್ಯಕೀಯ ಪರೀಕ್ಷೆಗಾಗಿ ಬೆಂಗಳೂರು ವಿಕ್ಟೋರಿಯಾ ಆಸ್ಪತ್ರೆಗೆ ಕಳುಹಿಸಲಾಗಿದೆ.
ವೈದ್ಯಕೀಯ ವರದಿ ಆಧರಿಸಿ ಕ್ರಮ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಎಸ್ಪಿ ರಮೇಶ್ ಬಾಂಗೆ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದು, ಬಂಧಿತ ಆರೋಪಿಗಳು ಮತ್ತು ಬಾಲಕಿಯ ವೈದ್ಯಕೀಯ ಪರೀಕ್ಷೆಯ ವರದಿಗಳು ಬಂದ ಮೇಲೆ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಕುರಿ ಮೇಯಿಸಿಕೊಂಡಿದ್ದಳು
ಚಾಮರಾಜನಗರ ತಾಲೂಕಿನ ಕಮರಿವಾಡಿಯ ವಿಧವೆ ತನ್ನ ಸಹೋದರ ಹಾಗೂ ತಮ್ಮ ಜತೆಗೂಡಿ ಕುರಿಗಳನ್ನು ಮೇಯಿಸಿಕೊಂಡು ಭಾನುವಾರ ಸಂಜೆ ಮನೆಗೆ ವಾಪಸ್ಸಾಗುತ್ತಿದ್ದಳು. ಈ ವೇಳೆ ದೇಮಹಳ್ಳಿ ಗ್ರಾಮದ ಸುರೇಸ್, ನಂದ ಹಾಗೂ ದೊರೆಸ್ವಾಮಿ ಎಂಬುವವರು ಬೈಕ್ ಮೇಲೆ ಬಂದು ಆಕೆಯ ಮೇಲೆ ಹಲ್ಲೆ ನಡೆಸಿ, ಅತ್ಯಾಚಾರ ಮಾಡಿದ್ದಾರೆ ಎನ್ನಲಾಗುತ್ತಿದೆ. ಬಳಿಕ ಕತ್ತು ಹಿಸುಕಿ ಕೊಲೆಗೈದು ಕಬಿನಿ ನಾಲೆಯಲ್ಲಿ ಬಿಸಾಕಿದ್ದಾರೆ. ಈ ವೇಳೆ, ತಮ್ಮ ಅಕ್ಕನನ್ನು ಬಿಡಿಸಲು ಮುಂದಾದ ಸಹೋದರ ಹಾಗೂ ಆಕೆಯ ಮಗನ ಮೇಲೂ ಹಲ್ಲೆಗೆ ಮುಂದಾಗಿದ್ದಾರೆ. ನಂತರ ಗ್ರಾಮಸ್ಥರು ಹಾಗೂ ಆಕೆಯ ಸಂಬಂಧಿಕರು ಸೇರಿ ಕುದೇರು ಪೊಲೀಸರಿಗೆ ದೂರು ನೀಡಿದ್ದಾರೆ. ಪೊಲೀಸರು ಮೂವರನ್ನು ತಮ್ಮ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸುತ್ತಿದ್ದಾರೆ.
ದೂರು ಬೇರೆ: ಸಂಶಯಕ್ಕೆ ಕಾರಣ
ಮಗ ಹಾಗೂ ಸಹೋದರನ ಎದುರಿನಲ್ಲಿಯೇ ಮೂವರು ವಿಧವೆ ಮಹಿಳೆ ಮೇಲೆ ಅತ್ಯಾಚಾರ ಎಸಗಿ, ನಂತರ ಆಕೆಯನ್ನು ಕಬಿನಿ ನಾಲೆಗೆ ಬಿಸಾಡಿದ್ದಾರೆ ಎಂಬ ಮಾತು ಸೋಮವಾರ ಬೆಳಗ್ಗೆಯಿಂದ ಎಲ್ಲಡೆ ಹರಡಿತ್ತು. ಆದರೆ, ಪೊಲೀಸರು ಮೃತ ವಿಧವೆ ಸಹೋದರನಿಂದ ಕುರಿ ಮೇಯಿಸಿ ಬೆಳೆ ಹಾನಿ ಮಾಡಿದ್ದರಿಂದ ಮೂವರು ಕೊಲೆ ಮಾಡಿ ಸಾಯಿಸಲಾಗಿದೆ ಎಂದು ದೂರು ಪಡೆದಿರುವುದು ಸಂಶಯಕ್ಕೆಡೆ ಮಾಡಿಕೊಟ್ಟಿದೆ. ಕೊಲೆಯಾದ ವಿಧವೆಯ ಸಹೋದರ ಹಾಗೂ ಮಗ ಇನ್ನೂ ಬಾಲಕರು. ಹೀಗಾಗಿ ವೈದ್ಯಕೀಯ ಪರೀಕ್ಷೆ ಮತ್ತು ನೈಜ ತನಿಖೆಯಿಂದಷ್ಟೇ ಇದು ಕೊಲೆಯೂ ಅಥವಾ ಅತ್ಯಾಚಾರವೂ ಎಂಬುದು ತನಿಖೆಯಿಂದಷ್ಟೇ ಬಯಲಿಗೆ ಬರಬೇಕಿದೆ.
ನಮ್ಮ ತಾಯಿ ಜೊತೆ ನಾವು ಮೂವರು ಕುರಿ ಮೇಯಿಸಿಕೊಂಡು ವಾಪಸ್ ತೆರಳುತ್ತಿದ್ದ ವೇಳೆ ದೇಮಹಳ್ಳಿಯ ಸುರೇಶ್, ನಂದ, ದೊರೆಸ್ವಾಮಿ ಎಂಬುವರು ಬೈಕಿನಲ್ಲಿ ಬಂದು ನಮ್ಮ ತಾಯಿಯನ್ನು ಎಳೆದಾಡಿ ಹಲ್ಲೆಗೈದು, ಕತ್ತು ಹಿಸುಕಿ ಕೊಲೆಗೈದು ನಾಲೆಗೆ ಬಿಸಾಕಿದರು. ಇದಕ್ಕೆ ನಾವು ಪ್ರತಿರೋಧ ವ್ಯಕ್ತಪಡಿಸಿದರಿಂದ ನಮ್ಮನ್ನು ಸಾಯಿಸಲು ಯತ್ನಿಸಿದರು.
- ವಿಧವೆ ಮಹಿಳೆ ಪುತ್ರ
ಕೊಲೆಯಾದ ಯುವತಿ ಆರೋಪಿಗಳ ಜಮೀನಿಗೆ ಕುರಿ ಬಿಟ್ಟು ಮೇಯಿಸುತ್ತಿದ್ದಳು. ಇದರಿಂದ ಕೋಪಗೊಂಡ ಅವರು ನಮ್ಮಕ್ಕನನ್ನು ಕೊಲೆಗೈದು ಕಬಿನಿ ನಾಲೆಗೆ ಎಸೆದಿದ್ದಾರೆ ಎಂದು ಆಕೆಯ ಸಹೋದರ ದೂರು ನೀಡಿದ್ದಾನೆ.
- ಪಿ. ರಾಜೇಂದ್ರ ಪ್ರಸಾದ್
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಚಾಮರಾಜನಗರ