ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಇಂದಿನಿಂದ ಪಂಚಲಿಂಗ ದರ್ಶನ

Mainashree
Updated On : 27 Nov 2013, 10:44 am

 ಕ.ಪ್ರ.ವಾರ್ತೆ  ಮೈಸೂರು  ನ. 27
ಗಂಗರಸರ ರಾಜಧಾನಿಯಾಗಿದ್ದ ಮೈಸೂರು ಜಿಲ್ಲೆ ಟಿ. ನರಸೀಪುರ ತಾಲೂಕಿನ ತಲಕಾಡಿನಲ್ಲಿ ನ.28 ರಿಂದ ಡಿ.7 ರವರೆಗೆ ಪಂಚಲಿಂಗ ದರ್ಶನ ಮಹೋತ್ಸವ ನಡೆಯಲಿದೆ.
ಡಿ.2 ರಂದು ಮಹಾಭಿಷೇಕ, ಬೆಳಗ್ಗೆ 9.30 ರಿಂದ ರಾತ್ರಿ 12 ರವರೆಗೆ ಪಂಚಲಿಂಗ ದರ್ಶನ ನಡೆಯಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಕಂದಾಯ ಸಚಿವ ವಿ. ಶ್ರೀನಿವಾಸಪ್ರಸಾದ್, ಲೋಕೋಪಯೋಗಿ ಸಚಿವ ಡಾ.ಎಚ್.ಸಿ. ಮಹದೇವಪ್ಪ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗವಹಿಸುವರು.
ನಯನ ಮನೋಹರ ದೃಶ್ಯ: ದಕ್ಷಿಣ ಕಾಶಿ, ಗಜಾರಣ್ಯ ಕ್ಷೇತ್ರವೆಂದು ಹೆಸರುವಾಸಿಯಾಗಿರುವ ತಲಕಾಡು ಕ್ಷೇತ್ರವು ಪುರಾಣ, ಇತಿಹಾಸ ಮತ್ತು ನೈಸರ್ಗಿಕ ಸೌಂದರ್ಯಗಳ ಅಪೂರ್ವ ಸಂಗಮ. ಅನೇಕ ರಾಜವಂಶಸ್ಥರು ಆಳಿ, ಬಹುವಿಧದ ಶಿಲ್ಪಕಲಾ ಸೌಂದರ್ಯದಿಂದ ದೇವಾಲಯಗಳ ಕೇಂದ್ರವಾಗಿ ಕನ್ನಡನಾಡಿನ ಇತಿಹಾಸದ ಭವ್ಯ ಪರಂಪರೆ ಜಗತ್ತಿಗೆ ಸಾರುತ್ತಿದೆ. ಈಗ ಇದು ಧಾರ್ಮಿಕ ಕ್ಷೇತ್ರದ ಜೊತೆಗೆ ಅತ್ಯುತ್ತಮ ಪ್ರವಾಸಿತಾಣವಾಗಿ ರೂಪುಗೊಂಡಿದೆ. ನಾಲ್ಕು ದಿಕ್ಕುಗಳಲ್ಲಿಯೂ ಹರಿಯುವ ಕಾವೇರಿ ನದಿ, ಅಲ್ಲಲ್ಲಿ ಉದ್ಭವಿಸಿರುವ ಮರುಳು ಗುಡ್ಡೆಗಳು, ಸೊಂಪಾಗಿ ಬೆಳೆದು ಕಂಗೊಳಿಸುವ ತೋಪುಗಳು, ಪೈರು, ಪಚ್ಚೆಯಿಂದ ಆವೃತವಾದ ವಿಶಾಲವಾದ ಹಸಿರು ಪ್ರದೇಶಗಳ ನಿಸರ್ಗ ರಮಣೀಯತೆ ನಯನ ಮನೋಹರ ದೃಶ್ಯಗಳಿಂದ ಕೂಡಿದೆ.
ತಲಕಾಡು ಪಂಚಲಿಂಗ ದರ್ಶನದಿಂದ ಪ್ರಖ್ಯಾತಿ ಪಡೆದಿದೆ. ವೈದ್ಯನಾಥೇಶ್ವರ, ಪಾತಾಳೇಶ್ವರ, ಮರಳೇಶ್ವರ, ಮಲ್ಲಿಕಾರ್ಜುನಸ್ವಾಮಿ, ಅರ್ಕೇಶ್ವರ ದೇವಾಲಯಗಳಲ್ಲಿ ಪಂಚಲಿಂಗ ದರ್ಶನವಾಗುತ್ತದೆ. ಸಾಮಾನ್ಯವಾಗಿ ಪ್ರತಿ 13 ವರ್ಷಗಳಿಗೊಮ್ಮೆ ಪಂಚಲಿಂಗ ದರ್ಶನ ನಡೆಯುತ್ತದೆ. ಆದರೆ ಕಾರ್ತಿಕ ಮಾಸದಲ್ಲಿ ಐದು ಸೋಮವಾರಗಳು ಬಂದು, ಕಡೆಯ ಕಾರ್ತಿಕ ಸೋಮವಾರದಂದು ಅಮವಾಸ್ಯೆ ಬಂದಲ್ಲಿ 3 ವರ್ಷಗಳಿಗೆ ಪಂಚಲಿಂಗದರ್ಶನ ಬರಬಹುದು. ಕೆಲವೊಮ್ಮೆ ನಾಲ್ಕು, ಏಳು ವರ್ಷಗಳಿಗೂ ಬರುತ್ತದೆ.
ಮಾಲಂಗಿ ಮಡುವಾಗಿ....: ಮಾಲಂಗಿ ಮಡುವಾಗಿ, ತಲಕಾಡು ಮರಳಾಗಿ ಮೈಸೂರು ಅರಸರಿಗೆ ಮಕ್ಕಳಾಗದಿರಲಿ ಎಂದು ಅಲಮೇಲಮ್ಮ ಶಾಪ ನೀಡಿದ್ದು ಇತಿಹಾಸ. ಅದು ನಿಜವೋ ಎಂಬಂತೆ ತಲಕಾಡು ಮರಳೂರು ಆಗಿದೆ. ಕಣ್ಣು ಹಾಯಿಸಿದಷ್ಟು ದೂರ ಒಂದೆಡೆ ಮರಳು ರಾಶಿ ಹಾಗೂ ಮತ್ತೊಂದೆಡೆ ಜಲರಾಶಿ. ತೆಗೆದಷ್ಟು ಮರಳು ತುಂಬುತ್ತಲೇ ಇರುತ್ತದೆ. ಪಂಚಲಿಂಗ ದರ್ಶನದ ಸಂದರ್ಭದಲ್ಲಿ ಪಾತೇಳ್ವರ, ವೈದ್ಯನಾಥೇಶ್ವರ ದೇವಾಲಯಗಳಲ್ಲಿ ಮರಳನ್ನು ತೆಗೆದು, ಪೂಜೆಗೆ ಅಣಿಗೊಳಿಸಬೇಕಾದ ಪರಿಸ್ಥಿತಿ ಇರುತ್ತದೆ.
ಮುಖ್ಯಮಂತ್ರಿಗಳು ಭಾಗಿ: ಇತ್ತೀಚಿನ ವರ್ಷಗಳಲ್ಲಿ ಪಂಚಲಿಂಗ ದರ್ಶನ ಕೂಡ ಪ್ರಮುಖ ಧಾರ್ಮಿಕ ಉತ್ಸವ ಎನಿಸಿಕೊಂಡಿದೆ. ಟಿ. ನರಸೀಪುರದ ತಿರುಮಕೂಡಲಿನಲ್ಲಿ  1989 ರಿಂದ ಪ್ರತಿ ಮೂರು ವರ್ಷಗಳಿಗೊಮ್ಮೆ ಮಹಾಕುಂಭಮೇಳ ಜರುಗುತ್ತದೆ. ಅದರಲ್ಲಿಯೂ ಕೂಡ ಮುಖ್ಯಮಂತ್ರಿ ಭಾಗವಹಿಸುತ್ತಿದ್ದಾರೆ. ಅದೇ ರೀತಿ ಪಂಚಲಿಂಗ ದರ್ಶನದಲ್ಲೂ ಮುಖ್ಯಮಂತ್ರಿ ಭಾಗವಹಿಸುತ್ತಿದ್ದಾರೆ.
1993 ರಲ್ಲಿ ಎಂ. ವೀರಪ್ಪಮೊಯ್ಲಿ, 2006 ರಲ್ಲಿ ಎಚ್.ಡಿ. ಕುಮಾರಸ್ವಾಮಿ, 2009 ರಲ್ಲಿ ಬಿ.ಎಸ್. ಯಡಿಯೂರಪ್ಪ ಪಂಚಲಿಂಗ ದರ್ಶನದಲ್ಲಿ ಭಾಗವಹಿಸಿದ್ದರು. ಈ ಬಾರಿ ಜಿಲ್ಲೆಯವರೇ ಆದ ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿ ಭಾಗವಹಿಸುತ್ತಿರುವುದು ವಿಶೇಷ. ಸಿದ್ದರಾಮಯ್ಯ ಅವರು ಪ್ರತಿನಿಧಿಸುತ್ತಿರುವ ವರುಣ ಕ್ಷೇತ್ರ ಟಿ. ನರಸೀಪುರ ಕ್ಷೇತ್ರದ ಪಕ್ಕದಲ್ಲಿಯೇ ಬರುತ್ತದೆ.
ಈ ಬಾರಿಯ ಕಾರ್ಯಕ್ರಮಗಳೇನು?
ನ. 28        ಅಂಕುರಾರ್ಪಣ ಪಂಚಲಿಂಗದರ್ಶನ ಪ್ರಯುಕ್ತ ನವ ಕಲಶಸ್ನಪನ ಯಾಗಶಾಲಾ ಪ್ರವೇಶ
ನ. 29        ಧ್ವಜಾರೋಹಣ, ರಕ್ಷಾಬಂಧನ, ರಾಜಬಲಿ ಪ್ರಧಾನ
ನ. 30        ಪುಷ್ಪಮಂಟಪಾರೋಹಣ
ಡಿ. 1          ವೃಷಭವಾಹನೋತ್ಸವ
ಡಿ. 2         ಬೆಳಗ್ಗೆ 9.30 ರಿಂದ ರಾತ್ರಿ 12 ರವರೆಗೆ ಮದ್ದಿವ್ಯ ಪಂಚಲಿಂಗ ದರ್ಶನ, ರಾತ್ರಿ ಗಜಾರೋಹಣ
ಡಿ. 3          ಶ್ರೀಮದ್ದಿವ್ಯ ಬ್ರಹ್ಮರಥೋತ್ಸವ, ನಟೇಶೋತ್ಸವ, ಹಂಸವಾಹನೋತ್ಸವ
ಡಿ. 4          ಶಯನೋತ್ಸವ, ಅಶ್ವಾರೋಹಣ, ಮಹಾಭೂತಾರೋಹಣ, ಪೂರ್ವಕ ಮೃಗಯಾತ್ರೋತ್ಸವ
ಡಿ. 5          ಅವಭೃತತೀರ್ಥಸ್ನಾನ, ತೆಪ್ಪೋತ್ಸವ, ಧ್ವಜಾರೋಹಣ
ಡಿ. 6          ಮಹಾಭಿಷೇಕ, ಮಹಾಸ್ನಪನ ಪಂಚೋಪಚಾರ
ಡಿ. 7          ನಂದೀವಾಹನೋತ್ಸವ.

ಮೂಲ ಸೌಕರ್ಯಕ್ಕೆ 57 ಕೋಟಿ
2006ರಲ್ಲಿ ಎಚ್.ಡಿ. ಕುಮಾರಸ್ವಾಮಿ ಅವಧಿಯಲ್ಲಿ ಜೆ. ಸುನೀತಾವೀರಪ್ಪಗೌಡ ಬನ್ನೂರು ಕ್ಷೇತ್ರದ ಶಾಸಕಿಯಾಗಿದ್ದಾಗ ತಲಕಾಡಿಗೆ ಉತ್ತಮ ರಸ್ತೆ ಸೌಲಭ್ಯ ಕಲ್ಪಿಸುವ ಯತ್ನ ಆರಂಭವಾಯಿತು. 2009 ರಲ್ಲಿ ಪಂಚಲಿಂಗ ದರ್ಶನ ನಡೆದಾಗ ಆಗಿನ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವೆ ಶೋಭಾ ಕರಂದ್ಲಾಜೆ ತಲಕಾಡಿಗೆ ಉತ್ತಮ ರಸ್ತೆ ಸಂಪರ್ಕ ಕಲ್ಪಿಸಲು ಸಫಲರಾದರು. ಈ ಬಾರಿ ಟಿ. ನರಸೀಪುರ ಶಾಸಕ ಡಾ.ಎಚ್.ಸಿ. ಮಹದೇವಪ್ಪ  ಸಚಿವರಾಗಿರುವುದರಿಂದ ಪಂಚಲಿಂಗ ದರ್ಶನದ ನೆಪದಲ್ಲಿ ತಲಕಾಡು ಸುತ್ತಮುತ್ತಲಿನ ಪ್ರದೇಶಗಳಿಗೆ ಶಾಶ್ವತ ಮೂಲಭೂತ ಸೌಕರ್ಯ ಕಲ್ಪಿಸುವ ಕಾಮಗಾರಿಗಳಿಗೆ ರು. 57 ಕೋಟಿ  ಒದಗಿಸಿದ್ದಾರೆ.
ತಾತ್ಕಾಲಿಕ ಶೆಡ್‌ಗಳ ನಿರ್ಮಾಣ: ಪಂಚಲಿಂಗ ದರ್ಶನಕ್ಕೆ ಲಕ್ಷಾಂತರ ಮಂದಿ ಆಗಮಿಸುವುದರಿಂದ ಕುಡಿಯುವ ನೀರು, ಶೌಚಾಲಯ, ವಾಹನ ನಿಲುಗಡೆ, ತಾತ್ಕಾಲಿಕ ಶೆಡ್‌ಗಳ ನಿರ್ಮಾಣ, ಸ್ನಾನಘಟ್ಟಗಳ ನಿರ್ಮಾಣ, ತಲಕಾಡು- ಮಾಲಂಗಿ ನಡುವೆ ಕಾವೇರಿ ನದಿಗೆ ಅಡ್ಡಲಾಗಿ ತಾತ್ಕಾಲಿಕ ಸೇತುವೆ ನಿರ್ಮಾಣ ಕಾಮಗಾರಿಗಳು ನಡೆದಿವೆ. ತಾತ್ಕಾಲಿಕ ಸೇತುವೆ ನಿರ್ಮಾಣ ಕಾರ್ಯದಲ್ಲಿ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ ಸಿಬ್ಬಂದಿ ಶ್ರಮಿಸಿದ್ದಾರೆ. ಪಂಚಲಿಂಗದರ್ಶನ ಅಂಗವಾಗಿ ತಾತ್ಕಾಲಿಕವಾಗಿ ಮರಳುಗಾರಿಕೆಗೆ ನಿರ್ಬಂಧ ವಿಧಿಸಲಾಗಿದೆ. ಮೈಸೂರು, ಟಿ, ನರಸೀಪುರ, ಬನ್ನೂರು, ಮಳವಳ್ಳಿ, ಮದ್ದೂರು, ಕೊಳ್ಳೇಗಾಲ ಮೊದಲಾದ ಕಡೆಯಿಂದ ವಿಶೇಷ ಬಸ್ಸುಗಳ ಸಂಚಾರ ಇರುತ್ತದೆ. ಪೊಲೀಸರು ಬಿಗಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

ಅಂಶಿ ಪ್ರಸನ್ನಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement