ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕಬ್ಬು ಬೆಳೆಗಾರರ ನೋವು ಕೇಳುವಲ್ಲಿ ವಿಳಂಬ, ರೈತ ಆತ್ಮಹತ್ಯೆ

ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಅನುಸರಿಸಿದ ವಿಳಂಬ ಧೋರಣೆ ಒಬ್ಬ ರೈತನನ್ನು ಬಲಿ ತೆಗೆದುಕೊಂಡಿದೆ...

Mainashree
Updated On : 28 Nov 2013, 10:16 am

-ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರದ ಪಾಲಿಗೆ ಕಹಿಯಾದ ಕಬ್ಬು
ಕಬ್ಬು ಸಮಸ್ಯೆಗೆ ಪರಿಹಾರ ಸಿಗದ ಹಿನ್ನೆಲೆಯಲ್ಲಿ ರೈತರೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಇದಕ್ಕೆ ಸರ್ಕಾರದ ವಿಳಂಬ ನೀತಿಯೇ ಕಾರಣ ಎಂಬ ಆರೋಪ ಕೂಡ ಕೇಳಿಬಂದಿದೆ. ಸರ್ಕಾರದ ವಿರುದ್ಧ ಆಕ್ರೋಶಗೊಂಡಿದ್ದ ವಿಠಲ ಭೀಮಪ್ಪ ಅರಭಾವಿ ಎಂಬ ರೈತ ಸುವರ್ಣ ಸೌಧದ ಮುಂದೆಯೇ ವಿಷ ಸೇವಿಸಿ ಪ್ರಾಣ ತ್ಯಜಿಸಿದ್ದಾರೆ. ಆತ್ಮಹತ್ಯೆ ಹಿನ್ನೆಲೆಯಲ್ಲಿ ರೊಚ್ಚಿಗೆದ್ದ ರೈತರು ಬೆಳಗಾವಿ ಸುತ್ತಮುತ್ತಲ ಗ್ರಾಮಗಳಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇತ್ತ ಸದನದಲ್ಲೂ ಪ್ರತಿಪಕ್ಷ ನಾಯಕರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಮುಖ್ಯಮಂತ್ರಿ ಮತ್ತು ಸಕ್ಕರೆ ಸಚಿವರ ರಾಜಿನಾಮೆಗೆ ಒತ್ತಾಯಿಸಿದ್ದಾರೆ.


ಸುವರ್ಣ ವಿಧಾನಸೌಧ: ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಬಗೆಹರಿಸಲು ಸರ್ಕಾರ ಅನುಸರಿಸಿದ ವಿಳಂಬ ಧೋರಣೆ ಒಬ್ಬ ರೈತನನ್ನು ಬಲಿ ತೆಗೆದುಕೊಂಡಿದೆ.
ಸಮಸ್ಯೆಗೆ ಪರಿಹಾರ ಹುಡುಕುವಂತೆ ಕಳೆದ ನಾಲ್ಕು ತಿಂಗಳಿನಿಂದ ಬೆಳೆಗಾರರು ಬೊಬ್ಬೆ ಇಡುತ್ತಿದ್ದರೂ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ. ಇತ್ತೀಚೆಗೆ ಕಬ್ಬಿಗೆ ಬೆಂಬಲ ಬೆಲೆ ನಿಗದಿಯಾದರೂ ಬೆಳೆಗಾರರು ಕೇಳಿದಷ್ಟು ಕೊಡಲಿಲ್ಲ. ಈ ಮಧ್ಯೆ ಹೋರಾಟದ ಕಾವು ಸಹ ಕಡಿಮೆ ಆಗಲಿಲ್ಲ. ಇವೆಲ್ಲದರ ನಡುವೆ ಸಕ್ಕರೆ ಲಾಬಿ ಬೆಳೆಗಾರರೊಬ್ಬರ ಜೀವವನ್ನೇ ಬಲಿ ತೆಗೆದುಕೊಂಡಿದೆ.
ಸುವರ್ಣ ವಿಧಾನಸೌಧದಲ್ಲಿ ಬುಧವಾರ ವಿಧಾನ ಮಂಡಲ ಕಲಾಪ ನಡೆಯುತ್ತಿದ್ದರೆ ಹೊರಗೆ ಧರಣಿ ನಡೆಸುತ್ತಿದ್ದ ಕಬ್ಬು ಬೆಳೆಗಾರರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬೆಳಗಾವಿ ಜಿಲ್ಲೆ ರಾಯಭಾಗ ತಾಲೂಕಿನ ಕಂಕಣವಾಡಿ ಗ್ರಾಮದ ವಿಠಲ ಭೀಮಪ್ಪ ಅರಭಾವಿ (60) ಆತ್ಮಹತ್ಯೆ ಮಾಡಿಕೊಂಡ ರೈತ. ಧರಣಿ ನಡೆಯುತ್ತಿದ್ದ ಜಾಗದಲ್ಲಿ ವಿಷ ಸೇವಿಸಿದ ಆತನನ್ನು ಅಲ್ಲಿಯೇ ಇದ್ದ ಜೀನಗೌಡ ಆಸ್ಪತ್ರೆಗೆ ಸಾಗಿಸಲಾಯಿತು. ಪ್ರಥಮ ಚಿಕಿತ್ಸೆ ನಂತರ ಕೆಎಲ್‌ಇ ಆಸ್ಪತ್ರೆಗೆ ಕೊಂಡಯ್ಯಲಾಯಿತು. ಆದರೆ ವಿಠಲ ಭೀಮಪ್ಪ ಅರಭಾವಿ ಮಾರ್ಗ ಮಧ್ಯೆ ಕೊನೆಯುಸಿರೆಳೆದರು.
ಸರ್ಕಾರಕ್ಕೆ ಕಹಿಯಾದ ಕಬ್ಬು: ರೈತನ ಸಾವು ವಿಧಾನ ಮಂಡಲ ಅಧಿವೇಶನ ಕಲಾಪದ ದಿಕ್ಕನ್ನೇ ಬದಲಿಸಿ ಸರ್ಕಾರದ ಪಾಲಿಗೆ ಕಬ್ಬು ಕಹಿಯಾಗಿ ಪರಿಣಮಿಸಿತು. ಕಳೆದ ಮೂರು ದಿನಗಳಿಂದ ಉಭಯ ಸದನ ಕಲಾಪ ಅಚ್ಚುಕಟ್ಟಾಗಿ ನಡೆಯುತ್ತಿತ್ತು. ಆದರೆ, ಕಬ್ಬು ಬೆಳೆಗಾರನ ಆತ್ಮಹತ್ಯೆ ಸರ್ಕಾರದ ಪಾಲಿಗೆ ಕಪ್ಪುಚುಕ್ಕೆಯಾಗಿ ಪರಿವರ್ತನೆ ಆಯಿತು. ರೈತನ ಆತ್ಮಹತ್ಯೆಯ ನೆರಳು ಅಧಿವೇಶನದ ಮೇಲೆ ಬಿದ್ದ ಪರಿಣಾಮ ಉಭಯ ಸದನಗಳಲ್ಲಿ ಭಾರಿ ಕೋಲಾಹಲ ಉಂಟಾಗಿ ಕಲಾಪವನ್ನು ಗುರುವಾರಕ್ಕೆ ಮುಂದೂಡಬೇಕಾಯಿತು.                   

ರೈತನ ಆತ್ಮಹತ್ಯೆ ಸುದ್ದಿ ತಿಳಿಯುತ್ತಿದ್ದಂತೆ ಭೋಜನ ವಿರಾಮದ ಬಳಿಕ ಸದನ ಸಮಾವೇಶಗೊಂಡಾಗ ಪ್ರತಿಪಕ್ಷಗಳು ಒಟ್ಟಾಗಿ ಸರ್ಕಾರದ ಮೇಲೆ ಮುಗಿಬಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸಕ್ಕರೆ ಸಚಿವ ಪ್ರಕಾಶ ಹುಕ್ಕೇರಿ ಅವರ ರಾಜಿನಾಮೆಗೆ ಆಗ್ರಹಿಸಿದವು. ಕೋಲಾಹಲದ ನಡುವೆಯೂ ಸಿದ್ದರಾಮಯ್ಯ ಅವರು ಆತ್ಮಹತ್ಯೆ ಮಾಡಿಕೊಂಡ ರೈತನ ಕುಟುಂಬಕ್ಕೆ 10 ಲಕ್ಷ ಪರಿಹಾರ ಘೋಷಣೆ ಮಾಡಿದರು. ಕಬ್ಬಿಗೆ ಸರ್ಕಾರ 150 ಬೆಂಬಲ ಬೆಲೆ ನೀಡಲಿದೆ ಎಂದರು. ಇದಕ್ಕೆ ಕಿವಿಗೊಡದ ಪ್ರತಿಪಕ್ಷಗಳು ಉಭಯ ಸದನಗಳಲ್ಲಿ ಧರಣಿ ಮುಂದುವರಿಸಿದವರು. ಪರಿಣಾಮ ಕಲಾಪ ಮುಂದಕ್ಕೆ ಹೋಯಿತು.
ಏನಾಯಿತು?
ಬುಧವಾರ ಬೆಳಗ್ಗೆ ಎಂದಿನಂತೆ ವಿಧಾನ ಮಂಡಲದ ಉಭಯ ಸದನ ಕಲಾಪ ಆರಂಭವಾಗಿ ಪ್ರಶ್ನೋತ್ತರಕ್ಕೆ ಚಾಲನೆ ನೀಡಲಾಯಿತು. ವಿಧಾನಸಭೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಧರಣಿ ಮುಂದುವರಿದಿತ್ತು. ಈ ಮಧ್ಯೆ ಶಾದಿಭಾಗ್ಯ ವಿಚಾರ ಚರ್ಚೆಯಾಗಿ ಗದ್ದಲದ ವಾತಾವರಣ ನಿರ್ಮಾಣ ಆಯಿತು. ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಸದನವನ್ನು ಸರಿದಾರಿಗೆ ತರಲು ಹರಸಾಹಸ ಮಾಡಿದರು. ಅದರಲ್ಲಿ ಅವರು ಯಶಸ್ವಿಯೂ ಆದರು. ಭೋಜನ ವಿರಾಮದವರೆಗೆ ಎಲ್ಲವೂ ಸರಿಯಾಗಿಯೇ ನಡೆದಿತ್ತು. ಭೋಜನ ವಿರಾಮದ ನಂತರ ಶಾದಿಭಾಗ್ಯ ಯೋಜನೆ ಕುರಿತು ಚರ್ಚೆ ಶುರುವಾಗಬೇಕಿತ್ತು. ಬಳಿಕ ಕಬ್ಬು ಬೆಳೆಗಾರರ ಸಮಸ್ಯೆ ಕುರಿತು ನಡೆದ ಚರ್ಚೆಗೆ ಮುಖ್ಯಮಂತ್ರಿಯವರು ಉತ್ತರಿಸಬೇಕಿತ್ತು. ಆದರೆ, ಅಲ್ಲಿ ಆಗಿದ್ದೇ ಬೇರೆ.

ಸರ್ಕಾರವಾಗಲಿ, ಪ್ರತಿಪಕ್ಷವಾಗಲಿ ರೈತನ ಆತ್ಮಹತ್ಯೆ ವಿಚಾರದಲ್ಲಿ ರಾಜಕಾರಣ ಮಾಡುವುದು ಸರಿಯಲ್ಲ. ಪ್ರಜಾಪ್ರಭುತ್ವದಲ್ಲಿ ಧರಣಿ ಎನ್ನುವುದು ಕೊನೆಯ ಅಸ್ತ್ರ. ಮೃತ ರೈತನಿಗೆ ಸರ್ಕಾರದಿಂದ 10 ಲಕ್ಷ ಪರಿಹಾರ ನೀಡಿದ ಕೂಡಲೇ ಉಳಿದ ಲಕ್ಷಾಂತರ ರೈತರಿಗೆ ಅನುಕೂಲವಾಗುವುದಿಲ್ಲ. ಆದ್ದರಿಂದ ಈ ಬಗ್ಗೆ ಸದನದಲ್ಲಿ ಚರ್ಚಿಸಿ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು.
-  ಎಚ್.ಡಿ. ಕುಮಾರಸ್ವಾಮಿ ವಿಧಾನಸಭೆ ಪ್ರತಿಪಕ್ಷ ನಾಯಕ

ಇಂಥ ದುರ್ಘಟನೆ ನಡೆಯಬಾರದಿತ್ತು. ಆದರೂ ಆಗಿದೆ. ನಿಜಕ್ಕೂ ಇದು ದುರದೃಷ್ಟಕರ. ಕಬ್ಬು ಬೆಳೆಗಾರರ ಹಿತ ಕಾಯಲು ಬದ್ಧ ಎಂದು ಸರ್ಕಾರ ಮೊದಲಿನಿಂದಲೂ ಹೇಳುತ್ತಿದೆ. ರೈತನ ಆತ್ಮಹತ್ಯೆಗೆ ಸರ್ಕಾರ ಕಾರಣವಲ್ಲ. ಕಬ್ಬು ಮಾತ್ರವಲ್ಲ, ರೈತರು ಬೆಳೆದ ಯಾವುದೇ ಉತ್ಪನ್ನಗಳ ಬೆಲೆ ಬಿದ್ದು ಹೋದರೆ ಅವರ ಹಿತರಕ್ಷಣೆಗೆ ಸರ್ಕಾರ ಬದ್ಧವಾಗಿದೆ.
- ಸಿದ್ದರಾಮಯ್ಯ, ಮುಖ್ಯಮಂತ್ರಿ

ಕಬ್ಬು ಬೆಳೆಗಾರರ ಸಮಸ್ಯೆಯನ್ನು ಮುಖ್ಯಮಂತ್ರಿಗಳು ಜವಾಬ್ದಾರಿಯಿಂದ ನಿರ್ವಹಿಸದ ಪರಿಣಾಮ ಇಂದು ರೈತ ಆತ್ಮಹತ್ಯೆ ಮಾಡಿಕೊಳ್ಳಬೇಕಾದ ಪರಿಸ್ಥಿತಿ ಬಂತು. ಈ ಪ್ರಕರಣಕ್ಕೆ ಸಂಬಂಧ ಮುಖ್ಯಮಂತ್ರಿ ಹಾಗೂ ಸಕ್ಕರೆ ಸಚಿವರು ರಾಜಿನಾಮೆ ನೀಡಲೇಬೇಕು.
-  ಜಗದೀಶ ಶೆಟ್ಟರ್

ರೈತ ಆತ್ಮಹತ್ಯೆ ಮಾಡಿಕೊಂಡ ಬಳಿಕ ಪರಿಹಾರ ಘೋಷಿಸಿ ಆತನ ಬಗ್ಗೆ ಮಾತನಾಡಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನೈತಿಕ ಹಕ್ಕಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜಿನಾಮೆ ನೀಡುವವರೆಗೆ ಕಲಾಪ ನಡೆಸಲು ಬಿಡುವುದಿಲ್ಲ.
-  ಯಡಿಯೂರಪ್ಪ


ಆತ್ಮಹತ್ಯೆಗೂ ಮುನ್ನ ವಿಠಲ್ ಹೇಳಿದ್ದು
ರೈತ ಜಾತಿ ಮರೆಯಬೇಡಿ

ಬೆಳಗಾವಿ: 'ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ನಿಮ್ಮ ಹಾಗೂ ನನ್ನ ಜಾತಿ ಒಂದೇ. ಆದರೆ, ನೀವು ರೈತ ಜಾತಿಯನ್ನು ಮರೆಯುವ ಮೂಲಕ ಕೆಟ್ಟ ಕೆಲಸ ಮಾಡುತ್ತಿದ್ದೀರಿ!' - ಸುವರ್ಣ ವಿಧಾನಸೌಧದ ಎದುರು ಕಬ್ಬಿಗೆ ಯೋಗ್ಯ ದರ ನೀಡುವಂತೆ ಆಗ್ರಹಿಸಿ ರೈತರು ಹೋರಾಟ ನಡೆಸುತ್ತಿರುವ ಸ್ಥಳದಲ್ಲಿ ರೈತರನ್ನುದ್ದೇಶಿಸಿ ರೈತ ವಿಠಲ ಅರಬಾವಿ ಆತ್ಮಹತ್ಯೆಗೆ ಮುನ್ನ ಮಾಡಿದ ಭಾಷಣ ಇದು.
ಕಬ್ಬಿನ ರೈತರು ತೀವ್ರ ಸಂಕಷ್ಟದಲ್ಲಿದ್ದು, ಪ್ರತಿಭಟನೆ ಮಾಡುತ್ತಿದ್ದರೂ ಸರ್ಕಾರ ಕಣ್ತೆರೆದು ನೋಡುತ್ತಿಲ್ಲ. ಸೌಜನ್ಯಕ್ಕೆ ರೈತರನ್ನು ಭೇಟಿಯಾಗಿ ಸಮಸ್ಯೆ ಆಲಿಸಿಲ್ಲ ಎಂದು ಮುಖ್ಯಮಂತ್ರಿ ವಿರುದ್ಧವೇ ವಾಗ್ದಾಳಿ ನಡೆಸಿದ್ದರು. ಮುಖ್ಯಮಂತ್ರಿಗಳೇ ರೈತ ಜಾತಿಯನ್ನು ಮರೆಯಬೇಡಿ ಎಂದಿದ್ದರು. ಒಂದು ಹಂತದಲ್ಲಿ ಸಹನೆ ಕಳೆದುಕೊಂಡು ಮಾತನಾಡುತ್ತಿರುವುದನ್ನು ಗಮನಿಸಿದ ಟಿ.ಟಿ. ಮುರಕಟ್ನಾಳ ಅವರು ವಿಠಲ್ ಅವರಿಂದ ಮೈಕ್ ಪಡೆದು ಸಮಾಧಾನಪಡಿಸಿದ್ದರು. ಇದಾದ ಕೊಂಚ ಹೊತ್ತಿನ ನಂತರವೇ ವಿಠಲ್ ಅರಬಾವಿ ತಮ್ಮೊಂದಿಗೆ ಬಾಟಲಿಯಲ್ಲಿ ತಂದಿದ್ದ ವಿಷ ಸೇವಿಸಿದ್ದು.

ಕಲಾಪದಲ್ಲಿ ಕೋಲಾಹಲ
ಇತ್ತ ಸುವರ್ಣ ವಿಧಾನಸೌಧದಲ್ಲಿ ಭೋಜನ ವಿರಾಮದ ಬಳಿಕ ಮಧ್ಯಾಹ್ನ 3 ಗಂಟೆಗೆ ಕಲಾಪ ಆರಂಭವಾಗಬೇಕಿತ್ತು. ಆದರೆ, ರೈತನ ಆತ್ಮಹತ್ಯೆ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸಚಿವರು, ಅಧಿಕಾರಿಗಳ ತುರ್ತು ಸಭೆ ಕರೆದರು. ಬಳಿಕ 4.30ರ ಸುಮಾರಿಗೆ ಸದನ ಸಮಾವೇಶಗೊಂಡು ವಿಧಾನಸಭೆಯಲ್ಲಿ ಸಿದ್ದರಾಮಯ್ಯ ವಿವರಣೆ ನೀಡಲು ಮುಂದಾದರು. ಅವರು ಪರಿಹಾರ ಘೋಷಿಸುತ್ತಿದ್ದಂತೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಭಾಧ್ಯಕ್ಷರ ಪೀಠದ ಮುಂದಿನ ಆವರಣಕ್ಕೆ ನುಗ್ಗಿ ಸಿದ್ದರಾಮಯ್ಯ ಅವರೊಂದಿಗೆ ವಾಗ್ವಾದಕ್ಕೆ ಇಳಿದರು. ಬಿಜೆಪಿ ಸದಸ್ಯರೂ ಅವರ ಜತೆಗೂಡಿದರು. ಇದರಿಂದ ಕೋಲಾಹಲದ ವಾತಾವರಣ ಉಂಟಾಗಿ ಕಲಾಪ ಮುಂದೂಡಲಾಯಿತು. ವಿಧಾನ ಪರಿಷತ್ತಿನಲ್ಲೂ ಇದೇ ಪರಿಸ್ಥಿತಿ. ಅಲ್ಲಿ ಡೀವಿ ನೇತೃತ್ವದಲ್ಲಿ ಪ್ರತಿಪಕ್ಷ ಸದಸ್ಯರು ಧರಣಿ ನಡೆಸಿದರು. ಮುಖ್ಯಮಂತ್ರಿ ಮತ್ತು ಸಕ್ಕರೆ ಸಚಿವರ ರಾಜಿನಾಮೆಗೆ ಆಗ್ರಹಿಸಿದರು. ಅಲ್ಲಿಯೂ ಗದ್ದಲ ಉಂಟಾದ ಕಾರಣ ಕಲಾಪ ಮುಂದಕ್ಕೆ ಹೋಯಿತು.  

ಜೀವಬಿಟ್ಟ ರೈತ ಯಾರು?
ವಿಠಲ ಭೀಮಪ್ಪ ಅರಭಾವಿ ಸತತ 15 ವರ್ಷಗಳಿಂದ ಹೋರಾಟದಲ್ಲಿ ತೊಡಗಿದ್ದರು. ಕಂಕಣವಾಡಿ ಗ್ರಾಮದದಲ್ಲಿ 2 ಎಕರೆ ಜಮೀನು ಹೊಂದಿರುವ ವಿಠಲ ಭೀಮಪ್ಪ ಅರಭಾವಿ ಈ ಬಾರಿ 120 ಟನ್ ಕಬ್ಬು ಬೆಳೆದಿದ್ದರು. ಈ ಕಬ್ಬನ್ನು ಅವರು ಮುಧೋಳ ತಾಲೂಕಿನ ನಿರಾಣಿ ಶುಗರ್ಸ್‌ಗೆ ಕಳುಹಿಸಿದ್ದರು. ಕಾರ್ಖಾನೆ ಮಾಲೀಕರು ಟನ್‌ಗೆ 2 ಸಾವಿರ ನಿಗದಿ ಮಾಡಿದ್ದರು. ಇನ್ನೂ 500 ಬೇಕು ಎಂದು ವಿಠಲ ಭೀಮಪ್ಪ ಅರಭಾವಿ ಒತ್ತಾಯಿಸುತ್ತಿದ್ದರು. ಅವರಿಗೆ 1.93 ಲಕ್ಷ ಪಾವತಿಯಾಗಿತ್ತು. ಇನ್ನೂ ಹಣ ಬಾಕಿ ಇತ್ತು. ಈ ಮಧ್ಯೆ ಪಕ್ಕದ ಜಮೀನಿನ ಮಾಲೀಕ ಅಪ್ಪಣ್ಣ ಹಿರೇಮಠ ತಮ್ಮ ಪಾಲಿನ ಹಣಕ್ಕೆ ಒತ್ತಡ ಹೇರುತ್ತಿದ್ದರು. ಇದರಿಂದ ವಿಠಲ ಭೀಮಪ್ಪ ಅರಭಾವಿ ಮಾನಸಿಕವಾಗಿ ಕುಗ್ಗಿದ್ದರು.

ವಿಷ ಸೇವಿಸಿದ್ದೇನೆ ಎಂದ ರೈತ
ಅತ್ತ ಕಲಾಪ ನಡೆಯುತ್ತಿದ್ದರೆ ಇತ್ತ ಸುವರ್ಣ ಸೌಧದ ಎದುರೇ ಕಬ್ಬು ಬೆಳೆಗಾರರು ಧರಣಿ ನಡೆಸುತ್ತಿದ್ದರು. ಈ ಧರಣಿಯಲ್ಲಿ ವಿಠಲ ಭೀಮಪ್ಪ ಅರಭಾವಿ ಸಹ ಭಾಗಿಯಾಗಿದ್ದರು. ಧರಣಿ ನಡುವೆಯೇ ಅವರು ಪಕ್ಕಕ್ಕೆ ಹೋಗಿ ವಿಷ ಸೇವನೆ ಮಾಡಿದರು. ಬಳಿಕ ತಾವು ವಿಷ ಸೇವಿಸಿರುವ ವಿಷಯವನ್ನು ಎಲ್ಲರಿಗೂ ತಿಳಿಸಿದರು. ತಕ್ಷಣ ಅವರನ್ನು ಧರಣಿ ನಡೆಯುತ್ತಿದ್ದ ಜಾಗದಿಂದ ಕೂಗಳತೆ ದೂರದಲ್ಲಿರುವ ಜೀನಗೌಡ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಕೆಎಲ್‌ಇ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ, ವಿಠಲ ಭೀಮಪ್ಪ ಅರಬಾವಿ ಮಾರ್ಗ ಮಧ್ಯೆಯೇ ಅಸುನೀಗಿದರು.

ಮೃತದೇಹ ಸ್ವಗ್ರಾಮಕ್ಕೆ ರವಾನೆ
ಪರಿಸ್ಥಿತಿ ಕೈ ಮೀರುವ ಸುಳಿವು ಸಿಗುತ್ತಿದ್ದಂತೆ ಪೊಲೀಸ್ ಬಂದೋಬಸ್ತ್ ಬಿಗಿಗೊಳಿಸಲಾಯಿತು. ಕೊನೆಗೆ ವಿಠಲ ಭೀಮಪ್ಪ ಅರಭಾವಿ ಅವರ ಮೃತದೇಹವನ್ನು ಮತ್ತೊಂದು ಗೇಟ್‌ನಲ್ಲಿ ಯಾರಿಗೂ ತಿಳಿಯದಂತೆ ಸ್ವಗ್ರಾಮ ಕಂಕಣವಾಡಿಗೆ ಕಳುಹಿಸಿಕೊಡಲಾಯಿತು.

ದಿನದ ಬೆಳವಣಿಗೆ
ವಿಧಾನ ಮಂಡಲ ಉಭಯ ಸದನ ಕಲಾಪ ಆರಂಭ
ಧರಣಿ ಜಾಗದಲ್ಲಿ ವಿಠಲ ಭೀಮಪ್ಪ ಅರಭಾವಿ ಭಾಷಣ
ವೇದಿಕೆ ಹಿಂಭಾಗಕ್ಕೆ ಹೋಗಿ ವಿಷ ಸೇವನೆ
ಪಕ್ಕದ ಜೀನಗೌಡ ಆಸ್ಪತ್ರೆಗೆ ದಾಖಲು
ಕೆಎಲ್‌ಇ ಆಸ್ಪತ್ರೆಗೆ ರವಾನೆ, ಮಾರ್ಗ ಮಧ್ಯೆ ಸಾವು
ಮುಖ್ಯಮಂತ್ರಿ, ಪ್ರತಿಪಕ್ಷ ನಾಯಕರು ಆಸ್ಪತ್ರೆಗೆ ದೌಡು
ಸಚಿವರ ತುರ್ತು ಸಭೆ ಕರೆದ ಮುಖ್ಯಮಂತ್ರಿ ಸಿದ್ದರಾಮಯ್ಯ
ವಿಧಾನ ಪರಿಷತ್ ಕಲಾಪ ಆರಂಭ, ಧರಣಿ, ಕೋಲಾಹಲ
ವಿಧಾನಮಂಡಲ ಕಲಾಪ ಆರಂಭ, ಮುಖ್ಯಮಂತ್ರಿಯಿಂದ ವಿವರಣೆ
ಪ್ರತಿಪಕ್ಷಗಳಿಂದ ಧರಣಿ, ನಾಳೆಗೆ ಕಲಾಪ ಮುಂದೂಡಿದ ಸ್ಪೀಕರ್

ಕೆ.ವಿ.ಪ್ರಭಾಕರ್
prabhakar.kv@kannadaprabha.com


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement