ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೊಡಗಿನ ಕಾಫಿ ಘಮದಲ್ಲಿ ಇಂಗ್ಲಿಷ್ ನೊರೆ!

Mainashree
Updated On : 27 Nov 2013, 9:55 am

 -ಗುಡ್ಡಗಾಡು ಪ್ರದೇಶಗಳಲ್ಲಿರುವ ಶಾಲೆಗಳಿಗೆ ತೆರಳುವುದೇ ಹರಸಾಹಸ

ಮಡಿಕೇರಿ:
ಕಾಫಿ ತವರೂರು ಕೊಡಗು ಜಿಲ್ಲೆಯಲ್ಲಿ ಹಿಂದಿನಿಂದಲೂ ಆಂಗ್ಲ ಕಾರುಬಾರು ಜೋರು. ಕಾಫಿ ಬೆಳೆಗಾರರು ಕನ್ನಡಕ್ಕಿಂತ ಇಂಗ್ಲಿಷ್‌ನಲ್ಲಿಯೇ ವ್ಯವಹರಿಸುವುದು ಹೆಚ್ಚು.
ಕನ್ನಡ ಭಾಷಾ ಪ್ರೇಮಕ್ಕೇನೂ ಅಷ್ಟು ಕೊರತೆಯಿಲ್ಲ. ಜಿಲ್ಲೆಯಲ್ಲಿ ಕನ್ನಡ ಶಾಲೆಗಳ ಸ್ಥಿತಿ ವರ್ಷದಿಂದ ವರ್ಷಕ್ಕೆ ದುಸ್ತರವಾಗುತ್ತಿದೆಯಾದರೂ ಚಿಂತಾಜನಕ ಸ್ಥಿತಿ ತಲುಪಿಲ್ಲ ಎಂಬುದೇ ಆಶಾದಾಯಕ ವಿಚಾರ.
ಜಿಲ್ಲೆಯಲ್ಲಿ ಮಡಿಕೇರಿ ತಾಲೂಕಿನಲ್ಲಿ 133 ಕನ್ನಡ ಶಾಲೆಗಳಿದ್ದು, ಈ ಪೈಕಿ ಕಳೆದ ಸಾಲಿನಲ್ಲಿ 1 ಶಾಲೆ ಮಚ್ಚಿದೆ. ಸೋಮವಾರಪೇಟೆ ತಾಲೂಕಿನಲ್ಲಿ 159 ಕನ್ನಡ ಶಾಲೆಗಳಿದ್ದು, ವಿರಾಜಪೇಟೆ ತಾಲೂಕಿನಲ್ಲಿ 126 ಶಾಲೆಗಳ ಪೈಕಿ 3 ಶಾಲೆಗಳು ಮುಚ್ಚಿವೆ. ಜಿಲ್ಲೆಯಲ್ಲಿ 418 ಕನ್ನಡ ಶಾಲೆಗಳ ಪೈಕಿ ಕಳೆದ ಸಾಲಿನಲ್ಲಿ 4 ಶಾಲೆಗಳು ಮುಚ್ಚಿವೆ. ಎಲ್ಲೆಡೆಯಂತೆ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಇಂಗ್ಲಿಷ್ ಶಾಲೆಗಳ ವ್ಯಾಮೋಹ ಹೆಚ್ಚಿದೆ.

ಪ್ರತಿಷ್ಠೆಯಾಗಿದೆ
ಕನ್ನಡ ಶಾಲೆಗಳ ಮುಚ್ಚುವಿಕೆ ಪ್ರಮಾಣ ಹೆಚ್ಚಿಲ್ಲದಿರುವುದರಿಂದಾಗಿ ಜನಪ್ರತಿನಿಧಿಗಳೂ ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಕನ್ನಡ ಶಾಲೆಗಳಲ್ಲಿ ಸರ್ಕಾರ ಸಾಕಷ್ಟು ಸೌಲಭ್ಯ ನೀಡಿ ಮಕ್ಕಳನ್ನು ಆಕರ್ಷಿಸುತ್ತಿವೆ. ಅನೇಕ ಗ್ರಾಮಗಳಲ್ಲಿ ಖಾಸಗಿ ಶಾಲೆಗಳಿಗಿಂತ ಕನ್ನಡ ಶಾಲೆಗಳಲ್ಲಿಯೇ ಅತ್ಯುತ್ತಮ ಶಿಕ್ಷಣ ದೊರಕುತ್ತಿದೆ. ಹೀಗಿದ್ದರೂ ಇಂಗ್ಲಿಷ್ ಶಾಲೆಗಳಿಗೆ ತೆರಳುವುದೇ ಪ್ರತಿಷ್ಠೆಯಂತಾಗಿರುವುದರಿಂದ ಇಂಥ ಸರ್ಕಾರಿ ಶಾಲೆಗಳ ಬಗ್ಗೆ ಯಾರೂ ಒಲವು ತೋರುತ್ತಿಲ್ಲ.  ಕನ್ನಡ ಶಾಲೆಗಳಲ್ಲಿ ಉತ್ತಮ ಕಟ್ಟಡ, ಕುಡಿಯುವ ನೀರು, ಶೌಚಾಲಯ, ಶಿಕ್ಷಣ, ಕ್ಷೀರಭಾಗ್ಯ, ಅಕ್ಷರ ದಾಸೋಹದಂಥ ಅನೇಕ ಯೋಜನೆಗಳು ಅಚ್ಚುಕಟ್ಟಾಗಿ ಜಾರಿಯಾಗಿದ್ದರೂ ಇವು ಮಕ್ಕಳನ್ನು ಆಕರ್ಷಿಸುವಲ್ಲಿ ನಿರೀಕ್ಷೆಯಷ್ಟು ಯಶಸ್ವಿಯಾಗಿಲ್ಲ. ಕೂಲಿ ಕಾರ್ಮಿಕರ ಮಕ್ಕಳು ಅನ್ಯ ಮಾರ್ಗವಿಲ್ಲದೆ ಕನ್ನಡ ಶಾಲೆಗಳಿಗೆ ಹೋಗುತ್ತಿದ್ದಾರೆ ಎಂದು ಪೋಷಕರೇ ಬೇಸರದಿಂದ ಹೇಳಿಕೊಳ್ಳುವ ಪರಿಸ್ಥಿತಿ ಜಿಲ್ಲೆಯಲ್ಲಿದೆ. ಆಂಗ್ಲ ಮಾಧ್ಯಮ ಶಾಲೆಗಳು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿವೆ. 30-40 ಕಿ.ಮೀ. ದೂರಕ್ಕೂ ಶಾಲಾ ವಾಹನ ಕಳುಹಿಸಿ ಗ್ರಾಮೀಣ ಪ್ರದೇಶದ ಮಕ್ಕಳನ್ನು ನಗರದ ಶಾಲೆಗಳು ಕರೆ ತರುತ್ತವೆ. ಬಡವರ ಮಕ್ಕಳನ್ನೂ ತಮ್ಮ ಶಾಲೆಗೆ ಆಕರ್ಷಿಸುವ ಯೋಜನೆಗಳೂ ಕಾರ್ಯರೂಪಗೊಂಡಿವೆ.

ಗುಡ್ಡಗಾಡು ಪ್ರದೇಶದ ಪಾಡು
ಗುಡ್ಡಗಾಡಿನ ಮಧ್ಯೆ ಇರುವ ಕೊಡಗಿನ ಶಾಲೆಗಳಿಗೆ ತೆರಳುವುದೆ ಹರಸಾಹಸವಾಗಿದೆ. ಮಳೆಗಾಲದಲ್ಲಂತೂ ಉಕ್ಕಿ ಹರಿಯುವ ನದಿತೊರೆಗಳನ್ನು ದಾಟಿ ಪ್ರಾಣ ಭಯದಿಂದಲೇ ಶಿಕ್ಷಕ ವರ್ಗ ಶಾಲೆಗಳಿಗೆ ತೆರಳುತ್ತದೆ. ಇರುವ ಅತ್ಯಲ್ಪ ಮಕ್ಕಳಿಗೆ ಪಾಠ ಹೇಳಬೇಕಾದ ದುಃಸ್ಥಿತಿಯಿದೆ. ಇಂಥ ಪರಿಸ್ಥಿತಿಯಲ್ಲಿ ಶಿಕ್ಷಕರಿಂದ ಹೆಚ್ಚಿನದ್ದನ್ನು ನಿರೀಕ್ಷಿಸುವುದು ಹೇಗೆ ಸಾಧ್ಯ? ಜಿಲ್ಲೆಯಲ್ಲಿ ಬ್ರಿಟಿಷರ ಆಡಳಿತದ ಕಾಲದಿಂದಲೇ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಲಾಗಿತ್ತು. ಹೀಗಾಗಿ ಸಾಕಷ್ಟು ಶಿಕ್ಷಣ ಸಂಸ್ಥೆಗಳು ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ಕಾರ್ಯೋನ್ಮುಖವಾಗಿದ್ದು, ಸಹಜವಾಗಿ ಇಂಗ್ಲಿಷ್ ಪ್ರಭಾವವೂ ಇದೆ.

56 ಶಾಲೆಗಳಿಗೆ ಶತಮಾನೋತ್ಸವ ಸಂಭ್ರಮ
ಜಿಲ್ಲೆಯ ಮಡಿಕೇರಿ ತಾಲೂಕಿನಲ್ಲಿ 25, ಸೋಮವಾರಪೇಟೆ ತಾಲೂಕಿನಲ್ಲಿ 10 ಮತ್ತು ವಿರಾಜಪೇಟೆ ತಾಲೂಕಿನಲ್ಲಿ 21 ಸೇರಿದಂತೆ ಒಟ್ಟು 56 ಕನ್ನಡ ಶಾಲೆಗಳು ಶತಮಾನೋತ್ಸವ ಪೂರೈಸಿವೆ. ಈ ಬಾರಿ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜ.7-9ರವರೆಗೆ ಸಜ್ಜಾಗುತ್ತಿರುವ ಕೊಡಗು ಜಿಲ್ಲೆಯಲ್ಲಿ ಕನ್ನಡ ಶಾಲೆಗಳ ಸ್ಥಿತಿಗತಿ ಸುಧಾರಿಸುವತ್ತಲೂ ಸಮ್ಮೇಳನ ಗಮನ ಹರಿಸುವ ನಿರೀಕ್ಷೆಯಿದೆ.

- ಅನಿಲ್ ಎಚ್.ಟಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement