ತೇಜ್ಪಾಲ್ಗೆ ಡಬಲ್ ಟ್ರಬಲ್
ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ತೆಹೆಲ್ಕಾದ ಪ್ರಧಾನ ಸಂಪಾದಕರಾಗಿದ್ದ ತರುಣ್ ತೇಜ್ಪಾಲ್ ವಿರುದ್ಧದ ಕುಣಿಕೆ ಮತ್ತಷ್ಟು ಬಿಗಿಯಾಗಿದೆ...
ಪಿಟಿಐ ಪಣಜಿ/ನವದೆಹಲಿ ನ.27
ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಗುರಿಯಾಗಿರುವ ತೆಹೆಲ್ಕಾದ ಪ್ರಧಾನ ಸಂಪಾದಕರಾಗಿದ್ದ ತರುಣ್ ತೇಜ್ಪಾಲ್ ವಿರುದ್ಧದ ಕುಣಿಕೆ ಮತ್ತಷ್ಟು ಬಿಗಿಯಾಗಿದೆ. ಗುರುವಾರ ಮಧ್ಯಾಹ್ನ 3 ಗಂಟೆಯ ಒಳಗಾಗಿ ವಿಚಾರಣೆಗೆ ಹಾಜರಾಗತಕ್ಕದ್ದು ಎಂದು ಪಣಜಿ ಪೊಲೀಸರು ನೋಟಿಸ್ ನೀಡಿದ್ದಾರೆ. ನಿರೀಕ್ಷಣಾ ಜಾಮೀನು ಕೋರಿ ದೆಹಲಿ ಹೈಕೋರ್ಟ್ನಲ್ಲಿ ತೇಜ್ಪಾಲ್ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಯಿತು. ಆದರೆ ಅವರಿಗೆ ಮಧ್ಯಂತರ ರಕ್ಷಣೆ ನೀಡಲು ಒಪ್ಪದ ನ್ಯಾಯಾಲಯ ನ.29ಕ್ಕೆ ಆದೇಶ ನೀಡುವುದಾಗಿ ಬುಧವಾರ ತಿಳಿಸಿತು.
ಬಿಜೆಪಿ ಬರೆದಿತ್ತೇ?: ರಾಜಕೀಯ ಕಾರಣಗಳಿಗಾಗಿ ಗೋವಾದಲ್ಲಿನ ಬಿಜೆಪಿ ಸರ್ಕಾರ ತಮ್ಮನ್ನು ಗುರಿಯಾಗಿಸುತ್ತಿದೆ ಎಂದು ತೇಜ್ಪಾಲ್ ಆರೋಪಗಳನ್ನು ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ತಿರಸ್ಕರಿಸಿದ್ದಾರೆ. 'ಹಾಗಿದ್ದರೆ ತೇಜ್ಪಾಲ್ ಬರೆದಿದ್ದ 2 ಇ-ಮೇಲ್ಗಳನ್ನು ಅವರ ಬದಲಾಗಿ ಬಿಜೆಪಿ ಬರೆದುಕೊಂಡಿತ್ತೇ?' ಎಂದಿದ್ದಾರೆ.
ಹೇಳಿಕೆ ದಾಖಲು: ತರುಣ್ ತೇಜ್ಪಾಲ್ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ ಮಹಿಳಾ ಪತ್ರಕರ್ತೆಯ ಹೇಳಿಕೆಯನ್ನು ಪಣಜಿಯಲ್ಲಿರುವ ಮ್ಯಾಜಿಸ್ಟ್ರೇಟ್ ಕೋರ್ಟ್ ಒಂದರಲ್ಲಿ ದಾಖಲಿಸಲಾಯಿತು. ಜತೆಗೆ ತೆಹೆಲ್ಕಾದ ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧರಿ ಹೆಸರನ್ನೂ ಎಫ್ಐಆರ್ನಲ್ಲಿ ಸೇರಿಸಲು ಪಣಜಿ ಪೊಲೀಸರು ಮುಂದಾಗಿದ್ದಾರೆ.
ಮಹಿಳಾ ಪತ್ರಕರ್ತೆಗೆ ಬೆದರಿಕೆ ಹಾಕಿರುವ ಆರೋಪಗಳನ್ನು ಶೋಮಾ ಚೌಧರಿ ಸಾರಾಸಗಟಾಗಿ ತಿರಸ್ಕರಿಸಿದ್ದಾರೆ.