ರಣಾಂಗಣವಾದ ಕೆಎಲ್‌ಇ ಆಸ್ಪತ್ರೆ ಆವರಣ
ಬೆಳಗಾವಿ: ಸುವರ್ಣ ವಿಧಾನಸೌಧ ಎದುರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ರೈತ ವಿಠಲ್ ಭೀಮಪ್ಪ ಅರಬಾವಿ ಶವವನ್ನು ನಮಗೇ ನೀಡಬೇಕೆಂದು ರೈತರು ಪಟ್ಟು ಹಿಡಿದಿದ್ದರಿಂದ ಕೆಎಲ್‌ಇ ಆಸ್ಪತ್ರೆ ಆವರಣದಲ್ಲಿ ಕೆಲವು ಕಾಲ ಗೊಂದಲ, ಮತ್ತು ಉದ್ವಿಗ್ನ ವಾತಾವರಣ ನಿರ್ಮಾಣವಾಗಿತ್ತು.
ಆಸ್ಪತ್ರೆ ಆವರಣದಲ್ಲಿ ಸೇರಿದ್ದ ನೂರಾರು ರೈತರು ಶವ ಹಸ್ತಾಂತರಿಸುವಂತೆ ಶವಾಗಾರದ ಎದುರು ಜಮಾಯಿಸಿದ್ದರು. ಅವರ ಮನವೊಲಿಸಲು ಜಿಲ್ಲಾಡಳಿತ, ಪೊಲೀಸರು ಹರಸಾಹಸ ಪಡಬೇಕಾಯಿತು. ಯಾವುದೇ ಕಾರಣಕ್ಕೂ ಪೊಲೀಸರಿಗೆ ಶವ ನೀಡಬಾರದು ಎಂದು ಆಸ್ಪತ್ರೆಯ ಗೇಟು ಮುಚ್ಚಿ ರೈತರು ಪ್ರತಿಭಟಿಸಿದರು. ರೈತರು - ಪೊಲೀಸರ ನಡುವೆ ಸ್ವಲ್ಪ ಪ್ರಮಾಣದಲ್ಲಿ ಕೈಕೈ ಮಿಲಾವಣೆಯೂ ನಡೆಯಿತು.
ಪೊಲೀಸರು ಮರಣೋತ್ತರ ಪರೀಕ್ಷೆ ನಂತರ ಶವವನ್ನು ಕಂಕಣವಾಡಿಗೆ ತೆಗೆದುಕೊಂಡು ಹೋಗುವಂತೆ ಸಂಬಂಧಿಕರಲ್ಲಿ ಮತ್ತು ರೈತರಲ್ಲಿ ಮನವಿ ಮಾಡಿಕೊಂಡರು. ಪೊಲೀಸರ ಮನವಿಗೆ ಕಿವಿಗೊಡದ ರೈತರು ಶವವನ್ನು ಯಾವುದೇ ಕಾರಣಕ್ಕೂ ಕಂಕಣವಾಡಿಗೆ ಒಯ್ಯಬಾರದು. ಅಲ್ಲದೇ ಪೊಲೀಸರು ಶವವನ್ನು ರೈತ ಮುಖಂಡರಿಗೇ ಒಪ್ಪಿಸಬೇಕು ಎಂದು ಶವಾಗಾರದ ಮುಂದೆ ಧರಣಿ ನಡೆಸಿದರು.
ರೈತರ ತೀವ್ರ ವಿರೋಧ
ರೈತರ ವಿರೋಧದ ನಡುವೆಯೂ ಪೊಲೀಸರು ಶವವನ್ನು ಆ್ಯಂಬುಲೆನ್ಸ್ ಮೂಲಕ ಒಯ್ಯಲು ಯತ್ನಿಸಿದಾಗ ರೈತರು ಆ್ಯಂಬುಲೆನ್ಸ್ ಮುಂದೆ ಕುಳಿತು ಪ್ರತಿಭಟಿಸಿದರು. ಕೆಲವರು ಆ್ಯಂಬುಲೆನ್ಸ್ ಮೇಲೆಯೂ ಕುಳಿತು ಪ್ರತಿರೋಧ ಒಡ್ಡಿದರು. ಇಷ್ಟಾದರೂ ಪೊಲೀಸರು ಪಟ್ಟು ಸಡಿಲಿಸದೇ ರೈತರನ್ನು ಬಲವಂತವಾಗಿ ಹಿಡಿದೆಳೆದು ಶವ ಒಯ್ಯಲು ಯತ್ನಿಸಿದರೂ. ಆಗ ರೈತ ಮುಖಂಡ ಕೊಡಿಹಳ್ಳಿ ಚಂದ್ರಶೇಖರ ತಮ್ಮ ಕಾರನ್ನು ಶವಾಗಾರದ ಪಕ್ಕದ ಗೇಟ್ ಮುಂದೆ ನಿಲ್ಲಿಸಿ ಶವ ಒಯ್ಯದಂತೆ ತಡೆಯಲು ಯತ್ನಿಸಿದರು. ರೈತರು ಸಹ ಕೆಎಲ್‌ಇ ಆಸ್ಪತ್ರೆಯ ಎರಡು ಮುಖ್ಯ ಗೇಟ್‌ಗಳ ಬಳಿ ಜಮಾಯಿಸಿ ಆ್ಯಂಬುಲೆನ್ಸ್ ಹೊರ ಹೋಗದಂತೆ ತಡೆಯಲು ಯತ್ನಿಸಿದರು. ಕೊನೆಗೂ ರೈತರ ಕಣ್ಣು ತಪ್ಪಿಸಿ ಶವಾಗಾರದ ಪಕ್ಕದ ಮೂರನೇ ಗೇಟ್ ಮೂಲಕ ಶವ ಒಯ್ಯುವಲ್ಲಿ ಪೊಲೀಸರು ಯಶಸ್ವಿಯಾದರು. ಶವವನ್ನು ರೈತನ ಹುಟ್ಟೂರಾದ ರಾಯಬಾಗ ತಾಲೂಕಿನ ಕಂಕಣವಾಡಿಗೆ ಬಿಗು ಪೊಲೀಸ್ ಬಂದೋಬಸ್ತ್‌ನಲ್ಲಿ ತೆಗೆದುಕೊಂಡು ಹೋಗಲಾಯಿತು.
ಮುಗಿಲು ಮಟ್ಟಿದ ಆಕ್ರಂದನ: ರೈತ ವಿಠಲ ಸಾವಿನ ಸುದ್ದಿ ಕೇಳಿ ಆಸ್ಪತ್ರೆಗೆ ಆಗಮಿಸಿದ ಆತನ ಮಕ್ಕಳ ಮತ್ತು ಸಂಬಂಧಿಕರ ಆಕ್ರಂದನ ಕರುಳು ಕಿವುಚುವಂತಿತ್ತು.
ಸರ್ಕಾರ ಸಕ್ಕರೆ ಲಾಬಿಗೆ ಮಣಿದು ಕಬ್ಬು ಬೆಳೆಗಾರರನ್ನು ಕಡೆಗಣಿಸಿದೆ. ತಮ್ಮ ಬೇಡಿಕೆಗಾಗಿ 3 ದಿನಗಳಿಂದ ರೈತರು ಸುವರ್ಣ ಸೌಧದ ಬಳಿ ಪ್ರತಿಭಟನೆ ನಡೆಸುತ್ತಿದ್ದರೂ, ಸರ್ಕಾರ ರೈತರ ಬೇಡಿಕೆ ಸಂದಿಸಿಲ್ಲ. ರೈತ ವಿಠಲ್ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿಲ್ಲ. ಸರ್ಕಾರವೇ ಆತನ ಕೊಲೆ ಮಾಡಿದೆ.
- ಪಿ. ರಾಜೀವ್, ಕುಡುಚಿ ಶಾಸಕ
ಸರ್ಕಾರದ ಬೊಕ್ಕಸಕ್ಕೆ ಶೇ.75ರಷ್ಟು ತೆರಿಗೆ ರೈತರಿಂದಲೇ ಬರುತ್ತಿದೆ. ಅಂತಹ ರೈತರನ್ನು ಸರ್ಕಾರ ಕೀಳಾಗಿ ಕಾಣುತ್ತಿದೆ. ರೈತ ವಿಠಲ್ ಆತ್ಮಹತ್ಯೆಗೆ ಸರ್ಕಾರವೇ ಕಾರಣ. ಸಿಎಂ ಸಿದ್ದರಾಮಯ್ಯ ಅವರಿಗೆ ರೈತರ ಬಗ್ಗೆ ಕಳಕಳಿ ಇದ್ದಿದ್ದಲ್ಲಿ ಇಂತಹ ಅನಾಹುತ ಆಗುತ್ತಿರಲಿಲ್ಲ.
- ಕೋಡಿಹಳ್ಳಿ ಚಂದ್ರಶೇಖರ್, ರೈತ ಮುಖಂಡ
ಗಣ್ಯರ ಭೇಟಿ
ರೈತನ ಸಾವಿನ ಸುದ್ದಿ ತಿಳಿದ ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ, ಮುಖ್ಯಮಂತ್ರಿ ಸಿದ್ದರಾಮಯ್ಯ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಜಗದೀಶ ಶೆಟ್ಟರ್, ಶಾಸಕ ಗೋವಿಂದ ಕಾರಜೋಳ, ಕುಡಚಿ ಶಾಸಕ ಪಿ. ರಾಜೀವ್ ಸೇರಿದಂತೆ ಮತ್ತಿತರರು ಆಸ್ಪತ್ರೆಗೆ ಭೇಟಿ ನೀಡಿ, ಸರ್ಕಾರದ ರೈತ ವಿರೋಧಿ ನೀತಿ, ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಕೊನೆಯಲ್ಲಿ ಆಸ್ಪತ್ರೆಗೆ ಆಗಮಿಸಿದ ಸಿದ್ಧರಾಮಯ್ಯ ಘಟನೆಗೆ ವಿಷಾದ ವ್ಯಕ್ತಪಡಿಸಿದರು.