ರೈತನ ಸಾವಿಗೆ ಕಲಾಪ ಬಲಿ
ಸುವರ್ಣ ವಿಧಾನಸಭೆ: ಕಳೆದೆರಡು ದಿನಗಳಿಂದ ಶಾಂತ ರೀತಿಯಲ್ಲಿ ನಡೆಯುತ್ತಿದ್ದ ವಿಧಾನಮಂಡಲದ ಕಲಾಪ ರೈತನ ಆತ್ಮಹತ್ಯೆ ಹಿನ್ನೆಲೆಯಲ್ಲಿ ಕದಡಿದ ಕಡಲಾಗಿ ಪರಿಣಮಿಸಿದ್ದು, ಆಡಳಿತ ಪಕ್ಷ ಮತ್ತು ಪ್ರತಿಪಕ್ಷ ಸದಸ್ಯರು ಕೈ ಮಿಲಾಯಿಸುವ ಹಂತ ತಲುಪಿತ್ತು. ಆತ್ಮಹತ್ಯೆಗೆ ಶರಣಾದ ರೈತನ ಆತ್ಮಕ್ಕೆ ಸಂತಾಪ ಕೋರುವ ನಿರ್ಣಯ ಹಾಗೂ ಸರ್ಕಾರ ಕಬ್ಬು ಬೆಳೆಗಾರರ ರಕ್ಷಣೆಗೆ ತೆಗೆದುಕೊಂಡ ನಿರ್ಣಯಗಳ ಬಗ್ಗೆ ವಿವರಿಸಲು ಮುಂದಾದ ಸಿಎಂ ಸಿದ್ದರಾಮಯ್ಯ ಅವರ ಭಾಷಣಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ವಿರೋಧ ವ್ಯಕ್ತಪಡಿಸಿ, ಸದನದ ಮುಂದಿರುವ ಆವರಣಕ್ಕೆ ನುಗ್ಗಿದರು. ಅವರ ಜತೆ ಬಿಜೆಪಿ ಸದಸ್ಯರು ಸೇರಿಕೊಂಡರು. ಇದು ಸಿದ್ದರಾಮಯ್ಯ ಅವರನ್ನು ಕೆರಳಿಸಿದ್ದರಿಂದ ಗದ್ದಲದ ವಾತಾವಾರಣ ನಿರ್ಮಾಣಗೊಂಡಿತು.
ತೋಳೇರಿಸಿದ ಬಿಎಸ್‌ವೈ
ಹಿಂದೆ ಅಕ್ರಮ ಗಣಿಗಾರಿಕೆ ವಿಚಾರದಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಿದಾಗಿನ ಸನ್ನಿವೇಶವೇ ಮತ್ತೆ ನಿರ್ಮಾಣಗೊಂಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರಲ್ಲೇ ನಿಂತ ಯಡಿಯೂರಪ್ಪ ತೋಳೇರಿಸಿ ಆಕ್ರೋಶ ವ್ಯಕ್ತಪಡಿಸಿದರು. ಮೃತರ ಆತ್ಮಕ್ಕೆ ಶಾಂತಿ ಕೋರಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಒಂದು ನಿಮಿಷ ಮೌನಾಚರಣೆಗೆ ಸೂಚನೆ ನೀಡಿದಷ್ಟು ಸಮಯವನ್ನು ಹೊರತುಪಡಿಸಿದರೆ ಸಂಪೂರ್ಣ ಸದನ ಗದ್ದಲದಲ್ಲಿ ಮುಳುಗಿತ್ತು.
ನಡೆದಿದ್ದೇನು?
ಕಬ್ಬಿಗೆ ಹೆಚ್ಚುವರಿ ಬೆಂಬಲ ಬೆಲೆ ಘೋಷಿಸುವ ಕುರಿತು ಸದನದಲ್ಲೂ ಚರ್ಚೆ ನಡೆದಿತ್ತು. ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ, ರೇವಣ್ಣ, ವೈಎಸ್‌ವಿ ದತ್ತಾ, ಬಿಜೆಪಿಯ ಜಗದೀಶ ಶೆಟ್ಟರ್, ಆರ್.ಅಶೋಕ, ಉಮೇಶ ಕತ್ತಿ ಈ ಬಗ್ಗೆ ಸರ್ಕಾರದ ಗಮನ ಸೆಳೆದಿದ್ದರು. ಕಬ್ಬು ಬೆಳೆಗಾರರ ಹೋರಾಟ ತೀವ್ರತೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲೂ ಈ ವಿಷಯ ಚರ್ಚೆಗೊಂಡು ಹೆಚ್ಚುವರಿ ಬೆಲೆ ನಿಗದಿ ಮಾಡುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗಿತ್ತು. ಆದರೆ ಭೋಜನ ವಿರಾಮಕ್ಕೆ ಕಲಾಪವನ್ನು ಮುಂದೂಡಿದ ಸಂದರ್ಭದಲ್ಲಿ ರೈತ ಆತ್ಮಹತ್ಯೆ ನಡೆಯಿತು. ಮೂರು ಗಂಟೆಗೆ ಆರಂಭವಾಗಬೇಕಿದ್ದ ಸದನ ರೈತನ ಆತ್ಮಹತ್ಯೆಯಿಂದಾಗಿ 4.45ಕ್ಕೆ ಆರಂಭಗೊಂಡಿತು. ಬಿಗಡಾಯಿಸಿದ ಪರಿಸ್ಥಿತಿ ಹಿನ್ನೆಲೆಯಲ್ಲಿ ಹಿರಿಯ ಸಚಿವರು ಹಾಗೂ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರ ಜತೆ ಮುಖ್ಯಮಂತ್ರಿ ಮುಕ್ಕಾಲು ಗಂಟೆ ಸಭೆ ನಡೆಸಿದರು.
ಯಾರಿಗೆ ಬೇಕ್ರಿ ನಿಮ್ಮ ಹರಿಕಥೆ!
ಆದರೆ ಇದರಿಂದ ಕೆರಳಿದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಲ್ಲಿ ರೈತ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇಲ್ಲಿ ನೀವು ಸಮರ್ಥನೆ ಮಾಡಿಕೊಳ್ಳುತ್ತಿದ್ದೀರಿ. ಯಾರಿಗೆ ಬೇಕ್ರಿ ನಿಮ್ಮ ಹರಿಕಥೆ ಎಂದು ಸಭಾಧ್ಯಕ್ಷರ ಮುಂದಿರುವ ಆವರಣಕ್ಕೆ ನುಗ್ಗಿದ್ದರಿಂದ ಸದನದಲ್ಲಿ ಗದ್ದಲ ಸೃಷ್ಟಿಯಾಯಿತು. ಮಾತ್ರವಲ್ಲ ಇದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕೆರಳಿಸಿತು. ನಿಮ್ಮಂತ ಪ್ರಜಾಪ್ರಭುತ್ವ ವಿರೋಧಿಗಳು ಇನ್ಯಾರೂ ಇಲ್ಲ. ಸತ್ತ ರೈತನಿಗೆ ಶ್ರದ್ಧಾಂಜಲಿ ಸಲ್ಲಿಸುವ ಸೌಜನ್ಯವೂ ನಿಮಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇಷ್ಟರ ಮಧ್ಯದಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸರ್ಕಾರ ರೈತರ ಪರ ನಿರ್ಣಯವನ್ನು ಘೋಷಿಸಿದರು. ಹೆಚ್ಚುವರಿ 150 ನೀಡುವ ಮೂಲಕ 500 ಕೋಟಿ ಸರ್ಕಾರದ ಬೊಕ್ಕಸದಿಂದ ನೀಡಲು ಸಿದ್ಧರಾಗಿದ್ದೇವೆ ಎಂದರು. ಗದ್ದಲ ನಿಯಂತ್ರಣಕ್ಕೆ ಬಾರದ್ದರಿಂದ ಸ್ಪೀಕರ್ ಸದನವನ್ನು ಗುರುವಾರ ಬೆಳಗ್ಗೆ 11ಕ್ಕೆ ಮುಂದೂಡಿದರು.