ಇದು 'ಕಂಕಣವಾಡಿ ಲೈವ್'
ಕಂಕಣವಾಡಿಯ ರೈತ ಆತ್ಮಹತ್ಯೆ ಪ್ರಕರಣ ಕೆಲವು ವರ್ಷಗಳ ಹಿಂದೆ ತೆರೆಕಂಡ, ಅಮೀರ್ ಖಾನ್ ನಿರ್ಮಾಣದ 'ಪೀಪ್ಲಿ ಲೈವ್' ...
ಸುವರ್ಣ ವಿಧಾನಸೌಧ: ಕಂಕಣವಾಡಿಯ ರೈತ ಆತ್ಮಹತ್ಯೆ ಪ್ರಕರಣ ಕೆಲವು ವರ್ಷಗಳ ಹಿಂದೆ ತೆರೆಕಂಡ, ಅಮೀರ್ ಖಾನ್ ನಿರ್ಮಾಣದ 'ಪೀಪ್ಲಿ ಲೈವ್' ನೆನಪಿಸುವಂತಿದೆ!
'ಪೀಪ್ಲಿ ಲೈವ್' ಚಿತ್ರದಲ್ಲಿ ಸಾಲಬಾಧೆ ತಾಳಲಾರದ ನತ್ತಾ ದಾಸ್ ಎಂಬ ರೈತ ಆತ್ಮಹತ್ಯೆಗೆ ನಿರ್ಧರಿಸುತ್ತಾನೆ. ಇದು ಸ್ಥಳೀಯ ಪತ್ರಿಕೆಯಲ್ಲಿ ವರದಿಯಾದ ನಂತರ ಅಂತಾರಾಷ್ಟ್ರೀಯ ಮಾಧ್ಯಮದಲ್ಲಿಯೂ ಪ್ರಚಾರ ಪಡೆಯುತ್ತದೆ. ಆಗ ಉಳಿದೆಲ್ಲ ಟಿವಿ ಚಾನೆಲ್ಗಳು, ಪತ್ರಿಕೆಗಳು ಪೀಪ್ಲಿಗೆ ಬಂದು ರೈತನ ಆತ್ಮಹತ್ಯೆಯ ನೇರ ಪ್ರಸಾರಕ್ಕೆ ಬೀಡು ಬಿಡುತ್ತವೆ. ಆತ್ಮಹತ್ಯೆ ಮಾಡಿಕೊಳ್ಳದಂತೆ ಆಡಳಿತ ಪಕ್ಷ, ಮಾಡಿಕೊಳ್ಳುವಂತೆ ಪ್ರತಿಪಕ್ಷಗಳು ನತ್ತಾ ದಾಸ್ ಮೇಲೆ ಒತ್ತಡ ಹೇರುತ್ತವೆ. ರಾಜಕೀಯ ಪಕ್ಷಗಳಿಗಾಗಲಿ, ಮಾಧ್ಯಮಕ್ಕಾಗಲಿ ನತ್ತಾ ಎದುರಿಸುವ ಸಮಸ್ಯೆ ಗೌಣವಾಗಿ ಇಡಿ ಪ್ರಕರಣದಲ್ಲಿ ಅವರವರ ವೈಯಕ್ತಿಕ ಹಿತಾಸಕ್ತಿಯೇ ವಿಜೃಂಭಿಸುತ್ತದೆ. ಇದೇ ತರಹದ ಪರಿಸ್ಥಿತಿ ಬೆಳಗಾವಿಯ ಸುವರ್ಣವಿಧಾನಸೌಧ ಹಾಗೂ ರಾಯಭಾಗ ತಾಲೂಕಿನ ಕಂಕಣವಾಡಿಯಲ್ಲಿದೆ.
ರಾಜಕೀಯ ಲಾಭದ ಲೆಕ್ಕಾಚಾರ!
ಕಬ್ಬಿಗೆ ಸಕಾಲದಲ್ಲಿ ಹೆಚ್ಚಿನ ಬೆಲೆ ನೀಡದ ಸರ್ಕಾರದ ವಿರುದ್ಧ ಪ್ರತಿಭಟಿಸಿ ಆತ್ಮಹತ್ಯೆಗೆ ಶರಣಾದ ವಿಠಲ್ ಭೀಮಪ್ಪ ಅರಬಾವಿ ಪ್ರಕರಣದಲ್ಲೂ 'ಪೀಪ್ಲಿ ಲೈವ್' ಸ್ಥಿತಿ ನಿರ್ಮಾಣಗೊಂಡಿದೆ. ರೈತನ ಸಾವಿಗೆ ಕಂಬನಿ ಮಿಡಿಯುವ, ಸ್ಪಂದಿಸುವ ಮನಸು ಈಗ ರಾಜ್ಯದ ಯಾವ ರಾಜಕೀಯ ಪಕ್ಷದ ಮುಖಂಡರಿಗೂ ಇಲ್ಲ. ಎಲ್ಲರಿಗೂ ಈ ಪ್ರಕರಣವನ್ನು ತಮ್ಮದೇ ಆದ ಲಾಭಕ್ಕೆ ಬಳಸಿಕೊಳ್ಳುವ ತಹತಹ. ಘಟನೆಯ ಮರುದಿನವೇ ನಡೆದ ಸದನ ಕಲಾಪ, ಮೊಗಸಾಲೆಯ ಚರ್ಚೆ, ಗುಪ್ತ ಸಮಾಲೋಚನೆ, ಮಾಧ್ಯಮಗಳ ಮುಂದೆ ಪ್ರಕಟಿಸುವ ವೀರಾವೇಶದ ಹೇಳಿಕೆಗಳು 'ಪೀಪ್ಲಿ ಲೈವ್' ಚಿತ್ರಕ್ಕೆ ಜೀವ ನೀಡುವಂತಿತ್ತು.
ಹೋರಾಟಕ್ಕೆ ಬಿಜೆಪಿಗೆ ವಸ್ತು
ಇನ್ನು ಬಿಜೆಪಿಗಂತೂ ಇದು ಹೋರಾಟದ ವಿಚಾರ. ಹೀಗಾಗಿ ಸದನ ಕಲಾಪ ತಡೆಯಲು ಪಣ ತೊಟ್ಟಿದೆ. ಸರ್ಕಾರದ ನಿರ್ಲಕ್ಷ್ಯದ ಬಗ್ಗೆ ಆಕ್ರೋಶ ವ್ಯಕ್ತಪಡಿಸಲಾರಂಭಿಸಿದೆ. ಅರ್ಧಗಂಟೆಗೊಮ್ಮೆ ವಿದ್ಯುನ್ಮಾನ ಮಾಧ್ಯಮದ ಮುಂದೆ ಹಾಜರಾಗಿ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ವಿರುದ್ಧ ಆರೋಪದ ಸುರಿಮಳೆಗರೆಯಲಾರಂಭಿಸಿದ್ದಾರೆ. ಈ ಪ್ರಕರಣವನ್ನು ಬಿಜೆಪಿ ಹಾಗೂ ಕಾಂಗ್ರೆಸ್ ರಾಜಕೀಯಕ್ಕೆ ಬಳಸಿಕೊಳ್ಳುತ್ತಿವೆ ಎಂಬುವುದು ಜೆಡಿಎಸ್ ಆರೋಪ.
ಏನೇನಾಯ್ತು?
ವಿಠಲ್ ಸಾವಿನ ಬಿಸಿ ನೇರವಾಗಿ ತಟ್ಟಿರುವುದು ಆಡಳಿತಾರೂಢ ಕಾಂಗ್ರೆಸ್ಗೆ. ಹೀಗಾಗಿ ಈ ಆತ್ಮಹತ್ಯೆ ಪ್ರಕರಣಕ್ಕೆ ಆ ಪಕ್ಷ ತನ್ನದೇ ಆದ ಬಣ್ಣ ಕಟ್ಟಲಾರಂಭಿಸಿದೆ. ಕಾಂಗ್ರೆಸ್ ನಾಯಕರ ಪ್ರಕಾರ ಸಂಪೂರ್ಣವಾಗಿ ಈ ಆತ್ಮಹತ್ಯೆ ಪ್ರಕರಣವೇ ಒಂದು ಷಡ್ಯಂತ್ರ. ಕಬ್ಬು ಬೆಳೆಗಾರರ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯುವ ಪ್ರಯತ್ನವಿದು. ಏಕೆಂದರೆ, ಯಾರೇ ಆಗಲಿ ವಿಷ ಕುಡಿದ ಕೆಲವೇ ಕ್ಷಣದಲ್ಲಿ ಸಾಯುವುದಿಲ್ಲ. ಒಡಲು ಸುಡುವ ವಿಷದ ನೋವನ್ನು ಸಹಿಸಲಾಗದೇ ಬೊಬ್ಬೆ ಹೊಡೆಯುತ್ತಾರೆ, ಒದ್ದಾಡುತ್ತಾರೆ. ಆದರೆ ವಿಠಲ್ ಅವರು ತಕ್ಷಣವೇ ಮೃತಪಟ್ಟಿರುವುದು ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ. ಕಂಠಪೂರ್ತಿ ಕುಡಿದಿದ್ದ ವಿಠಲ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಮಾತನಾಡಿದ್ದಾರೆ. ಅವರು ಯಾವುದೇ ಸಂಘಟನೆ ಅಥವಾ ರೈತ ಸಂಘದ ಸದಸ್ಯರಲ್ಲ. ಮೈತುಂಬ ಸಾಲ ಮಾಡಿಕೊಂಡಿದ್ದ ವಿಠಲ್ ಅವರಿಗೆ ಇಬ್ಬರು ಪತ್ನಿಯರು ಹಾಗೂ ಐವರು ಮಕ್ಕಳನ್ನು ನಿಭಾಯಿಸುವುದೇ ಕಷ್ಟವಾಗುತ್ತಿತ್ತು. ಹೀಗಾಗಿ ಯಾರೋ ಅವರಿಗೆ ಆತ್ಮಹತ್ಯೆ ಮಾಡಿಕೊಂಡರೆ ಪರಿಹಾರ ಸಿಗುತ್ತದೆ ಎಂಬ ಆಸೆ ಹುಟ್ಟಿಸಿ, ಈ ರೀತಿ ಮಾಡಿಸಿದ್ದಾರೆ. ಹೀಗಾಗಿ ಈ ಬಗ್ಗೆ ನ್ಯಾಯಾಂಗ ತನಿಖೆಯಾದರೆ ಸತ್ಯ ಹೊರಬರುತ್ತದೆ. ಮಾತ್ರವಲ್ಲ ವಿಠಲ್ ಮನೆಗೆ ಕಳೆದ ನಾಲ್ಕೈದು ದಿನಗಳಿಂದ ಯಾರ್ಯಾರು ಹೋಗಿ ಬಂದಿದ್ದಾರೆ ಎಂಬುದರ ಬಗ್ಗೆಯೂ ತನಿಖೆಯಾಗಬೇಕು. ಆಗ ಸತ್ಯ ಹೊರಬೀಳುತ್ತದೆ.
ಕಾಂಗ್ರೆಸ್ ಹಾಗೂ ಬಿಜೆಪಿ ಹಕ್ಕ-ಬುಕ್ಕರಿದ್ದಂತೆ. ಈ ಪ್ರಕರಣ, ಕಬ್ಬು ಸೇರಿದಂತೆ ಎಲ್ಲ ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆಯಾಗಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಬಿಜೆಪಿ ಮುಖಂಡರು ರೈತ ಶವವಿಟ್ಟುಕೊಂಡು ಪ್ರತಿಭಟನೆ ನಡೆಸುತ್ತಾರಲ್ಲ, ಇದು ನಾಚಿಕೆಗೇಡು.
-ಎಚ್.ಡಿ. ಕುಮಾರಸ್ವಾಮಿ, ಪ್ರತಿಪಕ್ಷ ನಾಯಕ
ನಾವು ಅಧಿಕಾರದಲ್ಲಿದ್ದಾಗ ಎಸ್ಎಪಿ ಕಾನೂನು ಜಾರಿಗೆ ತಂದೆವು. ಆದರೆ ಕಾಂಗ್ರೆಸ್ ಸರ್ಕಾರಕ್ಕೆ ಇದನ್ನು ಜಾರಿಗೊಳಿಸುವುದು ಸಾಧ್ಯವಾಗಲಿಲ್ಲ. ರೈತರಿಗೆ ಸಕ್ಕರೆ ಕಾರ್ಖಾನೆ ಮಾಲೀಕರು ಬಾಕಿ ನೀಡಬೇಕು. ಪರಿಸ್ಥಿತಿ ಹೀಗೆ ಮುಂದುವರಿದರೆ ಇನ್ನಷ್ಟು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇದಕ್ಕೆ ಅವಕಾಶ ಮಾಡಿಕೊಡಬೇಡಿ.
- ಜಗದೀಶ ಶೆಟ್ಟರ್, ಬಿಜೆಪಿ ಶಾಸಕಾಂಗ ಪಕ್ಷದ ನಾಯಕ