ಕೊಪ್ಪಳದಲ್ಲಿ ನಕಲಿ ವೈದ್ಯರ ಮೇಲೆ ದಾಳಿ: ಇಬ್ಬರು ಪತ್ತೆ
ಕೊಪ್ಪಳ: ಆಯುಷ್ ಮೆಡಿಕಲ್ ಕೌನ್ಸಿಲ್ ಸದಸ್ಯ ಡಾ. ಎಸ್.ಆರ್. ಹಿರೇಮಠ, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಬಸಪ್ಪ ವಾಲಿಕಾರ ಹಾಗೂ ಡಾ. ಬಸವರಾಜ ಕುಂಬಾರ್ ನೇತೃತ್ವದ ತಂಡ ಕೊಪ್ಪಳ ಸಮೀಪದ ಭಾಗ್ಯನಗರದಲ್ಲಿ ನಕಲಿ ವೈದ್ಯರ ಕ್ಲಿನಿಕ್ಗಳ ಮೇಲೆ ದಾಳಿ ಮಾಡಿ ಇಬ್ಬರು ನಕಲಿ ವೈದ್ಯರನ್ನು ಪತ್ತೆ ಮಾಡಿದೆ.
ಭಾಗ್ಯನಗರದಲ್ಲಿ ನಕಲಿ ದಾಖಲೆಯ ಆಧಾರವನ್ನಿಟ್ಟುಕೊಂಡು ಕ್ಲಿನಿಕ್ ನಡೆಸುತ್ತಿದ್ದ ನಕಲಿ ವೈದ್ಯರ ಅಶೋಕ ರಾಂಪುರ, ಮೂಲವ್ಯಾದಿ ಔಷಧ ನೀಡುತ್ತೇವೆ ಎಂದು ಕ್ಲಿನಿಕ್ ಪ್ರಾರಂಭ ಮಾಡಿಕೊಂಡಿದ್ದ ನಕಲಿ ವೈದ್ಯ ಎಸ್.ಬಿ. ಸೈಯದ್ ಅವರ ಕ್ಲಿನಿಕ್ ಮೇಲೆ ಆಯುಷ್ ವೈದ್ಯರ ತಂಡ ಗುರುವಾರ ಬೆಳಗಿನ ವೇಳೆ ಏಕಾಕಾಕಿ ದಾಳಿ ಮಾಡಿತು. ದಾಳಿ ವಿಷಯ ತಿಳಿದ ಈ ಇಬ್ಬರು ನಕಲಿ ವೈದ್ಯರು ಕಕ್ಕಾಬಿಕ್ಕಿಯಾಗಿದ್ದು, ಅಲ್ಲದೇ ಕ್ಲಿನಿಕ್ನಲ್ಲಿಯೇ ಸಿಕ್ಕಿದ್ದಾರೆ. ಈ ಇಬ್ಬರ ಮೇಲೆ ಪ್ರಕರಣ ದಾಖಲು ಮಾಡಿ ಕ್ರಮ ಜರುಗಿಸಲಾಗುವುದು ಎಂದು ದಾಳಿಯ ನೇತೃತ್ವದ ಮುಖ್ಯಸ್ಥ ವೈದ್ಯರು ತಿಳಿಸಿದ್ದಾರೆ.
ನಕಲಿ ವೈದ್ಯರ ಮೇಲೆ ಪ್ರಕರಣ ದಾಖಲು: ಜಿಲ್ಲಾ ಆರೋಗ್ಯ ಹಾಗೂ ಕುಟುಂಬ ಕಲ್ಯಾಣಾಧಿಕಾರಿ ಮಹಾದೇವಯ್ಯಸ್ವಾಮಿ ಅವರಿಗೆ ಸ್ಥಳೀಯ ಜನರ ದೂರು ನೀಡಿದ ಹಿನ್ನೆಲೆಯಲ್ಲಿ ಪಿಎಸ್ಐ ವೀರಣ್ಣಾ ಮಾಗಿ, ಸ್ಥಳೀಯ ವೈದ್ಯಾಧಿಕಾರಿ ಗುರುರಾಜ ದೇಸಾಯಿ ನೇತೃತ್ವದಲ್ಲಿ ಕನಕಗಿರಿ ಪಟ್ಟಣದ ಪರವಾನಗಿ ಇಲ್ಲದ ವೈದ್ಯರಾದ ಮೌಲಾಹುಸೇನ ಹಾಗೂ ದೇವರಾಜ ಬುಧವಾರ ಅವರ ಕ್ಲಿನಿಕ್ ಮೇಲೆ ಏಕಾಏಕಿ ದಾಳಿ ನಡೆಸಿ ಬೀಗ ಹಾಕಿದ್ದಾರೆ.