ತರುಣ್ ತೇಜ್ಪಾಲ್ ಬಂಧನ ಸನ್ನಿಹಿತ
ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತೆಹೆಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ಶುಕ್ರವಾರ ಬಹುತೇಕ ಬಂಧನವಾಗಲಿದ್ದಾರೆ...
ಪಣಜಿ/ನವದೆಹಲಿ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತೆಹೆಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್ ಶುಕ್ರವಾರ ಬಹುತೇಕ ಬಂಧನವಾಗಲಿದ್ದಾರೆ. ಪಣಜಿ ಪೊಲೀಸರೆದುರು ಹಾಜರಾಗಲು ಅವರಿಗೆ ಗುರುವಾರ ಮಧ್ಯಾಹ್ನ 3 ಗಂಟೆಯ ಗಡುವು ನೀಡಲಾಗಿತ್ತು. ಆದರೆ ತೇಜ್ಪಾಲ್ ಶನಿವಾರ ಮಧ್ಯಾಹ್ನದ ಒಳಗಾಗಿ ಹಾಜರಾಗುವುದಾಗಿ ತಿಳಿಸಿದ್ದರು. ಆದರೆ ಈ ಬೇಡಿಕೆಯನ್ನು ಪೊಲೀಸರು ತಿರಸ್ಕರಿಸಿದ್ದಾರೆ. ಜತೆಗೆ ಜಾಮೀನು ರಹಿತ ವಾರಂಟ್ ಜಾರಿಗಾಗಿ ಪಣಜಿಯ ಸ್ಥಳೀಯ ಕೋರ್ಟ್‌ಗೆ ಪೊಲೀಸರು ಮನವಿ ಸಲ್ಲಿಸಿದ್ದಾರೆ.
ಇದರಿಂದ ಥರಗುಟ್ಟಿ ಹೋಗಿರುವ ತೇಜ್ಪಾಲ್ ಶುಕ್ರವಾರ ಮಧ್ಯಾಹ್ನದೊಳಗೆ ಗೋವಾ ಪೊಲೀಸರೆದುರು ಹಾಜರಾಗುವುದಾಗಿ ವಕೀಲರ ಮೂಲಕ ತಿಳಿಸಿದ್ದಾರೆ. ಇದಕ್ಕೂ ಮುನ್ನ ತೇಜ್ಪಾಲ್ ಗೋವಾ ಪೊಲೀಸರ ಎದುರು ಹಾಜರಾಗುವುದನ್ನು ತಪ್ಪಿಸಲು ನಾನಾ ನಾಟಕ ಆಡಿದ್ದರು. ಬೆಳಗ್ಗೆ ತಾವು ಗೋವಾಗೆ ಪ್ರಯಾಣ ಬೆಳೆಸುತ್ತಿರುವುದಾಗಿ ತಿಳಿಸಿದ್ದ ಅವರು ಶನಿವಾರ ಮಧ್ಯಾಹ್ನದವರೆಗೆ ಗಡುವನ್ನು ವಿಸ್ತರಿಸುವಂತೆ ಗೋವಾ ಪೊಲೀಸರಿಗೆ ಪತ್ರ ಬರೆದಿದ್ದರು. ಈ ಕೋರಿಕೆಯನ್ನು ಗೋವಾ ಪೊಲೀಸರು ತಿರಸ್ಕರಿಸಿದ್ದಾರೆ.
ಗಡುವು ಉಲ್ಲಂಘಿಸುವ ಮೂಲಕ ತೇಜ್ಪಾಲ್ ಅಪರಾಧ ಎಸಗಿದ್ದಾರೆ. ಹಾಗಾಗಿ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಲಿದ್ದೇವೆ ಎಂದು ಗೋವಾ ಪೊಲೀಸರು ಹೇಳಿದ್ದಾರೆ.
ಶೋಮಾ ಚೌಧರಿ ರಾಜಿನಾಮೆ
ಕಿರುಕುಳ ಪ್ರಕರಣದಲ್ಲಿ ತರುಣ್ ತೇಜ್ಪಾಲ್‌ರನ್ನು ರಕ್ಷಿಸಲು ಪ್ರಯತ್ನಿಸಿದ ಆರೋಪ ಎದುರಿಸಿದ್ದ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಶೋಮಾ ಚೌಧರಿ ಗುರುವಾರ ಬೆಳಗ್ಗೆ ರಾಜಿನಾಮೆ ನೀಡಿದ್ದಾರೆ. ತೆಹೆಲ್ಕಾ ವ್ಯವಸ್ಥಾಪಕ ಸಂಪಾದಕಿ ಶೋಮಾ ನಿವಾಸದ ಎದುರು ದಾಂದಲೆ ನಡೆಸಿದ ಬಿಜೆಪಿ ಮಾಜಿ ಶಾಸಕ ವಿಜಯ್ ಜಾಲಿ ವಿರುದ್ಧ ಪ್ರಕರಣ ದಾಖಲಾಗಿದೆ.