ತುಮಕೂರು; ಕನ್ನಡದ್ದೇ ಕಾರುಬಾರು
ಕನ್ನಡಪ್ರಭ ವಾರ್ತೆ ತುಮಕೂರು ನ. 28-
ಶೈಕ್ಷಣಿಕ ಜಿಲ್ಲೆಯೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವುದರಿಂದಲೋ, ವಿಶ್ವವಿದ್ಯಾಲಯ ಇದೆ ಎಂಬ ಕಾರಣಕ್ಕೋ ಏನೋ ಕಲ್ಪತರು ಜಿಲ್ಲೆ ತುಮಕೂರಿನಲ್ಲಿ ಕನ್ನಡ ಶಾಲೆಗಳದ್ದೇ ಪಾರುಪತ್ಯ ಮೆರೆದಿದೆ.
ಗಡಿ ನಾಡೂ ಆದ ತುಮಕೂರಿನಲ್ಲಿ ಈಗಲೂ ಸರ್ಕಾರಿ ಕನ್ನಡ ಶಾಲೆಗಳೇ ಉತ್ತಮ ಫಲಿತಾಂಶ ಗಳಿಸುವುದರೊಂದಿಗೆ ಕಾನ್ವೆಂಟ್‌ಗಳನ್ನು ಹಿಂದಿಕ್ಕಿವೆ.
ಗುಣಮಟ್ಟದ ಬೋಧಕರು, ಸರ್ವಶಿಕ್ಷ ಅಭಿಯಾನವನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿರುವುದರಿಂದ ಪೋಷಕರೂ ಮಕ್ಕಳನ್ನು ಕನ್ನಡ ಶಾಲೆಗೆ ಸೇರಿಸಲು ಉತ್ಸುಕರಾಗಿದ್ದಾರೆ.
ಜಿಲ್ಲೆಯಲ್ಲಿ ಒಟ್ಟು 48 ಶಾಲೆಗಳು 100 ವರ್ಷಗಳನ್ನು ಪೂರೈಸಿದ್ದು, ಉತ್ತಮ ಫಲಿತಾಂಶ ಮತ್ತು ಗರಿಷ್ಠ ಮಕ್ಕಳನ್ನು ಹೊಂದಿರುವ ಖ್ಯಾತಿಗೆ ಪಾತ್ರವಾಗಿದೆ. ತುಮಕೂರು ನಗರದಲ್ಲಿ 16 ಶಾಲೆಗಳು, ಚಿಕ್ಕನಾಯಕನಹಳ್ಳಿಯಾಲ್ಲಿ 5, ಗುಬ್ಬಿಯಲ್ಲಿ 9, ತಿಪಟೂರಿನಲ್ಲಿ 11, ತುರುವೇಕೆರೆಯಲ್ಲಿ 6 ಮತ್ತು ಕುಣಿಗಲ್‌ನಲ್ಲಿ ಶಾಲೆಯೊಂದು ಶತಕ ಕಂಡಿವೆ.
ಕಿರಿಯ ಪ್ರಾಥಮಿಕ ಶಾಲೆ, ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆ ಸೇರಿ ತುಮಕೂರು ಜಿಲ್ಲೆಯಲ್ಲಿ ಒಟ್ಟು 2753 ಶಾಲೆಗಳಿವೆ. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ 1446 ಇವೆ. ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ 4 ಇದ್ದರೆ, ಅನುದಾನ ರಹಿತ ಶಾಲೆ 48 ಇವೆ. ಹಾಗೆಯೇ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 784, ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ 51 ಇವೆ. ಅನುದಾನ ರಹಿತ ಹಿರಿಯ ಪ್ರಾಥಮಿಕ ಶಾಲೆ 210 ಇವೆ. 133 ಸರ್ಕಾರಿ ಪ್ರೌಢಶಾಲೆಗಳಿದ್ದು, 207 ಅನುದಾನಿತ ಶಾಲೆ ಹಾಗೂ 132 ಅನುದಾನ ರಹಿತ ಶಾಲೆ ಇವೆ. ತುಮಕೂರು ಜಿಲ್ಲೆಯಲ್ಲಿ ಒಟ್ಟು 2 ಲಕ್ಷ 49 ಸಾವಿರದ 120 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ.
ಕನ್ನಡ ಶಾಲೆಗಳಿಗೆ ಕುತ್ತಿಲ್ಲ
ಜಿಲ್ಲೆಯಲ್ಲಿ ಈವರೆಗೆ ಒಟ್ಟು 58 ಶಾಲೆಗಳನ್ನು ಮುಚ್ಚಲಾಗಿವೆ. ಆದರೂ ಪೋಷಕರು ಮಾತ್ರ ಕನ್ನಡ ಶಾಲೆಗಳಿಗೆ ಸೇರಿಸಲು ಉತ್ಸುಕರಾಗಿದ್ದರೆ. ಬಿಸಿಯೂಟ, ಕ್ಷೀರಭಾಗ್ಯ ಯೋಜನೆಗಳು ಮಕ್ಕಳನ್ನು ಶಾಲೆಗೆ ಕರೆತರುವಲ್ಲಿ ಯಶಸ್ವಿಯಾಗಿವೆ. ಬಿಸಿಯೂಟ, ಸರ್ವಶಿಕ್ಷಣ ಅಭಿಯಾನ, ಕ್ಷೀರಭಾಗ್ಯ ಕಾರ್ಯಕ್ರಮಗಳಿಂದ ಮಕ್ಕಳು ಶಾಲೆಗೆ ಸೇರುವ ಸಂಖ್ಯೆ ಶೇ.10ರಷ್ಟು ಹೆಚ್ಚಿದೆ. ಭಿಕ್ಷಾಟನೆ ಮಾಡಿ ಜೀವನ ಸಾಗಿಸುವ ಕೆಲವು ಸಮುದಾಯಗಳ ಮಕ್ಕಳೂ ಶಾಲೆಗೆ ಬರುತ್ತಿದ್ದಾರೆ. ಅನಕ್ಷರಸ್ಥ ಪೋಷಕರೂ ಮಕ್ಕಳನ್ನು ಶಾಲೆಗೆ ಸೇರಿಸಲು ಉತ್ಸುಕರಾಗಿದ್ದಾರೆ. ಸುಮಾರು ಶೇ.60ಕ್ಕೂ ಹೆಚ್ಚು ಹಿಂದುಳಿದ ಗ್ರಾಮಗಳನ್ನು ಹೊಂದಿರುವ ಕಲ್ಪತರು ಜಿಲ್ಲೆಯಲ್ಲಿ ಕನ್ನಡ ಶಾಲೆಗಳಿಗೆ ಯಾವುದೇ ಕುತ್ತಿಲ್ಲ.
-ಉಗಮ ಶ್ರೀನಿವಾಸ್