ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಬೆಳಗ್ಗೆ ಆರ್ಭಟ; ಸಂಜೆ ಸಮಾಧಾನ

Mainashree
Updated On : 29 Nov 2013, 11:52 am

ಸುವರ್ಣ ವಿಧಾನಸೌಧ: ರೈತನ ಆತ್ಮಹತ್ಯೆ ಹಿನ್ನೆಲೆಯಲ್ಲಿ ಬುಧವಾರ ಮಧ್ಯಾಹ್ನದಿಂದ ಪ್ರತಿಭಟನೆ, ಘೋಷಣೆ, ಕೂಗಾಟದಿಂದ ಕೋಲಾಹಲದಲ್ಲೇ ಮುಳುಗಿದ್ದ ವಿಧಾನಸಭೆ ಅಧಿವೇಶನ ಗುರುವಾರ ಸಂಜೆಯ ವೇಳೆಗೆ ಸ್ವಲ್ಪ ತಣ್ಣಗಾಗಿದೆ.
ಶುಕ್ರವಾರದಿಂದ ಕಲಾಪ ಸುಗಮವಾಗಿ ನಡೆಯುವ ವಾತಾವರಣ ಸೃಷ್ಟಿಯಾಗಿದೆ.
ಸುವರ್ಣ ವಿಧಾನಸೌಧದ ಎದುರು ರೈತ ಆತ್ಮಹತ್ಯೆ ಮಾಡಿಕೊಂಡ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಸರ್ಕಾರದ ರಾಜಿನಾಮೆಗೆ ಆಗ್ರಹಿಸಿ ಹಾಗೂ ಕಬ್ಬಿಗೆ ಕನಿಷ್ಠ ಬೆಂಬಲ ಬೆಲೆ ನೀಡುವಂತೆ ಆಗ್ರಹಿಸಿ ಬಿಜೆಪಿ ಮತ್ತು ಕೆಜೆಪಿ ಸದಸ್ಯರು ನಡೆಸುತ್ತಿದ್ದ ಧರಣಿ ಅಂತ್ಯಗೊಂಡಿದೆ.
ಸರ್ಕಾರದ ವಿರುದ್ಧ ಮತ್ತು ಮುಖ್ಯಮಂತ್ರಿಗಳ ರಾಜಿನಾಮೆಗೆ ಆಗ್ರಹಿಸಿ ಬುಧವಾರದಿಂದ ಆರಂಭಿಸಿರುವ ಧರಣಿ ವಾಪಸ್ ಪಡೆದಿರುವ ಎರಡೂ ಪಕ್ಷಗಳು ಶುಕ್ರವಾರದಿಂದ ಕಲಾಪದಲ್ಲಿ ಪಾಲ್ಗೊಳ್ಳಲು ನಿರ್ಧರಿಸಿವೆ.
ಇದರಿಂದಾಗಿ ಬೆಳಗಾವಿ ಸುವರ್ಣಸೌಧದಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಬಗ್ಗೆ ಚರ್ಚೆಯಾಗುವ ನಿರೀಕ್ಷೆ ಈಡೇರುವ ಲಕ್ಷಣ ಗೋಚರಿಸಿದೆ.
ಮುಂದೂಡಲಾಗಿತ್ತು: ಬೆಳಗ್ಗೆ ಆರಂಭವಾಗಿದ್ದ ಕಲಾಪವನ್ನು ಗದ್ದಲದ ಕಾರಣ ಮುಂದೂಡಲಾಯಿತು. ಮತ್ತೆ 1.45ಕ್ಕೆ ಸದನ ಸಮಾವೇಶಗೊಂಡರೂ ಕಲಾಪ ನಡೆಯಲಿಲ್ಲ.
ಮತ್ತೆ 1.45ಕ್ಕೆ ಕಲಾಪ ಆರಂಭಿಸಿದ ಸ್ಪೀಕರ್ ಭೋಜನ ವಿರಾಮಕ್ಕೆ ಮುಂದೂಡಿದರು. ಭೋಜನಾನಂತರ 3.15ಕ್ಕೆ ಕಲಾಪ ಸೇರಿದಾಗ ಬಿಜೆಪಿ ಮತ್ತು ಕೆಜೆಪಿ ಸದಸ್ಯರು ಧರಣಿ ಮುಂದುವರಿಸಿದರು. ಸರ್ಕಾರದ ವಿರುದ್ಧ ಘೋಷಣೆ ಕೂಗಲಾರಂಭಿಸಿದರು. ಈ ಕ್ರಮಕ್ಕೆ ಜೆಡಿಎಸ್ ಉಪನಾಯಕ ವೈ.ಎಸ್.ವಿ. ದತ್ತಾ ಆಕ್ಷೇಪ ವ್ಯಕ್ತಪಡಿಸಿದಾಗ ಆಡಳಿತ ಸದಸ್ಯರು ಬೆಂಬಲ ವ್ಯಕ್ತಪಡಿಸಿ ಬಿಜೆಪಿ ಮತ್ತು ಯಡಿಯೂರಪ್ಪ ಅವರ ವಿರುದ್ಧ ಘೋಷಣೆ ಆರಂಭಿಸಿದರು.
ಇದರಿಂದಾಗಿ ಸದನದಲ್ಲಿ ಕೋಲಾಹಲವುಂಟಾಗಿ ಯಾರು ಏನು ಮಾತನಾಡುತ್ತಿದ್ದಾರೆ ಎಂಬುದೇ ಅರ್ಥವಾಗಲಿಲ್ಲ. ಇಷ್ಟರ ಮಧ್ಯೆಯೂ ಬಿಜೆಪಿ ವಿರುದ್ಧ ಕೆಂಡ ಕಾರಿದ ಸಿದ್ದರಾಮಯ್ಯ, ಪ್ರಜಾಪ್ರಭುತ್ವ ಮತ್ತು ಬಡವರ ಬಗ್ಗೆ ಬಿಜೆಪಿಯವರಿಗೆ ಮತ್ತು ಯಡಿಯೂರಪ್ಪ ಅವರಿಗೆ ನಂಬಿಕೆ ಇಲ್ಲ. ನಾಚಿಕೆಯಾಗಬೇಕು ಇವರಿಗೆ, ರೈತನ ಆತ್ಮಹತ್ಯೆ ಹೆಸರಲ್ಲಿ ರಾಜಕೀಯ ಮಾಡುವ ಇವರು ಹಿಂದೆ ರೈತರನ್ನು ಗುಂಡಿಟ್ಟು ಕೊಂದರು ಎಂದು ತಿವಿದರು.
ಈ ಗದ್ದಲದ ನಡುವೆಯೂ ಸ್ಪೀಕರ್ ಕಾಗೋಡು ತಿಮ್ಮಪ್ಪ ಅವರು ಕಲಾಪ ಮುಂದುವರಿಸಿ ಪ್ರಶ್ನೋತ್ತರ ಕೈಗೆತ್ತಿಕೊಂಡರು. ಜತೆಗೆ ಎಂಟು ವಿಧೇಯಕಗಳನ್ನು ಕೂಡ ಮಂಡಿಸಲಾಯಿತು.
ಇಷ್ಟೆಲ್ಲಾ ನಡೆಯುವಾಗಲೂ ಬಿಜೆಪಿ ಮತ್ತು ಕೆಜೆಪಿ ಸದಸ್ಯರು ಧರಣಿ ಮುಂದುವರಿಸಿ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಲೇ ಇದ್ದರು.
ಈ ಸಂದರ್ಭದಲ್ಲಿ ಮಧ್ಯಪ್ರವೇಶಿಸಿದ ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ, ಕಲಾಪ ಸಲಹಾ ಸಮಿತಿ ಸಭೆ ಕರೆದು ಸಮಸ್ಯೆ ಬಗೆಹರಿಸಿಕೊಳ್ಳುವಂತೆ ಸಲಹೆ ಮಾಡಿದರು. ಇದಕ್ಕೆ ಮುಖ್ಯಮಂತ್ರಿಗಳೂ ಒಪ್ಪಿದ್ದರಿಂದ ಮಧ್ಯಾಹ್ನ 3.45ಕ್ಕೆ ಕಲಾಪವನ್ನು ಮತ್ತೆ ಮುಂದೂಡಲಾಯಿತು.

ಸರ್ಕಾರ ಬದ್ಧ; ಧರಣಿ ವಾಪಸ್  
ಸಂಜೆ 4.50ಕ್ಕೆ ಮತ್ತೆ ಸದನ ಸೇರಿದಾಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕಬ್ಬು ಬೆಳೆಗಾರರ ಹಿತ ರಕ್ಷಿಸಲು ಸರ್ಕಾರ ಬದ್ಧವಾಗಿದೆ. ಕಬ್ಬಿಗೆ ಸರ್ಕಾರ ನಿಗದಿಪಡಿಸಿರುವ ದರ ನೀಡದ ಸಕ್ಕರೆ ಕಾರ್ಖಾನೆಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗವುದು. ಈ ವಿಚಾರದಲ್ಲಿ ಯಾವುದೇ ಅನುಮಾನ ಬೇಡ. ಬುಧವಾರ ರೈತ ಆತ್ಮಹತ್ಯೆ ಮಾಡಿಕೊಂಡಂತಹ ದುರಂತ ನಡೆಯಬಾರದಿತ್ತು. ಕಬ್ಬು ಬೆಳೆಗಾರರ ವಿಚಾರದಲ್ಲಿ ಸರ್ಕಾರದ ನಿಲುವು ಹೊರಬೀಳುವ ಮುನ್ನವೇ ಆಗಿರುವ ದುರ್ಘಟನೆ. ಆದ್ದರಿಂದ ಈ ವಿಚಾರದಲ್ಲಿ ರಾಜಕೀಯ ಮಾಡದೆ ಮಾನವೀಯ ದೃಷ್ಟಿಯಿಂದ ಎಲ್ಲರೂ ಒಟ್ಟಾಗಿ ರೈತರ ಸಮಸ್ಯೆಗಳನ್ನು ಬಗೆಹರಿಸಲು ಗಮನಹರಿಸಬೇಕು. ಆದ್ದರಿಂದ ಧರಣಿ ಹಿಂಪಡೆಯಿರಿ ಎಂದು ಮನವಿ ಮಾಡಿಕೊಂಡರು. ಇದಾದ ಬಳಿಕ ಪ್ರತಿಪಕ್ಷ ನಾಯಕ ಎಚ್.ಡಿ. ಕುಮಾರಸ್ವಾಮಿ, ಜಗದೀಶ್ ಶೆಟ್ಟರ್ ಅವರು ಮಾತನಾಡಿದರು. ಕಬ್ಬು ಬೆಳೆಗಾರರಿಗೆ ಸಕ್ಕರೆ ಕಾರ್ಖಾನೆಗಳು ನೀಡಬೇಕಾದ 2,500  ಮತ್ತು ಸರ್ಕಾರದ ಪ್ರೋತ್ಸಾಹಧನ 150 ಸರ್ಕಾರವೇ ತಲುಪಿಸುವ ಜವಾಬ್ದಾರಿ ವಹಿಸಿಕೊಂಡರೆ ಮಾತ್ರ ಈ ವಿಚಾರದಲ್ಲಿ ಬೆಂಬಲ ನೀಡುವುದಾಗಿ ಹೇಳಿ ಧರಣಿ ವಾಪಸ್ ಪಡೆದರು.

ಬಿಎಸ್‌ವೈ- ಕಾಂಗ್ರೆಸ್ ವಾಗ್ಯುದ್ಧ

ಇನ್ನೇನು ಬುಧವಾರ ರೈತನ ಆತ್ಮಹತ್ಯೆ ಬಳಿಕ ಹಾದಿ ತಪ್ಪಿದ್ದ ಸದನದ ನಡವಳಿಕೆಗಳು ಸರಿದಾರಿಗೆ ಬರುತ್ತಿದೆ ಎನ್ನುವಷ್ಟರಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಹೇಳಿಕೆಗಳು ಮತ್ತೆ ಸದನದಲ್ಲಿ ಕೋಲಾಹಲಕ್ಕೆ ಕಾರಣವಾಯಿತು. ರೈತರ ಆತ್ಮಹತ್ಯೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇರ ಹೊಣೆ ಎಂದು ಆರೋಪಿಸಿದ ಯಡಿಯೂರಪ್ಪ, ಆತ್ಮಹತ್ಯೆಗೆ ಮುನ್ನ ರೈತ ವಿಠಲ ಭೀಮಪ್ಪ ಅರಬಾವಿ ನೀಡಿದ ಹೇಳಿಕೆಯನ್ನು ಓದಲಾರಂಭಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರು. ಅಷ್ಟೇ ಅಲ್ಲ, ಯಡಿಯೂರಪ್ಪ ಅವರ ಹೇಳಿಕೆ ಖಂಡಿಸಿ ಸಚಿವ ಪ್ರಕಾಶ್ ಹುಕ್ಕೇರಿ ಅವರೇ ಬಾವಿಗೆ ಇಳಿಯಲು ಮುಂದಾದರು. ಅಷ್ಟರಲ್ಲಿ ಪಕ್ಕದಲ್ಲಿದ್ದ ಸದಸ್ಯರು ಅವರನ್ನು ಎಳೆದು ಕೂರಿಸಿದರು. ಇಷ್ಟಾದರೂ ಗದ್ದಲ ಕಡಿಮೆಯಾಗುವ ಲಕ್ಷಣ ಕಾಣಿಸಲಿಲ್ಲ. ಸ್ಪೀಕರ್ ಮಧ್ಯ ಪ್ರವೇಶಿಸಿ ಯಡಿಯೂರಪ್ಪ ಅವರ ಈ ಹೇಳಿಕೆಯನ್ನು ಕಡತದಿಂದ ತೆಗೆಸಿ ಹಾಕಿದರು. ಅಂತಿಮವಾಗಿ ಮುಖ್ಯಮಂತ್ರಿಗಳು ಉತ್ತರ ಪೂರ್ಣಗೊಳಿಸುತ್ತಿದ್ದಂತೆ ಅದನ್ನು ವಿರೋಧಿಸಿ ಬಿಜೆಪಿ ಮತ್ತು ಕೆಜೆಪಿ ಸದಸ್ಯರು ಸಭಾತ್ಯಾಗ ಮಾಡಿದರು.

- ಪ್ರದೀಪ್‌ಕುಮಾರ್ ಎಂ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement