ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರಾಜ್ಯ ಸರ್ಕಾರಕ್ಕೆ ಧಿಕ್ಕಾರ!

ಕಬ್ಬು ಬೆಳೆಗಾರನದು ಆತ್ಮಹತ್ಯೆಯಲ್ಲ. ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದ ಕೊಲೆ! ಸತತ ಮೂರು ದಿನಗಳ...

ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಸದಾನಂದಗೌಡ ನಡುವೆ ಮಾತಿನ ಚಕಮಕಿ ನಡೆಯಿತು.
Mainashree
Updated On : 27 Nov 2013, 10:18 am

ಸುವರ್ಣ ವಿಧಾನ ಪರಿಷತ್: ಕಬ್ಬು ಬೆಳೆಗಾರನದು ಆತ್ಮಹತ್ಯೆಯಲ್ಲ. ಅದು ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮಾಡಿದ ಕೊಲೆ!
ಸತತ ಮೂರು ದಿನಗಳ ಕಾಲ ರೈತರು ಹೋರಾಟ ನಡೆಸಿದರೂ ಸಹ ಲಜ್ಜೆಗೆಟ್ಟ ಸರ್ಕಾರ ಪರಿಹಾರ ಸೂಚಿಸಲಿಲ್ಲ. ಮಂಗಳವಾರವೇ ಸಿದ್ದರಾಮಯ್ಯನವರು ಉತ್ತರ ಕೊಟ್ಟಿದ್ದರೆ ಒಬ್ಬ ರೈತನ ಜೀವ ಉಳಿಯುತ್ತಿತ್ತು. ಇದರ ಹೊಣೆಹೊತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜಿನಾಮೆ ನೀಡಬೇಕು ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಡಿ.ವಿ. ಸದಾನಂದಗೌಡ ಆರೋಪಿಸಿದ್ದಾರೆ.
ಬುಧವಾರ ಸುವರ್ಣ ವಿಧಾನಸೌಧದ ಎದುರು ರೈತ ಆತ್ಮಹತ್ಯೆ ಮಾಡಿಕೊಂಡ ವಿಷಯ ಮಧ್ಯಾಹ್ನ ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಧ್ವನಿಸಿತು. ವಿರೋಧ ಪಕ್ಷಗಳು ಆಡಳಿತ ಪಕ್ಷವನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡವು. ಭಾವಾವೇಶಕ್ಕೆ ಒಳಗಾದ ಸದಾನಂದಗೌಡ, ಸರ್ಕಾರ ರೈತರಿಗೆ ವಿಶ್ವಾಸ ತುಂಬುವ ಒಂದು ಮಾತನ್ನೂ ಆಡಲಿಲ್ಲ. ಬರೀ ಉಡಾಫೆ ಮಾತುಗಳಿಂದಲೇ ಕಾಲ ಕಳೆಯಿತು. ಹಿಂದಿನ ಸರ್ಕಾರದ ಮೇಲೆ ಗೂಬೆ ಕೂರಿಸಿತು. ಹೀಗಾಗಿ ಇಂಥ ದುರ್ಘಟನೆ ನಡೆಯುವಂತಾಯಿತು. ಇದು ಆತ್ಮಹತ್ಯೆಯಲ್ಲ. ಸರ್ಕಾರವೇ ಮಾಡಿದ ಕೊಲೆ. ಇದು ಕೊಲೆಗೆಡುಕ ಸರ್ಕಾರ ಎಂದರು.
ಪ್ರತಿಪಕ್ಷ ಕೆಂಡಾಮಂಡಲ: ಕೊಲೆಗೆಡುಕ ಸರ್ಕಾರ ಎಂಬ ಹೇಳಿಕೆಗೆ ಕಾಂಗ್ರೆಸ್ ಶಾಸಕರು ಮತ್ತು ಸಚಿವರು ತಕರಾರು ವ್ಯಕ್ತಪಡಿಸಿದರು. ರೈತರಿಗೆ ಗುಂಡು ಹಾರಿಸಿ ಕೊಂದ ಬಿಜೆಪಿ ಸರ್ಕಾರ ಈಗ ನಮ್ಮ ಮೇಲೆ ಎರಗುತ್ತಿದೆ. ರೈತನ ಆತ್ಮಹತ್ಯೆಯಿಂದ ನಮಗೂ ನೋವಾಗಿದೆ. ವಿರೋಧ ಪಕ್ಷದವರು ಕಾಂಗ್ರೆಸ್‌ನ್ನು ಕೊಲೆಗಡುಕ ಸ್ಥಾನದಲ್ಲಿ ನಿಲ್ಲಿಸುವುದು ಸರಿಯಲ್ಲ ಎಂದರು. ಈ ಹಂತದಲ್ಲಿ ಆಡಳಿತ ಮತ್ತು ವಿರೋಧ ಪಕ್ಷದವರ ಮಧ್ಯೆ ವಾಗ್ವಾದ ನಡೆಯಿತು. ಸಭೆಯಲ್ಲಿ ಎನು ನಡೆಯುತ್ತಿದೆ ಎಂಬುದು ತಿಳಿಯದಂತಾಯಿತು.
ಕಾಂಗ್ರೆಸ್ ಸರ್ಕಾರದ ನಿರ್ಲಕ್ಷ್ಯದ ಪರಿಣಾಮ ರೈತ ಆತ್ಮಹತ್ಯೆ ಮಾಡಿಕೊಂಡಿದ್ದು, ತಪ್ಪು ಮುಚ್ಚಿಕೊಳ್ಳಲು ವಿರೋಧ ಪಕ್ಷದ ನಾಯಕರು ಮಾತನಾಡುವಾಗ ಆಡಳಿತ ಪಕ್ಷದವರು ಗಲಾಟೆ ನಡೆಸುವುದು ಸರಿಯಲ್ಲ. ವಿರೋಧ ಪಕ್ಷದವರು ಮಾತು ಮುಗಿಸಿದ ನಂತರ ಉತ್ತರ ನೀಡಿ ಎಂದು ಬಸವರಾಜ ಹೊರಟ್ಟಿ ಆಡಳಿತ ಪಕ್ಷದವರಿಗೆ ಕಿವಿಮಾತು ಹೇಳಿದರು.
20 ನಿಮಿಷ ಮುಂದೂಡಿಕೆ: ಸಚಿವ ಎಸ್.ಆರ್. ಪಾಟೀಲ ಅವರು ಸಕ್ಕರೆ ಕಾರ್ಖಾನೆ ಮಾಲೀಕರಾಗಿದ್ದಾರೆ. ಪಾಪ ಅವರಿಂದ ಏನು ಮಾಡಲು ಸಾಧ್ಯ? ಮುಖ್ಯಮಂತ್ರಿಗಳೇ ಬಂದು ಉತ್ತರ ಕೊಡಬೇಕೆಂದು ಸದಾನಂದಗೌಡರು ಮತ್ತೊಮ್ಮೆ ಒತ್ತಾಯಿಸಿದರು. ಈ ವೇಳೆ ಕೊಲೆಗಡುಕ ಸರ್ಕಾರಕ್ಕೆ ಧಿಕ್ಕಾರ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ ಘೋಷಣೆ ಕೂಗಿದರು. ಉಪಸಭಾಪತಿ ವಿಮಲಾಗೌಡ ಅವರು ಗದ್ದಲ ತಣ್ಣಗಾಗಿಸಲು ನಡೆಸಿದ ಪ್ರಯತ್ನ ವ್ಯರ್ಥವಾಯಿತು. ಕಲಾಪವನ್ನು 20 ನಿಮಿಷ ಮುಂದೂಡಲಾಯಿತು.
ಪರಿಹಾರ ಘೋಷಿಸಲು ಪಟ್ಟು: ನಂತರ ಸಭೆ ಆರಂಭವಾದಾಗ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಸದನದಲ್ಲಿ ರೈತನ ಆತ್ಮಹತ್ಯೆ ಕುರಿತು ಬೇಸರ ವ್ಯಕ್ತಪಡಿಸಿ, ರೈತನ ಕುಟುಂಬಕ್ಕೆ ಪರಿಹಾರ ಘೋಷಿಸಲು ಮುಂದಾದರು. ಕೂಡಲೇ ಸದನದ ಬಾವಿಗೆ ಇಳಿದ ವಿರೋಧ ಪಕ್ಷದ ಮಖಂಡರು ಮೊದಲು ಮೃತ ರೈತನ ಆತ್ಮಕ್ಕೆ ಶಾಂತಿ ಕೋರೋಣ. ನಂತರ ಪರಿಹಾರ ಘೋಷಿಸಿ ಎಂದು ಪಟ್ಟು ಹಿಡಿದರು. ಆದರೂ ವಿರೋಧ ಪಕ್ಷದ ಮುಖಂಡರ ಘೋಷಣೆ, ಗದ್ದಲ-ಗೋಜಲು ನಡುವೆಯೇ ಮುಖ್ಯಮಂತ್ರಿಗಳು ಹೇಳಿಕೆ ನೀಡಿದರು. ನಂತರ ಕಲಾಪವನ್ನು ಗುರುವಾರ ಬೆಳಗ್ಗೆ 11ಕ್ಕೆ ಮುಂದೂಡಲಾಯಿತು.


ಸರ್ಕಾರದ ವಿಳಂಬ ನೀತಿಯಿಂದಾಗಿ ರೈತ ಪ್ರಾಣ ಕಳೆದುಕೊಳ್ಳುವಂತಾಗಿದೆ. ಇದು ರೈತರ ಹಂತಕ ಸರ್ಕಾರವಾಗಿದ್ದು ಕೂಡಲೇ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಬೇಕು.
- ಡಿ.ವಿ. ಸದಾನಂದಗೌಡ, ವಿಧಾನಪರಿಷತ್ ಪ್ರತಿಪಕ್ಷ ನಾಯಕ

 ಹೋರಾಟ ಏನು, ಎತ್ತ...?
ಕಬ್ಬು ಬೆಳೆಗಾರರ ಹೋರಾಟ ಆರಂಭವಾಗಿದ್ದು ಯಾವಾಗ?
- ಜುಲೈ ತಿಂಗಳಲ್ಲಿ
ಎಲ್ಲೆಲ್ಲಿ ಹೋರಾಟ?
-  ಬಾಗಲಕೋಟೆ, ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ.
ಸರ್ಕಾರ ಏನು ಮಾಡಿತು?
-ಕಬ್ಬು ಖರೀದಿ, ದರ ನಿಯಂತ್ರಣ ಸಮಿತಿ ಸಭೆ ನಡೆದದ್ದು ಯಾವಾಗ?
-  ಬೆಂಗಳೂರಿನಲ್ಲಿ ಸೆಪ್ಟೆಂಬರ್ ತಿಂಗಳಲ್ಲಿ.
ಸಭೆಯಲ್ಲಿ ಏನಾಯಿತು?
-  ಬೇರೆ ರಾಜ್ಯಗಳಲ್ಲಿರುವ ದರದ ವರದಿ ತರಿಸಿಕೊಳ್ಳುವ ನೆಪದಲ್ಲಿ ಸಭೆ ಮುಂದೂಡಿಕೆ.
ರೈತರ ನಿಲುವು ಏನು?
-  ಕಬ್ಬು ಒಣಗಿ ತೂಕ ಕಡಿಮೆಯಾಗುತ್ತದೆ. ಬೇಗ ದರ ಘೋಷಣೆ ಮಾಡಿ, ಕಬ್ಬು ಅರೆಯಲು ಮಾಲೀಕರಿಗೆ ತಾಕೀತು ಮಾಡಲು ಆಗ್ರಹ.
ಖಾಸಗಿ ಕಾರ್ಖಾನೆಗಳು ಮಾಡಿದ್ದೇನು?
-  ಟನ್‌ಗೆ 2000 ಸಾಕು ಎಂದು ರೈತರಿಂದ ಮುಚ್ಚಳಿಕೆ ಪತ್ರ ಬರೆಯಿಸಿಕೊಂಡು ದಬ್ಬಾಳಿಕೆ.
ಹೋರಾಟ ತೀವ್ರವಾಗಿದ್ದು ಯಾವಾಗ?
-  ಅಕ್ಟೋಬರ್ ಎರಡನೇ ವಾರದಲ್ಲಿ.
ದರ ನಿಗದಿಯಾಗಿದ್ದು ಯಾವಾಗ, ಎಷ್ಟು?
-  ನವೆಂಬರ್ ಮೊದಲ ವಾರದಲ್ಲಿ ಟನ್‌ಗೆ 2500 ನಿಗದಿ
ಖಾಸಗಿ ಕಾರ್ಖಾನೆಗಳ ತೀರ್ಮಾನ?
- ಸರ್ಕಾರ ನಿಗದಿ ಮಾಡಿದ ದರ ಕೊಡಲು ನಕಾರ
ಕಬ್ಬು ಬೆಳೆಗಾರರ ಬೇಡಿಕೆ ಏನು?
- ಟನ್‌ಗೆ 3000 ನಿಗದಿ, ಕಳೆದ ವರ್ಷದ ಬಾಕಿ ಪಾವತಿ, ಸರ್ಕಾರದಿಂದ 1000 ಬೆಂಬಲ ಬೆಲೆ ಘೋಷಿಸಿ
ಸಕ್ಕರೆ ಸಚಿವರು ಮಾಡಿದ್ದೇನು?
-  ಕಬ್ಬು ಬೆಳೆಗಾರರ ಹೋರಾಟವನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಮುಖ್ಯಮಂತ್ರಿಗಳ ಮೇಲೆ ಒತ್ತಡ ಹೇರಲಿಲ್ಲ
ಸರ್ಕಾರ ಮಾಡಿದ್ದೇನು?
-  ದರ ನಿಗದಿಪಡಿಸಿ ಅಧಿವೇಶನಕ್ಕೆ ಮುನ್ನ ಅಧಿಸೂಚನೆ ಪ್ರಕಟ
ಆಗಿದ್ದೇನು?
-  ಬುಧವಾರ ರೈತನ ಆತ್ಮಹತ್ಯೆ.

  ರಾಜ್ಯದಲ್ಲಿರುವ ಒಟ್ಟು ಸಕ್ಕರೆ ಕಾರ್ಖಾನೆ
ಖಾಸಗಿ ವಲಯ     35
ಸಹಕಾರಿ ವಲಯ    20
ಸಾರ್ವಜನಿಕ ವಲಯ    02
ಕಬ್ಬು ನುರಿಸದ ಕಾರ್ಖಾನೆಗಳು    12
ಒಟ್ಟು ಕಾರ್ಖಾನೆಗಳು    69

 ರಾಜಕಾರಣಿಗಳ ನೇತೃತ್ವದ ಕಾರ್ಖಾನೆ
-  ಉಮೇಶ್ ಕತ್ತಿ - ವಿಶ್ವನಾಥ್ ಶುಗರ್ಸ್
-  ಶಾಮನೂರು ಶಿವಶಂಕರಪ್ಪ - ಶಾಮನೂರು ಶುಗರ್ಸ್, ದಾವಣಗೆರೆ ಶುಗರ್ಸ್
-  ಬಾಲಚಂದ್ರ ಜಾರಕಿಹೊಳಿ - ಘಟಪ್ರಭ ಶುಗರ್ಸ್
-  ಗುರುಪಾದಪ್ಪ ನಾಗಮಾರಪಳ್ಳಿ - ನಾರಂಜ ಸಹಕಾರಿ ಸಕ್ಕರೆ ಕಾರ್ಖಾನೆ
-  ಭೀಮಣ್ಣ ಖಂಡ್ರೆ - ಮಹಾತ್ಮ ಗಾಂಧಿ ಶುಗರ್ಸ್
- ಸಂಜಯ ಖೇಣಿ - ಬೀದರ್ ಸಹಕಾರಿ ಸಕ್ಕರೆ
-  ಸತೀಶ್ ಜಾರಕಿಹೊಳಿ - ಸತೀಶ್ ಶುಗರ್ಸ್
-  ಲಕ್ಷ್ಮಣ ಸವದಿ - ಹೀರಾ ಶುಗರ್ಸ್
-  ಡಿ.ಬಿ. ಇನಾಂದಾರ್ - ಮಲಪ್ರಭ ಶುಗರ್ಸ್
-  ಮುರುಗೇಶ್ ನಿರಾಣಿ - ನಿರಾಣಿ ಶುಗರ್ಸ್
-  ಪ್ರಭಾಕರ್ ಕೋರೆ - ಶಿವಗಂಗೆ ಶುಗರ್ಸ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement