ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ರೈತರಿಗೆ 2 ಸಾವಿರ ಕೋಟಿ ತೆಗೆದಿರಿಸುವುದು ಕಷ್ಟವೇ?

'ನೀವು ಹಣಕಾಸು ಸಚಿವರಾಗಿದ್ದಾಗ 1995ರಲ್ಲಿ ಬಜೆಟ್ ಮೊತ್ತ ಕೆಲವೇ ಸಾವಿರ ಕೋಟಿ ರುಪಾಯಿ ಇತ್ತು. ಆಗ ರೈತರಿಗೆ ಪ್ರೋತ್ಸಾಹ ಧನ...

Mainashree
Updated On : 29 Nov 2013, 11:50 am

ಸುವರ್ಣ ವಿಧಾನಸೌಧ: 'ನೀವು ಹಣಕಾಸು ಸಚಿವರಾಗಿದ್ದಾಗ 1995ರಲ್ಲಿ ಬಜೆಟ್ ಮೊತ್ತ ಕೆಲವೇ ಸಾವಿರ ಕೋಟಿ ರುಪಾಯಿ ಇತ್ತು. ಆಗ ರೈತರಿಗೆ ಪ್ರೋತ್ಸಾಹ ಧನ ನೀಡಲು 950 ಕೋಟಿ ನೀಡಿದ್ದೀರಿ. ಈಗ 1.22 ಲಕ್ಷ ಕೋಟಿ ಬಜೆಟ್ ಮಂಡಿಸಿದ ನಿಮಗೆ ರೈತರಿಗಾಗಿ 2 ಸಾವಿರ ಕೋಟಿ ತೆಗೆದಿರಿಸುವುದು ಕಷ್ಟವೇ...? ಈ ಕುರಿತು ತಕ್ಷಣವೇ ನಿರ್ಧಾರ ಕೈಗೊಳ್ಳಿ. ಪ್ರತಿ ಪಕ್ಷಗಳು ನಿಮಗೆ ಸಂಪೂರ್ಣ ಸಹಕಾರ ಕೊಡುತ್ತವೆ'.
ಹೀಗೆಂದು ಸಿಎಂಗೆ ಸಲಹೆ ನೀಡಿದವರು ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ. ರೈತನ ಆತ್ಮಹತ್ಯೆ ಮತ್ತು ಕಬ್ಬಿಗೆ ದರ ನಿಗದಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸದನದಲ್ಲಿ ಗುರುವಾರ ಹೇಳಿಕೆ ನೀಡಿದ ಬಳಿಕ ಮಾತನಾಡಿದ ಕುಮಾರಸ್ವಾಮಿ, ಕಬ್ಬು ಬೆಳೆಗಾರರಿಗೆ 150 ಪ್ರೋತ್ಸಾಹ ಧನ ನೀಡಿದ ಸರ್ಕಾರದ ಕ್ರಮ ಸಂಪೂರ್ಣ ಸಮಾಧಾನ ತಂದಿಲ್ಲ. ಆದರೂ ರೈತರಿಗೆ ಅಷ್ಟು ಮಾತ್ರ ನೆರವು ನೀಡಿದ್ದಕ್ಕಾಗಿ ಅಭಿನಂದನೆ. ಕಬ್ಬು ಬೆಳೆಗಾರರ ನೆರವಿಗೆ ಬಂದಂತೆ ಇತರೆ ಕೃಷಿ ಉತ್ಪನ್ನಗಳ ಬೆಳೆಗಾರರಿಗೂ ನೀವು ಪ್ರೋತ್ಸಾಹ ಧನ ನೀಡಬೇಕು. ಅದಕ್ಕಾಗಿ ಆವರ್ತನಿಧಿಗೆ 2 ಸಾವಿರ ಕೋಟಿ ಒದಗಿಸಿ ಎಂದು ಒತ್ತಾಯಿಸಿದರು.

ಗ್ಯಾಟ್‌ನಲ್ಲಿ ದೇವೇಗೌಡರ ಪಾಲಿಲ್ಲ: ಗ್ಯಾಟ್ ಒಪ್ಪಂದದಲ್ಲಿ ದೇವೇಗೌಡರು ಪಾಲುದಾರರಲ್ಲ ಎಂದು ಕುಮಾರಸ್ವಾಮಿ ಅವರು ಸ್ಪಷ್ಟನೆ ನೀಡಿದ್ದಾರೆ. ಬುಧವಾರ ನಡೆದ ಕಲಾಪದಲ್ಲಿ ಗ್ಯಾಟ್ ಒಪ್ಪಂದದ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಶಾಸಕ ರಮೇಶಕುಮಾರ್ ಗ್ಯಾಟ್ ಒಪ್ಪಂದ ಮಾಡಿಕೊಳ್ಳುವಾಗ ಕರ್ನಾಟಕ ಸರ್ಕಾರವೂ ಬೆಂಬಲಿಸಿತ್ತು. ಆಗ ದೇವೇಗೌಡರು ಮುಖ್ಯಮಂತ್ರಿಯಾಗಿದ್ದರು ಎಂದು ಹೇಳಿದರು. ಈ ಕುರಿತಾಗಿ ಸ್ಪಷ್ಟನೆ ನೀಡಿದ ಕುಮಾರಸ್ವಾಮಿ, ಗ್ಯಾಟ್ ಒಪ್ಪಂದ ಏರ್ಪಟ್ಟಿದ್ದು 1994ರ ಸೆಪ್ಟೆಂಬರ್‌ನಲ್ಲಿ. ಆದರೆ, ದೇವೇಗೌಡರು ಮುಖ್ಯಮಂತ್ರಿಯಾಗಿದ್ದು 1994ರ ಡಿಸೆಂಬರ್‌ನಲ್ಲಿ. ಹಾಗಾಗಿ ಅವರು ಇದರಲ್ಲಿ ಭಾಗಿಯಾಗಿಲ್ಲ. ಮೇಲಾಗಿ ಸಂಸತ್ತಿನಲ್ಲಿ ಈ ಒಪ್ಪಂದವನ್ನು ಅವರು ವಿರೋಧಿಸಿದ್ದರು ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement