ಎಂಡೋ ಪರಿಹಾರ: ಪ್ರಗತಿ ವರದಿ ಸಲ್ಲಿಸಲು 'ಹೈ' ಆದೇಶ
ಕ.ಪ್ರ.ವಾರ್ತೆ ಬೆಂಗಳೂರು ನ. 29
ಇತರೆ ದೇಶಗಳಲ್ಲಿ ನಿಷೇಧಿತ ಎಂಡೋಸಲ್ಫಾನ್ ಕೀಟನಾಶಕವನ್ನು ಇಲ್ಲಿ ತಂದು ಬಳಸಲು ನಮ್ಮ ದೇಶವೇನು ಕಸದ ಬುಟ್ಟಿಯೇ ಎಂದು ಕಿಡಿಕಾರಿರುವ ಹೈಕೋರ್ಟ್, ರಾಜ್ಯದಲ್ಲಿ ಎಂಡೋಸಲ್ಫಾನ್ ಪೀಡಿತರಿಗೆ ಪರಿಹಾರ ವಿತರಣೆ ಕುರಿತ ಪ್ರಗತಿ ವರದಿ ಸಲ್ಲಿಸುವಂತೆ ಸರ್ಕಾರಕ್ಕೆ ಆದೇಶಿಸಿದೆ. 65 ದೇಶಗಳಲ್ಲಿ ನಿಷೇಧಿಸಲ್ಪಟ್ಟಿರುವ ಎಂಡೋಸಲ್ಫಾನ್ ಕೀಟನಾಶಕವನ್ನು ಬಳಸಲು ನಮ್ಮ ದೇಶದಲ್ಲಿ
ಅನುಮತಿ ನೀಡಿದ್ದು ಏಕೆ? ಹಣಕ್ಕಾಗಿ ವಿಷಯುಕ್ತ ಕೀಟನಾಶಕಗಳ ಬಳಕೆಗೆ ಅವಕಾಶ ನೀಡಿ ಈಗ ಪರಿಹಾರ ನೀಡುವ ಮೂಲಕ ಕಣ್ಣೊರೆಸುವ ಪ್ರಯತ್ನ ಮಾಡಲಾಗುತ್ತಿದೆ. ನೀವೇ ಮಾಡಿರುವ ತಪ್ಪಿಗೆ ಪರಿಹಾರ ನೀಡಿದರೆ ಸಾಕೆ ಎಂದು ಸರ್ಕಾರವನ್ನು ನ್ಯಾಯಪೀಠ ತರಾಟೆಗೆ ತೆಗೆದುಕೊಂಡಿದೆ.
ಎಂಡೋಸಲ್ಫಾನ್ ಪೀಡಿತರಿಗೆ ಶಾಶ್ವತ ಪರಿಹಾರ ವಿತರಿಸಲು ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಕೋರಿ ನ್ಯಾಯಾಲಯಕ್ಕೆ ಬರೆದ ಪತ್ರವೊಂದರ ಆಧಾರದ ಮೇಲೆ ದಾಖಲಿಸಿಕೊಂಡ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಎಸ್.ಎನ್.ಸತ್ಯನಾರಾಯಣ ಅವರಿದ್ದ ವಿಭಾಗೀಯ ಪೀಠ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಕಾರ್ಯದರ್ಶಿ ಹಾಜರಿಗೆ ಆದೇಶ: ಎಂಡೋಸಲ್ಫಾನ್ ಪೀಡಿತ ಪ್ರದೇಶದ ಸರ್ವೆ ನಡೆಸಲಾಗುತ್ತಿದ್ದು, ಸೂಕ್ತ ಪರಿಹಾರ ವಿತರಣೆಗೆ ಕ್ರಮ ತೆಗೆದುಕೊಳ್ಳಲಾಗುವುದು ಎಂದು 2012ರ ಡಿಸೆಂಬರ್ನಲ್ಲಿ ಸರ್ಕಾರ ಪ್ರಮಾಣಪತ್ರ ಸಲ್ಲಿಸಿತ್ತು. ಆದರೆ, ಪ್ರಮಾಣಪತ್ರ ಸಲ್ಲಿಸಿ ಒಂದು ವರ್ಷವಾಯಿತು. ಇಲ್ಲಿಯವರೆಗೆ ಯಾವ ಕ್ರಮ ತೆಗೆದುಕೊಂಡಿದ್ದೀರಿ. ಪ್ರಮಾಣಪತ್ರದಲ್ಲಿ ತಿಳಿಸಿದ್ದ ಯಾವ ಅಂಶಗಳನ್ನು ಜಾರಿಗೆ ತಂದಿದ್ದೀರಿ ಎಂದು ನ್ಯಾಯಪೀಠ ಪ್ರಶ್ನಿಸಿತು.
ಈ ಸಂಬಂಧ ಸರ್ಕಾರಿ ವಕೀಲರು ಸಮಾಧಾನಕರ ಉತ್ತರ ನೀಡದ ಹಿನ್ನೆಲೆಯಲ್ಲಿ, ಮುಂದಿನ ವಿಚಾರಣೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಖುದ್ದು ಹಾಜರಾಗಿ ವಿವರಣೆ ನೀಡುವಂತೆ ಆದೇಶಿಸಿ ವಿಚಾರಣೆ ಮುಂದೂಡಿತು.