ಡಿನೋಟಿಫಿಕೇಷನ್: ಬಿಎಸ್ವೈ ವಿರುದ್ಧ ದೂರು ರದ್ದತಿಗೆ ನಕಾರ
ಬೆಂಗಳೂರು: ಡಿನೋಟಿಫಿಕೇಷನ್ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ವಿರುದ್ಧ ಸಿರಾಜಿನ್ ಬಾಷ ಸಲ್ಲಿಸಿರುವ ನಾಲ್ಕು ಹಾಗೂ ಐದನೇ ಖಾಸಗಿ ದೂರನ್ನು ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಇದರಿಂದ ಖಾಸಗಿ ದೂರಿನ ವಿಚಾರಣೆ ಮುಂದುವರಿಯಲಿದೆ. ದೂರಿನ ರದ್ದತಿ ಕೋರಿ ಯಡಿಯೂರಪ್ಪ ಸಲ್ಲಿಸಿದ್ದ ಮೇಲ್ಮನವಿಯನ್ನು ಮುಖ್ಯ ನ್ಯಾ.ಡಿ.ಎಚ್.ವಘೇಲ ಹಾಗೂ ನ್ಯಾ.ಎಸ್.ಎನ್.ಸತ್ಯನಾರಾಯಣ ಅವರಿದ್ದ ವಿಭಾಗೀಯ ಪೀಠ ವಜಾಗೊಳಿಸಿದೆ. ಯಡಿಯೂರಪ್ಪ ಅವರು ತಮ್ಮ ಅಧಿಕಾರಾವಧಿಯಲ್ಲಿ ತಮ್ಮ ಪುತ್ರ ಹಾಗೂ ಅಳಿಯನ ಮಾಲೀಕತ್ವದ ದವಳಗಿರಿ ಪ್ರಾಪರ್ಟೀಸ್ ಹಾಗೂ ಭಗತ್ ಹೋಂ ಪ್ರೈ.ಲಿ. ಸಂಸ್ಥೆಯ ಮೂಲಕ ನಗರದಲ್ಲಿನ ಸರ್ಕಾರಿ ಭೂಮಿ ಕಾನೂನುಬಾಹಿರವಾಗಿ ಡಿನೋಟಿಫೈ ಮಾಡಿದ್ದಾರೆ. ನಂತರ ಅದನ್ನು ಖಾಸಗಿಯವರಿಗೆ ಮಾರಾಟ ಮಾಡಿದ್ದಾರೆ. ಇದರಿಂದ ಸರ್ಕಾರದ ಬೊಕ್ಕಸಕ್ಕೆ ಕೋಟ್ಯಂತರ ರುಪಾಯಿ ನಷ್ಟ ಉಂಟಾಗಿದೆ ಎಂದು ಆರೋಪಿಸಿ ಸಿರಾಜಿನ್ ಬಾಷ ಲೋಕಾಯುಕ್ತ ನ್ಯಾಯಾಲಯದಲ್ಲಿ ಖಾಸಗಿ ದೂರು ದಾಖಲಿಸಿದ್ದರು.