ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ತರುಣ್ ತೇಜಪಾಲ್ ಇಂದು ಬಂಧನ ಸಾಧ್ಯತೆ

ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತೆಹೆಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್‌ಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ...

Mainashree
Updated On : 30 Nov 2013, 11:54 am

ನವದೆಹಲಿ/ಪಣಜಿ:  ಲೈಂಗಿಕ ಕಿರುಕುಳ ಪ್ರಕರಣದಲ್ಲಿ ತೆಹೆಲ್ಕಾದ ಮಾಜಿ ಪ್ರಧಾನ ಸಂಪಾದಕ ತರುಣ್ ತೇಜ್ಪಾಲ್‌ಗೆ ತಾತ್ಕಾಲಿಕ ನೆಮ್ಮದಿ ಸಿಕ್ಕಿದೆ. ಶನಿವಾರ ಬೆಳಗ್ಗೆ 10 ಗಂಟೆ ವರೆಗೆ ಅವರನ್ನು ಬಂಧಿಸದಂತೆ ಪಣಜಿಯ ಸೆಷನ್ಸ್ ಕೋರ್ಟ್ ಪೊಲೀಸರಿಗೆ ಆದೇಶಿಸಿದೆ. ಇದಕ್ಕೂ ಮೊದಲು ತೇಜ್ಪಾಲ್ ಬಂಧನಕ್ಕಾಗಿ ಗೋವಾ ಪೊಲೀಸರು ಶುಕ್ರವಾರ ಬೆಳ್ಳಂಬೆಳಗ್ಗೆ ದೆಹಲಿ ನಿವಾಸಕ್ಕೆ ದಾಳಿ ನಡೆಸಿದರು. ಅಲ್ಲಿ ಅವರ ಸುಳಿವು ಸಿಗದಿದ್ದಾಗ ನೋಯ್ಡಾದಲ್ಲಿನ ಆತ್ಮೀಯರ ಮನೆಯಲ್ಲೂ ದೆಹಲಿ ಪೊಲೀಸರ ನೆರವಿನೊಂದಿಗೆ ಹುಡುಕಾಟ ನಡೆಸಿದ್ದರು.
ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸುತ್ತಿದ್ದ ತೇಜ್ಪಾಲ್ ಶುಕ್ರವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಪತ್ನಿ ಮತ್ತು ಪುತ್ರಿ ಜತೆ ಪ್ರತ್ಯಕ್ಷರಾಗಿದ್ದು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು 'ಗುರುವಾರ ಜಾಮೀನು ರಹಿತ ವಾರಂಟ್ ಕೈಸೇರಿದೆ. ಈಗ ನಾನು ಗೋವಾಕ್ಕೆ ತೆರಳುತ್ತಿದ್ದೇನೆ' ಎಂದು ತಿಳಿಸಿದ್ದರು.

ಸಂಜೆ 5.30ಕ್ಕೆ ಪಣಜಿಗೆ: ಸಂಜೆ 5.30ರ ವೇಳೆಗೆ ತೇಜ್ಪಾಲ್ ಪಣಜಿ ವಿಮಾನ ನಿಲ್ದಾಣಕ್ಕೆ ಬಂದಿಳಿದರು.  ಗೋವಾ ಬಿಜೆಪಿ ಯುವ ಘಟಕದಿಂದ ಸ್ವಾಗತ ಸಿಕ್ಕಿತು. ಅಲ್ಲೇ ಇದ್ದ ಪಣಜಿ ಪೊಲೀಸರು ತೇಜ್ಪಾಲ್‌ಗೆ ಏರ್‌ಪೋರ್ಟ್‌ನಲ್ಲೇ ಜಾಮೀನುರಹಿತ ವಾರಂಟ್ ನೀಡಿ ತೇಜ್ಪಾಲ್ ಅವರನ್ನು ವಶಕ್ಕೆ ಪಡೆದುಕೊಂಡು ಪಣಜಿಯ ಸೆಷನ್ಸ್ ಕೋರ್ಟ್‌ಗೆ ಹಾಜರುಪಡಿಸಿದರು. ನಿಗದಿತ ಅವಧಿಯೊಳಗೆ ಗೋವಾ ಪೊಲೀಸರ ಎದುರು ಹಾಜರಾಗಲು ವಿಫಲವಾಗಿದ್ದ ತೇಜ್ಪಾಲ್ ಬಂಧನಕ್ಕೆ ಗುರುವಾರ ಜಾಮೀನುರಹಿತ ವಾರೆಂಟ್ ಹೊರಡಿಸಲಾಗಿತ್ತು.

ಗೋವಾ ಕ್ರೈಂ ಬ್ರಾಂಚ್ ಎದುರು ತೇಜ್ಪಾಲ್
ಪಣಜಿಯ ಸೆಷನ್ಸ್ ಕೋರ್ಟ್‌ನಲ್ಲಿ ವಿಚಾರಣೆ ಬಳಿಕ ತರುಣ್ ತೇಜ್ಪಾಲ್ ರಾತ್ರಿ ವೇಳೆಗೆ  ಗೋವಾ ಕ್ರೈಂಬ್ರಾಂಚ್ ಪೊಲೀಸರ ಎದುರು ವಿಚಾರಣೆಗೆ ಹಾಜರಾದರು. ಈ ಸಂದರ್ಭದಲ್ಲಿ ಪೊಲೀಸರು ಘಟನೆಯ ಬಗ್ಗೆ ಸಂಪೂರ್ಣ ಮಾಹಿತಿ ಪಡೆದುಕೊಂಡರು ಎಂದು ಮೂಲಗಳು ತಿಳಿಸಿವೆ.

ತೇಜ್ಪಾಲ್ ಪರ ವಕೀಲೆಗೆ ತರಾಟೆ
ಜಾಮೀನು ಅರ್ಜಿ ವಿಚಾರಣೆ ವೇಳೆ ಲೈಂಗಿಕ ಕಿರುಕುಳಕ್ಕೊಳಗಾದ ಯುವತಿಯ ಹೆಸರು ಪ್ರಕಟಿಸಿದ ತೇಜ್ಪಾಲ್ ಪರ ವಕೀಲೆಯನ್ನು ಪಣಜಿ ನ್ಯಾಯಾಲಯ ತೀವ್ರ ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆದಿದೆ. ಗೋವಾ ಪೊಲೀಸರು ದಾಖಲಿಸಿದ ಎಫ್‌ಐಆರ್ ಅನ್ನು ನ್ಯಾಯಾಲಯದಲ್ಲಿ ಓದುವಾಗ ಲೈಂಗಿಕ ಕಿರುಕುಳಕ್ಕೊಳಗಾದ ಯುವಪತ್ರಕರ್ತೆಯ ಹೆಸರನ್ನೂ ತೇಜ್ಪಾಲ್ ಪರ ವಕೀಲೆ ಗೀತಾ ಲಥುರಾ ಓದಿದರು. ಈ ಕುರಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದ ನ್ಯಾಯಾಧೀಶೆ 'ನಾವು ಆಕೆಯ ಹೆಸರು ಕೆಡಿಸಲು ಹೊರಟಿದ್ದೇವೆಯಾ? ನೀವು ಮಾಡಿದ್ದು ಸಣ್ಣ ತಪ್ಪಲ್ಲ'ಎಂದು ತರಾಟೆಗೆ ತೆಗೆದುಕೊಂಡರು. ನಂತರ ಗೀತಾ ತಮ್ಮ ತಪ್ಪಿಗಾಗಿ ನ್ಯಾಯಾಲಯದ ಕ್ಷಮೆ ಕೋರಿದರು.
ಇದೇ ವೇಳೆ, ಪ್ರಕರಣದ ಹಿಂದೆ ರಾಜಕೀಯ ಒತ್ತಡ ಇದೆ ಎನ್ನುವ ತೇಜ್ಪಾಲ್ ಪರ ವಕೀಲರ ವಾದಕ್ಕೂ ನ್ಯಾಯಾಲಯ ಆಕ್ಷೇಪ ವ್ಯಕ್ತಪಡಿಸಿತು. ನನಗೆ ಅಪರಾಧವಷ್ಟೇ ಮುಖ್ಯವೇ ಹೊರತು ರಾಜಕೀಯ ಹೇಳಿಕೆಗಳಲ್ಲ. ಲೈಂಗಿಕ ಕಿರುಕುಳಕ್ಕೊಳಗಾದ ಯುವತಿ ಏನಾದರೂ ರಾಜಕೀಯ ಹೇಳಿಕೆಗಳನ್ನು ನೀಡಿದ್ದಾರೆಯೇ  ಎಂದು ನ್ಯಾಯಾಲಯ ಪ್ರಶ್ನಿಸಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement