ರೈತನ ಆತ್ಮಹತ್ಯೆ: ರಾಜ್ಯಪಾಲರು ಗರಂ
ಬೆಂಗಳೂರು: ಕಬ್ಬು ಬೆಳೆಗಾರನ ಆತ್ಮಹತ್ಯೆ ಹಿನ್ನೆಲೆಯಲ್ಲಿ ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರು ರಾಜ್ಯ ಸರ್ಕಾರದ ಮೇಲೆ ಮತ್ತೊಮ್ಮೆ ಹರಿಹಾಯ್ದಿದ್ದಾರೆ.
ರೈತ ವಿಠಲ ಅರಬಾವಿ ಅವರ ಆತ್ಮಹತ್ಯೆ ಕುರಿತಂತೆ ಸತತ 3 ದಿನಗಳ ಕಾಲ ಪ್ರತಿಪಕ್ಷಗಳು ಸರ್ಕಾರದ ಮೇಲೆ ಮುಗಿಬಿದ್ದರೇ, ಈಗ ರಾಜ್ಯಪಾಲರು ರಾಜ್ಯ ಸರ್ಕಾರ ಹಾಗೂ ರಾಜಕಾರಣಿಗಳ ಮೇಲೆ ಕಿಡಿಕಾರಿದ್ದಾರೆ. ಕಬ್ಬು ಬೆಂಬಲ ಬೆಲೆ ದರ ನಿಗದಿಯಲ್ಲಿ ವಿಳಂಬ ಮಾಡಿರುವುದು ರೈತನ ಆತ್ಮಹತ್ಯೆಗೆ ಕಾರಣವಾಗಿರಬಹುದು ಎಂದು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಸರ್ಕಾರದ ಮೇಲೆ ನೇರ ಆರೋಪ ಹೊರಿಸಿದ್ದಾರೆ.
ಆತ್ಮಹತ್ಯೆ ಕುರಿತು ಸಂಪೂರ್ಣ ವರದಿ ಪಡೆಯುತ್ತೇನೆ. ನಂತರ ಸರ್ಕಾರದಿಂದ ವಿವರಣೆ ಕೇಳುತ್ತೇನೆ ಎಂದು ಅವರು ಹೇಳಿದರು.ರಾಜ್ಯದ ಬಹುತೇಕ ಸಕ್ಕರೆ ಕಾರ್ಖಾನೆಗಳು ರಾಜಕಾರಣಿಗಳ ಮಾಲೀಕತ್ವದಲ್ಲಿದ್ದು, ಕಬ್ಬಿಗೆ ಬೆಂಬಲ ಬೆಲೆ ನಿಗದಿ ಮಾಡುವಲ್ಲಿ ವಿಳಂಬವಾಗಿರಬಹುದು ಎಂದಿದ್ದಾರೆ.