ಶಂಕಿತ ಲಷ್ಕರ್ ಉಗ್ರನ ಬಂಧನ
ಪಿಟಿಐ ನವದೆಹಲಿ ನ.29-
ಕರ್ನಾಟಕ, ಮಹಾರಾಷ್ಟ್ರ ಮತ್ತು ಆಂಧ್ರಪ್ರದೇಶಗಳಲ್ಲಿ ಪತ್ರಕರ್ತರು ಮತ್ತು ಪ್ರಮುಖ ಧಾರ್ಮಿಕ ನಾಯಕರ ಹತ್ಯೆ ಸಂಚಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ (ಎನ್‌ಐಎ)ಲಷ್ಕರ್-ಎ-ತೊಯ್ಬಾ ಸಂಘಟನೆಯ ಶಂಕಿತ ಉಗ್ರಗಾಮಿಯೊಬ್ಬನನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ.
ಈ ಬಗ್ಗೆ ಎನ್‌ಐಎ ವಕ್ತಾರರು ನವದೆಹಲಿಯಲ್ಲಿ ಶುಕ್ರವಾರ ಹೇಳಿಕೆ ನೀಡಿದ್ದಾರೆ. ಶಂಕಿತ ಉಗ್ರ ಇಮ್ರಾನ್ ಅಹ್ಮದ್ ಅಲಿಯಾಸ್ ಇಮ್ಮು ಭಾಯಿ ಎಂಬಾತನನ್ನು ಬೆಂಗಳೂರಿನ ಕನಕಪುರ ರಸ್ತೆಯಲ್ಲಿ ಎನ್‌ಐಎ ಅಧಿಕಾರಿಗಳು ಗುರುವಾರ ಬಂಧಿಸಿದ್ದರು. ಆತನನ್ನು ಬೆಂಗಳೂರಿನ ಸ್ಥಳೀಯ ನ್ಯಾಯಾಲಯವೊಂದರಲ್ಲಿ ಹಾಜರುಪಡಿಸಿದ ಬಳಿಕ ವಶಕ್ಕೆ ಪಡೆಯಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಗಣ್ಯರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್‌ಐಎ ಇದುವರೆಗೆ ಹನ್ನೆರಡು ಮಂದಿ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸಿದೆ. ಲಷ್ಕರ್ ಸಂಘಟನೆ ಕರ್ನಾಟಕದ ಹುಬ್ಬಳ್ಳಿ, ಬೆಂಗಳೂರು, ಹೈದರಾಬಾದ್ ಮತ್ತು ಮಹಾರಾಷ್ಟ್ರದ ನಾಂದೇಡ್‌ನಲ್ಲಿ ಪ್ರಮುಖ ಧಾರ್ಮಿಕ ವ್ಯಕ್ತಿಗಳು ಮತ್ತು ಪತ್ರಕರ್ತರನ್ನು ಹತ್ಯೆ ಮಾಡುವ ಮೂಲಕ ಕೋಮು ಸಂಘರ್ಷ ಉಂಟುಮಾಡುವ ಸಂಚು ರೂಪಿಸಿತ್ತು ಎಂದು ಎನ್‌ಐಎ ತನಿಖೆಯಲ್ಲಿ ಕಂಡುಕೊಂಡಿದೆ. ಈ ಕೃತ್ಯಕ್ಕೆ ಅವರು ಹಣಕಾಸಿನ ಸಹಾಯ ಪಡೆದುಕೊಂಡಿದ್ದರು. ಜತೆಗೆ ಸಂಚಿನ ಪ್ರಕರಣ ರೂಪಿಸಿದ ಕೆಲವರು ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ ಎಂದು ತನಿಖಾ ಸಂಸ್ಥೆ ತಿಳಿಸಿದೆ.
ಎನ್‌ಐಎ ಅಧಿಕಾರಿಗಳು ಶಂಕಿತ ಭಯೋತ್ಪಾದಕನನ್ನು ಬಂಧಿಸಿರುವ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ.
- ಕಮಲ್ ಪಂತ್, ಬೆಂಗಳೂರು ಹೆಚ್ಚುವರಿ ಪೊಲೀಸ್ ಆಯುಕ್ತ