ಅಂಗವಿಕಲರೇ ಸಾಧಿಸುವಾಗ ನಾನೇಕೆ ಅಂಜಲಿ?
ಹಾವೇರಿ: ಕೈ, ಕಾಲು ಇಲ್ಲದವರೇ ಹಿಮಾಲಯ ಶಿಖರ ಏರಿದ್ದುಂಟು. ಅಂಥದ್ದರಲ್ಲಿ ಕೈ, ಕಾಲು ಗಟ್ಟಿಯಾಗಿ, ದುಡಿಯುವ ಶಕ್ತಿ ಇರುವ ನಾನೇಕೆ ಹೆದರಲಿ? ಜನ ಏನೇ ಹೇಳಿದರೂ ನಾನು ಚಿಂತಿಸೋಲ್ಲ.
ಇದು ಎಚ್ಐವಿ ಪಾಸಿಟಿವ್ ಇರುವ ಹಾವೇರಿ ತಾಲೂಕಿನ ಅಗಡಿ ಗ್ರಾಮದ ರಾಜೇಶ ಅಶೋಕ ಗಂಗಣ್ಣನವರ ಎಂಬಾತನ ಆತ್ಮವಿಶ್ವಾಸದ ಮಾತು.
ಎಚ್ಐವಿ ಪಾಸಿಟಿವ್ ಎಂದು ಗೊತ್ತಾದಾಗಲೂ ನಾನೇನೂ ಧೃತಿಗೆಡಲಿಲ್ಲ. ದುಡಿಯುವ ತಾಕತ್ತಿರುವ ನನಗೆ ಬಾಳಿ ಬದುಕಬೇಕೆಂಬ ಆಸೆಯಿದೆ. ಸಮಾಜ ನನ್ನಂಥವರಿಗೂ ಬದುಕಲು ಆಸ್ಪದ ನೀಡಿದರೆ ಸಾಕು. ಎಲ್ಲರಂತೆಯೇ ನನ್ನನ್ನೂ ನೋಡಿದರೆ ಸಾಕು.
ಬದುಕಿನ ಬವಣೆ ಅರಿವಿಗೆ ಬರುವ ಮುನ್ನವೇ ನಾನು ಅಪ್ಪ-ಅಮ್ಮನನ್ನು ಕಳಕೊಂಡೆ. ಅವರಿಂದಲೇ ಎಚ್ಐವಿ ನನಗೂ ಅಂಟಿತ್ತು. ಆದರೆ, ಇದರಲ್ಲಿ ಅವರ ತಪ್ಪೇನೂ ಇಲ್ಲ. ಎಸ್ಎಸ್ಎಲ್ಸಿ ಓದುವಾಗ ನನಗೂ ಸೋಂಕು ತಗುಲಿದೆ ಎಂಬುದು ನನ್ನ ಗಮನಕ್ಕೆ ಬಂತು. ಆಗ ಓದನ್ನು ಅರ್ಧಕ್ಕೇ ನಿಲ್ಲಿಸಿದೆ. ಇದೀಗ ಮತ್ತೆ ಪರೀಕ್ಷೆ ಕಟ್ಟಿದ್ದೇನೆ.
ದುಡಿಯುವ ಕೈಗೆ ಶಕ್ತಿಯಿದ್ದರೆ ಏನು ಬೇಕಾದರೂ ಮಾಡಬಹುದು ಎಂಬುವುದು ನನಗೆ ಗೊತ್ತು. ನನಗೆ ನನ್ನ 70 ವರ್ಷದ ಅಜ್ಜಿಯೇ ಆಸರೆ. ಅವರನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಅದಕ್ಕೆ ಬೆಳಗ್ಗೆ 5 ಗಂಟೆಗೆ ಅಗಡಿಯಿಂದ ಹಾವೇರಿಗೆ ಹೋಗುತ್ತೇನೆ. 6 ಗಂಟೆಯಿಂದ ಬಸ್ ಹಾಗೂ ರೇಲ್ವೆ ನಿಲ್ದಾಣಗಳಲ್ಲಿ ಪತ್ರಿಕೆಗಳು, ನಂತರ ಕ್ಯಾಲೆಂಡರ್, ಪುಸ್ತಕಗಳನ್ನು ಮಾರುತ್ತೇನೆ. ನಿತ್ಯ 60-70 ಗಳಿಸಿ ಸಂಜೆ ಮನೆಗೆ ಹೋಗುತ್ತೇನೆ.
ಬಾವಿಯೊಳಗಿನ ಕಪ್ಪೆಯಂತಿದ್ದ ನನ್ನಲ್ಲಿ ಆತ್ಮವಿಶ್ವಾಸ ತುಂಬಿದವರು ನಿಜಲಿಂಗಪ್ಪ ಬಸೆಗಣ್ಣಿ ಸಾಹೇಬ್ರು. ಅನೇಕ ಜಾಗೃತಿ ಕಾರ್ಯಕ್ರಮಗಳಿಗೆ ಹೋಗಿ ಜೋಕ್ ಮಾಡಿ ಎಚ್ಐವಿ ಪೀಡಿತರ ಮುಖದಲ್ಲಿ ನಗು ತರಿಸಿದ್ದೇನೆ ಎನ್ನುವಾಗ ರಾಜೇಶನ ಮುಖದಲ್ಲಿ ಆತ್ಮವಿಶ್ವಾಸವೇ ಕಾಣುತ್ತಿತ್ತು.
ನಾರಾಯಣ ಹೆಗಡೆ