ಆತ್ಮಹತ್ಯೆ ಎಂಬ ಘೋರ ನಿರ್ಧಾರ ಮಾಡಿದ್ದೆ...
ನಾನು ಲೀನಾ (ಹೆಸರು ಬದಲಿಸಲಾಗಿದೆ). ಆಗ ನನ್ನ ಪತಿ ಅಗಲಿ ಕೆಲ ತಿಂಗಳುಗಳಷ್ಟೇ ಕಳೆದಿತ್ತು. ಬೆಂಗಳೂರಿನಲ್ಲಿ ವಾಸವಾಗಿದ್ದೆ. ನಾನು ಒಬ್ಬಂಟಿ ಅನ್ನುವ ಕಾರಣಕ್ಕೆ ಸುತ್ತಮುತ್ತಲಿನವರು ದುರುಪಯೋಗಪಡಿಸಿಕೊಳ್ಳಲು ಮುಂದಾದರು. ಇದರಿಂದ ಬೇಸತ್ತ ನಾನು ಆತ್ಮಹತ್ಯೆಯ ನಿರ್ಧಾರಕ್ಕೆ ಬಂದೆ. ಅದನ್ನು ನನ್ನ ನಾಲ್ಕೂ ಮಕ್ಕಳಿಗೂ ತಿಳಿಸಿದೆ. ಕೊನೆಯದು ಹಸುಗೂಸಾಗಿತ್ತು. ಮೊದಲಿಬ್ಬರು ಹೆಣ್ಣು ಮಕ್ಕಳು ಒಪ್ಪಿದರು. ಆದರೆ ಮೂರನೇ ಮಗ ಒಪ್ಪಲಿಲ್ಲ. ಅಮ್ಮಾ, ನನ್ನನ್ನು ಸಾಯಿಬೇಡಮ್ಮ ಎಂದು ಗೋಗರೆದ. ಕರುಳು ಕಿತ್ತುಬಂತು. ಬಲವಂತವಾಗಿ ಕುಡಿಸಲು ಯತ್ನಿಸಿದೆ... ಅಷ್ಟರಲ್ಲಿ ಸಂಬಂಧಿಕರೊಬ್ಬರು ಮನೆಗೆ ಬಂದರು. ನನ್ನ ಕೃತ್ಯ ಕಂಡು ನಿಂದಿಸಿದರು. ಯೋಚನೆ ಕೈ ಬಿಟ್ಟೆ. ಈ ಬದುಕು ಕಟ್ಟಿಕೊಂಡೆ.
ಇದು ನನ್ನ ಕಥೆ: ನಾನು ಬೆಂಗಳೂರಿನ ನಿವಾಸಿ. ಓದಿದ್ದು 5ನೇ ತರಗತಿ. ಅಪ್ಪ-ಅಮ್ಮ ಕೂಡಾ ಮೃತಪಟ್ಟರು. ಆಗ ಅಕ್ಕ ನಾನು ಇದ್ದೆವು. ಅವಳು ತಮಿಳುನಾಡಿನ ವ್ಯಕ್ತಿಯನ್ನು ಪ್ರೀತಿಸಿ ವಿವಾಹವಾದಳು. ಆಗಿನ್ನೂ ನನಗೆ 17 ವರ್ಷ. ಭಾವನ ವಿರೋಧದ ನುಡುವೆಯೇ ಕೊಳ್ಳೇಗಾಲದ ಲಾರಿ ಚಾಲಕನೊಬ್ಬನೊಂದಿಗೆ ನನ್ನ ವಿವಾಹ ಮಾಡಿದಳು. ಅದೂ ಅಂತರ್ಜಾತಿ ವಿವಾಹ.
ನೋವು ಶುರು: ಲಾರಿ ಚಾಲಕನಾಗಿದ್ದರಿಂದ ಪತಿ ನಾಲ್ಕೈದು ದಿನ ಮನೆ ಬಿಟ್ಟು ಹೋಗುತ್ತಿದ್ದ. ಹೀಗಾಗಿ ಅಕ್ರಮ ಸಂಬಂಧ ಸಹ ಹೊಂದಿದ್ದ. ನಾನು ನಾಲ್ಕನೇ ಬಾರಿ ಗರ್ಭಿಣಿಯಾದಾಗ ಪತಿಗೆ ಎಚ್ಐವಿ ಇರುವುದು ಪತ್ತೆಯಾಯಿತು. ನನಗೂ ಅಂಟಿರುವುದು ತಿಳಿಯಿತು. ಒಂದು ದಿನ ಜಗಳವಾಗಿ ಪತಿ ಹಲ್ಲೆ ಮಾಡಿದ ನಾನು ಮೃತಪಟ್ಟೆ ಎಂದು ಹೆದರಿ ಮಕ್ಕಳನ್ನು ಕರೆದುಕೊಂಡು ಕೊಳ್ಳೇಗಾಲ ಸೇರಿಕೊಂಡ. ಬಾರದಿದ್ದರಿಂದ ನಾನೇ ಅಲ್ಲಿಗೆ ಹೋದೆ. ಅಷ್ಟರಲ್ಲಿ ಆತ ಹಾಸಿಗೆ ಹಿಡಿದಿದ್ದ. ಆತನ ಸಾವಿನ ನಂತರ ಅವರ ಮನೆಯವರು ಉಪಾಯವಾಗಿ ನನ್ನನ್ನು ಬೆಂಗಳೂರಿಗೆ ಕರೆ ತಂದು ಬಿಟ್ಟರು. ಬೆಂಗಳೂರಿಗೆ ಬಂದಾಗ ಒಬ್ಬಂಟಿಯಾಗಿ ಬೀದಿಯಲ್ಲಿದ್ದ ನನ್ನನ್ನು ಮಹಿಳೆಯೊಬ್ಬರು ಮಿಲನ ಸಂಸ್ಥೆಗೆ ಸೇರಿಸಿದರು. ನಂತರ ಬಾಡಿಗೆ ಮನೆ ಮಾಡಿದೆ. ಪ್ರಸ್ತುತ ನಾನು ಬೆಂಗಳೂರಿನ ಲಗ್ಗೆರೆಯಲ್ಲಿದ್ದು, ನಿತ್ಯ ಕೆಲಸಕ್ಕೆ ಹೋಗುತ್ತೇನೆ. ಎಚ್ಐವಿ ಪೀಡಿತರಿಗೆ ಆ ಬಗ್ಗೆ ಧೈರ್ಯ ಹೇಳುತ್ತೇನೆ. ಪೀಡಿತರು ಹೇಗಿರಬೇಕು, ಏನು ತಿನ್ನಬೇಕು, ಯಾವ ಚಿಕಿತ್ಸೆ ಪಡೆಯಬೇಕು ಎಂಬಿತ್ಯಾದಿ ಮಾಹಿತಿ ನೀಡುತ್ತೇನೆ.
ಶಾಂತ ತಮ್ಮಯ್ಯ