ಏಡ್ಸ್ ಅಂದ್ರೆ ಸಾವಲ್ಲ, ಭಯವೂ ಇಲ್ಲ
ಬಿಜಾಪುರ: ಏಡ್ಸ್ ಎಂದರೆ ಸಾವಲ್ಲ. ಎಚ್ಐವಿ ಎಂದರೆ ಭಯವಿಲ್ಲ. ಏಡ್ಸ್ ಎಂದರೆ ಸತ್ತೇ ಬಿಡುತ್ತೇವೆ ಎಂಬ ಭಯ ಎಲ್ಲರನ್ನೂ ಕಾಡುತ್ತದೆ. ಇಲ್ಲ, ಅಷ್ಟೆಲ್ಲ ಭಯಪಡುವ ಅಗತ್ಯವೇ ಇಲ್ಲ. ಹುಟ್ಟು ಆಕಸ್ಮಿಕ. ಆದರೆ ಸಾವು ಖಚಿತ. ಆಯುಷ್ಯ ಇರುವಷ್ಟು ದಿನ ಬದುಕುತ್ತೇನೆ.
ಈ ರೀತಿ ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಬಿಜಾಪುರದ ಎಚ್ಐವಿ ಪೀಡಿತ ಪ್ರದೀಪ್. ನಾನು ಸಿವಿಲ್ ಎಂಜಿನಿಯರಿಂಗ್ ಮುಗಿಸಿ, ಗುತ್ತಿಗೆ ಕೆಲಸಗಾರನಾಗಿ ಉತ್ತಮ ಜೀವನ ಸಾಗಿಸುತ್ತಿದ್ದೆ. ಆದರೆ, ಯಾವಾಗ ನಾನು 'ಎಚ್ಐವಿ ಪೀಡಿತ' ಎಂದು ಗೊತ್ತಾಯಿತೋ ಆಗಲೇ ಗುತ್ತಿಗೆ ಕೆಲಸ ನೀಡಲು ಯಾರೂ ಮುಂದಾಗಲಿಲ್ಲ. ಗುತ್ತಿಗೆದಾರ ಮಿತ್ರರೂ ನನ್ನೊಂದಿಗೆ ಕಾಮಗಾರಿ ಹಿಡಿಯಲು ಹಿಂಜರಿದರು. ಮನೆಯಲ್ಲಿಯೂ ನಾನು ಸಾಯುತ್ತೇನೆಂದೇ ಭಾವಿಸಿ ನನ್ನ ಹೆಸರಿನಲ್ಲಿದ್ದ ಆಸ್ತಿಯನ್ನೆಲ್ಲ ಚಿಕ್ಕಮ್ಮನ ಹೆಸರಿಗೆ ಬರೆಯಿಸಿಕೊಂಡರು. ಆಗ ಬದುಕೇ ಕೊನೆಯಾಯಿತು ಎಂದೆನಿಸಿದ್ದು ಸುಳ್ಳಲ್ಲ. ನೆಮ್ಮದಿಯ ಅರಸಿ ಓಂ ಶಾಂತಿ ಆಶ್ರಮ ಸೇರಿದೆ.
ಅಲ್ಲಿ ಯುಎಸ್ಎ ಕ್ರೀಡಾಪಟುವೊಬ್ಬರು ಎಚ್ಐವಿ ಜಯಿಸಿ ಜೀವನ ನಡೆಸುತ್ತಿರುವುದನ್ನು ಓದಿದ ನನಗೆ ಹೊಸ ಭರವಸೆ ಹುಟ್ಟಿಕೊಂಡಿತು. ಆಪ್ತ ಸಮಾಲೋಚಕ ರವಿ ಕಿತ್ತೂರ ನನಗೆ ಎಲ್ಲಿಲ್ಲದ ಆತ್ಮಸ್ಥೈರ್ಯ ತುಂಬಿದರು. ಆಗಲೇ ನಾನು ಸಾಯಬಾರದು ಎಂದು ನಿರ್ಧರಿಸಿದೆ. ಏನಾದರೂ ಸಾಧಿಸಲೇಬೇಕೆಂದು 2004ರಲ್ಲಿ ಸಂಕಲ್ಪ ನೆಟ್ವರ್ಕ್ ಸ್ಥಾಪಿಸಿದೆ. 7,000 ಸೋಂಕಿತರು ಹೆಸರು ನೋಂದಾಯಿಸಿಕೊಂಡ ಈ ಸಂಸ್ಥೆಯ ಮೂಲಕ ನನ್ನಂತೆ ಸೋಂಕಿತರ ಬದುಕಿನಲ್ಲಿಯೂ ಹೊಸ ಬೆಳಕು ಮೂಡಿಸಲು ಯತ್ನಿಸುತ್ತಿದ್ದೇನೆ.
ನನ್ನಂತೆ ಬದುಕುತ್ತಿದ್ದ ಸೋಂಕಿತಳೊಂದಿಗೇ ಈಗ ಮದುವೆಯಾಗಿದ್ದೇನೆ. ಬಿಜಾಪುರ ಜಿಲ್ಲೆಯ 10 ಜೋಡಿಗೆ ನನ್ನಂತೆಯೇ ಮದುವೆ ಮಾಡಿಸಿದ್ದೇನೆ. ಇದರಿಂದ ಜೀವನದಲ್ಲಿ ನೆಮ್ಮದಿ ಸಿಕ್ಕಿದೆ ಎನ್ನುತ್ತಾರೆ ಪ್ರದೀಪ್.
ರುದ್ರಪ್ಪ ಅಸಂಗಿ