ಕಮರಿದ ಅಮೆರಿಕ
ವಿಶ್ವದ ದೊಡ್ಡಣ್ಣ ಎಂದೇ ಪರಿಗಣಿಸಲಾಗುವ ಅಮೆರಿಕವೀಗ ಭಾರಿ ಸಂಕಷ್ಟಕ್ಕೀಡಾಗಿದೆ. 18 ವರ್ಷಗಳಲ್ಲೇ ಮೊಟ್ಟಮೊದಲ ಬಾರಿಗೆ...
ವಾಷಿಂಗ್ಟನ್: ವಿಶ್ವದ ದೊಡ್ಡಣ್ಣ ಎಂದೇ ಪರಿಗಣಿಸಲಾಗುವ ಅಮೆರಿಕವೀಗ ಭಾರಿ ಸಂಕಷ್ಟಕ್ಕೀಡಾಗಿದೆ. 18 ವರ್ಷಗಳಲ್ಲೇ ಮೊಟ್ಟಮೊದಲ ಬಾರಿಗೆ ಅಮೆರಿಕ ಸರ್ಕಾರ 'ಶಟ್ಡೌನ್' ಆಗಿದೆ. 'ಒಬಾಮಾಕೇರ್' ಬಗೆಗಿನ ಭಿನ್ನಾಭಿಪ್ರಾಯದಿಂದಾಗಿ ರಿಪಬ್ಲಿಕನ್ನರು ಹಾಗೂ ಡೆಮಾಕ್ರಾಟ್ಗಳು ದೇಶದ ವಿವಿಧ ಯೋಜನೆಗಳ ವೆಚ್ಚ ಮತ್ತು ಬಜೆಟ್ ಬಗ್ಗೆ ಒಮ್ಮತಕ್ಕೆ ಬರುವಲ್ಲಿ ವಿಫಲರಾಗಿದ್ದಾರೆ. ಇದು ಅಮೆರಿಕದ ಆರ್ಥಿಕತೆಗೆ ಕೊಡಲಿ ಪೆಟ್ಟನ್ನೇ ನೀಡಿದೆ. ಪರಿಣಾಮವಾಗಿ ಸರ್ಕಾರಿ ಕಚೇರಿಗಳನ್ನು ಅನಿರ್ದಿಷ್ಟಾವಧಿ ಕಾಲ ಮುಚ್ಚುವಂತೆ (ಶಟ್ಡೌನ್) ವೈಟ್ಹೌಸ್ ಸರ್ಕಾರಿ ಸಂಸ್ಥೆಗಳಿಗೆ ಆದೇಶ ನೀಡಿದೆ. ಇದರ ನೇರ ಪರಿಣಾಮವೆಂಬಂತೆ ಲಕ್ಷಾಂತರ ಉದ್ಯೋಗಿಗಳು ವೇತನವಿಲ್ಲದೇ ರಜೆಯಲ್ಲಿ ತೆರಳಬೇಕಿದೆ.
ರಾಜಕೀಯ ಬಿಕ್ಕಟ್ಟೇ ಕಾರಣ: ಅಮೆರಿಕ ಅಧ್ಯಕ್ಷ ಒಬಾಮ ಅವರ ಮಹತ್ವಾಕಾಂಕ್ಷೆಯ 'ಹೆಲ್ತ್ಕೇರ್' ಯೋಜನೆಯ ಬಗೆಗಿನ ಭಿನ್ನಾಭಿಪ್ರಾಯವೇ ಈ ಸ್ಥಿತಿಗೆ ಕಾರಣ. ಸೆ.30ಕ್ಕೆ ಅಮೆರಿಕದ ಬಜೆಟ್ ಅವಧಿ ಪೂರ್ಣಗೊಳ್ಳುತ್ತದೆ. ಈ ಡೆಡ್ಲೈನ್ ಮುಗಿಯುವ ಮುನ್ನವೇ ಹೊಸ ಬಜೆಟ್ ಅಂಗೀಕಾರವಾಗಬೇಕು. ಆದರೆ ರಿಪಬ್ಲಿಕನ್ನರು ಬಜೆಟ್ ಅಂಗೀಕರಿಸಬೇಕಾದರೆ ಒಬಾಮರ 'ಹೆಲ್ತ್ಕೇರ್' ಯೋಜನೆಗೆ ನೀಡುವ ನೆರವನ್ನು ಕಡಿಮೆಮಾಡಬೇಕು ಎಂದು ಪಟ್ಟು ಹಿಡಿದರು. ಹೀಗಾಗಿ ಬಜೆಟ್ ಅಂಗೀಕಾರವಾಗಲಿಲ್ಲ. ಹಣ ಇಲ್ಲದಂತಾಯಿತು.
ಭಾರತದ ಮೇಲೇನು ಪರಿಣಾಮ?
ಹೊಸ ವೀಸಾ ವಿತರಣೆ: ಭಾರತದ ಐಟಿ ಕಂಪನಿಗಳ ಮೇಲೆ ಪ್ರತಿಕೂಲ ಪರಿಣಾಮ ಬೀರಲಿದೆ. ಶಟ್ಡೌನ್ ಅವಧಿ 15 ದಿನ ದಾಟಿದರೆ, ಹೊಸ ವೀಸಾ ವಿತರಣೆ ಮೇಲೂ ಪರಿಣಾಮ ಬೀರುತ್ತದೆ. ಅಮೆರಿಕದ ವೀಸಾ ಪಡೆಯಲು ಕಷ್ಟ ಪಡಬೇಕಾಗುತ್ತದೆ.
ರುಪಾಯಿ ಮೌಲ್ಯ: ಸೆಪ್ಟೆಂಬರ್ ಅಂತ್ಯದ ವೇಳೆ ಚೇತರಿಸಿಕೊಂಡ ರುಪಾಯಿ ಮತ್ತೆ ಒತ್ತಡಕ್ಕೆ ಸಿಲುಕಬಹುದು.
ಸೆನ್ಸೆಕ್ಸ್ ಭಾರಿ ಏರಿಳಿತ: ಅಮೆರಿಕದ ಪರಿಸ್ಥಿತಿಯಿಂದಾಗಿ ಭಾರತದ ಷೇರುಮಾರುಕಟ್ಟೆಯಲ್ಲೂ ತಲ್ಲಣ ಉಂಟಾಗಬಹುದು. ಸೆನ್ಸೆಕ್ಸ್ ಭಾರಿ ಏರಿಳಿತ ಕಾಣಬಹುದು.
ಜಾಗತಿಕ ಮಾರುಕಟ್ಟೆ: ಜಾಗತಿಕ ಮಾರುಕಟ್ಟೆಯಲ್ಲೂ ಏರಿಳಿತ ಉಂಟಾಗಿ, ಅದು ಭಾರತದ ಷೇರುಗಳ ಮೇಲೆ ಪರಿಣಾಮ ಬೀರಬಹುದು.
ಶಟ್ಡೌನ್ ಎಂದರೇನು?
ಇದೊಂದು ರಾಜಕೀಯ ಬಿಕ್ಕಟ್ಟಿನ ಪರಿಸ್ಥಿತಿ. ಮೂಲಭೂತ ಸೇವೆಗಳ ಹೊರತಾಗಿ ಉಳಿದ ಎಲ್ಲ ಸೇವೆಗಳಿಗೆ ಹಣ ನೀಡುವುದನ್ನು ಸರ್ಕಾರ ಸ್ಥಗಿತಗೊಳಿಸುತ್ತದೆ. ಸರ್ಕಾರ ಪಡೆಯುವ ಸಾಲದ ಮಿತಿಯನ್ನು ಕಾಂಗ್ರೆಸ್ ಹೆಚ್ಚಿಸದ ಹೊರತು, ಸರ್ಕಾರಕ್ಕೆ ಬಿಲ್ ಪಾವತಿಸಲು ಹಣದ ಕೊರತೆ ಎದುರಾಗುತ್ತದೆ. ಹೀಗಾಗಿ ಸರ್ಕಾರಿ ಸಂಸ್ಥೆಗಳನ್ನು ಮುಚ್ಚಲಾಗುತ್ತದೆ.
ನಾಗರಿಕರಿಗೇನು ತೊಂದರೆ?
ಮೂರನೇ ಒಂದರಷ್ಟು ಸರ್ಕಾರಿ ಸಂಸ್ಥೆಗಳು ಮುಚ್ಚುತ್ತವೆ. 21 ಲಕ್ಷ ಸರ್ಕಾರಿ ನೌಕರರಲ್ಲಿ ಸುಮಾರು 8 ಲಕ್ಷ ಮಂದಿಯನ್ನು ವೇತನ ನೀಡದೇ ರಜೆ ಮೇಲೆ ಕಳುಹಿಸಲಾಗುತ್ತದೆ. ಪರಿಸರ ರಕ್ಷಣೆ ಸಂಸ್ಥೆ, ನಾಸಾ, ರಾಷ್ಟ್ರೀಯ ಪಾರ್ಕ್ ಮುಂತಾದ ಬಹುತೇಕ ಸಂಸ್ಥೆಗಳು ಕಾರ್ಯನಿರ್ವಹಿಸುವುದಿಲ್ಲ. ಸುರಕ್ಷತೆ ಮತ್ತು ಭದ್ರತೆಗೆ ಸಂಬಂಧಿಸಿದ ಸೇನೆ ಮತ್ತು ಇತರೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತವೆ.
ಯಾರ ಮೇಲೆ ಪರಿಣಾಮ?
- ಸ್ಮಿತ್ಸೋನಿಯನ್ ಸಂಸ್ಥೆಗಳು(ಮ್ಯೂಸಿಯಂ ಮತ್ತು ಸಂಶೋಧನಾ ಕೇಂದ್ರಗಳ ಸಮೂಹ)
- 19 ಮ್ಯೂಸಿಯಂ/ಗ್ಯಾಲರಿ, ರಾಷ್ಟ್ರೀಯ ಮೃಗಾಲಯ
- ರಾಷ್ಟ್ರೀಯ ಉದ್ಯಾನವನಗಳು
ನೌಕರರು
ರಕ್ಷಣೆ 40,000
ವಾಣಿಜ್ಯ 30,000
ಎನರ್ಜಿ 12,700
ಸಾರಿಗೆ 18,481