ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

5ರಿಂದ ಪೆಟ್ರೋಲ್ ಬಂಕ್ಗಳಲ್ಲಿ 5 ಕೆಜಿ ಎಲ್ಪಿಜಿ ಸಿಲಿಂಡರ್ ಲಭ್ಯ

Mainashree
Updated On : 3 Oct 2013, 12:28 pm

ನವದೆಹಲಿ: ಗ್ರಾಹಕರಿಗೆ ಸುಲಭವಾಗಿ ದಕ್ಕುವ ಐದು ಕೆಜಿ ಎಲ್ಪಿಜಿ ಸಿಲಿಂಡರ್ಗಳನ್ನು ಪೆಟ್ರೋಲ್ ಬಂಕ್ಗಳಲ್ಲಿ  ಮಾರಾಟ ವ್ಯವಸ್ಥೆ ಅಕ್ಟೋಬರ್ 5ರಿಂದ ಬೆಂಗಳೂರಿನಲ್ಲಿ ಪ್ರಾರಂಭವಾಗಲಿದೆ. ಪೆಟ್ರೋಲಿಯಂ ಸಚಿವ ವೀರಪ್ಪಮೊಯ್ಲಿ ಅವರು ಈ ಪ್ರಾಯೋಗಿಕ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಇದೇ ವೇಳೆ ಸಚಿವ ವೀರಪ್ಪ ಮೊಯ್ಲಿ ಅವರು ಎಲ್ಪಿಜಿ ಸಿಲಿಂಡರ್ ಪೊರ್ಟಬಿಲಿಟಿ ವ್ಯವಸ್ಥೆಗೂ ಚಾಲನೆ ನೀಡಲಿದ್ದಾರೆ. ಬೆಂಗಳೂರಲ್ಲದೇ, ದೆಹಲಿ, ಮುಂಬೈ, ಕೊಲ್ಕತಾ ಹಾಗೂ ಚೆನ್ನೈನಲ್ಲಿ ಐದು ಕೆಜಿ ಎಲ್ಪಿಜಿ ಸಿಲಿಂಡರ್ಗಳು ಸಾರ್ವಜನಿಕ ಸ್ವಾಮ್ಯದ ತೈಲ ಮಾರಾಟ ಕಂಪನಿಗಳ ಪೆಟ್ರೋಲ್ ಬಂಕ್ಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿವೆ. ಆಗಾಗ ಊರು ಬದಲಿಸುವ ಗ್ರಾಹಕರಿಗೆ ಅನುಕೂಲವಾಗಲು ಮತ್ತು ಸುಲಭವಾಗಿ ಸಾಗಣೆ ಮಾಡಲು ಐದು ಕೆಜಿ ಸಿಲಿಂಡರ್ ಮಾರಾಟ ವ್ಯವಸ್ಥೆ ಜಾರಿಗೆ ತರಲಾಗತ್ತಿದೆ. ಕ್ರಮೇಣ ಎಲ್ಲಾ ನಗರ ಪಟ್ಟಣಗಳಿಗೆ ಈ ಸೇವೆ ವಿಸ್ತರಿಸಲಾಗುತ್ತದೆ. ಈ ಸಿಲಿಂಡರ್ಗಳ ದರ 370 ರಿಂದ 400 ಗಳಿಷ್ಟಿರಬಹುದು. ಅಂದರೆ, ಈ ಸಿಲಿಂಡರ್ಗಳಿಗೆ ಸರ್ಕಾರದ ಸಬ್ಸಿಡಿ ಇರುವುದಿಲ್ಲ. ಎಲ್ಪಿಜಿ ಮಾರುಕಟ್ಟೆ ದರವನ್ನೇ ನಿಗದಿ ಮಾಡಲಾಗುತ್ತದೆ. ಪೆಟ್ರೋಲ್ ಬೆಲೆಯಂತೆ ಈ ಸಿಲಿಂಡರ್ಗಳ ಬೆಲೆಯೂ ಅಂತಾರಾಷ್ಟ್ರೀಯ ಮಾರುಕಟ್ಟೆಗನುಗಣವಾಗಿ ಏರಿಳಿಯುತ್ತದೆ.

ಗುರುತಿನ ಚೀಟಿ ಬೇಕು: ಸಿಲಿಂಡರ್ ಖರೀದಿಸುವವರು ಆರಂಭದಲ್ಲಿ ಡೊಮೆಸ್ಟಿಕ್ ಪ್ರೆಶರ್ ರೆಗ್ಯುಲೆಟರ್ ಕೊಳ್ಳಬಹುದು. ಇಲ್ಲವೇ ಬರೀ ಸಿಲಿಂಡರ್ ಖರೀದಿಸಬಹುದು. ಗ್ರಾಹಕರಿಗೆ ಅನುಕೂಲ ಒದಗಿಸಲು ಸಿಲಿಂಡರ್ ಮಾರಾಟ ಮಾಡುವ ಪೆಟ್ರೋಲ್ ಪಂಪ್ಗಳು ನಿಗದಿತ ಸಮಯಕ್ಕಿಂತ ಹೆಚ್ಚು ಹೊತ್ತು ತೆರದಿರುತ್ತವೆ. ಆರಂಭದಲ್ಲಿ ಐದು ಕೆಜಿ ಸಿಲಿಂಡರ್ ಖರೀಸಿದಿಸಲು ಗ್ರಾಹಕರು ಗುರುತಿನ ಚೀಟಿ ತೋರಿಸುವುದು ಕಡ್ಡಾಯ. ಮತದಾರರ ಚೀಟಿ, ಡಿಎಲ್, ಪಾನ್ಕಾರ್ಡ್, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಬುಕ್, ಎಂಪ್ಲಾಯೀ ಐಡಿ, ಪಾಸ್ ಪೋರ್ಟ್ ಸೇರಿದಂತೆ ಯಾವುದಾದರೂ ನಿಗದಿತ ಗುರುತಿನ ಚೀಟಿಯನ್ನು ಒದಗಿಸಬೇಕು. ಗ್ರಾಹಕರು ಮೊದಲು ಖರೀದಿಸುವ ವೇಳೆ ಸಿಲಿಂಡರ್ ಬಳಕೆ ಕುರಿತಂತೆ ಪ್ರಾತ್ಯಕ್ಷಿಕೆ ನೀಡಲಾಗುತ್ತದೆ. ಗ್ರಾಹಕರು ಬಯಸಿದರೆ, ವಿಮೆಯನ್ನು ಇಳಿಸಬಹುದು.

ಸಿಲಿಂಡರ್  ಪೋರ್ಟಬಿಲಿಟಿ
ಮೊಬೈಲ್ ಪೋರ್ಟಬಿಲಿಟಿ ಮಾದರಿಯಲ್ಲೇ ಈಗ ಸಿಲಿಂಡರ್ ಪೋರ್ಟಬಿಲಿಟಿ ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತರಲಾಗುತ್ತಿದೆ. ಕರ್ನಾಟಕದ ಬೆಂಗಳೂರು ಮತ್ತು ಹುಬ್ಬಳ್ಳಿ ಸೇರದಂತೆ ದೇಶದ 30 ನಗರಗಳಲ್ಲಿ ಈ ವ್ಯವಸ್ಥೆ ಜಾರಿಯಾಗುತ್ತಿದೆ. ಎಲ್ಪಿಜಿ ಸಿಲಿಂಡರ್ ಒದಗಿಸುವ ಕಂಪನಿಗಳ ವೆಬ್ ಸೈಟ್ನಲ್ಲಿ ಪೋರ್ಟಬಲಿಟಿ ಸೇವೆ ಬಳಸಿಕೊಳ್ಳಬಹುದು. ಗ್ರಾಹಕರಿರುವ ಸೂಚಿತ ಪ್ರದೇಶ ವ್ಯಾಪ್ತಿಯಲ್ಲಿ ಲಭ್ಯ ಇರುವ ಯಾವುದೇ ಕಂಪನಿಯ ಬೇರೆ ವಿತರಕನ ಸೇವೆಗೆ ವರ್ಗಾಹಿಸಿಕೊಳ್ಳಬಹುದು. ಉದಾಹರಣೆಗೆ ಹಾಲಿ ವಿತರಕ ಎಚ್ಪಿ ಗ್ಯಾಸ್ ಒದಗಿಸುತ್ತಿದ್ದು, ಆತನ ಸೇವೆ ಬಗ್ಗೆ ಅತೃಪ್ತಿ ಇರುವವರು ಅದೇ ಪ್ರದೇಶ ವ್ಯಾಪ್ತಿಯಲ್ಲಿರುವ ಬೇರೆ ವಿತರಕನ ಸೇವೆ ಬಳಸಿಕೊಳ್ಳಬಹುದು. ಸಾರ್ವಜನಿಕ ಸ್ವಾಮ್ಯದ ಯಾವುದೇ ಕಂಪನಿಯ ವಿತರಕರ ಸೇವೆಯನ್ನು ಬಳಸಿಕೊಳ್ಳಲು ಗ್ರಾಹಕರಿಗೆ ಅವಕಾಶ ಇದೆ. ಪೋರ್ಟಬಲಿಟಿ ವ್ಯವಸ್ಥೆಯಿಂದಾಗಿ ವಿತರಕರಲ್ಲಿ ಸ್ಪರ್ಧೆ ಹೆಚ್ಚಿ  ಗ್ರಾಹಕರಿಗೆ ತ್ವರಿತ ಮತ್ತು ಉತ್ತಮ  ಸೇವೆ ದೊರಕಲಿದೆ.  

- ಕನ್ನಡಪ್ರಭ ಪ್ರತಿನಿಧಿಯಿಂದ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement