ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅಧ್ಯಾದೇಶದ ಸುತ್ತ...

Mainashree
Updated On : 3 Oct 2013, 12:26 pm

ಕೇಂದ್ರ ಸರ್ಕಾರ ಇತ್ತೀಚೆಗಷ್ಟೇ ಆಹಾರ ಭದ್ರತಾ ಮಸೂದೆಗೆ ಸಂಬಂಧಿಸಿ ಹೊರಡಿಸಿದ್ದ ಸುಗ್ರೀವಾಜ್ಞೆ ಹಲವರ ಟೀಕೆಗೆ ಗುರಿಯಾಗಿತ್ತು. ಇದರ ಬೆನ್ನಲ್ಲೇ ಈಗ ಅಪರಾಧಿ ಹಿನ್ನೆಲೆ ಹೊಂದಿರುವ ಜನಪ್ರತಿನಿಧಿಗಳ ರಕ್ಷಣೆಗೆ ಹೊರಡಿಸಲು ಮುಂದಾಗಿರುವ ಪ್ರಜಾಪ್ರಾತಿನಿಧ್ಯ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ತೀವ್ರ ಚರ್ಚೆಗೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಕುರಿತ ಒಂದು ಸುತ್ತುನೋಟ ಇಲ್ಲಿದೆ.

ಸುಗ್ರೀವಾಜ್ಞೆ ಅಂದ್ರೆ ಏನು?
ಇದೊಂದು ಕಾನೂನು ಆದೇಶ. ರಾಜ್ಯಪಾಲರು, ರಾಷ್ಟ್ರಪತಿಗಳು ಈ ರೀತಿಯ ಆದೇಶ ಹೊರಡಿಸುವ ಅಧಿಕಾರ ಹೊಂದಿರುತ್ತಾರೆ. ಭಾರತದ ಸಂವಿಧಾನದ ಪ್ರಕಾರ ಕಾನೂನು ರಚಿಸುವ ಅಧಿಕಾರ ಇರುವುದು ಶಾಸನಸಭೆಗೆ. ಆದರೆ, ಅನಿವಾರ್ಯ ಅಥವಾ ತುರ್ತು ಸಂದರ್ಭದಲ್ಲಿ ಎದುರಾಗುವ ಸಮಸ್ಯೆಗಳನ್ನು ಪರಿಹರಿಸೋದು ಹೇಗೆ? ಇದಕ್ಕಾಗಿಯೇ ಸಂವಿಧಾನ ರಚನೆ ವೇಳೆ ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗೆ ತುರ್ತು ಸಂದರ್ಭಗಳಲ್ಲಿ ಈ ರೀತಿಯ ಆದೇಶಗಳನ್ನು ನೀಡುವ ವಿಶೇಷ ಅಧಿಕಾರ ನೀಡಲಾಗಿದೆ. ಆದರೆ, ಆದೇಶದ ಆಯುಷ್ಯ ಮಾತ್ರ  ಅಲ್ಪಾವಧಿ.

ಯಾವಾಗ ಹೊರಡಿಸಬಹುದು?
ರಾಷ್ಟ್ರಪತಿಗಳು ಅಥವಾ ರಾಜ್ಯಪಾಲರು ಈ ರೀತಿಯ ಸುಗ್ರೀವಾಜ್ಞೆಗಳನ್ನು ಯಾವಾಗ ಬೇಕಾದರೂ ಹೊರಡಿಸಬಹುದು. ಆದರೆ, ಈ ವೇಳೆ ಶಾಸನಸಭೆ (ಮೇಲ್ಮನೆ ಅಥವಾ ಕೆಳಮನೆಯಲ್ಲಿ ಯಾವುದಾದರೂ ಒಂದರ ಕಲಾಪ ಸ್ಥಗಿತಗೊಂಡಿದ್ದರೂ ಸುಗ್ರೀವಾಜ್ಞೆ ಹೊರಡಿಸಬಹುದು.) ನಡೆಯುತ್ತಿರಬಾರದು. ಆದರೆ, ಆ ಸುಗ್ರೀವಾಜ್ಞೆ ಹೊರಡಿಸುವುದು ಅನಿವಾರ್ಯ ಎಂದು ರಾಷ್ಟ್ರಪತಿಗಳಿಗೆ ಮನವರಿಕೆಯಾಗಬೇಕು ಅಷ್ಟೆ. ಈ ರೀತಿಯ ಸುಗ್ರೀವಾಜ್ಞೆಗಳನ್ನು ತುರ್ತು ಸಂದರ್ಭದಲ್ಲಷ್ಟೇ ಹೊರಡಿಸಬಹುದು ಎಂದು ಸುಪ್ರೀಕೋರ್ಟ್ ಸ್ಪಷ್ಟಪಡಿಸಿದೆ. ಸುಗ್ರೀವಾಜ್ಞೆಗೆ ಸಂಬಂಧಿಸಿದ ಅಧಿಸೂಚನೆ ಹೊರಡಿಸಿದ ಬಳಿಕ ಎದುರಾಗುವ ಮೊದಲ ಅಧಿವೇಶನದ ಆರು ವಾರಗಳೊಳಗೆ ಅದನ್ನು ಮಂಡಿಸಬೇಕು. ಈ ವೇಳೆ ಸರ್ಕಾರ ಈ ಅಧಿಸೂಚನೆಗೆ ಸಂಬಂಧಿಸಿದ ಮಸೂದೆಯನ್ನು ಮಂಡಿಸಿ ಒಪ್ಪಿಗೆ ಪಡೆಯುತ್ತದೆ.
ಕಾನೂನು, ಸುಗ್ರೀವಾಜ್ಞೆ ನಡುವಿನ ವ್ಯತ್ಯಾಸ
ಕಾಯ್ದೆಗಳು ಮಸೂದೆಯರೂಪದಲ್ಲಿ ಶಾಸನಸಭೆಗಳಲ್ಲಿ ಮಂಡನೆಯಾಗುತ್ತವೆ. ಎರಡೂ ಶಾಸನಸಭೆಯ ಅನುಮೋದನೆ ಬಳಿಕ ಅದನ್ನು ರಾಷ್ಟ್ರಪತಿ, ರಾಜ್ಯಪಾಲರಿಗೆ ರವಾನಿಸಲಾಗುತ್ತದೆ. ಅವರ ಸಹಿಯ ಬಳಿಕ ಅದು ಕಾಯ್ದೆಯಾಗುತ್ತದೆ. ಆದರೆ, ಸುಗ್ರೀವಾಜ್ಞೆ ಒಂದು ಕಾನೂನು ಆದೇಶ. ಸರ್ಕಾರಗಳು ಈ ಆದೇಶವನ್ನು ಸಿದ್ಧಪಡಿಸಿ ರಾಜ್ಯಪಾಲರು/ರಾಷ್ಟ್ರಪತಿಗೆ ಕಳುಹಿಸಿಕೊಡುತ್ತವೆ. ರಾಷ್ಟ್ರಪತಿಗಳ ಸಹಿ ಬಳಿಕ ಇದು ಸುಗ್ರೀವಾಜ್ಞೆಯ ರೂಪದಲ್ಲಿ ಅನುಷ್ಠಾನಕ್ಕೆ ಬರುತ್ತದೆ. ಆದರೆ, ಇದೊಂದು ತಾತ್ಕಾಲಿಕ ವ್ಯವಸ್ಥೆ. ಇದಕ್ಕೆ ನಿಗದಿತ ದಿನದೊಳಗೆ ಶಾಸನ ಸಭೆಗಳ ಅನುಮೋದನೆ ಪಡೆಯುವುದು ಕಡ್ಡಾಯ.

ಹೊಸತೇನಲ್ಲ

ಸುಗ್ರೀವಾಜ್ಞೆಯು ಭಾರತೀಯ ಸಂವಿಧಾನಕ್ಕೆ ಸೇರಿಸಿದ ಹೊಸ ಅಂಶವೇನಲ್ಲ. ಭಾರತ ಸರ್ಕಾರದ ಕಾಯ್ದೆ- 1935ರ 42 ಮತ್ತು 43ನೇ ವಿಧಿಯು ಗವರ್ನರ್ ಜನರಲ್‌ಗೆ ಇದೇ ರೀತಿಯ ಅಧಿಕಾರ ನೀಡಿತ್ತು.
41 ಸುಗ್ರೀವಾಜ್ಞೆ
ಮೊದಲ ಲೋಕಸಭೆಯ ಅವಧಿಯಲ್ಲೇ 41ಕ್ಕೂ ಹೆಚ್ಚು ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿದೆ.

ಸುಗ್ರೀವಾಜ್ಞೆ ರಾಜಕೀಯ
ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರಿಗಿರುವ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರವನ್ನು ಕೇವಲ ಸದುದ್ದೇಶಕ್ಕಾಗಿಯಷ್ಟೇ ಬಳಸಲಾಗುತ್ತದೆ ಎಂದೇನೂ ಇಲ್ಲ. ಅನೇಕ ಪ್ರಕರಣಗಳಲ್ಲಿ ಇದು ದುರುಪಯೋಗ ಆದ ಉದಾಹರಣೆಗಳೂ ಇವೆ. 1980ರ ದಶಕದಲ್ಲಿ ಬಿಹಾರ ಸರ್ಕಾರ ಶಿಕ್ಷಣ, ಅರಣ್ಯೀಕರಣ ಮತ್ತು ಮೂಲಸೌಲಭ್ಯಕ್ಕೆ ಸಂಬಂಧಿಸಿ ಅನೇಕ ಸುಗ್ರೀವಾಜ್ಞೆಗಳನ್ನು ರಾಜ್ಯಪಾಲರ ಮೂಲಕ ಹೊರಡಿಸಿತು. ಆದರೆ, ಈ ಸುಗ್ರೀವಾಜ್ಞೆಗಳ್ಯಾವುವೂ ಕಾಯ್ದೆಯಾಗಿ ರೂಪುಗೊಳ್ಳಲೇ ಇಲ್ಲ. ಈ ಸುಗ್ರೀವಾಜ್ಞೆಗಳೆಲ್ಲ ಆರು ತಿಂಗಳ ಬಳಿಕ ತನ್ನಷ್ಟಕ್ಕೆ ಬಿದ್ದು ಹೋಗುತ್ತಿದ್ದವು. ಇದಾದ ಬಳಿಕ ಸರ್ಕಾರ ಮತ್ತೆ ಹೊಸ ಸುಗ್ರೀವಾಜ್ಞೆ ಹೊರಡಿಸುತ್ತಿತ್ತು. ಕೆಲವು ಪ್ರಕರಣಗಳಲ್ಲಿ ಇದು ಆರು ವರ್ಷಗಳ ವರೆಗೆ ಮುಂದುವರಿದ ಉದಾಹರಣೆಗೂ ಇವೆ. ಈ ಪ್ರಕರಣ ಸುಗ್ರೀವಾಜ್ಞೆ ಹೊರಡಿಸುವ ಅಧಿಕಾರವನ್ನು ಯಾವ ರೀತಿ ದುರುಪಯೋಗಪಡಿಸಿಕೊಳ್ಳಬಹುದು ಎನ್ನುವುದಕ್ಕೆ ಉತ್ತಮ ಉದಾಹರಣೆಯಾಗಿದೆ. ಬಿಹಾರ ಸರ್ಕಾರದ ಈ ರೀತಿಯ ಕಾರ್ಯ 1987ರಲ್ಲಿ ಸುಪ್ರೀಂಕೋರ್ಟ್‌ನಿಂದ ತೀವ್ರ ಛೀಮಾರಿಗೆ ಗುರಿಯಾಯಿತು.
ಡಿ.ಸಿ. ವಾದ್ವಾ ಢ/ಡ ಬಿಹಾರ ಸರ್ಕಾರ ಪ್ರಕರಣದಲ್ಲಿ ರಾಜ್ಯಪಾಲರು ಸಂವಿಧಾನದಲ್ಲಿ ಹೇಳಲಾದ ಶಾಸಕಾಂಗದ ಅಧಿಕಾರವನ್ನು ಬಳಸುವಂತಿಲ್ಲ. ಆ ರೀತಿಯೇನಾದರೂ ಮಾಡಿದರೆ ಅವರು ತಮ್ಮದಲ್ಲದ ಕೆಲಸವನ್ನು ಆಕ್ರಮಿಸಿಕೊಂಡಂತಾಗುತ್ತದೆ. ಈ ಪ್ರಕರಣದಲ್ಲಿ ಬಿಹಾರ ಸರ್ಕಾರ ಸಂವಿಧಾನಕ್ಕೆ ವಿರುದ್ಧವಾಗಿ ಕೆಲಸ ಮಾಡಿದೆ. ಹಾಗಾಗಿ ಸರ್ಕಾರ ರಾಜ್ಯಪಾಲರ ಮೂಲಕ ಹೊರಡಿಸಿದ ಸುಗ್ರೀವಾಜ್ಞೆಯು ಅಸಮರ್ಪಕ ಹಾಗೂ ಅಸಿಂಧುವಾಗುತ್ತದೆ ಎಂದು ನ್ಯಾಯಾಲಯ ಹೇಳಿತ್ತು. ಈ ಪ್ರಕರಣ ದೇಶದಲ್ಲಿ ಸುಗ್ರೀವಾಜ್ಞೆಗಳನ್ನು ಮನಸೋಇಚ್ಛೆ ಹೊರಡಿಸುವ ಕ್ರಮಕ್ಕೆ ಮೂಗುದಾರ ಹಾಕಿತು.

ಪಾಕಿಸ್ತಾನ ಮತ್ತು ಸುಗ್ರೀವಾಜ್ಞೆ
ಭಾರತಕ್ಕೆ ಹೋಲಿಸಿದರೆ ಪಾಕಿಸ್ತಾನದಲ್ಲಿ ಸುಗ್ರೀವಾಜ್ಞೆಗಳ ಕರಾಮತ್ತು ಜಾಸ್ತಿ. ಸಂಸತ್ತು ದುರ್ಬಲವಾದಾಗ ಈ ರೀತಿಯ ಸುಗ್ರೀವಾಜ್ಞೆಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಕಿಸ್ತಾನದಲ್ಲಿ ಜಾರಿಯಾಗುತ್ತವೆ. ಆದರೆ, ಭಾರತದಲ್ಲಿ ಆ ಸುಗ್ರೀವಾಜ್ಞೆಗಳನ್ನು ಅನಿವಾರ್ಯವಿದ್ದಾಗಲಷ್ಟೇ ಹೊರಡಿಸಲಾಗುತ್ತದೆ.

ರಾಜ್ಯಪಾಲರ ಅಧಿಕಾರದ ಇತಿಮಿತಿಗಳು
ರಾಜ್ಯಪಾಲರು ಎಲ್ಲಾ ಸಂದರ್ಭದಲ್ಲೂ ಸುಗ್ರೀವಾಜ್ಞೆ ಹೊರಡಿಸುವುದು ಸಾಧ್ಯವಿಲ್ಲ. ಕೆಲವು ಪ್ರಕರಣಗಳಲ್ಲಿ ರಾಷ್ಟ್ರಪತಿಗಳ ಅನುಮತಿ ಅತ್ಯಗತ್ಯ. ಮಸೂದೆಯಲ್ಲಿರುವ ಕೆಲ ನಿಯಮಗಳಿಗೆ ರಾಷ್ಟ್ರಪತಿಯ ಪೂರ್ವಾನುಮತಿ ಅಗತ್ಯವಿರುವ ನಿಯಮಾವಳಿ ಇದ್ದರೆ ರಾಜ್ಯಪಾಲರು ಏಕಾಏಕಿ ಸುಗ್ರೀವಾಜ್ಞೆ ಹೊರಡಿಸುವಂತಿಲ್ಲ.

ಭಾರತ ಸೇರಿ ಇತರೆಡೆ ಸುಗ್ರೀವಾಜ್ಞೆ
ಬ್ರಿಟಿಷ್ ಆಳ್ವಿಕೆ ಕಾಲದಲ್ಲಿ ಅನುಷ್ಠಾನದಲ್ಲಿದ್ದ 1935ರ ಭಾರತ ಸರ್ಕಾರ ಕಾಯ್ದೆಯ 72ನೇ ವಿಧಿ ಹಾಗೂ 9ನೇ ಅನುಸೂಚನೆಯು ಗವರ್ನರ್- ಜನರಲ್‌ಗೆ ತುರ್ತುಪರಿಸ್ಥಿತಿಯಲ್ಲಿ ಶಾಂತಿ ಮತ್ತು ಉತ್ತಮ ಬ್ರಿಟಿಷ್ ಸರ್ಕಾರಕ್ಕಾಗಿ ಸುಗ್ರೀವಾಜ್ಞೆ ಹೊರಡಿಸಲು ಅವಕಾಶ ಮಾಡಿಕೊಟ್ಟಿದೆ. ಅಲ್ಲದೆ, ಭಾರತ ಸರ್ಕಾರ ಕಾಯ್ದೆ- 1935ರ 42ನೇ ವಿಭಾಗವು ಫೆಡರಲ್ ಶಾಸನಸಭೆಯ ಕಲಾಪ ನಡೆಯದ ಸಂದರ್ಭದಲ್ಲಿ ಗವರ್ನರ್ ಜನರಲ್ ಅವರು ತುರ್ತು ಕ್ರಮ ಕೈಗೊಳ್ಳಲು ಸುಗ್ರೀವಾಜ್ಞೆ ಹೊರಡಿಸಬಹುದಾಗಿದೆ ಎಂದು ಹೇಳಿದೆ. ಭಾರತ ಸರ್ಕಾರ ಕಾಯ್ದೆಯ ಈ 42ನೇ ಅನುಚ್ಛೇದದ ಮಾದರಿಯನ್ನು ಭಾರತ ಹಾಗೂ ಪಾಕಿಸ್ತಾನದಲ್ಲಿ ಅದೇ ರೀತಿ ಉಳಿಸಿಕೊಳ್ಳಲಾಗಿದೆ. ಪಾಕಿಸ್ತಾನದ ಸಂವಿಧಾನದ 69 ಮತ್ತು 102ನೇ ಅನುಚ್ಛೇದವು ರಾಷ್ಟ್ರಪತಿ ಹಾಗೂ ರಾಜ್ಯಪಾಲರಿಗೆ ಸುಗ್ರೀವಾಜ್ಞೆ ಹೊರಡಿಸಲು ಅವಕಾಶ ಮಾಡಿಕೊಡುತ್ತದೆ. ಇನ್ನು ಬಾಂಗ್ಲಾದೇಶದ ಸಂವಿಧಾನದಲ್ಲೂ ಬ್ರಿಟಿಷ್ ಆಡಳಿತದ ಈ ವಿಧಿಯನ್ನು ಉಳಿಸಿಕೊಳ್ಳಲಾಗಿದೆ. ಬಾಂಗ್ಲಾ ಸಂವಿಧಾನದ 93(1)ನೇ ಅನುಚ್ಛೇದಂತೆ ರಾಷ್ಟ್ರಪತಿಗಳು ಸುಗ್ರೀವಾಜ್ಞೆ ಹೊರಡಿಸಬಹುದಾಗಿದೆ.

ಕೆಲವು ಪ್ರಮುಖ ಸುಗ್ರೀವಾಜ್ಞೆಗಳು
- ತುರ್ತುಪರಿಸ್ಥಿತಿ ಘೋಷಣೆ-
- ಭಯೋತ್ಪಾದನಾ ನಿಗ್ರಹ ಸುಗ್ರೀವಾಜ್ಞೆ(ಪೋಟೋ)(ಇದು ಪೋಟಾ ಕಾನೂನಾಗಿ ಜಾರಿಯಾಯಿತು)
- ಟ್ರಾಯ್ ಸ್ಥಾಪನೆ
- ಕ್ರಿಮಿನಲ್ ಕಾನೂನಿಗೆ ತಿದ್ದುಪಡಿ(ದೆಹಲಿ ಗ್ಯಾಂಗ್‌ರೇಪ್ ಹಿನ್ನೆಲೆಯಲ್ಲಿ)
- ಆಹಾರ ಭದ್ರತಾ ಮಸೂದೆ
- ಕಳಂಕಿತ ಜನಪ್ರತಿನಿಧಿಗಳ ರಕ್ಷಣೆಗಾಗಿ ಸುಗ್ರೀವಾಜ್ಞೆ( ರಾಷ್ಟ್ರಪತಿ ಸಹಿ ಹಾಕುವ ಮೊದಲೇ ಸರ್ಕಾರ ಹಿಂತೆಗೆದುಕೊಂಡಿದೆ)

ನಾಲ್ಕು ಸಾಧ್ಯತೆಗಳು
ರಾಷ್ಟ್ರಪತಿಗಳು ಹಾಗೂ ರಾಜ್ಯಪಾಲರು ಹೊರಡಿಸಿದ ಸುಗ್ರೀವಾಜ್ಞೆಯನ್ನು ಕಾನೂನು ಆಗಿ ಪರಿವರ್ತಿಸುವುದು ಅಥವಾ ಅದನ್ನು ರದ್ದು ಮಾಡುವ ಅಧಿಕಾರ ಜನಪ್ರತಿನಿಧಿಗಳ ಕೈಯಲ್ಲಿರುತ್ತದೆ. ಭಾರತದ ಸಂವಿಧಾನದ 123ನೇ ವಿಧಿ(213ನೇ ವಿಧಿ ರಾಜ್ಯಪಾಲರಿಗೆ ಇದೇ ರೀತಿಯ ಅಧಿಕಾರ ನೀಡುತ್ತದೆ) ಸಂಸತ್ತು ಕಾರ್ಯನಿರ್ವಹಿಸದೇ ಇದ್ದಾಗ ರಾಷ್ಟ್ರಪತಿಗಳಿಗೆ ಸುಗ್ರೀವಾಜ್ಞೆ ಹೊರಡಿಸಲು ಅವಕಾಶ ಮಾಡಿಕೊಡುತ್ತದೆ. ಈ ವಿಧಿ ಪ್ರಕಾರ ಸುಗ್ರೀವಾಜ್ಞೆಯು ಈ ನಾಲ್ಕು ರೀತಿಯಲ್ಲಿ ಅಂತ್ಯ ಕಾಣಬಹುದು.
- ಕಾರ್ಯಾಂಗ ಹಿಂತೆಗೆದುಕೊಳ್ಳಬಹುದು
- ಶಾಸನಸಭೆಯು ಕಾನೂನು ಆಗಿ ಪರಿವರ್ತಿಸಬಹುದು
- ಕೆಳಮನೆ ಹಾಗೂ ಮೇಲ್ಮನೆ ಸೇರಿದ ಆರು ತಿಂಗಳ ಬಳಿಕ ಅದರಷ್ಟಕ್ಕೆ ಬಿದ್ದು ಹೋಗಬಹುದು
- ಶಾಸಕಾಂಗ ಈ ಸುಗ್ರೀವಾಜ್ಞೆಗೆ ಅಂಗೀಕಾರ ನೀಡದೆ ಹೋಗಬಹುದು
174ನೇ ವಿಧಿ ಪ್ರಕಾರ ಶಾಸನಸಭೆಯು ವರ್ಷಕ್ಕೆ ಎರಡು ಬಾರಿ ಸೇರುವುದು ಕಡ್ಡಾಯ. ಹಾಗಾಗಿ ಸುಗ್ರೀವಾಜ್ಞೆಯ ಆಯುಷ್ಯ ಕೆಲವೊಮ್ಮೆ ಗರಿಷ್ಠ ಏಳು ತಿಂಗಳಿಗಿಂತ ಹೆಚ್ಚಿರುವುದಿಲ್ಲ.

ಎಷ್ಟು ಬಾರಿ ?
ಸ್ವಾತಂತ್ರ್ಯಾನಂತರದ 60 ವರ್ಷಗಳಲ್ಲಿ 1993ರಲ್ಲಿ ಅತಿ ಹೆಚ್ಚು ಸಂಖ್ಯೆಯ (34) ಸುಗ್ರೀವಾಜ್ಞೆಗಳನ್ನು ಹೊರಡಿಸಲಾಗಿದೆ. ಆದರೆ, ಈಗೀಗ ಈ ರೀತಿಯ ಅಧಿಕಾರ ಚಲಾವಣೆ ಕಡಿಮೆಯಾಗಿದೆ. ಕಳೆದ 10 ವರ್ಷಗಳಲ್ಲಿ ವರ್ಷಕ್ಕೆ ತಲಾ ಆರು ಸುಗ್ರೀವಾಜ್ಞೆಗಳನ್ನಷ್ಟೇ ಹೊರಡಿಸಲಾಗಿದೆ.

- ಅಜಿತ್ ಕುಮಾರ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement