ಆಪರೇಷನ್ ಟೆರರ್ಗೆ 5 ವರ್ಷ
ಕ.ಪ್ರ.ವಾರ್ತೆ, ಮಂಗಳೂರು, ಅ. 2-
ಉಳ್ಳಾಲ ಮುಕ್ಕಚ್ಚೇರಿ ಮಸೀದಿ ಪಕ್ಕದಲ್ಲಿದ್ದ ಮನೆಯಲ್ಲಿ ಇಂಡಿಯನ್ ಮುಜಾಹಿದ್ದೀನ್ (ಐಎಂ) ಉಗ್ರರ ಸೆರೆ ಕಾರ್ಯಾಚರಣೆ ಆಪರೇಷನ್ ಟೆರರ್ಗೆ ಇಂದಿಗೆ 5 ವರ್ಷ.
ಆದರೆ, ಮಂಗಳೂರಲ್ಲಿ ಬಾಂಬ್ ತಯಾರಿಸಿ ದೇಶದ ವಿವಿಧ ಸ್ಫೋಟಗಳಿಗೆ ಬಳಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ 5 ವರ್ಷಗಳಲ್ಲಿ ಇದುವರೆಗೆ ಬಂಧಿತರಾದವರಲ್ಲಿ ಯಾಸೀನ್ ಭಟ್ಕಳ್ 11ನೇಯವನು. ಬಂಧಿತರಾದ ಉಳಿದವರಲ್ಲಿ ಮಹಮ್ಮದ್ ಅಲಿ, ಜಾವೇದ್ ಅಲಿ, ಫಕೀರ್ ಬಾವಗೆ ಜಾಮೀನು ಸಿಕ್ಕಿದರೆ, ಉಳಿದವರಿನ್ನೂ ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ.
ಐಎಂ ಉಗ್ರರ ಮೊದಲ ಪ್ರಾಯೋಗಿಕ ತರಬೇತಿ ಶಿಬಿರ ಕೊಪ್ಪ ಹಕ್ಕಲ ಮನೆ ಮತ್ತು ವಿಠಲಮಕ್ಕಿ. ಮೊದಲ ಬಾರಿಗೆ ದುಬೈಯಲ್ಲಿದ್ದ ಉಡುಪಿ ಮೂಳೂರಿನ ಇಬ್ಬರು ತಲಾ 2 ಲಕ್ಷ ಉಗ್ರ ದೇಣಿಗೆ ನೀಡಿದ್ದರು. ಫಕೀರ್ 2 ಲಕ್ಷ ಆರಂಭಿಕ ದೇಣಿಗೆ ನೀಡಿ ವಿಠಲಮಕ್ಕಿಯಲ್ಲಿ ತನ್ನ ಮಾವನ ಮನೆಯ ಪಕ್ಕ ಬಾಡಿಗೆ ಮನೆ ಒದಗಿಸಿದ್ದ. ಅಬ್ದುಲ್ ರಹಿಮಾನ್ ಎಂಬವರು 2 ಲಕ್ಷ ನೀಡಿ ಹಕ್ಕಲ ಮನೆಯಲ್ಲಿ ಜಾಗ ಒದಗಿಸಿದ. ಉಡುಪಿ, ಉಚ್ಚಿಲ, ಮೂಳೂರು, ಕಾಪು, ಗಂಗೊಳ್ಳಿಯಿಂದ ದೇಣಿಗೆ ನೀಡಿದವರ ಪಟ್ಟಿ ರಾಷ್ಟ್ರೀಯ ತನಿಖಾ ಸಂಸ್ಥೆ ಕೈ ಸೇರಿದ್ದು, ಇದರಲ್ಲಿ ಹೆಚ್ಚಿನವರು ವಿದೇಶದಲ್ಲಿರುವುದರಿಂದ ಬಂಧಿಸಲಾಗಿಲ್ಲ. ದೇಣಿಗೆ ಬಂದ ಹಣದಲ್ಲಿ ಜಾಗ ಸಮತಟ್ಟುಗೊಳಿಸಿ ಮೊದಲ ಪ್ರಾಯೋಗಿಕ ತರಬೇತಿ ಕೇಂದ್ರ ಮಾಡಿದ್ದರು.
ನಗರದಲ್ಲಿಯೇ 5 ಮನೆ: ಮಂಗಳೂರಲ್ಲಿ ಐಎಂ ಉಗ್ರರು 5 ಕಡೆ ಮನೆ ಮಾಡಿದ್ದರು! ಆರಂಭದಲ್ಲಿ ಪೊಲೀಸ್ ಕಮಿಷನರೇಟ್ ಮತ್ತು ಪಾಂಡೇಶ್ವರ ಠಾಣೆಯ ತೀರಾ ಸಮೀಪ ಇರುವ ಸುಭಾಷ್ನಗರದಲ್ಲಿ ರಿಯಾಜ್ ಭಟ್ಕಳ್ ಗ್ಯಾಂಗ್ ಇತ್ತು. ಉಗ್ರನಾಗಿ ಬದಲಾದ ಎಂಜಿನಿಯರಿಂಗ್ ವಿದ್ಯಾರ್ಥಿ ನೌಷಾದ್ನ ಮನೆ ಮೇಲ್ಭಾಗದಲ್ಲಿಯೂ ಕೆಲವು ಕಾಲ ಬಾಡಿಗೆ ಪಡೆದಿದ್ದರು. ಅಲ್ಲಿಂದ ಅತ್ತಾವರ ಕೆಎಂಸಿ ಬಾಯ್ಸ್ ಹಾಸ್ಟೆಲ್ ಪಕ್ಕದ ಕಾಫ್ರಿಗುಡ್ಡದ ಬಾಡಿಗೆ ಮನೆ, ಬೋಳಾರ ಲೀವೆಲ್ ಮನೆ, ಚೆಂಬುಗುಡ್ಡೆ ಮನೆ, ಉಳ್ಳಾಲ ಮುಕ್ಕಚ್ಚೇರಿ ಮನೆಗಳಲ್ಲಿಯೂ ವಾಸವಾಗಿದ್ದರು.
'ಚೆಂಬುಗುಡ್ಡೆ ಮನೆಗಳಲ್ಲಿ ಕಸ ಗುಡಿಸುವ ವೇಳೆ 500 ಭಕ್ಷೀಸ್ ನೀಡುತ್ತಿದ್ದ. ನೋಟುಗಳು ಹೊರಗೇ ರಾಶಿ ರಾಶಿ ಇರುತ್ತಿದ್ದವು. ಆತ ಯಾವತ್ತೂ ನಮ್ಮ ಮುಖ ನೋಡಿಲ್ಲ' ಎಂದು ಆ ಮನೆಯಲ್ಲಿ ಕಸ ಗುಡಿಸುತ್ತಿದ್ದ ಮಹಿಳೆಯೊಬ್ಬಳು ಹೇಳುತ್ತಾರೆ.
2006 ಮುಂಬೈ ರೈಲು ಸ್ಫೋಟ, ಸೂರತ್ ಸ್ಫೋಟ, ಅಹ್ಮದಾಬಾದ್ ಸ್ಫೋಟಗಳಿಗೆ ಈ ಮನೆಗಳಲ್ಲಿದ್ದುಕೊಂಡೇ ಉಗ್ರರ ಗ್ಯಾಂಗ್ ಸ್ಕೆಚ್ ರೂಪಿಸಿದ್ದು, ಸ್ಫೋಟಗಳಿಗೆ ಮಂಗಳೂರು, ಉಡುಪಿಯಿಂದ ಬಾಂಬ್ಗಳು ಕಳುಹಿಸಿರುವುದಾಗಿ ಯಾಸೀನ್ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ.
ಐಎಂ ಮೊದಲ ಪ್ರಾಯೋಗಿಕ ಶಿಬಿರ: ವಿಠಲಮಕ್ಕಿಯಲ್ಲಿ ಮನೆ ಯಜಮಾನ ಸಂಶಯಗೊಂಡು ಅಲ್ಲಿಂದ ಜಾಗ ಖಾಲಿ ಮಾಡಿಸಿದ ಬಳಿಕ ಹಕ್ಕಲಮನೆಯಲ್ಲಿ ಮನೆ ನಿರ್ಮಿಸಿ ಅಲ್ಲಿ ಟಾರ್ಗೆಟ್ ಪ್ರಾಕ್ಟಿಸ್ ಮಾಡುತ್ತಿದ್ದರು. ಮಕ್ಕಳನ್ನು ಆಕರ್ಷಿಸುವ ದೋಣಿ, ಆಟಿಕೆ, ಮೊಳೆ ಬಾಂಬ್ಗಳನ್ನು ತಯಾರಿಸುತ್ತಿದ್ದರು. ಅಲ್ಲಿ ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್, ಯಾಸೀನ್ ಭಟ್ಕಳ್, ಖಯಾಮುದ್ದೀನ್ ಕಪಾಡಿಯಾ, ಫಕೀರ್ ಬಾವ, ರಫೀಕ್, ನೌಷಾದ್, ಅಹಮ್ಮದ್ ಬಾವ ಸ್ಫೋಟಕ ತಯಾರಿಸುವ ಜತೆಗೆ ಟಾರ್ಗೆಟ್ ಪ್ರಾಕ್ಟಿಸ್ ಮಾಡುತ್ತಿದ್ದರು.
2008ರ ಆಪರೇಷನ್ ಕಾರ್ಯಾಚರಣೆ ಬಳಿಕ ಐಎಂ ಸಂಘಟನೆ ನೆಟ್ವರ್ಕ್ ಹಾಳಾಗಿ ಹೋಯಿತು. ಆಮೇಲೆ ತಮ್ಮದೇ ಸ್ವಸಾಮರ್ಥ್ಯ ಮೂಲಕ ಸ್ಫೋಟಿಸಿ ಶಕ್ತಿ ಪ್ರದರ್ಶಿಸಿದೆವು ಎಂದು ತನಿಖಾಧಿಕಾರಿಗಳ ಮುಂದೆ ಯಾಸೀನ್ ಹೇಳಿದ್ದಾನೆ.
ಆಪರೇಷನ್ ಟೆರರ್: 2008 ಅ.3ರಂದು ಬೆಳಗ್ಗಿನ ಜಾವ ಮುಂಬೈ ಪೊಲೀಸರ ಸಹಕಾರದಿಂದ ಐಜಿಪಿ ನೇರ ಸುಪರ್ದಿಯಲ್ಲಿ ಕಮಾಂಡೋ, ನೂರಾರು ಪೊಲೀಸ್ ಬಲ ಸೇರಿಕೊಂಡು ಡಿವೈಎಸ್ಪಿ ಜಯಂತ್ ವಿ.ಶೆಟ್ಟಿ ಮತ್ತು ಅಪರಾಧ ಗುಪ್ತವಾರ್ತೆ ದಳ ಇನ್ಸ್ಪೆಕ್ಟರ್ ಡಾ.ಎಚ್.ಎನ್.ವೆಂಕಟೇಶ್ ಪ್ರಸನ್ನ ನೇತೃತ್ವದಲ್ಲಿ ನಾಲ್ವರು ಶಂಕಿತ ಉಗ್ರರನ್ನು ಬಂಧಿಸಲಾಗಿತ್ತು.
ಮುಕ್ಕಚ್ಚೇರಿಯ ಮಹಮ್ಮದ್ ಅಲಿ ಈತನ ಪುತ್ರ ಜಾವೆದ್ ಅಲಿ, ಬಳಿಕ ಸುಭಾಷ್ನಗರ ಮಹಮ್ಮದ್ ನೌಷಾದ್, ಹಳೆಯಂಗಡಿಯ ಅಹಮ್ಮದ್ ಬಾವ ಬಂಧನವಾಗಿತ್ತು. ಬಳಿಕ ಫಕೀರ್ ಬಾವ ಸೆರೆಯಾಗಿದ್ದ. ರಫೀಕ್, ತೈರೋಜ್ನನ್ನು ಎಸಿಪಿ ಸುಭಾಶ್ಚಂದ್ರ ಬಂಧಿಸಿದ್ದರು.
ಸ್ಫೋಟಕ ತಜ್ಞ ಖಯಾಮುದ್ದೀನ್ ಕಪಾಡಿಯಾ ಯಾನೆ ಮೂಸಾನನ್ನು ಉಜ್ಜೈನಿ ಪೊಲೀಸರು ಬಂಧಿಸಿದರು. ಅಕ್ಬರಿ ಚೌದರಿಯನ್ನು ಮುಂಬೈ ಪೊಲೀಸರು ಮೊದಲೇ ಬಂಧಿಸಿದ್ದರು. ಈ ಪ್ರಕರಣದಲ್ಲಿ ಭಾಗಿಯಾದ ಎಂಜಿನಿಯರ್ ಮುದಸ್ಸಿರ್ ಯಾಸೀನ್, ಮೋಸ್ಟ್ ವಾಂಟೆಡ್ ಉಗ್ರ ರಿಯಾಜ್ ಭಟ್ಕಳ್, ಇಕ್ಬಾಲ್ ಭಟ್ಕಳ್ ಇನ್ನೂ ಬಂಧಿತರಾಗಬೇಕಿದೆ.
- ಜಿತೇಂದ್ರ ಕುಂದೇಶ್ವರ