ಕಾಲುಬಾಯಿ ಜ್ವರ ಇರಲಿ ಬಲು ಎಚ್ಚರ
ರಾಜ್ಯಾದ್ಯಂತ ಕಾಲು ಬಾಯಿ ಜ್ವರ ಉಲ್ಭಣಿಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದ್ದು, ಮೂಕ ಪ್ರಾಣಿಗಳು ಜ್ವರದಿಂದ ಬಳಲಿ ಚಿಕಿತ್ಸೆ ಕೊಡಿಸಿ ಎಂದು ಮೌನವಾಗಿ ರೋದಿಸುತ್ತಿವೆ...
ಕನ್ನಡಪ್ರಭ ವಾರ್ತೆ, ಬೆಂಗಳೂರು, ಅ.2-
ರಾಜ್ಯಾದ್ಯಂತ ಕಾಲು ಬಾಯಿ ಜ್ವರ ಉಲ್ಭಣಿಸಿದ್ದರಿಂದ ಪರಿಸ್ಥಿತಿ ಬಿಗಡಾಯಿಸಿದ್ದು, ಮೂಕ ಪ್ರಾಣಿಗಳು ಜ್ವರದಿಂದ ಬಳಲಿ ಚಿಕಿತ್ಸೆ ಕೊಡಿಸಿ ಎಂದು ಮೌನವಾಗಿ ರೋದಿಸುತ್ತಿವೆ.
ಪಶು ವೈದ್ಯರು ಗುರುತಿಸಿರುವಂತೆ ಸುಮಾರು 7 ವಿಧದ ವೈರಸ್ಗಳಿಂದ ಕಾಣಿಸಿಕೊಳ್ಳುವ ಈ ಬಾಧೆಗೆ ಈಗಾಗಲೇ ರಾಜ್ಯಾದ್ಯಂತ 875 ಜಾನುವಾರುಗಳು ಬಲಿಯಾಗಿವೆ. ಸರ್ಕಾರ ಅಗತ್ಯ ಕ್ರಮ ಕೈಗೊಳ್ಳುತ್ತಿದ್ದರೂ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿಲ್ಲ. ಚಾಮರಾಜನಗರ, ಮಂಡ್ಯ, ಮೈಸೂರು ಪ್ರದೇಶಗಳಿಗೆ ಸೀಮಿತವಾಗಿದ್ದ ಈ ಜ್ವರ ಈಗ ರಾಜ್ಯವ್ಯಾಪಿ ವಿಸ್ತರಿಸಿದೆ.
ಸಕಾಲಕ್ಕೆ ಮಳೆಯಾಗಿದ್ದರಿಂದ ರೈತರು ಹೊಲಗಳಲ್ಲಿ ಕಾರ್ಯನಿರತರಾಗಿದ್ದರೆ ಜ್ವರ ಬಾಧಿತ ಜಾನುವಾರುಗಳ ಆರೈಕೆ ಮಾಡುವುದು ಕಷ್ಟಕರವಾಗಿದೆ. ಪ್ರತಿ ಗ್ರಾಮಗಳಿಗೆ ತೆರಳಿ ಪಶು ವೈದ್ಯರು ಚಿಕಿತ್ಸೆ ನೀಡುತ್ತಿದ್ದರೂ ಪರಿಣಾಮಕಾರಿ ಫಲ ನೀಡಿಲ್ಲ. ಹೀಗಾಗಿ ಕಾಲು ಬಾಯಿ ಜ್ವರ ಬರದಂತೆ ಹಾಗೂ ಅದು ಹರಡದಂತೆ ಕ್ರಮ ಕೈಗೊಳ್ಳಬೇಕಾದ ಅಗತ್ಯವಿದೆ.
ಕಾಲು ಬಾಯಿ ಜ್ವರದ ಲಕ್ಷಣಗಳೇನು?
ಕಾಲು ಬಾಯಿ ಜ್ವರ ಕಾಣಿಸಿಕೊಂಡ ಜಾನುವಾರುಗಳ ಬಾಯಿ, ನಾಲಿಗೆ, ವಸಡು ಹಾಗೂ ಕೆಚ್ಚಲಿನ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಕಾಣಿಸಿಕೊಳ್ಳುತ್ತವೆ. ದನಗಳ ಕಾಲಿನ ಗೊರಸಿನ ಮಧ್ಯೆ ಅಂದರೆ ಪಾದದ ಸೀಳಿನ ನಡುವೆ ಹುಣ್ಣುಗಳಾಗುತ್ತವೆ. 104ರಿಂದ 107 ಡಿಗ್ರಿ ಸೆಲ್ಸಿಯಸ್ವರೆಗೂ ಜ್ವರ ಕಾಣಿಸಿಕೊಳ್ಳುತ್ತದೆ. ಹೀಗೆ ಜ್ವರ ಕಾಣಿಸಿಕೊಂಡ ಜಾನುವಾರುಗಳು ಮೇವು ತಿನ್ನುವುದನ್ನೇ ನಿಲ್ಲಿಸುತ್ತವೆ, ಕುಂಟುತ್ತಾ ನಡೆಯುತ್ತವೆ. ಸಂಪೂರ್ಣವಾಗಿ ನಿತ್ರಾಣಗೊಂಡು ಮೇಲೆಳದಂತಾಗುತ್ತವೆ.
ಈ ಜ್ವರಕ್ಕೆ ಕಾರಣವೇನು?
ಫುಟ್ ಆ್ಯಂಡ್ ಮೌತ್ ಎಂಬ ವೈರಸ್ನಿಂದ ಹರಡುತ್ತದೆ. ಪಶುವೈದ್ಯಕೀಯ ಭಾಷೆಯಲ್ಲಿ ಒ, ಎ. ಸಿ, ಏಷ್ಯಾ 1, ಏಷ್ಯಾ 22, ಎಸ್ಐಟಿ ಸೇರಿದಂತೆ ಏಳು ವಿಧದ ವೈರಾಣುಗಳನ್ನು ಗುರುತಿಸಲಾಗಿದೆ. ವಾತಾವರಣದ ಉಷ್ಣಾಂಶ 17ರಿಂದ 27 ಡಿಗ್ರಿ ಸೆಲ್ಸಿಯಸ್ ಇದ್ದಾಗ ಮಳೆ ಬೀಳುತ್ತಿದ್ದರೆ ಈ ರೋಗಕ್ಕೆ ಕಾರಣವಾಗುವ ವೈರಾಣುಗಳು ಸೃಷ್ಟಿಯಾಗುತ್ತವೆ. ಇತ್ತೀಚೆಗೆ ಮಳೆ ಬಿದ್ದಾಗ ಇಂಥದ್ದೇ ವಾತಾವರಣ ಇದ್ದಿದ್ದರಿಂದ ಈ ವೈರಸ್ಗಳು ವ್ಯಾಪಕವಾಗಿ ಹರಡಿದ್ದು, ಜಾನುವಾರುಗಳಲ್ಲಿ ರೋಗ ಕಾಣಿಸಿಕೊಳ್ಳುತ್ತಿದೆ. ಈ ವೈರಾಣುಗಳು ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುವುದರಿಂದ ಈ ರೋಗಕ್ಕೆ ನಿಖರವಾದ ರೋಗನಿರೋಧಕ ಮದ್ದು ಇಲ್ಲ. ಹೀಗಾಗಿ ರೋಗ ಕಾಣಿಸಿಕೊಂಡಾಗ ಯಾವ ವೈರಾಣು ಕಾರಣವೆಂದು ಪತ್ತೆ ಹಚ್ಚಿ ಲಸಿಕೆ ಮೂಲಕವೇ ಜ್ವರವನ್ನು ನಿಯಂತ್ರಿಸಬೇಕು.
ಹೇಗೆ ಹರಡುತ್ತದೆ?
ಸಾಂಕ್ರಾಮಿಕ ರೋಗವಾದ ಇದು ಒಂದು ಜಾನುವಾರುವಿನಿಂದ ಇನ್ನೊಂದು ಜಾನುವಾರಿಗೆ ಬಹುಬೇಗ ಹರಡುತ್ತದೆ. ಗಾಳಿ ಮೂಲಕ ಸುಮಾರು 60 ಕಿ.ಮೀ. ದೂರದವರೆಗೂ ಇದು ಹರಡಬಲ್ಲದು. ಕಾಲು ಬಾಯಿ ಜ್ವರ ಕಾಣಿಸಿಕೊಂಡ ಜಾನುವಾರಿಗೆ ಕುಡಿಸಿದ ನೀರನ್ನು ಇನ್ನೊಂದು ದನಕ್ಕೆ ಕುಡಿಸುವುದು, ರೋಗಬಾಧಿತ ಜಾನುವಾರು ತಿಂದು ಬಿಟ್ಟ ಮೇವು ಇನ್ನೊಂದು ದನಕ್ಕೆ ಹಾಕುವುದರಿಂದ ಈ ರೋಗ ಬಹುಬೇಗ ಹರಡುತ್ತದೆ.
ತಡೆಗಟ್ಟುವುದು ಹೇಗೆ?
- ಕಾಲು ಬಾಯಿ ಜ್ವರ ಕಾಣಿಸಿಕೊಂಡಾಗ ಇತರೆ ಜಾನುವಾರುಗಳೊಂದಿಗೆ ಕೊಟ್ಟಿಗೆಯಲ್ಲಿಯೇ ಕಟ್ಟುವ ಬದಲು, ಬೇರೆಡೆ ವ್ಯವಸ್ಥೆ ಮಾಡುವುದು ಒಳ್ಳೆಯದು.
- ಕೊಟ್ಟಿಗೆಯನ್ನು ಆಗಾಗ ಸ್ವಚ್ಛಗೊಳಿಸಿ.
- ರೋಗ ಬಾಧಿತ ಜಾನುವಾರಿಗೆ ಕುಡಿಸಿದ ನೀರು, ಮೇವು ಆರೋಗ್ಯವಾಗಿರುವ ದನಗಳಿಗೆ ನೀಡಬೇಡಿ.
- ಜ್ವರ ಕಾಣಿಸಿಕೊಂಡವುಗಳನ್ನು ಯಾವುದೇ ರೀತಿಯಾಗಿ ಇತರೆ ದನಗಳ ಸಂಪರ್ಕಕ್ಕೆ ಬರದಂತೆ ನೋಡಿಕೊಳ್ಳಿ.
- ವರ್ಷಕ್ಕೆ ಎರಡು ಬಾರಿ ತಪ್ಪದೇ ಲಸಿಕೆ ಹಾಕಿಸಿ.
- ಜ್ವರ ಕಾಣಿಸಿಕೊಂಡ ತಕ್ಷಣ ಪಶು ವೈದ್ಯರನ್ನು ಸಂಪರ್ಕಿಸಿ. ನೀವೇ ಸ್ವಯಂ ವೈದ್ಯರಾಗಬೇಡಿ.
- ಮಳೆಗಾಲದ ವೇಳೆ ದನಗಳ ಬಗ್ಗೆ ಹೆಚ್ಚಿನ ಎಚ್ಚರಿಕೆ ವಹಿಸಿ.
- ರೋಗಪೀಡಿತ ರಾಸುಗಳಿಗೆ ಶೇ.0.5ರಷ್ಟು ಅಡುಗೆ ಸೋಡಾ ದ್ರಾವಣದಿಂದ ಶುದ್ಧಗೊಳಿಸಿ.
- ಮೃದು ಆಹಾರ, ಗಂಜಿ, ಬಾಳೆ ಹಣ್ಣು, ರಾಗಿ ಅಂಬಲಿ ನೀಡಿ.
- ರಾಸುಗಳನ್ನು ಸಂತೆಗೆ ಒಯ್ಯುವುದನ್ನು ರೋಗ ನಿಯಂತ್ರಣಕ್ಕೆ ಬರುವವರೆಗೂ ನಿಲ್ಲಿಸಿ.
- ರೋಗ ಮುಚ್ಚಿಟ್ಟು ಇತರರಿಗೆ ಮಾರಾಟ ಮಾಡುವ ಯತ್ನ ಮಾಡಬೇಡಿ. ಇದರಿಂದ ಮತ್ತಷ್ಟು ವ್ಯಾಪಿಸುತ್ತದೆ.
ಪರಿಣಾಮ ಏನು?
- ಕಾಲು ಬಾಯಿ ಜ್ವರದಿಂದ ಬಳಲಿ ಚೇತರಿಸಿಕೊಂಡ ಜಾನುವಾರು ನೀಡುವ ಹಾಲಿನ ಪ್ರಮಾಣ ಕಡಿಮೆಯಾಗುತ್ತದೆ.
- ದೊರೆಯುವ ಹಾಲಿನಲ್ಲಿಯೂ ಸತ್ವ ಕಡಿಮೆ ಇರುತ್ತದೆ.
- ಎತ್ತುಗಳ ಶಕ್ತಿ ಕುಂದಿ ಉಳುಮೆ ಮಾಡುವಾಗ ತೇಗಲು ಆರಂಭಿಸುತ್ತವೆ.
- ಜಾನುವಾರುಗಳ ಮೈಮೇಲಿನ ಕೂದಲು ಬಿರುಸಾಗುತ್ತದೆ.
- ಬಿಸಿಲಿನಲ್ಲಿ ನಡೆಯಲಾಗದಷ್ಟು ನಿತ್ರಾಣಗೊಳ್ಳುತ್ತವೆ.
- ದೈಹಿಕವಾಗಿ ಬಳಲಿ ಆಯುಷ್ಯ ಕ್ಷೀಣಿಸುತ್ತದೆ.
875 ಜಾನುವಾರು ಬಲಿ
ಸೆಪ್ಟೆಂಬರ್ ಅಂತ್ಯದವರೆಗೆ ದೊರೆತ ಮಾಹಿತಿ ಪ್ರಕಾರ ಕಾಲು ಬಾಯಿ ಜ್ವರದಿಂದಾಗಿ 875 ಜಾನುವಾರುಗಳು ಬಲಿಯಾಗಿವೆ. ಚಾಮರಾಜನಗರ, ಮಂಡ್ಯ, ಮೈಸೂರು, ಬೆಂಗಳೂರು ಗ್ರಾಮಾಂತರ, ಕೋಲಾರ, ಹಾಸನ, ಚಿಕ್ಕಬಳ್ಳಾಪುರ, ತುಮಕೂರು ಜಿಲ್ಲೆಗಳಲ್ಲಿ ಹೆಚ್ಚಾಗಿ ಬಾಧಿಸಿದ್ದು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿಯೂ ಈ ರೋಗ ಕಾಣಿಸಿಕೊಂಡಿದೆ.
ಈ ಜ್ವರಕ್ಕೆ ಕಾರಣ?
ಫುಟ್ ಆ್ಯಂಡ್ ಮೌತ್ ಎಂಬ ವೈರಸ್ನಿಂದ ಹರಡುತ್ತದೆ. ಪಶುವೈದ್ಯಕೀಯ ಭಾಷೆಯಲ್ಲಿ ಒ, ಎ. ಸಿ, ಏಷ್ಯಾ 1, ಏಷ್ಯಾ 22, ಎಸ್ಐಟಿ ಸೇರಿದಂತೆ ಏಳು ವಿಧದ ವೈರಾಣುಗಳನ್ನು ಗುರುತಿಸಲಾಗಿದೆ. ವಾತಾವರಣದ ಉಷ್ಣಾಂಶ 17ರಿಂದ 27 ಡಿಗ್ರಿ ಸೆಲ್ಸಿಯಸ್ ಇದ್ದಾಗ ಮಳೆ ಬೀಳುತ್ತಿದ್ದರೆ ಈ ರೋಗಕ್ಕೆ ಕಾರಣವಾಗುವ ವೈರಾಣುಗಳು ಸೃಷ್ಟಿಯಾಗುತ್ತವೆ.
ಇತ್ತೀಚೆಗೆ ಮಳೆ ಬಿದ್ದಾಗ ಇಂಥದ್ದೇ ವಾತಾವರಣ ಇದ್ದಿದ್ದರಿಂದ ಈ ವೈರಸ್ಗಳು ವ್ಯಾಪಕವಾಗಿ ಹರಡಿದ್ದು, ಜಾನುವಾರುಗಳಲ್ಲಿ ರೋಗ ಕಾಣಿಸಿಕೊಳ್ಳುತ್ತಿದೆ. ಈ ವೈರಾಣುಗಳು ವಿವಿಧ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಲೇ ಇರುವುದರಿಂದ ಈ ರೋಗಕ್ಕೆ ನಿಖರವಾದ ರೋಗನಿರೋಧಕ ಮದ್ದು ಇಲ್ಲ. ಹೀಗಾಗಿ ರೋಗ ಕಾಣಿಸಿಕೊಂಡಾಗ ಯಾವ ವೈರಾಣು ಕಾರಣವೆಂದು ಪತ್ತೆ ಹಚ್ಚಿ ಲಸಿಕೆ ಮೂಲಕವೇ ಜ್ವರವನ್ನು ನಿಯಂತ್ರಿಸಬೇಕು.
ಚಿಕಿತ್ಸೆ ಎಲ್ಲೆಲ್ಲಿ ಲಭ್ಯ?
ಕೇಂದ್ರ ಸರ್ಕಾರದ ನೆರವಿನೊಂದಿಗೆ ರಾಜ್ಯ ಸರ್ಕಾರ ಕಾಲು ಬಾಯಿ ಜ್ವರ ನಿಯಂತ್ರಣ ಯೋಜನೆಯಡಿ ಪ್ರತಿ ವರ್ಷ ಆಗಸ್ಟ್- ಸೆಪ್ಟೆಂಬರ್ ಹಾಗೂ ಫೆಬ್ರವರಿ- ಮಾರ್ಚ್ನಲ್ಲಿ ಪ್ರತಿ ಗ್ರಾಮಗಳಲ್ಲಿಯೂ ಉಚಿತ ಲಸಿಕಾ ಕಾರ್ಯಕ್ರಮ ಆಯೋಜಿಸುತ್ತದೆ. ಅಲ್ಲದೇ ಸಮೀಪದ ಪಶು ವೈದ್ಯಕೀಯ ಕೇಂದ್ರದಲ್ಲಿ ಉಚಿತವಾಗಿ ಚಿಕಿತ್ಸೆ ನೀಡಲಾಗುತ್ತದೆ. ಒಂದು ವೇಳೆ ಲಸಿಕಾ ಕಾರ್ಯಕ್ರಮದಲ್ಲಿ ಲಸಿಕೆ ಹಾಕಿಸದಿದ್ದರೆ ಪಶು ವೈದ್ಯಕೀಯ ಆಸ್ಪತ್ರೆಗೆ ತೆರಳಿದರೆ ಉಚಿತವಾಗಿ ಲಸಿಕೆ ಹಾಕಲಾಗುತ್ತದೆ.
ಕಾಲು ಬಾಯಿ ಜ್ವರಕ್ಕೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ. ಸಿಬ್ಬಂದಿ ಹಾಗೂ ಲಸಿಕೆ ಕೊರತೆ ಇಲ್ಲ. ಉಚಿತ ಲಸಿಕೆಯನ್ನು ನೀಡುವಾಗ ಗ್ರಾಮಗಳ ಎಲ್ಲ ಜಾನುವಾರುಗಳಿಗೂ ಹಾಕಿಸಿದರೆ ಸಮಸ್ಯೆ ಉಲ್ಬಣಿಸುವುದಿಲ್ಲ. ಆದರೆ ರೈತರು ಇದಕ್ಕೆ ಸೂಕ್ತವಾಗಿ ಸಹಕರಿಸುತ್ತಿಲ್ಲ.
- ಡಾ.ಶಿವರಾಮ ಭಟ್, ಪಶುಸಂಗೋಪನಾ ಇಲಾಖೆ ಅಭಿವೃದ್ಧಿ ವಿಭಾಗದ ಜಂಟಿ ನಿರ್ದೇಶಕ
- ಚನ್ನು ಮೂಲಿಮನಿ