ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೇರಳ ಕಿರಿಕ್

ಏಕೋ ಏನೋ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಕರ್ನಾಟಕ-ಕೇರಳ ಮಧ್ಯೆ ರಾತ್ರಿ ಸಂಚಾರ ನಿಷೇಧ ತೆರವು ವಿಚಾರದಲ್ಲಿ ಕೇರಳ...

Mainashree
Updated On : 3 Oct 2013, 1:00 am

-ಇಂದು ಸಿಎಂ ಸಿದ್ದರಾಮಯ್ಯ ಜತೆ ಉಮ್ಮನ್ ಚಾಂಡಿ ಮಾತುಕತೆ

ಕನ್ನಡಪ್ರಭ ವಾರ್ತೆ ಬೆಂಗಳೂರು ಅ. 2
ಏಕೋ ಏನೋ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಮೂಲಕ ಕರ್ನಾಟಕ-ಕೇರಳ ಮಧ್ಯೆ ರಾತ್ರಿ ಸಂಚಾರ ನಿಷೇಧ ತೆರವು ವಿಚಾರದಲ್ಲಿ ಕೇರಳ ಸರ್ಕಾರ ರಾಜ್ಯವನ್ನು ಬೆಂಬಿಡದೆ ಕಾಡುತ್ತಿದೆ.
ಈ ಹಿಂದೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಹಲವು ಬಾರಿ ಪ್ರಯತ್ನಿಸಿ ವಿಫಲವಾಗಿದ್ದ ಕೇರಳ ಸರ್ಕಾರ  ರಾತ್ರಿ ಸಂಚಾರ ನಿಷೇಧ ತೆರವುಗೊಳಿಸುವ ಪ್ರಯತ್ನಕ್ಕೆ ಮುಂದಾಗಿದೆ.
ರಾಷ್ಟ್ರೀಯ ಹೆದ್ದಾರಿ 212ರಲ್ಲಿ ಸುಲ್ತಾನ್ ಬತ್ತೇರಿ-ಗುಂಡಾಲಪೆಟ್ಟು ಮಧ್ಯೆ ರಾತ್ರಿ ವಾಹನ ಸಂಚಾರ (ಬಂಡೀಪುರ ಹುಲಿ ರಕ್ಷಿತಾರಣ್ಯದ ಮೂಲಕ ಹಾದುಹೋಗುವ ರಸ್ತೆ) ಹಾಗೂ ನೀಲಂಬೂರು-ನಂಚನ್‌ಕೊಡೆ ರೇಲ್ವೆ ಮಾರ್ಗ ಕುರಿತಂತೆ ಗುರುವಾರ ಉಭಯ ರಾಜ್ಯಗಳ ಮುಖ್ಯಮಂತ್ರಿಗಳು ಸಮಾಲೋಚನೆ ನಡೆಸಲಿದ್ದಾರೆ.  ಒಂದು ವೇಳೆ ಕೇರಳ ಸರ್ಕಾರದ ಒತ್ತಡಕ್ಕೆ ಸರ್ಕಾರ ಮಣಿದಲ್ಲಿ ರಾತ್ರಿ ವೇಳೆ ವಾಹನ ಸಂಚಾರ ಮತ್ತೆ ಆರಂಭವಾಗಲಿದ್ದು, ವನ್ಯಜೀವಿಗಳ ಪಾಲಿಗೆ ಇದು ಕಂಟಕವಾಗಲಿದೆ.
ಏನಿದು ವಿವಾದ?: ಬಂಡೀಪುರ ರಕ್ಷಿತಾರಣ್ಯದಲ್ಲಿ ಹಾದು ಹೋಗುವ ಎರಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ರಾತ್ರಿ 9ರಿಂದ ಬೆಳಗಿನ ಜಾವ 6 ಗಂಟೆವರೆಗೆ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ರಾತ್ರಿ ವೇಳೆ ವನ್ಯಜೀವಿಗಳು ವಾಹನಗಳಿಗೆ ಸಿಲುಕಿ ಮೃತಪಡುತ್ತವೆ ಎಂಬ ಕಾರಣಕ್ಕೆ ಹೈಕೋರ್ಟ್ ಆದೇಶದಂತೆ ಹಿಂದಿನ ಸರ್ಕಾರ ಆದೇಶಿಸಿತ್ತು.        

ಪ್ರಸ್ತುತ ಪ್ರಕರಣ ಸುಪ್ರೀಂ ಕೋರ್ಟ್ ಮುಂದಿದೆ. ಇನ್ನೊಂದೆಡೆ ರಾ.ಹೆ. 212ರ ಬದಲಾಗಿ ಹುಣಸೂರು-ಗೋಣಿಕೊಪ್ಪ-ಕುಟ್ಟ-ಕಾರ್ಟಿಕುಳಂ ಮೂಲಕ ಇರುವ ಬದಲಿ ರಸ್ತೆ ಅಭಿವೃದ್ಧಿಗೆ ರಾಜ್ಯ ಸರ್ಕಾರ 48 ಕೋಟಿ ಬಿಡುಗಡೆ ಮಾಡಿದ್ದು, ರಸ್ತೆ ಅಭಿವೃದ್ಧಿ ಕಾರ್ಯ ಮುಕ್ತಾಯದ ಹಂತದಲ್ಲಿದೆ. ಆದರೆ, ಈ ಮಾರ್ಗ 30 ಕಿ.ಮೀ. ಹೆಚ್ಚು ದೂರ ಕ್ರಮಿಸಬೇಕಿರುವುದರಿಂದ ರಾ.ಹೆ. 212ರಲ್ಲೇ ರಾತ್ರಿ ವಾಹನ ಸಂಚಾರ ಆರಂಭಿಸಬೇಕು ಎಂಬುದು ಕೇರಳ ಸರ್ಕಾರದ ಒತ್ತಾಯ.ಈ ಮಧ್ಯೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಕೇರಳ ಸರ್ಕಾರ ರಾತ್ರಿ ವಾಹನ ಸಂಚಾರ ನಿಷೇಧ ತೆರವುಗೊಳಿಸಲು ಸಾಕಷ್ಟು ಪ್ರಯತ್ನ ಮಾಡಿತ್ತು. ಆದರೆ, ರಾಜ್ಯ ಸರ್ಕಾರ ಇದಕ್ಕೆ ಒಪ್ಪದ ಕಾರಣ ಪ್ರಯತ್ನ ಅಲ್ಲಿಗೆ ನಿಂತಿತ್ತು. ಜತೆಗೆ ಪ್ರಕರಣ ಸುಪ್ರೀಂ ಕೋರ್ಟ್‌ನಲ್ಲಿರುವುದರಿಂದ ಕರ್ನಾಟಕ ಸರ್ಕಾರದ ಸಮ್ಮತಿ ಇಲ್ಲದೆ ಕೇರಳ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ ಎನ್ನುವಂತ ಪರಿಸ್ಥಿತಿ ಇತ್ತು.
ರೇಲ್ವೆ ಮಾರ್ಗ ನಿರ್ಮಾಣ: ಇನ್ನು ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹೃದಯ ಭಾಗದಲ್ಲಿ ಹಾದು ಹೋಗುವ ನಂಜನಗೂಡು- ನೀಲಂಬೂರ್ ರೇಲ್ವೆ ಮಾರ್ಗ ಸಮೀಕರಣ ಆಗ್ರಹಿಸಿ ವೈನಾಡ್ ಮೂಲಕ ನೀಲಗಿರೀಸ್ ವೈನಾಡ್ ರಾಷ್ಟ್ರೀ ಹೆದ್ದಾರಿ ಮತ್ತು ರೇಲ್ವೆ ಕಾರ್ಯಕಾರಿ ಸಮಿತಿ ಚೆನ್ನೈನಲ್ಲಿರುವ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣದಲ್ಲಿ ಅರ್ಜಿ ದಾಖಲಿಸಿದೆ. ಈ ಅರ್ಜಿಯಲ್ಲೂ ರಾತ್ರಿ ಸಂಚಾರ ನಿರ್ಬಂಧ ತೆರವಿಗೆ ಕೋರಲಾಗಿದೆ.
ಆದರೆ, ನಂಜನಗೂಡು-ನೀಲಂಬೂರು ರೇಲ್ವೆ ಮಾರ್ಗ ಆರ್ಥಿಕವಾಗಿ ಕಾರ್ಯಸಾಧುವಲ್ಲ ಮತ್ತು ಈ ಪ್ರಸ್ತಾಪ ಕೈಗೊಳ್ಳಲು ಇಲಾಖೆಯಲ್ಲಿ ಮೂಲ ಸೌಕರ್ಯ ಇಲ್ಲ ಎಂದು ರೇಲ್ವೆ ಮಂಡಳಿ ನ್ಯಾಯಾಲಯಕ್ಕೆ ಪ್ರಮಾಣಪತ್ರ ಸಲ್ಲಿಸಿದೆ. ಹೀಗಿದ್ದರೂ ಕೇರಳ ಸರ್ಕಾರ ರಾಜ್ಯ ಸರ್ಕಾರದ ನೆರವು ಪಡೆದು ಈ ರೈಲು ಮಾರ್ಗ ನಿರ್ಮಾಣಕ್ಕೆ ಮತ್ತೆ ಪ್ರಯತ್ನಿಸುತ್ತಿದೆ.

ಆತಂಕವೇನು?
ಸಾಮಾನ್ಯವಾಗಿ ರಾಷ್ಟ್ರೀಯ ಪಕ್ಷಗಳು ಅಧಿಕಾರದಲ್ಲಿರುವ ರಾಜ್ಯಗಳಲ್ಲಿ ಒಂದು ರಾಜ್ಯದ ಹಿತಾಸಕ್ತಿಗಿಂತ ಪಕ್ಷದ ಹಿತಕ್ಕೆ ಹೆಚ್ಚು ಬೆಲೆ ಎಂಬುದು ಅನೇಕ ಪ್ರಕರಣಗಳಲ್ಲಿ ಸಾಬೀತಾಗಿದೆ. ಪ್ರಸ್ತುತ ರಾಜ್ಯ ಮತ್ತು ಕೇರಳದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಅದೇ ರೀತಿ ಕೇಂದ್ರದಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಅಧಿಕಾರದಲ್ಲಿದೆ. ಹೀಗಿರುವಾಗ ಈ ಪಕ್ಷದ ಜನಪ್ರತಿನಿಧಿಗಳು ಪಕ್ಷನಿಷ್ಠೆಗೆ ಆದ್ಯತೆ ನೀಡಿದರೆ ಬಂಡೀಪುರ ರಕ್ಷಿತಾರಣ್ಯದ ರಸ್ತೆಯಲ್ಲಿ ರಾತ್ರಿ ವಾಹನ ಸಂಚಾರ ನಿಷೇಧ ತೆರವಾಗುವುದೇ? ವನ್ಯ ಜೀವಿಗಳಿಗೆ ಮತ್ತೆ ಆತಂಕ ಕಾಡುವುದೇ? ನ್ಯಾಯಾಲಯದ ಆದೇಶ ಮೀರಿ ಸರ್ಕಾರಗಳು ನಿರ್ಧಾರ ಕೈಗೊಳ್ಳುವವೇ ಎಂಬ ಆತಂಕ ಸೃಷ್ಟಿಯಾಗಿದೆ.

ಬಂಡೀಪುರದಲ್ಲಿ ರಾತ್ರಿ ಸಂಚಾರ ನಿಷೇಧಿಸಿದ್ದು, ಇದಕ್ಕೆ ಪ್ರಯಾಣಿಕರೂ ಹೊಂದಿಕೊಂಡಿದ್ದಾರೆ. ಹೀಗಾಗಿ ವನ್ಯಜೀವಿಗಳ ಬಗ್ಗೆ ಯೋಚಿಸಬೇಕಾಗಿದೆ. ಈ ನಿಟ್ಟಿನಲ್ಲಿ ಅರಣ್ಯ ಇಲಾಖೆ ಈಗ ಕೈಗೊಂಡಿರುವ ನಿರ್ಧಾರಕ್ಕೆ ಕೈಜೋಡಿಸಬೇಕಾಗಿದೆ. ಮೇಲಾಗಿ ಪ್ರಕರಣ ನ್ಯಾಯಾಲಯದ ಮುಂದಿರುವುದರಿಂದ ಈ ಕುರಿತು ಯಾವುದೇ ಚರ್ಚೆ ನ್ಯಾಯಾಂಗ ನಿಂದನೆಯಾಗುತ್ತದೆ.
- ಸಂಜಯ್ ಗುಬ್ಬಿ
ವನ್ಯಜೀವಿ ತಜ್ಞ


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments