ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಅನಿಲ್‌ ಲಾಡ್‌ಗೂ ಬಿಸಿ

ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಾಸಕರು ಬಂಧನಕ್ಕಿಡಾಗಿರುವ ಬೆನ್ನಲ್ಲೇ ಬಳ್ಳಾರಿ ಶಾಸಕ ಅನಿಲ್...

Mainashree
Updated On : 5 Oct 2013, 12:06 pm

ಕನ್ನಡಪ್ರಭ ವಾರ್ತೆ, ಬಳ್ಳಾರಿ, ಅ. 4-
ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಶಾಸಕರು ಬಂಧನಕ್ಕಿಡಾಗಿರುವ ಬೆನ್ನಲ್ಲೇ ಬಳ್ಳಾರಿ ಶಾಸಕ ಅನಿಲ್ ಲಾಡ್, ಅಖಿಲ ಭಾರತ ಗಣಿ ಮಾಲೀಕ ಸಂಘದ ಅಧ್ಯಕ್ಷರಾಗಿದ್ದ ರಾಹುಲ್ ಬಲ್ಡೋಟಾ, ಗಣಿ ಮಾಲೀಕ ದಿನೇಶ್ ಸಂಘಿ ಇತರರಿಗೆ ಕ್ರಿಮಿನಲ್ ಕೇಸ್‌ನ ಭೀತಿ ಎದುರಾಗಿದೆ!
ಅಷ್ಟೇ ಅಲ್ಲದೆ, ಅದಿರು ಪ್ರಕರಣ ಆಂಧ್ರಪ್ರದೇಶ, ಕರ್ನಾಟಕ ಬಿಟ್ಟು ತಮಿಳುನಾಡು, ಹರಿರ್ಯಾಣ ಮಹಾರಾಷ್ಟ್ರ, ಗೋವಾ, ಪಶ್ಚಿಮ ಬಂಗಾಳಕ್ಕೂ ವಿಸ್ತರಿಸಲಿದೆ. 50 ಸಾವಿರ ಟನ್‌ಗಿಂತ ಹೆಚ್ಚಿನ ಅದಿರನ್ನು ಅಧಿಕೃತ ಪರವಾನಗಿ ಇಲ್ಲದೆ ರಫ್ತು ಮಾಡಿರುವ ಕಂಪನಿಗಳ ಮೇಲೆ ಸುಪ್ರೀಂ ಕೋರ್ಟ್ ಕ್ರಿಮಿನಲ್ ಪ್ರಕರಣ ಹೂಡುವಂತೆ ಸಿಬಿಐಗೆ ಅದೇಶ ನೀಡಿದೆ. ಹೀಗೆ ನಿಗದಿ ಪ್ರಮಾಣ ಮೀರಿ ರಫ್ತು ಮಾಡಿದ 20 ಎಕ್ಸ್‌ಪೋರ್ಟ್ ಕಂಪನಿಗಳಲ್ಲಿ ವಿಎಸ್‌ಎಲ್ ಮೈನಿಂಗ್ ಪ್ರೈ.ಲಿ. ಇದೆ. ಇದು ಬಳ್ಳಾರಿ ಶಾಸಕ, ಕಾಂಗ್ರೆಸ್ ಮುಖಂಡ ಅನಿಲ್‌ಲಾಡ್ ಅವರಿಗೆ ಸೇರಿದ್ದು. ಇದರಿಂದಾಗಿ ಕಂಪನಿ ಮೇಲೆಯೂ ಕ್ರಿಮಿನಲ್ ಪ್ರಕರಣ ಹೂಡುವುದರಿಂದ ಅನಿಲ್ ಲಾಡ್‌ಗೆ ಕಂಟಕ ಎದುರಾಗುವ ಸಾಧ್ಯತೆ ಇದೆ.

ಎರವಾದ ಸುಪ್ರೀಂ ಆದೇಶ: ಸಿಇಸಿ ವರದಿ ಆಧಾರವಾಗಿಟ್ಟುಕೊಂಡು ಸುಪ್ರೀಂ ಕೋರ್ಟ್ 2012 ಸೆ.7 ರಂದು ಬೇಲೆಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಗೂ ಅಧಿಕೃತ ಪರವಾನಗಿ ಇಲ್ಲದೆ ಅದಿರು ರಫ್ತು ಮಾಡಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಆದೇಶ ನೀಡಿತ್ತು. ಆದೇಶದಂತೆ ಸಿಬಿಐ ಈಗಾಗಲೇ ಬೇಲೆಕೇರಿ ಪ್ರಕರಣಕ್ಕೆ ಸಂಬಂಧಿಸಿದಂತೆ 5 ಎಫ್‌ಐಆರ್ ದಾಖಲು ಮಾಡಿತ್ತು. ಅಧಿಕೃತವಾದ ಪರವಾನಗಿ ಇಲ್ಲದೆ ರಫ್ತು ಮಾಡಿದವರ ಮೇಲೆ ಕ್ರಮಕ್ಕೆ ಸಿಬಿಐ ಸುಪ್ರೀಂಗೆ ಮಧ್ಯಂತರ ಅರ್ಜಿ ಸಲ್ಲಿಸಿತ್ತು. ಅರ್ಜಿ ಹಿನ್ನೆಲೆಯಲ್ಲಿ 2009 ಜ.1ರಿಂದ 2010 ಮೇ 31ರವರೆಗೆ 50 ಸಾವಿರ ಟನ್‌ಗಳಿಗಿಂತಲೂ ಹೆಚ್ಚು ರಫ್ತು ಮಾಡಿರುವ 20 ಕಂಪನಿಗಳ ಮೇಲೆ ಕ್ರಿಮಿನಲ್ ಪ್ರಕರಣ ಹೂಡುವಂತೆ ಸುಪ್ರೀಂ ಆದೇಶ ಮಾಡಿತ್ತು.

ಶುಕ್ರವಾರ ಆದೇಶ ಪ್ರತಿ
ಸುಪ್ರೀಂ ಕೋರ್ಟ್ ಸೆ.16ರಂದು ಆದೇಶ ಹೊರಡಿಸಿದ್ದು, ಆದೇಶ ಪ್ರತಿ ಅ.4ರಂದು ಬೆಂಗಳೂರಿನ ಸಿಬಿಐ ಕಚೇರಿ ಹಾಗೂ ರಾಜ್ಯ ಸರ್ಕಾರಕ್ಕೆ ತಲುಪಿದೆ. ಅಧಿಕೃತ ಪರವಾನಗಿ ಇಲ್ಲದೆ 50 ಸಾವಿರ ಟನ್‌ಗಿಂತ ಕಡಿಮೆ ಅದಿರು ರಫ್ತು ಮಾಡಿರುವ ಕಂಪನಿಗಳ ಕುರಿತಾಗಿಯೂ ಸಿಬಿಐ ತನಿಖೆ ನಡೆಸಿ, ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಬೇಕೆಂದು ಕೋರ್ಟ್‌ನ ಆದೇಶದ ಪ್ರತಿಯಲ್ಲಿ ತಿಳಿಸಲಾಗಿದೆ.

ಕಂಬಿಗಾಗಿ ಸಾಲು...
ಕೇವಲ ಬೇಲೆಕೇರಿ ಅದಿರು ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಅಧಿಕಾರಿಗಳು 5 ಎಫ್‌ಐಆರ್ ಮಾತ್ರ ದಾಖಲಿಸಿದ್ದು, ಅದರಲ್ಲಿ ಸುಮಾರು 3 ಶಾಸಕರು ಸೇರಿ 24 ಜನರು ಜೈಲು ಸೇರಿದ್ದಾರೆ. ಇದೀಗ 20 ಎಕ್ಸ್‌ಪೋರ್ಟ್ ಕಂಪನಿಗಳ ಮೇಲೆ ಕ್ರಿಮಿನಲ್ ಪ್ರಕರಣ ಹೂಡಲು ಸುಪ್ರೀಂ ಕೋರ್ಟ್ ಆದೇಶ ನೀಡಿರುವುದರಿಂದ ಮತ್ತಷ್ಟು ಜನರು ಜೈಲು ಪಾಲಾಗಲಿದ್ದಾರೆ. ಅಧಿಕೃತವಾದ ಪರವಾನಗಿ ಇಲ್ಲದೆ ಅದಿರು ರಫ್ತು ಮಾಡಿರುವ ಕಂಪನಿಗಳು ರಾಜ್ಯದಲ್ಲಿ ಮಾತ್ರವಲ್ಲದೆ ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಹರಿಯಾಣ, ತಮಿಳುನಾಡು ರಾಜ್ಯದಲ್ಲಿರುವುದರಿಂದ ಅವರೂ ತನಿಖೆ ವ್ಯಾಪ್ತಿಗೆ ಒಳಪಟ್ಟು ಕಂಬಿ ಎಣಿಸಬಹುದು.

- ಶಶಿಧರ ಮೇಟಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement