ಬಿಟ್ಟೆನೆಂದರೂ ಬಿಡದೀ ಗಣಿ ಮಾಯೆ
ಕ.ಪ್ರ.ವಾರ್ತೆ, ಬಳ್ಳಾರಿ, ಅ. 4-
ಗಣಿ ಅಕ್ರಮ ಆರೋಪದಲ್ಲಿ ಸದ್ಯದ ಮಟ್ಟಿಗೆ ಜಾಮೀನು ಮರೀಚಿಕೆ. ಒಂದು ವೇಳೆ ಜಾಮೀನು ಸಿಕ್ಕರೂ, ಮತ್ತೊಂದು ಪ್ರಕರಣದಲ್ಲಿ ಗಣಿ ಧೂಳು ಎನ್ನುವುದು ಆರೋಪಿತ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕೈಗೆ ಕೋಳ ತೊಡಿಸುವುದಂತೂ ಗ್ಯಾರಂಟಿ.
ಗಣಿ ಅಕ್ರಮದ ಆರೋಪದಲ್ಲಿ ಜಾಮೀನು ಪಡೆದರೂ ಗಣಿ ಭೂತ ಮಾತ್ರ ಅವರನ್ನು ಕಾಡದೆ ಬಿಡಲಾರದು ಎನ್ನುವುದಕ್ಕೆ ಜಾಮೀನಿಂದ ಹೊರಬಂದು ಮತ್ತೆ ಸಿಬಿಐ ಬಂಧಿಸಿರುವ ಇನ್ಸ್ಪೆಕ್ಟರ್ ರಮಾಕಾಂತ್ ಅವರೇ ತಾಜಾ ಉದಾಹರಣೆ. ಒಂದು ಪ್ರಕರಣದಲ್ಲಿ ಆರೋಪದಿಂದ ಹೊರಬರಲು ಹರಸಾಹಸ ಪಡಬೇಕಾದರೆ, ಇನ್ನು ಗಣಿ ಅಕ್ರಮದಲ್ಲಿ ಹತ್ತಾರು ಆರೋಪ ಎದುರಿಸುತ್ತಿರುವವರು ಜಾಮೀನು ಪಡೆಯಲು ಸಾಧ್ಯವೇ? ಹಣದಿಂದಲೇ ಏನೆಲ್ಲ ಸಾಧ್ಯ ಎಂಬ ನಿರೀಕ್ಷೆಯನ್ನು ಅಕ್ಷರಶಃ ಗಣಿ ಅಕ್ರಮಗಳು ಹುಸಿ ಮಾಡಿವೆ. ಅಂದರೆ ಲಕ್ಷಾಂತರ ರುಪಾಯಿ ಖರ್ಚು ಮಾಡಿ ಪ್ರಸಿದ್ಧ ವಕೀಲರನ್ನು ಮುಂದಿಟ್ಟುಕೊಂಡು ಕೋರ್ಟ್ಗೆ ಹೋದರೂ ಗಣಿ ಅಕ್ರಮದಲ್ಲಿ ಜಾಮೀನು ಸಿಗುವುದು ಕಷ್ಟ. ಸಿಕ್ಕರೂ ಅವರನ್ನು ಗಣಿ ಅಕ್ರಮದ ಕುರಿತು ಸಿಬಿಐ ಮತ್ತೊಂದು ಪ್ರಕರಣದಲ್ಲಿ ಬಂಧಿಸುತ್ತದೆ ಎಂಬ ಆತಂಕವಿದೆ. ಶಮೀಮ್ ಬಾನು, ವಿಶ್ವನಾಥ್ಗೆ ಜಾಮೀನು ಸಿಕ್ಕಿದ್ದು ಬಿಟ್ಟರೆ, ಬಹುತೇಕರಿಗೆ ಜಾಮೀನು ಮರೀಚಿಕೆ ಎನ್ನುವಂತಾಗಿದೆ.
ಗಣಿ ಧೂಳಿನಿಂದ ತಪ್ಪಿಸಲು ಕಷ್ಟ
ಡೆಕ್ಕನ್ ಮೈನಿಂಗ್ ಸಿಂಡಿಕೇಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಡೂರಿನಲ್ಲಿ ಇನ್ಸ್ಪೆಕ್ಟರಾಗಿ ಕಾರ್ಯನಿರ್ವಹಿಸಿದ ರಮಾಕಾಂತ್ ಅವರನ್ನು ಸಿಬಿಐ ಪೊಲೀಸರು ಬಂಧಿಸಿದ್ದರು. ಆದರೆ, ಆ ಪ್ರಕರಣದಲ್ಲಿ ಜಾಮೀನು ಪಡೆಯಲು ಯಶಸ್ವಿಯಾಗಿ ಇನ್ನೇನು ತಾತ್ಕಾಲಿಕವಾಗಿ ತಪ್ಪಿಸಿಕೊಂಡೆ ಎಂದು ನಿಟ್ಟುಸಿರು ಬಿಡುವಾಗಲೇ, ಗುರುವಾರ ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದಲ್ಲಿ ಅವರಿಗೆ ಬೇಡಿ ಹಾಕಿದೆ. ಇದು ಅಕ್ರಮ ಗಣಿಗಾರಿಕೆ ಆರೋಪದಲ್ಲಿ ಬಂಧಿತರಾಗಿರುವ ಆರೋಪಿಗಳಿಗೆ ಆತಂಕ ಸೃಷ್ಟಿಸಿದೆ. ಒಂದು ಪ್ರಕರಣದಲ್ಲಿ ನಮಗೆ ಜಾಮೀನು ಸಿಕ್ಕರೂ, ಸಿಬಿಐ ತನಿಖೆಯಿಂದ ಹಾಗೂ ಬಲೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ ಎಂಬ ಭೀತಿ ಹುಟ್ಟಿಕೊಂಡಿದೆ.
ರೆಡ್ಡಿಗೆ ಜಾಮೀನು ಸಾಧ್ಯವೇ?
ಆಂಧ್ರಪ್ರದೇಶದಲ್ಲಿ ಜಗನ್ಮೋಹನ ರೆಡ್ಡಿಗೆ 16 ತಿಂಗಳ ಬಳಿಕ ಜಾಮೀನು ಸಿಕ್ಕಿರುವ ಬೆನ್ನಲ್ಲೆ ಮುಂದಿನ ಕೆಲ ತಿಂಗಳುಗಳಲ್ಲಿ ಜನಾರ್ದನ ರೆಡ್ಡಿಗೆ ಜಾಮೀನು ಸಿಗುತ್ತದೆ ಎಂಬ ಆಶಾಭಾವ ರೆಡ್ಡಿ ಬಳಗದಲ್ಲಿದೆ. ರೆಡ್ಡಿ ಮೇಲೆ ಇರುವ ಆರೋಪಗಳು ಒಂದೆರಡಲ್ಲ. ಓಎಂಸಿ ಪ್ರಕರಣದಲ್ಲಿ ಬಂಧಿತರಾಗಿರುವ ಜನಾರ್ದನ ರೆಡ್ಡಿಗೆ ಎಎಂಸಿ, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣದ 5 ಎಫ್ಐಆರ್ನ ಎಸ್ಬಿ ಲಾಜಿಸ್ಟಿಕ್ ಎಫ್ಐಆರ್ ತನಿಖೆಯಾಗಿ ಚಾರ್ಜ್ಶೀಟ್ನಲ್ಲಿ ರೆಡ್ಡಿ ಆರೋಪಿಯಾಗಿದ್ದಾರೆ. ಇನ್ನುಳಿದ 4 ಎಫ್ಐಆರ್ಗಳಲ್ಲಿ ಅವರ ಹೆಸರು ಇಲ್ಲದಿರುವುದನ್ನು ತಳ್ಳಿಹಾಕುವಂತಿಲ್ಲ. ಒಂದು ಪ್ರಕರಣದಲ್ಲಿ ಹತ್ತಾರು ಆರೋಪಗಳು ಜನಾರ್ದನ ರೆಡ್ಡಿ ಮೇಲಿರುವುದರಿಂದ ಶೀಘ್ರದಲ್ಲೇ ರೆಡ್ಡಿಗೆ ಜಾಮೀನು ಸಿಗಲು ಸಾಧ್ಯವೇ? ಎಂಬುದು ಈಗ ಚರ್ಚೆಯ ವಿಷಯವಾಗಿದೆ.
ಜಾಮೀನು ಸುಲಭವಿಲ್ಲ
ಗಣಿ ಅಕ್ರಮ ಪ್ರಕರಣದಲ್ಲಿ ಒಂದಕ್ಕೊಂದು ಪ್ರಕರಣಗಳು ತಳಕು ಹಾಕಿಕೊಂಡಿವೆ. ಲೋಕಾಯುಕ್ತ ತನಿಖೆ, ಸಿಇಸಿ ಜಂಟಿ ಸರ್ವೇ ನಂತರ, ಇದೀಗ ಕೆಲವು ಪ್ರಕರಣಕ್ಕೆ ಸಿಬಿಐ ತನಿಖೆಯಾಗುತ್ತಿರುವುದರಿಂದ ಇಷ್ಟೆಲ್ಲ ಬಂಧನಗಳು ನಡೆಯುತ್ತಿವೆ. ಇನ್ನು ಗಣಿ ಅಕ್ರಮವನ್ನು ಸಿಬಿಐ ತನಿಖೆಗೆ ನೀಡಿದರೆ, ಬಂಧನಗಳ ಪರ್ವವೇ ಆಗುತ್ತಿತ್ತು. ಆದರೆ, ಓಎಂಸಿ, ಎಎಂಸಿ, ಡೆಕ್ಕನ್ ಮೈನಿಂಗ್ ಸಿಂಡಿಕೇಟ್, ಬೇಲೆಕೇರಿ ಅದಿರು ನಾಪತ್ತೆ ಪ್ರಕರಣವನ್ನು ಮಾತ್ರ ಸಿಬಿಐ ಅಧಿಕಾರಿಗಳು ತನಿಖೆ ನಡೆಸಿದ್ದರಿಂದ ಇಷ್ಟೆಲ್ಲ ಅಕ್ರಮಗಳು ಹೊರಬಿದ್ದಿವೆ. ಓಎಂಸಿ ಮಾತ್ರ ಆಂಧ್ರಪ್ರದೇಶದಲ್ಲಿದ್ದು, ಉಳಿದೆಲ್ಲಾ ಪ್ರಕರಣಗಳು ಕರ್ನಾಟಕದಲ್ಲಿವೆ. ಕೆಲವು ಆರೋಪಿಗಳು ಬಹುತೇಕ ಪ್ರಕರಣದಲ್ಲಿ ಭಾಗಿಯಾಗಿರುವುದರಿಂದ ಇವರಿಗೆ ಜಾಮೀನು ಸಿಗುವುದು ಕಷ್ಟದ ಮಾತು. ಕೇವಲ ಒಂದು ಪ್ರಕರಣದಲ್ಲಿ ಬಂಧಿತರಾದರೂ, ಅವರು ಹತ್ತಾರು ಆರೋಪಗಳು ಎದುರಿಸುವಂತಾಗಿದೆ. ಇಂತಹ ಸಂದರ್ಭದಲ್ಲಿ ಬಿಡುಗಡೆ ಅಷ್ಟು ಸುಲಭವಲ್ಲ.
ಗಣಿ ಅಕ್ರಮದ ತನಿಖೆಯಲ್ಲಿ ಸೂಕ್ಷ್ಮತೆ
ಗಣಿ ಅಕ್ರಮ ಪ್ರಕರಣವನ್ನು ಇಡೀ ದೇಶದ ಜನರು ನೋಡುತ್ತಿರುವುದರಿಂದ ಹಾಗೂ ಆಂಧ್ರಪ್ರದೇಶದಲ್ಲಿನ ಬೇಲ್ಡೀಲ್ ವಿಷಯ ಗಣಿ ಅಕ್ರಮದ ಸೂಕ್ಷ್ಮತೆಯನ್ನು ಮತ್ತಷ್ಟು ಹೆಚ್ಚಿಸಲು ಕಾರಣವಾಯಿತು. ಈ ಸಂದರ್ಭದಲ್ಲಿ ಜಾಮೀನು ಎಂಬುದು ಅಕ್ರಮ ಗಣಿಗಾರಿಕೆ ಆರೋಪಿತರಿಗೆ ಸುಲಭವಾಗಿ ಎಟಕುವಂಥದ್ದಲ್ಲ. ಪ್ರಕರಣ ಅಗೆದಂತೆಲ್ಲಾ ತನ್ನ ವಿಸ್ತಾರ ರೂಪ ಪಡೆದುಕೊಳ್ಳುತ್ತಿರುವುದರಿಂದ ಅಕ್ರಮ ಗಣಿ ಪ್ರಕರಣದಲ್ಲಿ ಸುಲಭವಾಗಿ ತಪ್ಪಿಸಿಕೊಳ್ಳಲು ಕಷ್ಟ. ಮುಖ್ಯಮಂತ್ರಿ ಹಾಗೂ ಸಚಿವರ ಸ್ಥಾನಗಳನ್ನು ಆಹುತಿ ಪಡೆದ ಉದಾಹರಣೆಗಳು ಇವೆ. ಇದೀಗ ಹಾಲಿ ಶಾಸಕರನ್ನು ಜೈಲಿಗೆ ತಳ್ಳುವಷ್ಟರ ಮಟ್ಟಿಗೆ ಗಣಿ ಅಕ್ರಮ ಪ್ರಕರಣ ಬಂದು ನಿಂತಿದೆ.
- ಶಶಿಧರ ಮೇಟಿ