ವಿದ್ಯುತ್ ಕಳವು; ಕ್ಷಣದಲ್ಲೇ ಸಿಗುತ್ತೆ ಸುಳಿವು
- ರಾಜ್ಯದಲ್ಲಿ ಇನ್ನು ಮುಂದೆ ಶುರುವಾಗಲಿದೆ ಎನರ್ಜಿ ಆಡಿಟಿಂಗ್
ಬೆಂಗಳೂರು: ರಾಜ್ಯದಲ್ಲಿ ಇನ್ನುಮುಂದೆ ವಿದ್ಯುತ್ ಕಳವು, ದುರ್ಬಳಕೆಗೆ ಅವಕಾಶವೇ ಇಲ್ಲ. ಅಕ್ರಮ ಸಂಪರ್ಕಗಳನ್ನು ಮರೆ ಮಾಚುವುದಕ್ಕೆ ಅವಕಾಶವೇ ಇಲ್ಲ. ಏಕೆಂದರೆ, ಇನ್ನುಮುಂದೆ ರಾಜ್ಯದಲ್ಲಿ ಎನರ್ಜಿ ಆಡಿಟಿಂಗ್ ಶುರುವಾಗಲಿದೆ.
ಯಾವ ಮಾರ್ಗದಲ್ಲಿ ಎಷ್ಟು ವಿದ್ಯುತ್ ಕಳವಾಗುತ್ತಿದೆ. ಎಷ್ಟು ನಷ್ಟವಾಗುತ್ತಿದೆ ಎನ್ನುವುದನ್ನೇ ಕ್ಷಣಮಾತ್ರದಲ್ಲಿ ಪತ್ತೆ ಹಚ್ಚುವ ನೂತನ ವ್ಯವಸ್ಥೆ ರಾಜ್ಯಾದ್ಯಂತ ಸದ್ಯದಲ್ಲೇ ಜಾರಿಯಾಗಲಿದೆ.
ಅಂದಹಾಗೆ ಇದು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆ. ದೇಶಾದ್ಯಂತ ಉಂಟಾಗುತ್ತಿರುವ ವಿದ್ಯುತ್ ನಷ್ಟ ಮತ್ತು ದುರ್ಬಳಕೆ ತಡೆಯಲು ಕೇಂದ್ರ ಇಂಧನ ಇಲಾಖೆ 'ಆರ್‌ಎಪಿ- ಡಿಆರ್‌ಪಿ' (ರೀಸ್ಟ್ರಕ್ಚರ್ಡ್ ಆಕ್ಸಲರೇಟೆಡ್ ಪವರ್ ಡೆವಲಪ್‌ಮೆಂಟ್ ಆ್ಯಂಡ್ ರಿಫಾರ್ಮ್ಸ್ ಪ್ರೋಗ್ರ್ಯಾಮ್) ಎಂಬ ಯೋಜನೆ ಜಾರಿಗೊಳಿಸುತ್ತಿದ್ದು, ರಾಜ್ಯದ ಎಲ್ಲಾ ಎಸ್ಕಾಂಗಳ ವ್ಯಾಪ್ತಿಯ 100 ಪಟ್ಟಣಗಳನ್ನು ಆಯ್ಕೆ ಮಾಡಿ, ಸಿದ್ಧತೆ ಕಾರ್ಯ ಕೂಡ ಭರದಿಂದ ಸಾಗುತ್ತಿದೆ. ಮಂಗಳೂರು ಮತ್ತು ಬೆಂಗಳೂರಿನಲ್ಲಿ ಮಾತ್ರ ಸಿದ್ಧತೆ ಕೊಂಚ ನಿಧಾನವಾಗಿದೆ. ಈ ಯೋಜನೆಗೆ ಪ್ರತಿಷ್ಠಿತ ಇನ್ಫೋಸಿಸ್ ಸಂಸ್ಥೆ ಸೂಕ್ತ ತಂತ್ರಾಂಶ ಅಭಿವೃದ್ಧಿ ಪಡಿಸಿದ್ದು, ಬಹುತೇಕ ಕಡೆ ಅಳವಡಿಸುವ ಕಾರ್ಯಕೂಡ ಮುಗಿದಿದೆ. ಸದ್ಯದಲ್ಲೇ ಕೋಲಾರದ ಮುಳಬಾಗಿಲು ಪಟ್ಟಣದಲ್ಲಿ ಮುಂದಿನ ತಿಂಗಳು ಈ ಯೋಜನೆಗೆ ಸಂಬಂಧಿಸಿದ ಪ್ರಾಯೋಗಿಕ ಕಾರ್ಯಾಚರಣೆ ನಡೆಯಲಿದೆ. ಸರ್ಕಾರದ ಅನುಮತಿ ಸಿಕ್ಕರೆ ಮುಂದಿನ ಮಾರ್ಚ್ ವೇಳೆಗೆ ರಾಜ್ಯದ 100 ಪಟ್ಟಣಗಳಲ್ಲಿ ವಿದ್ಯುತ್ ನಷ್ಟ ತಡೆಯುವ ಹಾಗೂ ವಿದ್ಯುತ್ ಇಲಾಖೆ ಇತರ ಸೇವೆಗಳನ್ನು ಸುಲಲಿತ ಗೊಳಿಸುವ ಆರ್‌ಎಪಿ- ಡಿಆರ್‌ಪಿ ಎಂಬ ನೂತನ ಯೋಜನೆ ಜಾರಿಯಾಗಲಿದೆ.
ವಿದ್ಯುತ್ ಲೆಕ್ಕಪರಿಶೋಧನೆ ಹೇಗೆ?: ಮೊದಲು ವಿದ್ಯುತ್ ಸ್ಟೇಷನ್‌ಗಳಿಗೆ ಪೂರೈಕೆಯಾಗಲಿದೆ. ನಂತರ ಫೀಡರ್‌ಗೆ ಹರಿಯಲಿದೆ. ಅಲ್ಲಿಂದ ಟ್ರಾನ್ಸ್‌ಫಾರ್ಮರ್‌ಗಳಿಗೆ ಹೋಗಿ ಬಳಿಕ ಗ್ರಾಹಕರಿಗೆ ವಿದ್ಯುತ್ ಸಿಗಲಿದೆ. ವಿದ್ಯುತ್ ಪೂರೈಕೆ ಈ ನಾಲ್ಕು ಹಂತಗಳನ್ನೂ ದಾಟುವಾಗ ಶೇ.10ಕ್ಕಿಂತಲೂ ಹೆಚ್ಚಿನ ನಷ್ಟವಾಗುತ್ತಿದೆ. ಅನೇಕ ಜಿಲ್ಲೆಗಳಲ್ಲಿ ವಿದ್ಯುತ್ ಕಳ್ಳತನ, ದುರ್ಬಳಕೆಯಿಂದ ಇನ್ನೂ ಹೆಚ್ಚಿನ ವಿದ್ಯುತ್ ನಷ್ಟವಾಗುತ್ತಿದೆ. ಇದನ್ನು ಇನ್ನುಮುಂದೆ ಆರ್‌ಎಪಿ- ಡಿಆರ್‌ಪಿ ಎಂಬ ನೂತನ ವ್ಯವಸ್ಥೆಯಿಂದ ತಡೆಯಬಹುದಾಗಿದೆ.
ಇಂಧನ ಇಲಾಖೆ ಮೊದಲು ಸ್ಟೇಷನ್-ಫೀಡರ್-ಟ್ರಾನ್ಸ್‌ಫಾರ್ಮರ್-ಗ್ರಾಹಕರ ಸಂಪರ್ಕಕ್ಕೆ ಒಟ್ಟು ಎಷ್ಟು ವಿದ್ಯುತ್ ಹರಿದಿದೆ ಎಂದು ಲೆಕ್ಕಾಚಾರ ಮಾಡಲಿದೆ. ಅಂದರೆ ಒಟ್ಟಾರೆ ಪೂರೈಕೆಯಾದ ವಿದ್ಯುತ್ ಹಾಗೂ ಗ್ರಾಹಕರು ಬಳಸಿದ ವಿದ್ಯುತ್ ಹೋಲಿಕೆ ಮಾಡಿ ನಷ್ಟವನ್ನು ಅಳೆಯಲಿದೆ. ಈ ಹಂತದಲ್ಲಿ ಅಕ್ರಮ ಸಂಪರ್ಕ, ಸೋರಿಕೆ ಮತ್ತು ಕಳವು ಪತ್ತೆಯಾಗಲಿದೆ. ಅದೇ ಈಗಿರುವ ನಾನ್ ಆರ್‌ಎಪಿ- ಡಿಆರ್‌ಪಿ ವ್ಯವಸ್ಥೆಯಲ್ಲಿ ಗ್ರಾಹಕರನ್ನು ವಾಣಿಜ್ಯ ಮತ್ತು ಮನೆ ಬಳಕೆ ಎನ್ನುವುದನ್ನಷ್ಟೇ ಗುರುತಿಸಬಹುದು. ವಿದ್ಯುತ್ ದುರ್ಬಳಕೆ ಮತ್ತು ಕಳ್ಳತನ ಪತ್ತೆ ಈಗಿನ ವ್ಯವಸ್ಥೆಯಲ್ಲಿ ಅಸಾಧ್ಯ ಎನ್ನುತ್ತಾರೆ ಇಂಧನ ಇಲಾಖೆ ಅಧಿಕಾರಿಗಳು.
ಇನ್ನುಮುಂದೆ ಆರ್‌ಆರ್ ನಂಬರ್ ಇಲ್ಲ
ಎಸ್ಕಾಂಗಳು ಆರ್‌ಆರ್ ನಂಬರ್ ಇನ್ನುಮುಂದೆ ಇರುವುದಿಲ್ಲ. ಬದಲಾಗಿ 10ಅಂಕಗಳ ಅಕೌಂಟ್ ಗುರುತಿನ ಸಂಖ್ಯೆ ಇರುತ್ತದೆ. ಇದು ಯೂನಿಕ್ ಐಡಿ ಅಂದರೆ, ಒಂದೇ ರೀತಿಯ ಐಡಿ ಸಂಖ್ಯೆ ಮತ್ತೊಂದು ಇರುವುದಿಲ್ಲ. ಸಾಮಾನ್ಯ ಒಂದೇ ಆರ್‌ಆರ್ ನಂಬರ್ ಅನೇಕ ಕಡೆ ಇರಬಹುದು. ಇದನ್ನು ನಕಲು ಮಾಡುವುದಕ್ಕೂ ಅವಕಾಶವಿದೆ. ಆದರೆ, ಈ ಐಡಿಯನ್ನು ನಕಲು ಮಾಡಲು ಸಾಧ್ಯವಿಲ್ಲ. ಇದರ ವಿಶೇಷವೆಂದರೆ, ಗ್ರಾಹಕರ ಅಕೌಂಟ್ ಐಡಿಯನ್ನು ವೆಬ್‌ಸೈಟ್‌ನಲ್ಲಿ ಹಾಕಿ ಪರಿಶೀಲಿಸಿದರೆ ಅವರು ಬಳಕೆ ಮತ್ತು ದುರ್ಬಳಕೆ ಇತಿಹಾಸವನ್ನೇ ನೀಡುತ್ತದೆ. ಹೀಗಾಗಿ ಗ್ರಾಹಕರ ಮಾಹಿತಿಗಳನ್ನು ಪಡಿತರ ಚೀಟಿ, ಅಡುಗೆ ಅನಿಲ ಸೇರಿದಂತೆ ಸರ್ಕಾರದ ಇತರ ಯೋಜನೆಗಳಿಗೂ ಬಳಸಲು ಅನುಕೂಲವಾಗಲಿದೆ. ಇದರಿಂದ ಗ್ರಾಹಕರು ಬಿಲ್ ಪಾವತಿಸುವಲ್ಲಿ ಆಗಿರುವ ವಿಳಂಬ ಹಾಗೂ ಮಾಡಿರುವ ಪ್ರಮಾದಗಳು ಮತ್ತು ಪಾವತಿಸಿರುವ ದಂಡ ಮತ್ತು ವಿಳಂಬ ಪಾವತಿಗೆ ವಿಧಿಸಿರುವ ಬಡ್ಡಿ ವಿವರ ಕೂಡ ಲಭ್ಯವಾಗುತ್ತದೆ. ಜತೆಗೆ ವಿದ್ಯುತ್ ಬಿಲ್ ಪಾವತಿದ್ದಂತೆ ಅದು ತಕ್ಷಣ ಬೆಸ್ಕಾಂ ಖಾತೆಗೆ ಜಮಾ ಆಗುವುದಕ್ಕೂ ಇದು ನೆರವಾಗಲಿದೆ. ಆದರೆ, ಈಗಿನ ವ್ಯವಸ್ಥೆಯಲ್ಲಿ ಬಿಲ್ ಪಾವತಿ ಹಣ ಜಮಾ ಆಗಲು 2 ದಿನ ಬೇಕಾಗುತ್ತದೆ ಎಂದು ಎಸ್ಕಾಂಗಳ ಮಾಹಿತಿ ತಂತ್ರಜ್ಞಾನ ವಿಭಾಗದ ಅಧಿಕಾರಿಗಳು ಹೇಳಿದ್ದಾರೆ.
ಆರ್‌ಎಪಿ- ಡಿಆರ್‌ಪಿ ಎಂಬ ನೂತನ ವ್ಯವಸ್ಥೆಗೆ ಬಹುತೇಕ ಸಿದ್ಧತೆ ಮುಗಿದಿದೆ. ಎಲ್ಲ ಅಂದಕೊಂಡಂತೆ ಆದರೆ ಮುಂದಿನ ವರ್ಷ ಆರಂಭದಲ್ಲಿ ಇದು ಜಾರಿಗೆ ಬರಲಿದ್ದು, ಇದರಿಂದ ಭಾರೀ ಪ್ರಮಾಣದ ವಿದ್ಯುತ್ ನಷ್ಟ ತಡೆಯಬಹುದು.
-ಸತೀಶ್‌ಕುಮಾರ್, ಬೆಸ್ಕಾಂ ವಾಣಿಜ್ಯ ವಿಭಾಗದ ವ್ಯವಸ್ಥಾಪಕರು
- ಶಿವಕುಮಾರ್ ಬೆಳ್ಳಿತಟ್ಟೆ