ಹುಬ್ಬಳ್ಳಿ-ಧಾರವಾಡದ ಶೇ. 20 ಮಂದಿಗೆ ಸಕ್ಕರೆ ಕಾಯಿಲೆ
ಕನ್ನಡಪ್ರಭ ವಾರ್ತೆ, ಹುಬ್ಬಳ್ಳಿ, ಅ. 4-
ಹುಬ್ಬಳ್ಳಿ-ಧಾರವಾಡ ಅವಳಿ ನಗರದ ಒಟ್ಟಾರೆ ಜನಸಂಖ್ಯೆಯಲ್ಲಿ ಶೇ.20ರಷ್ಟು ಜನ ಮಧುಮೇಹ ಕಾಯಿಲೆ ಹೊಂದಿದ್ದರೆ, ಶೇ.6ರಷ್ಟು ಜನ ಇಷ್ಟರಲ್ಲಿಯೇ ಮಧುಮೇಹ ಕಾಯಿಲೆಗೆ ಒಳಗಾಗುವ ಅಪಾಯಕಾರಿ ಗಡಿಯಲ್ಲಿದ್ದಾರೆ. ಇದೇ ಸ್ಥಿತಿ ಮುಂದುವರಿದರೆ ಹು-ಧಾ ಮಧುಮೇಹಿಗಳ ರಾಜಧಾನಿಯಾಗುವುದರಲ್ಲಿ ಸಂದೇಹವೇ ಇಲ್ಲ.
ಇಂಥದೊಂದು ಆತಂಕಕಾರಿ ಸಂಗತಿಯನ್ನು ಬೆಳಕಿಗೆ ತಂದವರು ಡಾ. ಜಿ.ಬಿ. ಸತ್ತೂರ. ಮಧುಮೇಹ ಕಾಯಿಲೆ ಹೆಚ್ಚಾಗಿ ವಂಶಪಾರಂಪರ್ಯವಾಗಿ ಬರುತ್ತದೆ ಎಂದಾದರೂ ಹುಬ್ಬಳ್ಳಿ-ಧಾರವಾಡದ ಶೇ.18ರಷ್ಟು ಜನ ತಮ್ಮ ಜೀವನ ಶೈಲಿ, ಆಹಾರ ಪದ್ಧತಿಯಿಂದ ಮಧುಮೇಹ ಕಾಯಿಲೆಗೆ ಒಳಗಾಗಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ. ಸತ್ತೂರ, ಆಶಾ ಹಾರ್ಟ್ ಹಾಗೂ ಡಯಾಬಿಟಿಸ್ ಫೌಂಡೇಶನ್, ಸತ್ತೂರ ಮೆಡಿಕಲ್ ಕೇರ್ ಹಾಗೂ ಮಜೇಥಿಯಾ ಫೌಂಡೇಶನ್ ಕಳೆದ ವರ್ಷ ಆಗಸ್ಟ್ ತಿಂಗಳಿನಿಂದ ಈವರೆಗೆ 'ಹುಬ್ಬಳ್ಳಿ ಮಧುಮೇಹ ಅಧ್ಯಯನ' ಕೈಗೊಂಡಿತ್ತು. ಸುಮಾರು ಒಂದು ವರ್ಷದ ಅವಧಿಯ ಅಧ್ಯಯನದಲ್ಲಿ 1,03,780 ಜನರ ಮಧುಮೇಹ ತಪಾಸಣೆ ಮಾಡಲಾಯಿತು.
ಈ ಅಧ್ಯಯನದಿಂದ ಹು-ಧಾ ಪ್ರತಿ 5ರಲ್ಲಿ ಒಬ್ಬರಿಗೆ ಮಧುಮೇಹ ಕಾಯಿಲೆ ಇರುವುದು ಸಾಬೀತಾಗಿದೆ. ಈ ಪೈಕಿ 30ರಿಂದ 50 ವರ್ಷ ವಯಸ್ಸಿನವರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಗ್ರಾಮೀಣ ಭಾಗದ ಜನರಲ್ಲಿಯೂ ಮಧುಮೇಹ ಹೆಚ್ಚಾಗಿ ಕಾಣಿಸಿಕೊಂಡಿರುವುದೂ ಆತಂಕಕಾರಿ ಎಂದು ಡಾ. ಸತ್ತೂರ ಹೇಳಿದರು.
ನುರಿತ ನಾಲ್ವರು ನರ್ಸ್ಗಳು ಹು-ಧಾ ಬಸ್ ನಿಲ್ದಾಣ, ರೇಲ್ವೆ ನಿಲ್ದಾಣ ಸೇರಿದಂತೆ ಜನನಿಬೀಡ ಪ್ರದೇಶದಲ್ಲಿ ಉಚಿತ ಮಧುಮೇಹ ತಪಾಸಣೆ ನಡೆಸಿದ್ದರು. ಇದೇ ವೇಳೆ ಮಧುಮೇಹ ಕಾಯಿಲೆಗೆ ಒಳಗಾಗಿದ್ದರೆ ತೆಗೆದುಕೊಳ್ಳಬೇಕಾದ ಕ್ರಮ ಹಾಗೂ ಕಾಯಿಲೆ ಬಾರದಿರಲು ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಮಾಹಿತಿ ಪತ್ರವನ್ನೂ ವಿತರಣೆ ಮಾಡಲಾಗಿದೆ. ಈ ಕಾರ್ಯಕ್ಕೆ ಸುಮಾರು ರು. 12 ಲಕ್ಷ ಖರ್ಚಾಗಿದೆ. ಕರ್ನಾಟಕದಲ್ಲಿ 1 ಲಕ್ಷ ಜನರ ಮಧುಮೇಹ ತಪಾಸಣೆ ಮಾಡಿದ್ದು ಇದೇ ಮೊಟ್ಟಮೊದಲು ಎಂದ ಡಾ. ಸತ್ತೂರ, ನಿತ್ಯ ವ್ಯಾಯಾಮ, ಹಿತಿಮಿತವಾದ ಆಹಾರ, ಉತ್ತಮ ಜೀವನ ಶೈಲಿಯಿಂದ ಮಧುಮೇಹದಿಂದ ಮುಕ್ತರಾಗಲು ಸಾಧ್ಯ ಎಂದರು.
ಒಂದು ಲಕ್ಷ ಜನರ ಮಧುಮೇಹ ತಪಾಸಣೆ ಮಾಡಿದ ಸಂಪೂರ್ಣ ವಿವರ ದಾಖಲಿಸಲಾಗಿದೆ. ಈ ಪೈಕಿ ಮಧುಮೇಹ ಕಾಯಿಲೆಗೆ ಒಳಗಾದವರಿಗೆ ಸೂಕ್ತ ಚಿಕಿತ್ಸೆ ಪಡೆಯುವಂತೆ ತಿಳಿಸಲಾಗಿದೆ. ಆಶಾ ಫೌಂಡೇಶನ್ನಲ್ಲಿಯೇ ಚಿಕಿತ್ಸೆ ಬಯಸುವವರಿಗೆ ಅತ್ಯಂತ ಕಡಿಮೆ ದರದಲ್ಲಿ ಚಿಕಿತ್ಸೆ ಮಾಡಲಾಗುವುದು ಎಂದು ತಿಳಿಸಿದ ಡಾ. ಸತ್ತೂರ, ಮಧುಮೇಹ ಅಧ್ಯಯನದ ಸಂಪೂರ್ಣ ವಿವರವುಳ್ಳ ಮಾಹಿತಿ ಸಿದ್ಧ ಪಡಿಸಿ ಆರೋಗ್ಯ ಸಚಿವ ಯು.ಟಿ. ಖಾದರ್ ಅವರಿಗೆ ನೀಡಲಾಗುವುದು. ಇದೇ ವೇಳೆ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸುವ ರೋಗಿಗಳ ಮಧುಮೇಹ ತಪಾಸಣೆ ಮಾಡಬೇಕೆಂಬದು ಮನವಿ ಮಾಡಲಾಗುವುದು ಎಂದರು.
ಬಿಪಿ ತಪಾಸಣೆ: ಇದೇ ವೇಳೆ ಮಾತನಾಡಿದ ಜಿ.ಸಿ. ಮಠದ, 2014ನೇ ಸಾಲಿನಲ್ಲಿ ಸಂಪೂರ್ಣ ಉತ್ತರ ಕರ್ನಾಟಕದ 1 ಲಕ್ಷ ಮಂದಿಯ ಉಚಿತ ಮಧುಮೇಹ ತಪಾಸಣೆ ಮಾಡಲಾಗುವುದು. ಇದರ ಹೊರತಾಗಿ 1 ಲಕ್ಷ ಜನರ ರಕ್ತದೊತ್ತಡ ತಪಾಸಣೆ ಮಾಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು. ಜಿತೇಂದ್ರ ಮಜೇಥಿಯಾ, ದ್ರೋಣಾವಥ್, ಕಿಶೋರ ದೇಸಾಯಿ ಇದ್ದರು.
ಸಮಾರೋಪ ಸಮಾರಂಭ: 1 ಲಕ್ಷ ಜನರ ಉಚಿತ ಮಧುಮೇಹ ತಪಾಸಣೆ ಅಭಿಯಾನದ ಸಮಾರೋಪ ಸಮಾರಂಭ ಬೈಲಪ್ಪನವರ ನಗದರ ಐಎಂಎ ಸಭಾಭವನದಲ್ಲಿ ಅ. 6ರಂದು ಬೆಳಗ್ಗೆ 10.30ಕ್ಕೆ ನಡೆಯಲಿದೆ. ಸಚಿವ ಸಂತೋಷ ಲಾಡ್, ಶಾಸಕ ಪ್ರಸಾದ ಅಬ್ಬಯ್ಯ, ವಿಜಯ ಸಂಕೇಶ್ವರ ಮತ್ತಿತರರು ಪಾಲ್ಗೊಳ್ಳುವರು.