ಅವರೂ ತಿನ್ನಲಿ ಬಿಡಿ!
ಸರ್ಕಾರ ಅಥವಾ ವಕ್ಫ್ ಮಂಡಳಿಯಿಂದ ಅಲ್ಪಸಂಖ್ಯಾತರಿಗೆ 5-10 ಎಕರೆ ಭೂಮಿ, 25 ಲಕ್ಷದಿಂದ 50 ಲಕ್ಷದವರೆಗೆ ಸಾಲ ನೀಡಿ. ಯಾರ್ಯಾರೋ ಸರ್ಕಾರಕ್ಕೆ...
ಕನ್ನಡಪ್ರಭ ವಾರ್ತೆ ಬೆಂಗಳೂರು ಅ.5
ಸರ್ಕಾರ ಅಥವಾ ವಕ್ಫ್ ಮಂಡಳಿಯಿಂದ ಅಲ್ಪಸಂಖ್ಯಾತರಿಗೆ 5-10 ಎಕರೆ ಭೂಮಿ, 25 ಲಕ್ಷದಿಂದ 50 ಲಕ್ಷದವರೆಗೆ ಸಾಲ ನೀಡಿ. ಯಾರ್ಯಾರೋ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ಟೋಪಿ ಹಾಕಿದ್ದಾರಂತೆ, ಅಲ್ಪಸಂಖ್ಯಾತರು ಈ ಸಾಲ ಕಟ್ಟದೆ ಸರ್ಕಾರಕ್ಕೆ ಟೋಪಿ ಹಾಕಿದರೆ ಹಾಕಲಿ ಬಿಡಿ..!
ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ್ ಹೇಳಿರುವ ಮಾತುಗಳಿವು. ಅಷ್ಟೇ ಅಲ್ಲ, ಹಿಂದಿನ ಸರ್ಕಾರದ ಅವಧಿಯಲ್ಲಿ ಅಮಾಯಕ ಮುಸ್ಲಿಮರ ವಿರುದ್ಧ ವಿನಾ ಕಾರಣ ಪ್ರಕರಣಗಳನ್ನು ದಾಖಲಿಸಿದ್ದು, ಇದರ ಇತ್ಯರ್ಥಕ್ಕೆ ತ್ವರಿತ ನ್ಯಾಯಾಲಯ ಸ್ಥಾಪಿಸುವಂತೆ ಅವರು ಸರ್ಕಾರಕ್ಕೆ ಸಲಹೆ ಮಾಡಿದ್ದಾರೆ.
ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಸಿಗುತ್ತಿರುವ ಸೌಲಭ್ಯಗಳು ಮತ್ತು ಅವುಗಳನ್ನು ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆ ಕುರಿತಂತೆ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಪರಮೇಶ್ವರ್ ಹೇಳಿದ್ದು: ಹಿಂದಿನ ಸರ್ಕಾರ ಕೈಗಾರಿಕೆಗಳ ಹೆಸರಿನಲ್ಲಿ ರೈತರಿಂದ ಸಾಕಷ್ಟು ಜಮೀನು ತೆಗೆದುಕೊಂಡಿದೆ. ಈ ಜಮೀನನ್ನು ಉಳ್ಳವರಿಗೆ ಮಾತ್ರ ಕೊಟ್ಟಿದೆಯೇ ಹೊರತು ಹಿಂದುಳಿದವರು, ಅಲ್ಪಸಂಖ್ಯಾತರಿಗೆ ಕೊಟ್ಟಿಲ್ಲ. ರೈತರ ಭೂಮಿಯನ್ನು ಉಳ್ಳವರಿಗೆ ಕೊಡುವ ನೆಪದಲ್ಲಿ ಆಡಳಿತ ನಡೆಸಿದವರು ಕೋಟ್ಯಂತರ ರುಪಾಯಿ ಟೋಪಿ ಹಾಕಿದ್ದಾರೆ. ಹೀಗಾಗಿ ವಕ್ಫ್ ಮಂಡಳಿ ಅಥವಾ ಸರ್ಕಾರದ ಮೂಲಕ ಅಲ್ಪಸಂಖ್ಯಾತರಿಗೆ ಕೈಗಾರಿಕೆ ಸ್ಥಾಪಿಸಲು 5-10 ಎಕರೆ ಭೂಮಿ ಕೊಡಿ. 25 ಲಕ್ಷದಿಂದ 50 ಲಕ್ಷದವರೆಗೆ ಸಾಲ ಕೊಡಿ. ಅವರು ಸಾಲ ಕಟ್ಟದೇ ಇದ್ದರೂ ಪರವಾಗಿಲ್ಲ. ಯಾರ್ಯಾರೋ ಸರ್ಕಾರಕ್ಕೆ ಕೋಟ್ಯಂತರ ರುಪಾಯಿ ಟೋಪಿ ಹಾಕಿದ್ದಾರಂತೆ. ಇವರೂ ಹಾಕಲಿ, ಬಿಡಿ. ಅಷ್ಟೇ ಅಲ್ಲ, ನನ್ನ ಈ ಹೇಳಿಕೆ ಬಗ್ಗೆ ಯಾರು ಏನು ಬೇಕಿದ್ದರೂ ಹೇಳಲಿ. ನಾನಂತೂ ತಲೆಕೆಡಿಸಿಕೊಳ್ಳುವುದಿಲ್ಲ. ಅಲ್ಪಸಂಖ್ಯಾತರಿಗೆ ಒಳ್ಳೆಯದು ಮಾಡಬೇಕು ಎಂಬುದಷ್ಟೇ ನನ್ನ ಉದ್ದೇಶ.
ತ್ವರಿತ ನ್ಯಾಯಾಲಯ
ಅಲ್ಪಸಂಖ್ಯಾತರಲ್ಲಿ ಮುಂಚೂಣಿಯಲ್ಲಿದ್ದ ಕೆಲವರ ಏಳಿಗೆಯನ್ನು ಸಹಿಸಲಾಗದೆ ಹಿಂದಿನ ಬಿಜೆಪಿ ಸರ್ಕಾರ ಭಯೋತ್ಪಾದನೆ ಹೆಸರಿನಲ್ಲಿ ಅಮಾಯಕ ಮುಸ್ಲಿಮರ ವಿರುದ್ಧ ಪ್ರಕರಣಗಳನ್ನು ದಾಖಲಿಸಿದೆ. ಈ ಹಿಂದೆ ಚುನಾವಣೆ ಸಂದರ್ಭದಲ್ಲಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಅಮಾಯಕ ಮುಸ್ಲಿಂ ಯುವಕರ ವಿರುದ್ಧ ದಾಖಲಿಸಿರುವ ಪ್ರಕರಣಗಳನ್ನು ಇತ್ಯರ್ಥಪಡಿಸಲು ತ್ವರಿತ ನ್ಯಾಯಾಲಯ ಸ್ಥಾಪಿಸಲಾಗುವುದು. ನಿವೃತ್ತ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಲಾಗುವುದು ಎಂದು ಭರವಸೆ ನೀಡಲಾಗಿತ್ತು. ಅದರಂತೆ ಅಮಾಯಕ ಮುಸ್ಲಿಮರ ವಿರುದ್ಧ ದಾಖಲಿಸಿರುವ ಪ್ರಕರಣಗಳ ವಿಚಾರಣೆಗೆ ತ್ವರಿತ ನ್ಯಾಯಾಲಯಗಳನ್ನು ಸ್ಥಾಪಿಸಿ ಅವುಗಳನ್ನು ಇತ್ಯರ್ಥಗೊಳಿಸಬೇಕು. ಈ ಕುರಿತು ನಾನೇ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುತ್ತೇನೆ.
ಮೌಲ್ಯಮಾಪನ ಖಚಿತ
ಬೆಂಗಳೂರು: ಯಾರು ಎಷ್ಟೇ ವಿರೋಧ ವ್ಯಕ್ತಪಡಿಸಲಿ, ಸಚಿವರು, ಶಾಸಕರ ಮೌಲ್ಯಮಾಪನ ನಡೆಸಿಯೇ ತೀರುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಾ.ಜಿ. ಪರಮೇಶ್ವರ ಹೇಳಿದ್ದಾರೆ.
ಸರ್ಕಾರದಿಂದ ಅಲ್ಪಸಂಖ್ಯಾತರಿಗೆ ಸಿಗುತ್ತಿರುವ ಸೌಲಭ್ಯಗಳು ಮತ್ತು ಅವುಗಳನ್ನು ಫಲಾನುಭವಿಗಳಿಗೆ ತಲುಪಿಸುವ ವ್ಯವಸ್ಥೆ ಕುರಿತಂತೆ ಕೆಪಿಸಿಸಿ ಅಲ್ಪಸಂಖ್ಯಾತರ ಘಟಕ ಶನಿವಾರ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು.
ಸಚಿವರು, ಶಾಸಕರ ಕಾರ್ಯವೈಖರಿ ಕುರಿತು ಮೌಲ್ಯಮಾಪನ ಮಾಡುವಂತೆ ರಾಹುಲ್ ಗಾಂಧಿ ಸೂಚನೆ ನೀಡಿದ್ದಾರೆ. ಇದು ಕೆಲವರಿಗೆ ಇಷ್ಟವಿಲ್ಲದಿರಬಹುದು. ಆದರೆ, ಯಾರು ಏನೇ ಹೇಳಲಿ ಮೌಲ್ಯಮಾಪನ ಕಾರ್ಯವನ್ನಂತು ಮಾಡಿಯೇ ತೀರುತ್ತೇನೆ ಎಂದು ಹೇಳಿದರು.
ಮೌಲ್ಯಮಾಪನ ಸಂದರ್ಭದಲ್ಲಿ ಸಚಿವರು, ಶಾಸಕರಿಗೆ ಪ್ರಶ್ನೆಗಳನ್ನು ನೀಡಿ ಉತ್ತರ ಪಡೆಯಲಾಗುವುದು. ಇದಾದ ಬಳಿಕ ಸ್ಥಳೀಯವಾಗಿ ಅವರ ಕಾರ್ಯವೈಖರಿ ಬಗ್ಗೆ ಮಾಹಿತಿ ಸಂಗ್ರಹಿಸಲಾಗುವುದು. ಜತೆಗೆ ಸರ್ಕಾರದಿಂದಲೂ ಅವರ ಕುರಿತು ಮಾಹಿತಿ ಪಡೆಯಲಾಗುವುದು ಎಂದು ತಿಳಿಸಿದರು.