ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಪ್ರಧಾನ ಸುದ್ದಿ

ಕೈ ಬೆರಳು ಸಾಕು, ಮೈ ಮಸಿಯಾಗುವುದು ಬೇಡ!

'ಬೆರಳು ಮಸಿಯಾಗಿದ್ದೇ ಸಾಕು. ಇಡೀ ಕೈ ಮಸಿಯಾಗುವುದು ಬೇಡ..!'ನಟನೆ ಮೂಲಕ ತಮ್ಮ ಪ್ರತಿಭೆಯ 'ವಿಶ್ವರೂಪಂ' ತೋರಿದ ಬಹುಭಾಷಾ ನಟ ಕಮಲ್‌ಹಾಸನ್ ...

Mainashree
Updated On : 5 Oct 2013, 10:46 am

ಬೆಂಗಳೂರು: 'ಬೆರಳು ಮಸಿಯಾಗಿದ್ದೇ ಸಾಕು. ಇಡೀ ಕೈ ಮಸಿಯಾಗುವುದು ಬೇಡ..!'
ನಟನೆ ಮೂಲಕ ತಮ್ಮ ಪ್ರತಿಭೆಯ 'ವಿಶ್ವರೂಪಂ' ತೋರಿದ ಬಹುಭಾಷಾ ನಟ ಕಮಲ್‌ಹಾಸನ್ 'ಇಂಡಿಯನ್‌' ರಾಜಕಾರಣ ಪ್ರವೇಶದ ಬಗ್ಗೆ ನೀಡಿದ ಉತ್ತರವಿದು.
'ಮತ ಚಲಾಯಿಸುವ ಮೂಲಕ ಬೆರಳಿಗೆ ಮಸಿ ತಾಗಿಸಿಕೊಂಡ ಪ್ರತಿ ಮತದಾರನೂ ರಾಜಕಾರಣಿಯೇ. ಬೆರಳು ಮಸಿಯಾಗಿದ್ದೇ ಸಾಕು. ನಾನು ಇಡೀ ಕೈಗೆ ಮಸಿ ಅಂಟಿಸಿಕೊಳ್ಳಲು ಇಚ್ಛಿಸುವುದಿಲ್ಲ' ಎನ್ನುವ ಮೂಲಕ ತಾವು ರಾಜಕೀಯದ 'ನಾಯಗನ್‌' ಆಗಲಾರೆ ಎಂಬುದನ್ನು ಅವರು ಸೂಚ್ಯವಾಗಿ ತಿಳಿಸಿದ್ದಾರೆ.
ಬೆಂಗಳೂರು ಪ್ರೆಸ್‌ಕ್ಲಬ್ ಮತ್ತು ಬೆಂಗಳೂರು ವರದಿಗಾರರ ಕೂಟ ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ 'ರಾಜಕೀಯ ಪ್ರವೇಶಿಸುತ್ತೀರಾ?' ಎಂಬ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದರು.
ಈ ನಡುವೆ ತಮ್ಮ ವಿವಾದಿತ ಚಲನಚಿತ್ರ 'ವಿಶ್ವರೂಪಂ' ಬಗ್ಗೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಾಸ್ಯ ಪ್ರಜ್ಞಾಹೀನತೆ ಹಾಗೂ ಅಸಹಿಷ್ಣುತೆ 'ವಿಶ್ವರೂಪಂ'ನ ವಿವಾದಕ್ಕೆ ಪ್ರಮುಖ ಕಾರಣ. ಆ ವಿವಾದದಿಂದಾಗಿ ತಮ್ಮ ಗೌರವದ ಒಂದು ಭಾಗ ಧಕ್ಕೆಗೀಡಾಗಿದೆ. ಅದರಿಂದ ತಾವು ಭಯಗೊಂಡಿಲ್ಲ. ಆದರೆ, ತಮಗೆ ನೋವಾಗಿದೆ.
ಯಾವುದೇ ಧರ್ಮದ ಹೆಸರಿನಲ್ಲಿ ತಮ್ಮ ಕಲೆ ಹಾಗೂ ಚಿಂತನೆಗೆ ಧಕ್ಕೆಯಾಗುವುದನ್ನು ತಾವು ವಿರೋಧಿಸುವುದಾಗಿ ಹೇಳಿದ ಅವರು, ಧರ್ಮದ ಹೆಸರಿನಲ್ಲಿ ತಮ್ಮ ಆತ್ಮಗೌರವ, ಕಲೆ ಹಾಗೂ ವಿಚಾರಕ್ಕೆ ಕೇಡಾಗುತ್ತದೆ ಎಂದಾಗ ಅಂತಹುದರ ವಿರುದ್ಧ ನನ್ನ ಧ್ವನಿ ಇದ್ದೇ ಇರುತ್ತದೆ ಎಂದರು. ಜತೆಗೆ, ವಿಶ್ವರೂಪಂ ಭಾಗ-2ರ ಚಿತ್ರೀಕರಣ ಮುಗಿದಿದ್ದು, ಟ್ರೈಲರ್ ಕೂಡ ಸಿದ್ಧವಾಗಿದೆ ಎಂದರು. ಹೀಗೆ ಚಿತ್ರಗಳ ವಿರುದ್ಧ ವಿವಾದ ಸೃಷ್ಟಿಯಾಗುತ್ತಿರುವುದರ ಹಿನ್ನೆಲೆಯಲ್ಲಿ 57 ವರ್ಷಗಳ ಬಳಿಕ ಸರ್ಕಾರ ಸಿನಿಮಾ ಕಾಯ್ದೆಗೆ ತಿದ್ದುಪಡಿಗೆ ಮುಂದಾಗಿದೆ, ಅದು ಸಂತಸದ ವಿಷಯ ಎಂದರು.
ನಿಜವಾದ ಸವಾಲು ಹೊಸ ಪ್ರೇಕ್ಷಕ: ಹೊಸ ಪ್ರೇಕ್ಷಕರೇ ಈಗ ತಮ್ಮ ಮುಂದಿರುವ ಪ್ರಮುಖ ಸವಾಲು. ಒಂದು ಕಾರಿನ ಮಾದರಿ ಸೃಷ್ಟಿಸಿದರೆ ಅಂಥ ಅನೇಕ ಕಾರುಗಳನ್ನು ತಯಾರಿಸಬಹುದು. ಆದರೆ  ಸಿನಿಮಾ ಕಾರು ತಯಾರಿಯಂತಲ್ಲ. ಸಿನಿಮಾ ಒಂದರಂತೆ ಮತ್ತೊಂದು ಇರಬಾರದು ಎಂದರು.        

ಹಾಗಾಗಿ, ಮುಂದಿನ ಪ್ರತಿ ಚಿತ್ರವೂ ತಮಗೆ ಸವಾಲೇ ಎಂದುತ್ತರಿಸಿದರು. ರಜನಿಕಾಂತ್ ಮತ್ತು ಕಮಲಹಾಸನ್ ಇಬ್ಬರೂ ಒಂದೇ ಚಿತ್ರದಲ್ಲಿ ಏಕೆ ಅಭಿನಯಿಸಬಾರದು ಎಂಬುದಕ್ಕೆ ಪ್ರತಿಕ್ರಿಯಿಸಿದ ಅವರು, ರಜನಿಕಾಂತ್ ಚಿತ್ರದಲ್ಲಿ ತಾವು ಅಥವಾ ತಮ್ಮ ಚಿತ್ರದಲ್ಲಿ ರಜನಿಕಾಂತ್ ಅತಿಥಿ ಪಾತ್ರ ನಿರ್ವಹಿಸುವುದು ಸೂಕ್ತ. ಆದರೆ, ಇಬ್ಬರೂ ಒಂದೇ ಚಿತ್ರದಲ್ಲಿ ಪ್ರಧಾನಪಾತ್ರದಲ್ಲಿ ನಟಿಸಿದರೆ ಆಗ ಸರ್ಕಾರ ಸಿನಿಮಾ ಟಿಕೆಟ್‌ನ ದರವನ್ನೇ ಬದಲಾಯಿಸಬೇಕಾಗುತ್ತದೆ ಎಂದರು.
ಪೈರೆಸಿ ಎಲ್ಲೆಡೆ ಇದ್ದಿದ್ದೇ: ಚಲನಚಿತ್ರಗಳ ನಕಲಿ ತಯಾರಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಕಲಿ ತಡೆಯುವಲ್ಲಿ ಡಿಟಿಎಚ್ ಸ್ವಲ್ಪಮಟ್ಟಿಗೆ ನೆರವಾಗಿದೆ. ಆದರೂ ದೇಶದ ಯಾವುದೇ ಭಾಗದಲ್ಲೂ ನಕಲಿ ನಿಯಂತ್ರಣ ಸಾಧ್ಯವಾಗಿಲ್ಲ. ಸಿನಿಮಾ ಉದ್ಯಮದ ಮಂದಿ ಸೇರಿದಂತೆ ಇಡೀ ವ್ಯವಸ್ಥೆಯೇ ಅದಕ್ಕೆ ಕಾರಣ. ವ್ಯವಸ್ಥೆ ಸರಿಹೋಗದ ಹೊರತು ಅದರ ನಿಯಂತ್ರಣ ಅಸಾಧ್ಯ ಎಂದರು. ಡಬ್ಬಿಂಗ್ ಕುರಿತು ಪ್ರತಿಕ್ರಿಯಿಸಿದ ಅವರು ಭಾವನೆಗಳನ್ನು ವ್ಯಕ್ತಪಡಿಸಲು ಮಾತೃಭಾಷೆ ಸೂಕ್ತ. ಆದರೆ, ಭಾಷಾಮಿತಿಯನ್ನು ಮೀರಿ ಒಂದು ಚಿತ್ರ ಎಲ್ಲರನ್ನೂ ತಲುಪಬೇಕಿದ್ದರೆ ಡಬ್ಬಿಂಗ್ ಅಗತ್ಯ. ಕರ್ನಾಟಕ ಆ ವಿಷಯದಲ್ಲಿ ಮುಕ್ತವಾಗಿರುವುದು ಸೂಕ್ತ ಎಂದರು. ಜತೆಗೆ, ಉತ್ತಮ ಚಿತ್ರ ಮಾಡಿದರೆ ಇತರ ಭಾಷಿಗರೂ ಕನ್ನಡ ಚಿತ್ರ ವೀಕ್ಷಿಸುತ್ತಾರೆ. 'ಕಾಡು' ಚಲನಚಿತ್ರ, ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರಗಳನ್ನು ನೋಡಲು ರಾಜ್ಯಕ್ಕೆ ಬರುತ್ತಿದ್ದುದೇ ಇದಕ್ಕೆ ಉದಾಹರಣೆ ನೀಡಿದರು. ಪ್ರೆಸ್‌ಕ್ಲಬ್ ಉಪಾಧ್ಯಕ್ಷ ಗುಡಿಹಳ್ಳಿ ನಾಗರಾಜ್, ಪ್ರಧಾನ ಕಾರ್ಯದರ್ಶಿ ಕೆ. ಸದಾಶಿವ ಶೆಣೈ, ವರದಿಗಾರರ ಕೂಟದ ಉಪಾಧ್ಯಕ್ಷ ಆರ್.ಟಿ. ವಿಠಲಮೂರ್ತಿ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಹಾಜರಿದ್ದರು.

ವಿಶ್ವರೂಪಂ ವಿವಾದಕ್ಕೆ ಹಾಸ್ಯ ಪ್ರಜ್ಞಾಹೀನತೆ ಹಾಗೂ ಅಸಹಿಷ್ಣುತೆ ಪ್ರಮುಖ ಕಾರಣ. ಈ ವಿವಾದದಿಂದಾಗಿ ನನ್ನ ಗೌರವದ ಒಂದು ಭಾಗ ಧಕ್ಕೆಗೀಡಾಗಿದೆ. ಇದರಿಂದ ಭಯಗೊಂಡಿಲ್ಲ, ಆದರೆ ನೋವಾಗಿದೆ.
ಪ್ರೆಸ್‌ಕ್ಲಬ್‌ನಲ್ಲಿ ಏರ್ಪಡಿಸಿದ್ದ ಮಾಧ್ಯಮ ಸಂವಾದದಲ್ಲಿ ನಟ ಕಮಲಹಾಸನ್ ಅವರು ಮಾತನಾಡುತ್ತಿರುವುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement