'ತೈಲ ಸ್ವಾವಲಂಬನೆ ಗುರಿ'
ಬೆಂಗಳೂರು: ಭಾರತ 2030ರ ಹೊತ್ತಿಗೆ ತೈಲ ಸ್ವಾವಲಂಬಿ ರಾಷ್ಟ್ರವಾಗಲಿದೆ ಎಂದು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದರು. ಬನ್ನೇರುಘಟ್ಟ ರಸ್ತೆಯ ಭಾರತ್ ಪೆಟ್ರೋಲಿಯಂ ಕಾರ್ಪೋರೇಷನ್ನಲ್ಲಿ ಶನಿವಾರ 'ಪೆಟ್ರೋಲ್ ಬಂಕ್ಗಳಲ್ಲಿ 5 ಕೆಜಿ ಸಿಲಿಂಡರ್ ಮಾರಾಟ ಕಾರ್ಯಕ್ರಮ ಮತ್ತು ಎಲ್ಪಿಜಿ ಪೋರ್ಟೆಬಿಲಿಟಿ ಯೋಜನೆ' ಉದ್ಘಾಟಿಸಿ ಅವರು ಮಾತನಾಡಿದರು.
ದೇಶದ ಅನೇಕ ರಾಜ್ಯಗಳಲ್ಲಿ ದೊರಕುವ ನಿಕ್ಷೇಪಗಳನ್ನು ಬಳಸಿಕೊಂಡು ತೈಲ ಉತ್ಪಾದನೆ ಮಾಡುವ ಕುರಿತು ವಿವರವಾದ ವರದಿ ತಯಾರಿಸಲು ಸಿದ್ಧತೆ ನಡೆಸಲಾಗಿದೆ. 2020ರಲ್ಲಿ ಶೇ.50ರಷ್ಟು, 2025ರಲ್ಲಿ ಶೇ.75, 2030ರ ಹೊತ್ತಿಗೆ ಸಂಪೂರ್ಣ ತೈಲ ಸ್ವಾವಲಂಬನೆ ಗುರಿಯಾಗಿದೆ ಎಂದು ಹೇಳಿದರು.
ದೇಶವನ್ನು ತೈಲ ಸ್ವಾವಲಂಬಿಯನ್ನಾಗಿ ಮಾಡುವ ಕುರಿತು ಯಾವುದೇ ಆಪಾದನೆ ಎದುರಾದರೂ ಅದನ್ನು ಎದುರಿಸಲು ಸಿದ್ಧವಾಗಿದ್ದೇನೆ. ಆಪಾದನೆಗೆ ಹೆದರಿ ದೇಶದ ಸಂಪತ್ತು ಹಾಳಾಗಲು ಬಿಡುವುದಿಲ್ಲ. ಮೊದಲು ನಮ್ಮಲ್ಲಿನ ಸಂಶಯ ಪ್ರವೃತ್ತಿಯ ಜಿಗುಟುತನ ಬಿಟ್ಟರೆ ಯೋಜನೆಗಳೆಲ್ಲಾ ಸುಗಮವಾಗಿ ಸಾಗಲು ಸಾಧ್ಯ ಎಂದು ಹೇಳಿದರು.
5 ಕೆ.ಜಿ. ಎಲ್ಪಿಜಿ ವಿತರಣೆ ಮಾಡುವ ಮೂಲಕ ಇವತ್ತು ಗ್ರಾಹಕರಿಗೆ ಸ್ವಾತಂತ್ರ್ಯ ಲಭಿಸಿದಂತಾಗಿದೆ. ಗ್ರಾಹಕರ ಆಯ್ಕೆಗೆ ಅನುಗುಣವಾಗುವಂತೆ ಈ ಯೋಜನೆ ಕಾರ್ಯನಿರ್ವಹಿಸಲಿದೆ. ವೆಬ್ಸೈಟ್ನಲ್ಲಿ ಹೆಸರು ನೋಂದಾಯಿಸಿದ ಮೂರು ದಿನಗಳೊಳಗೆ ಗ್ಯಾಸ್ ಗ್ರಾಹಕರ ಬಳಿ ತಲುಪದೇ ಇದ್ದರೆ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದರು.
ವಿದ್ಯಾರ್ಥಿಗಳಿಗೆ, ಐಟಿಯಲ್ಲಿ ಕೆಲಸ ಮಾಡುವವರಿಗೆ ಸಹಾಯಕವಾಗಲೆಂದು ಈ ಯೋಜನೆ ಆರಂಭಿಸಲಾಗಿದೆ. ದೇಶದ ಒಟ್ಟು 24 ನಗರಗಳಲ್ಲಿ ಈ ಸೌಲಭ್ಯ ದೊರಕಲಿದೆ. ಯೋಜನೆಯ ಸಫಲತೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನಂತರ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದರು.
ಬಿಡದಿ ಬಳಿಯ ಪವರ್ಪ್ಲಾಂಟ್ 1250 ಮೆಗಾವ್ಯಾಟ್ ಉತ್ಪಾದನಾ ಸಾಮರ್ಥ್ಯ ಹೊಂದಿದೆ. ಆರಂಭಿಕವಾಗಿ 250 ಮೆಗಾವ್ಯಾಟ್ ಗ್ಯಾಸ್ ಆಧಾರಿತ ಪವರ್ ಉತ್ಪಾದನೆ ನಡೆಸುವ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚೆ ನಡೆಸಲಾಗಿದೆ. ಇದಕ್ಕಾಗಿ ಕೇಂದ್ರದ ಗ್ಯಾಸ್ ಅಥಾರಿಟಿ ಆಫ್ ಇಂಡಿಯಾದಿಂದ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧರಾಗಿದ್ದೇವೆ. ಉಳಿದಂತೆ ರಾಜ್ಯ ಸರ್ಕಾರ ಗಮನಹರಿಸಬೇಕಿದೆ ಎಂದು ಹೇಳಿದರು.